ಪ್ರಕೃತಿಯಲ್ಲಿ ಲಭ್ಯವಿರುವ ಪ್ರತಿಯೊಂದು ಹಣ್ಣು ಕೂಡ ಮಾನವನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಅನೇಕ ಬಾರಿ ಸಾಬೀತಾಗಿದೆ. ಹಾಗಾಗಿ ಮಾರುಕಟ್ಟೆಗಳಲ್ಲಿ ಋತುಗಳಿಗೆ ಅನುಗುಣವಾಗಿ ಬರುವ ಹಣ್ಣುಗಳ ಸೇವನೆ ಮಾಡಬೇಕು. ಹೀಗೆ ಎಲ್ಲರೂ, ಹೆಚ್ಚು ಇಷ್ಟಪಡುವ ಹಣ್ಣುಗಳಲ್ಲಿ ಸಪೋಟಾ ಅಥವಾ ಚಿಕ್ಕು ಹಣ್ಣು ಕೂಡ ಒಂದು. ಇದು ರುಚಿಯ ಜೊತೆಗೆ ಸಿಹಿ ಇರುವುದಲ್ಲದೆ ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳನ್ನು ನೀಡುವ ಶಕಿಯನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಎ ಸಮೃದ್ಧವಾಗಿದ್ದು ಚರ್ಮ ಮತ್ತು ಕಣ್ಣಿನ ಆರೋಗ್ಯಕ್ಕೆ ಸಹಕಾರಿಯಾಗಿದೆ. ಅಲ್ಲದೆ ಈ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ಕಾಂಪ್ಲೆಕ್ಸ್, ಖನಿಜಗಳು ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಅವು ದೇಹಕ್ಕೆ ಶಕ್ತಿಯನ್ನು ಒದಗಿಸುವುದಲ್ಲದೆ ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತವೆ. ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಮಾಹಿತಿ ಇಲ್ಲಿದೆ.
ಸಪೋಟಾದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ನಂತಹ ಖನಿಜಗಳು ಸಮೃದ್ಧವಾಗಿರುವುದರಿಂದ, ಇವು ಮೂಳೆಗಳನ್ನು ಬಲಪಡಿಸುವುದಲ್ಲದೆ ಅವುಗಳಿಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತದೆ. ಜೊತೆಗೆ ಈ ಹಣ್ಣು ಫೈಬರ್, ರಂಜಕ ಮತ್ತು ಕ್ಯಾಲ್ಸಿಯಂ ಅನ್ನು ಸಹ ಹೊಂದಿರುತ್ತದೆ. ಸಪೋಟಾದಲ್ಲಿರುವ ಫ್ರಕ್ಟೋಸ್ ಅಂಶ ದೇಹಕ್ಕೆ ತಕ್ಷಣ ಶಕ್ತಿಯನ್ನು ಒದಗಿಸುತ್ತದೆ. ಇದಲ್ಲದೆ, ಆಯಾಸ ಮತ್ತು ಆಲಸ್ಯದಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ತುಂಬಾ ಸಹಾಯಕಾರಿಯಾಗಿದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
ಸಪೋಟಾದಲ್ಲಿ ಫೈಬರ್ ಸಮೃದ್ಧವಾಗಿದೆ, ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಸಣ್ಣ ಹಣ್ಣಾದರೂ ಕೂಡ ಹೆಚ್ಚಿನ ಫೈಬರ್ ಅಂಶವಿದ್ದು ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಸೇಬು ಮತ್ತು ಕಿತ್ತಳೆಗಿಂತ ಹೆಚ್ಚಿನ ವಿಟಮಿನ್ ಸಿ ಅಂಶವಿದ್ದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುವಂತಹ ಶಕ್ತಿಯನ್ನು ಹೊಂದಿದೆ.
ಸಪೋಟಾದಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಜೊತೆಗೆ ಹೃದಯಾಘಾತದ ಇತರ ತೊಡಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಪೋಟಾದಲ್ಲಿ ಟ್ರಿಪ್ಟೋಫಾನ್ ಎಂಬ ಅಮೈನೋ ಆಮ್ಲವಿದೆ. ಇದು ಸಿರೊಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಒತ್ತಡ ಕಡಿಮೆ ಮಾಡಿ ಮನಸ್ಸನ್ನು ಶಾಂತಗೊಳಿಸುತ್ತದೆ.
ಇದನ್ನೂ ಓದಿ: ಮುಟ್ಟಿನ ಸಮಯದ ನೋವನ್ನು ನಿವಾರಿಸಲು ಈ 5 ಯೋಗಾಸನಗಳು ಪ್ರಯೋಜನಕಾರಿ
ಸಪೋಟಾ ಅಥವಾ ಚಿಕ್ಕು ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳಿದ್ದು ಇವು ಚರ್ಮವನ್ನು ಕಾಂತಿಯುತವಾಗಿಸುತ್ತದೆ. ಅಲ್ಲದೆ ಚರ್ಮದ ಮೇಲಿನ ಸುಕ್ಕುಗಳು ಮತ್ತು ಹಳೆಯ ಕಲೆಗಳನ್ನು ಕಡಿಮೆ ಮಾಡಿ ನಿಮ್ಮ ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ಈ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್-ಸಿ ಅಂಶ ಹೆಚ್ಚಾಗಿರುವುದರಿಂದ ದೇಹದಲ್ಲಿನ ಫ್ರೀ ರಾಡಿಕಲ್ ಗಳಂತಹ ವಿಷಕಾರಿ ಅಂಶಗಳ ವಿರುದ್ಧ ಹೋರಾಡುತ್ತದೆ. ಜೀವಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ. ಇದು ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳನ್ನು ಸಹ ತಡೆಯುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ