ನಾನ್‌ಸ್ಟಿಕ್ ಪಾತ್ರೆಗಳಿಂದ ಅಡುಗೆ ಮಾಡಿದರೆ ಕ್ಯಾನ್ಸರ್ ಬರುತ್ತಾ?
ನಾನ್‌ಸ್ಟಿಕ್ ಪಾತ್ರೆಗಳಲ್ಲಿರುವ ಟೆಫ್ಲಾನ್ ಕೋಟಿಂಗ್ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ. ಅತಿ ಬಿಸಿಯಾದಾಗ ಮಾತ್ರ ಈ ಟೆಫ್ಲಾನ್ ಎಂಬ ರಾಸಾಯನಿಕ ತನ್ನ ಅಂಶವನ್ನು ಬಿಡುತ್ತದೆ. ಹೀಗಾಗಿ, ನಾನ್‌ಸ್ಟಿಕ್ ಪ್ಯಾನ್ ಅಥವಾ ಪಾತ್ರೆಗಳಲ್ಲಿ ನೀವು ಅಡುಗೆ ಮಾಡುವುದಾದರೆ ಈ ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.
ಮೊದಲೆಲ್ಲ ಮಣ್ಣಿನ ಮಡಕೆಗಳಲ್ಲಿ ಅಡುಗೆ ಮಾಡುತ್ತಿದ್ದರು. ನಂತರ ಸ್ಟೀಲ್, ಅಲ್ಯುಮಿನಿಯಂ ಪಾತ್ರೆಗಳು ಚಾಲ್ತಿಗೆ ಬಂದವು. ಕ್ರಮೇಣ ಆ ಸ್ಥಾನವನ್ನು ಪ್ಲಾಸ್ಟಿಕ್ ಡಬ್ಬಗಳು, ಮೈಕೋವೇವ್ನಲ್ಲಿ ಬಿಸಿ ಮಾಡಬಹುದಾದ ಪ್ಲಾಸ್ಟಿಕ್ ಬೌಲ್ಗಳು ಆವರಿಸಿಕೊಂಡವು. ಇದೀಗ ಎಲ್ಲ ಕಡೆಯೂ ನಾನ್‌ಸ್ಟಿಕ್ ಪಾತ್ರೆಗಳ ಹಾವಳಿ ಶುರುವಾಗಿದೆ. ನಾನ್‌ಸ್ಟಿಕ್ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಸುಲಭ ಮತ್ತು ಕ್ಲೀನ್ ಮಾಡುವುದು ಸುಲಭ ಎಂಬುದು ಅದನ್ನು ಬಳಸುವವರ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಮುಖ್ಯ ಕಾರಣ. ಆದರೆ, ಈ ನಾನ್‌ಸ್ಟಿಕ್ ಪಾತ್ರೆಗಳು ನಮ್ಮ ಆರೋಗ್ಯಕ್ಕೆ ನಿಜಕ್ಕೂ ಒಳ್ಳೆಯದಾ? ಇಲ್ಲಿದೆ ಮಾಹಿತಿ.
ನಾನ್‌ಸ್ಟಿಕ್ ಪಾತ್ರೆಗಳಿಗೆ ಆಹಾರವು ಹೆಚ್ಚು ಅಂಟಿಕೊಳ್ಳುವುದಿಲ್ಲ. ಇದರಿಂದ ಇದನ್ನು ಸ್ವಚ್ಛಗೊಳಿಸುವುದು ಸುಲಭ. ನಾನ್ಸ್ಟಿಕ್ನಲ್ಲಿ ಬಳಸಲಾಗುವ ರಾಸಾಯನಿಕ ನಮ್ಮ ಆರೋಗ್ಯಕ್ಕೆ ಬಹಳ ಅಪಾಯಕಾರಿ. ನಾನ್ಸ್ಟಿಕ್ನಲ್ಲಿರುವ ಟೆಫ್ಲಾನ್ ಅಂಶ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಗೊತ್ತಿದ್ದರೂ ನಾವು ನಾನ್‌ಸ್ಟಿಕ್ ಪಾತ್ರೆಗಳನ್ನು ಬಳಸುತ್ತೇವೆ. ಆದರೆ, ಇದರಿಂದ ಕ್ಯಾನ್ಸರ್ ಕೂಡ ಬರಬಹುದು ಎಂಬುದು ನಿಮಗೆ ಗೊತ್ತೇ?
ನಾನ್‌ಸ್ಟಿಕ್ ಪ್ಯಾನ್‌ಗಳು 2 ವಿಧಗಳಲ್ಲಿ ಬರುತ್ತವೆ. ಸಾಂಪ್ರದಾಯಿಕ ನಾನ್‌ಸ್ಟಿಕ್ ಪ್ಯಾನ್‌ಗಳು ಸಿಂಥೆಟಿಕ್ ಕೆಮಿಕಲ್ಗಳಿಂದ ತಯಾರಿಸಲಾಗಿರುತ್ತದೆ. ಇನ್ನೊಂದು ವಿಧವಾದ ಸಿರಾಮಿಕ್ ನಾನ್‌ಸ್ಟಿಕ್ ಪ್ಯಾನ್‌ಗಳು ಅಲ್ಯೂಮಿನಿಯಂ ಅಥವಾ ಇತರ ವಸ್ತುಗಳಿಂದ ಮಾಡಲ್ಪಟ್ಟಿರುತ್ತದೆ. ನಾನ್‌ಸ್ಟಿಕ್ ಅಡುಗೆ ಪಾತ್ರೆಗಳಲ್ಲಿ ಸಾಂಪ್ರದಾಯಿಕ ನಾನ್‌ಸ್ಟಿಕ್ ಪ್ಯಾನ್‌ಗಳು ಹೆಚ್ಚು ಅಪಾಯ ಉಂಟುಮಾಡುವಂಥವುಗಳು. ಸಿರಾಮಿಕ್ ನಾನ್‌ಸ್ಟಿಕ್ ಪ್ಯಾನ್‌ಗಳು ಸಾಮಾನ್ಯವಾಗಿ ಸಿಂಥೆಟಿಕ್ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ನೀವು ಸಿರಾಮಿಕ್ ಪ್ಯಾನ್ ಬಳಸಿದರೆ ಆರೋಗ್ಯದ ಮೇಲೆ ತೀರಾ ಕೆಟ್ಟ ಪರಿಣಾಮ ಉಂಟಾಗುವುದಿಲ್ಲ. ಆದರೆ, ಟ್ರೆಡಿಷನಲ್ ನಾನ್‌ಸ್ಟಿಕ್ ಪಾತ್ರೆಗಳು ಕ್ಯಾನ್ಸರ್ ಅಪಾಯವನ್ನು ಕೂಡ ತಂದೊಡ್ಡಬಹುದು.
ಇದನ್ನೂ ಓದಿ: Black Rice: ಬ್ಲಾಕ್ ರೈಸ್ ಎಂದರೇನು? ಏನಿದರ ಉಪಯೋಗ?
ಇಂದಿನ ನಾನ್‌ಸ್ಟಿಕ್ ಮತ್ತು ಟೆಫ್ಲಾನ್ ಕುಕ್‌ವೇರ್‌ಗಳನ್ನು ದೈನಂದಿನ ಅಡುಗೆಗೆ ಸುರಕ್ಷಿತವೆಂದು ಪರಿಗಣಿಸಲಾಗುತ್ತಿದೆ. ಆದರೆ, ನೆನಪಿರಲಿ, ಎಲ್ಲಿಯವರೆಗೆ ತಾಪಮಾನವು 260 ಡಿಗ್ರಿ ಸೆಲ್ಸಿಯಸ್ ಮೀರುವುದಿಲ್ಲವೋ ಅಲ್ಲಿಯವರೆಗೆ ಮಾತ್ರ ಆ ನಾನ್‌ಸ್ಟಿಕ್ ಪಾತ್ರೆಯಲ್ಲಿ ಮಾಡಿದ ಆಹಾರದಿಂದ ನಿಮ್ಮ ಆರೋಗ್ಯಕ್ಕೆ ತೊಂದರೆ ಆಗುವುದಿಲ್ಲ. ಹೆಚ್ಚಿನ ತಾಪಮಾನದಲ್ಲಿ ನಾನ್ಸ್ಟಿಕ್ನಲ್ಲಿರುವ ಟೆಫ್ಲಾನ್ ಲೇಪನಗಳು ಒಡೆಯಲು ಪ್ರಾರಂಭಿಸಬಹುದು. ಇದು ವಿಷಕಾರಿ ಹೊಗೆಯನ್ನು ಗಾಳಿಯಲ್ಲಿ ಬಿಡುಗಡೆ ಮಾಡುತ್ತದೆ. ಇದು ಬಹಳ ಅಪಾಯಕಾರಿ.
ನಾನ್‌ಸ್ಟಿಕ್ ಪಾತ್ರೆಗಳಲ್ಲಿರುವ ಟೆಫ್ಲಾನ್ ಕೋಟಿಂಗ್ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ. ಕೆಲವು ಅಧ್ಯಯನಗಳು ಅವು ಹಾನಿಕಾರಕ ಮತ್ತು ಕ್ಯಾನ್ಸರ್‌ನಂತಹ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೇಳುತ್ತವೆ.
ಇದನ್ನೂ ಓದಿ: ಅಡುಗೆ ಮಾಡುವ ಸರಿಯಾದ ವಿಧಾನ ಯಾವುದು?; ಈ ತಪ್ಪು ಮಾಡಬೇಡಿ
ಅತಿ ಬಿಸಿಯಾದಾಗ ಮಾತ್ರ ಈ ಟೆಫ್ಲಾನ್ ಎಂಬ ರಾಸಾಯನಿಕ ತನ್ನ ಅಂಶವನ್ನು ಬಿಡುತ್ತದೆ. ಹೀಗಾಗಿ, ನಾನ್‌ಸ್ಟಿಕ್ ಪ್ಯಾನ್ ಅಥವಾ ಪಾತ್ರೆಗಳಲ್ಲಿ ನೀವು ಅಡುಗೆ ಮಾಡುವುದಾದರೆ ಈ ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.
– ನಾನ್‌ಸ್ಟಿಕ್ ಪಾತ್ರೆಯನ್ನು ಸ್ಟೌವ್ ಮೇಲಿಟ್ಟು, ಅದಕ್ಕೆ ಏನೂ ಹಾಕದೆ ಖಾಲಿಯಾಗಿ ಬಿಸಿ ಮಾಡಬೇಡಿ. ಖಾಲಿ ಪ್ಯಾನ್‌ಗಳು ಕೆಲವೇ ಸೆಕೆಂಡುಗಳಲ್ಲಿ ಹೆಚ್ಚಿನ ತಾಪಮಾನವನ್ನು ತಲುಪಬಹುದು. ಇದು ಪಾಲಿಮರ್ ಹೊಗೆಯ ಬಿಡುಗಡೆಗೆ ಕಾರಣವಾಗಬಹುದು. ನೀವು ಪ್ಯಾನ್ ಅನ್ನು ಸ್ಟೌವ್ ಮೇಲಿಡುವ ಮೊದಲು ನೀವು ಅದರಲ್ಲಿ ಸ್ವಲ್ಪ ಆಹಾರ ಅಥವಾ ದ್ರವವನ್ನು ಹಾಕಿಡಲು ಮರೆಯಬೇಡಿ.
– ಹೆಚ್ಚಿನ ಶಾಖದಲ್ಲಿ ಅಡುಗೆ ಮಾಡುವುದನ್ನು ತಪ್ಪಿಸಿ. ಮಧ್ಯಮ ಅಥವಾ ಕಡಿಮೆ ಶಾಖದಲ್ಲಿ ಬೇಯಿಸಿ.
– ಅಡುಗೆ ಮಾಡುವಾಗ ಅಡುಗೆ ಮನೆಯಲ್ಲಿ ಗಾಳಿಯಾಡಲು ಅನುವು ಮಾಡಿಕೊಡಿ. ನೀವು ಅಡುಗೆ ಮಾಡುವಾಗ ನಿಮ್ಮ ಎಕ್ಸಾಸ್ಟ್ ಫ್ಯಾನ್ ಅನ್ನು ಆನ್ ಮಾಡಿ ಅಥವಾ ಕಿಟಕಿಗಳನ್ನು ತೆರೆದಿಡಿ.
– ಮರದ, ಸಿಲಿಕೋನ್ ಅಥವಾ ಪ್ಲಾಸ್ಟಿಕ್ ಸೌಟ್ಗಳನ್ನು ಬಳಸಿ. ಸ್ಟೀಲ್ ಸೌಟ್ ಬಳಸಿದರೆ ಅದರಿಂದ ನಾನ್‌ಸ್ಟಿಕ್ ಪಾತ್ರೆಯ ಮೇಲೆ ಗೀರುಗಳು ಉಂಟಾಗುತ್ತದೆ.
– ನಾನ್‌ಸ್ಟಿಕ್ ಪಾತ್ರೆಗಳನ್ನು ಸ್ಪಾಂಜ್ ಅಥವಾ ಕೈಗಳಿಂದಲೇ ನಿಧಾನವಾಗಿ ತೊಳೆಯಿರಿ. ಗಡಸಾಗಿರುವ ಪಾತ್ರೆ ತೊಳೆಯುವ ಬ್ರಷ್, ಸ್ಟೀಲ್ ಬ್ರಷ್ಗಳನ್ನು ಹಾಕಿ ಉಜ್ಜಬೇಡಿ. ಇದರಿಂದ ನಾನ್‌ಸ್ಟಿಕ್ ಪಾತ್ರೆಯ ಮೇಲೆ ಗೀರುಗಳಾಗುತ್ತವೆ.
– ನಾನ್‌ಸ್ಟಿಕ್ ಪಾತ್ರೆಗಳನ್ನು ಬಹಳ ದಿನದಿಂದ ಬಳಸುತ್ತಿದ್ದರೆ ಅಥವಾ ಅದರ ಮೇಲ್ಭಾಗದ ಲೇಯರ್ ಕಿತ್ತುಹೋಗಿದ್ದರೆ ಅಂಥವುಗಳನ್ನು ಬಳಸಬೇಡಿ. ಅದರ ಬದಲು ಹೊಸತು ಖರೀದಿಸಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:08 pm, Wed, 20 September 23