ಮಾಂಸಾಹಾರ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾದರೆ ಸಸ್ಯಾಹಾರಿಯಾಗುವುದರ ಪ್ರಯೋಜನಗಳೇನು?
ನಿತ್ಯವೂ ಮಾಂಸಾಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಆಯುರ್ವೇದದ ಪ್ರಕಾರ, ಸಸ್ಯಾಹಾರಿಯಾದರೆ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಗಳಿವೆ.
ಪ್ರಪಂಚದಾದ್ಯಂತ ಸಸ್ಯಾಹಾರಿಗಳು ಹಾಗೂ ಮಾಂಸಾಹಾರಿಗಳು ಕೂಡ ಇದ್ದಾರೆ. ಕೆಲವು ಮಾಂಸಗಳು ಆರೋಗ್ಯಕ್ಕೆ ಒಳ್ಳೆಯದಾಗಿದ್ದರೂ ನಿರಂತರವಾಗಿ ಅದರ ಸೇವನೆಯಿಂದ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ ಎಂಬುದನ್ನು ನೀವು ತಿಳಿದಿರಬೇಕು. ಆಯುರ್ವೇದವು ಇದನ್ನೇ ಹೇಳುತ್ತಿದ್ದು, ಮಾಂಸಹಾರಕ್ಕಿಂತ ಸಸ್ಯಾಹಾರವೇ ದಿ ಬೆಸ್ಟ್ ಎನ್ನುತ್ತಿದೆ. ಹಾಗಿದ್ದರೆ ಮಾಂಸಹಾರ ಸೇವನೆಯಿಂದ ಆಗುವ ಆರೋಗ್ಯ ಸಮಸ್ಯೆಗಳೇನು? ಸಸ್ಯಾಹಾರ ಸೇವನೆಯಿಂದ ಆಗುವ ಪ್ರಯೋಜನಗಳೇನು? ಇಲ್ಲಿದೆ ನೋಡಿ.
ಕಡಿಮೆ ಕೊಲೆಸ್ಟ್ರಾಲ್ ಮಟ್ಟ: ಕೊಲೆಸ್ಟ್ರಾಲ್ ದೇಹದಲ್ಲಿ ನೈಸರ್ಗಿಕವಾಗಿ ರೂಪುಗೊಳ್ಳುವ ಕೊಬ್ಬಿನ ರೂಪವಾಗಿದೆ. ಪ್ರತಿಯೊಬ್ಬರ ದೇಹದಲ್ಲಿ ಕೊಲೆಸ್ಟ್ರಾಲ್ ಇರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಬೆಳವಣಿಗೆಗೆ ಅಗತ್ಯವಾದ ಹಾರ್ಮೋನುಗಳನ್ನು ಸೃಷ್ಟಿಸುವುದಲ್ಲದೆ ಭಾವನೆಗಳನ್ನು ನಿಯಂತ್ರಿಸುತ್ತದೆ. ಇಂತಹ ಕೊಲೆಸ್ಟ್ರಾಲ್ ಮಾಂಸಾಹಾರಿ ಆಹಾರದಲ್ಲಿ ಹೆಚ್ಚು ಇರುತ್ತದೆ. ಇದರ ನಿತ್ಯ ಸೇವನೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ ದೇಹದ ತೂಕವನ್ನು ಹೆಚ್ಚಿಸುತ್ತದೆ. ಇದರಿಂದ ದೇಹವು ಸಮತೋಲನವನ್ನು ಕಾಪಾಡಿಕೊಳ್ಳಲು ಕಷ್ಟಸಾಧ್ಯವಾಗಬಹುದು. ಸಸ್ಯಾಹಾರಿ ಆಹಾರದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿಲ್ಲದಿರುವುದರಿಂದ ಸಸ್ಯಾಹಾರಿಗಳಿಗೆ ಈ ಸಮಸ್ಯೆ ಇರುವುದಿಲ್ಲ.
ಕ್ಯಾನ್ಸರ್ ಅಪಾಯ ಹೆಚ್ಚು: ಕೋಳಿ, ದನದ ಮಾಂಸ ಮುಂತಾದ ಮಾಂಸದ ವಸ್ತುಗಳನ್ನು ಮಾರಾಟ ಮಾಡುವಾಗ ಅವುಗಳಿಗೆ ಬೆಳವಣಿಗೆಯ ಹಾರ್ಮೋನ್‌ಗಳನ್ನು ಚುಚ್ಚಲಾಗುತ್ತದೆ. ಇಂತಹ ಬೆಳವಣಿಗೆಯ ಹಾರ್ಮೋನ್‌ಗಳನ್ನು ಹೊಂದಿರುವ ಆಹಾರವನ್ನು ಸೇವಿಸಿದರೆ ಅದು ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಇತ್ತೀಚಿನ ಅಧ್ಯಯನಗಳು ಹೇಳುತ್ತವೆ.
ಮಧುಮೇಹದ ಸಮಸ್ಯೆ: ಇತ್ತೀಚಿನ ವರ್ಷಗಳಲ್ಲಿ ಮಧುಮೇಹದ ಕಾರಣವು ಹೆಚ್ಚುತ್ತಿದೆ. ಜನರು ಕಳಪೆ ಗುಣಮಟ್ಟದ ಆಹಾರ ಮತ್ತು ಜಂಕ್ ಫುಡ್ ಅನ್ನು ಹೆಚ್ಚು ಸೇವಿಸುತ್ತಿರುವುದು ಇದಕ್ಕೆ ಕಾರಣವಾಗಿದೆ. ಮಾಂಸಾಹಾರವನ್ನು ಅತಿಯಾಗಿ ಸೇವಿಸುವುದು ಕೂಡ ಮಧುಮೇಹಕ್ಕೆ ಕಾರಣವಾಗಿದೆ. ಇದಕ್ಕೆ ಸಸ್ಯಾಹಾರಿಯಾಗುವುದು ಉತ್ತಮ ಪರ್ಯಾಯವಾಗಿದೆ. ತರಕಾರಿಗಳು, ಹಣ್ಣುಗಳು, ಒಣ ಹಣ್ಣುಗಳು, ಧಾನ್ಯಗಳು ಇತ್ಯಾದಿಗಳನ್ನು ಒಳಗೊಂಡಿರುವ ಸಸ್ಯಾಹಾರಿ ಆಹಾರವು ನಿಮ್ಮನ್ನು ಫಿಟ್ ಮತ್ತು ಆರೋಗ್ಯಕರವಾಗಿರಿಸುತ್ತದೆ. ಇದು ಮಧುಮೇಹ ಬರುವ ಸಾಧ್ಯತೆಯನ್ನು ಸಹ ಕಡಿಮೆ ಮಾಡುತ್ತದೆ.
ವಿವಿಧ ಸೋಂಕುಗಳ ಹರಡುವಿಕೆ: ಮಾಂಸಾಹಾರಿ ಆಹಾರ ಪದಾರ್ಥಗಳು ವಿವಿಧ ರೀತಿಯ ಸೋಂಕುಗಳಿಗೆ ಕಾರಣವಾಗಬಹುದು. ಅಧ್ಯಯನವೊಂದರ ಪ್ರಕಾರ, ಹೊಟ್ಟೆಯ ಸೋಂಕುಗಳು, ಸಡಿಲ ಚಲನೆಗಳು ಇತ್ಯಾದಿಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾವು ಮಾಂಸಗಳಲ್ಲಿ ಇರಬಹುದು. ಕೆಲವೊಮ್ಮೆ ಈ ಸೋಂಕುಗಳು ಮತ್ತು ಕಾಯಿಲೆಗಳನ್ನು ಸುಲಭವಾಗಿ ಪತ್ತೆಹಚ್ಚಲಾಗುತ್ತಾದರೂ ಹೆಚ್ಚಿನ ಸಮದಯದಲ್ಲಿ ಪತ್ತೆಯಾಗುವುದಿಲ್ಲ. ಆದ್ದರಿಂದ ಸಸ್ಯಾಹಾರಿ ಆಹಾರವು ಉತ್ತಮವಾಗಿದೆ. ಇದರಿಂದ ನೀವು ನಿಮ್ಮ ದೇಹಕ್ಕೆ ಬ್ಯಾಕ್ಟೀರಿಯಾ ಆಧಾರಿತ ಸೋಂಕು ಹೊಕ್ಕದಂತೆ ತಡೆಯಬಹುದು.
ವ್ಯಾಕುಲತೆ: ಅನೇಕರು ಶಾಂತಿ ಮತ್ತು ತಾಳ್ಮೆಯ ಆಧ್ಯಾತ್ಮಿಕ ನಂಬಿಕೆಗಳನ್ನು ಅನುಸರಿಸುತ್ತಾರೆ. ಮಾಂಸಾಹಾರಿ ಆಹಾರವು ವ್ಯಾಕುಲತೆಯನ್ನು ಉಂಟುಮಾಡುತ್ತದೆ ಮತ್ತು ಕೆಲಸದ ಮೇಲೆ ಕೇಂದ್ರೀಕರಿಸುವುದನ್ನು ತಡೆಯುತ್ತದೆ. ಸಸ್ಯಾಹಾರ ಸೇವನೆಯಿಂದ ನಿಮ್ಮಲ್ಲಿ ಉತ್ತಮ ಭಾವನೆ ಮೂಡುವಂತೆ ಮಾಡಬಹುದು. ಅಲ್ಲದೆ ನಿಮ್ಮ ಮನಸ್ಸನ್ನು ತಾಜಾವಾಗಿರಿಸುತ್ತದೆ.
ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ