ಪೋಷಕರೇ ಎಚ್ಚರ; 1 ವರ್ಷದೊಳಗಿನ ಶಿಶುಗಳಲ್ಲೂ ಹೆಚ್ಚಾಗುತ್ತಿದೆ ಉಸಿರಾಟದ ತೊಂದರೆ!

| Updated By: ಸುಷ್ಮಾ ಚಕ್ರೆ

Updated on: Jan 15, 2025 | 8:52 PM

ಚಳಿಗಾಲ, ಮಳೆಗಾಲದಲ್ಲಿ ಮಕ್ಕಳಲ್ಲಿ ಶೀತ, ಕೆಮ್ಮು, ಕಫದಿಂದ ಉಸಿರಾದ ತೊಂದರೆ ಉಂಟಾಗುವುದು ಸಾಮಾನ್ಯ. ಆದರೆ, ಇದು ಆಯಾ ಸೀಸನ್​ಗೆ ಮಾತ್ರ ಸೀಮಿತವಾಗಿಲ್ಲದೆ ಇತ್ತೀಚೆಗೆ ನವಜಾತ ಶಿಶುಗಳಲ್ಲಿ ಉಸಿರಾಟದ ತೊಂದರೆ ಗಂಭೀರವಾಗಿ ಕಾಣಿಸಿಕೊಳ್ಳುತ್ತಿದೆ. ಹಾಗಾದರೆ, ಪೋಷಕರು ತಮ್ಮ ಮಗುವಿನ ಆರೋಗ್ಯದ ಬಗ್ಗೆ ಯಾವ ರೀತಿ ಎಚ್ಚರಿಕೆ ವಹಿಸಬೇಕು, ಯಾವೆಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೆಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಪೋಷಕರೇ ಎಚ್ಚರ; 1 ವರ್ಷದೊಳಗಿನ ಶಿಶುಗಳಲ್ಲೂ ಹೆಚ್ಚಾಗುತ್ತಿದೆ ಉಸಿರಾಟದ ತೊಂದರೆ!
Baby
Follow us on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿ ಅಂದ್ರೆ ಮೂರರಿಂದ ಆರು ತಿಂಗಳೊಳಗಿನ ಮಕ್ಕಳಲ್ಲೂ ಶ್ವಾಸಕೋಶ ಸಂಬಂಧಿತ ಮತ್ತು ಬ್ರಾಂಕೈಟಿಸ್‌ ಸಮಸ್ಯೆಯು ಕಾಣಿಸಿಕೊಳ್ಳುತ್ತಿದೆ. ಇದೊಂದು ಅಸಹಜ ಸಂದರ್ಭ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ. ಹವಾಮಾನ ವೈಪರೀತ್ಯ, ಚಳಿಗಾಲದ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಶೀತ, ಕೆಮ್ಮು ಮತ್ತು ಉಬ್ಬಸ ಸಮಸ್ಯೆಯು ಗಣನೀಯವಾಗಿ ಏರಿಕೆ ಕಾಣುತ್ತಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷದಲ್ಲಿ ಹವಾಮಾನದಲ್ಲಿ ಏರುಪೇರು ಕಂಡುಬರುತ್ತಿದೆ. ಇದರಿಂದ ಮಕ್ಕಳಿಗೆ ಬಹುಬೇಗನೆ ವೈರಲ್‌ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಕ್ಕಳಲ್ಲಿ ಉಬ್ಬಸ, ಅಸ್ತಮಾ, ಶ್ವಾಸಕೋಶ ಸಂಬಂಧಿತ ಮತ್ತು ಇತರೆ ಉಸಿರಾಟ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ಆಶ್ಚರ್ಯಕರ ಸಂಗತಿಯೆಂದರೆ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ 3ರಿಂದ 6 ತಿಂಗಳ ವಯಸ್ಸಿನ ಶಿಶುಗಳಲ್ಲಿ ಕಂಡುಬರುತ್ತಿರುವುದು. ಈ ಸಮಸ್ಯೆಯಿಂದ ದೂರವಿರಲು ಪೋಷಕರು ಆದಷ್ಟು ಮಕ್ಕಳನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಹೋಗದಿರುವುದು ಒಳಿತು. ಮನೆಯಲ್ಲಿ ಮಕ್ಕಳಿರುವ ಪೋಷಕರು ಹೊರಗಡೆ ಹೋಗುವಾಗ ಮಾಸ್ಕ್‌ ಧರಿಸುವ ಮೂಲಕ ಎಚ್ಚರಿಕೆವಹಿಸಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಅಶೋಕ್‌ ಎಂ.ವಿ.

ಇದನ್ನೂ ಓದಿ: When to start with solid: ಶಿಶುವಿಗೆ ಘನ ಆಹಾರ ನೀಡಲು ಉತ್ತಮ ಸಮಯ ಯಾವುದು ತಿಳಿದುಕೊಳ್ಳಿ

ಚಿಕ್ಕ ಮಕ್ಕಳಲ್ಲಿ ಬ್ರಾಂಕೈಟಿಸ್‌ ಸಮಸ್ಯೆ ಕಂಡು ಬರುವುದು ಸಾಮಾನ್ಯ. ಬಹುತೇಕ ಮಕ್ಕಳಲ್ಲಿ ವೈರಲ್‌ ಸೋಂಕಿನಿಂದ ಅಥವಾ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಹರಡುವ ಮೂಲಕ ಮತ್ತು ಈಗಾಗಲೆ ಈ ಸೋಂಕಿಗೆ ತುತ್ತಾದ ಮಕ್ಕಳಲ್ಲೂ ಈ ಸಮಸ್ಯೆ ಕಂಡುಬರುತ್ತದೆ. ಕುಟುಂಬದಲ್ಲಿ ಯಾರಾದರು ಅಸ್ತಮಾ ಹೊಂದಿದ್ದರೂ ಕೂಡ ಮಕ್ಕಳು ಬಹು ಬೇಗ ಈ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಧೂಳು ಮತ್ತು ವೈರಲ್‌ ಸೋಂಕುಗಳಿಂದಲೂ ಮಕ್ಕಳಲ್ಲಿ ಅಸ್ತಮಾ ಕಂಡುಬರಬಹುದು. ಹಾಗಾಗಿ ಪೋಷಕರು ನಿಗದಿತ ಸಮಯದಲ್ಲಿ ವ್ಯಾಕ್ಸಿನ್‌ ಹಾಕಿಸುವ ಮೂಲಕ ಮಕ್ಕಳ ಬಗ್ಗೆ ಹೆಚ್ಚು ಜಾಗೃತಿ ವಹಿಸಿ.

ಇದನ್ನೂ ಓದಿ: ಚಳಿಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಸಿಂಪಲ್ ಟಿಪ್ಸ್

ಸಾಮಾನ್ಯವಾಗಿ ಈ ರೀತಿಯ ಸಮಸ್ಯೆ ಎದುರಾದಾಗ ಮಕ್ಕಳಿಗೆ ನೆಬ್ಯುಲೈಸೇಶನ್‌ ಮತ್ತು ದೊಡ್ಡ ಮಕ್ಕಳಿಗೆ ಕೆಮ್ಮಿನ ಔಷಧಿಯನ್ನು ನೀಡಲಾಗುತ್ತದೆ. ಒಂದು ವೇಳೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದಲ್ಲಿ ಹೈಪೋಕ್ಸಿಯಾ ಗೆ ಕಾರಣವಾಗಬಹುದು. ದೇಹದಲ್ಲಿ ಕಡಿಮೆ ಆಮ್ಲಜನಕದ ಪರಿಣಾಮ ನ್ಯುಮೋನಿಯಾ ಗೆ ತಿರುಗಬಹುದು. ದೇಹದಲ್ಲಿ ಆಮ್ಲಜನಕವು ಕಡಿಮೆಯಾದಂತೆ ಆರೋಗ್ಯವು ತೀರಾ ಹದಗೆಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಕ್ಕಳನ್ನು ಹೊರಗಿನ ವಾತಾವರಣಕ್ಕೆ ಒಡ್ಡುವುದನ್ನು ಆದಷ್ಟು ಮಿತಿಗೊಳಿಸುವ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟಿ. ಒಂದು ವೇಳೆ ಮಗು ಅತಿಯಾದ ಜ್ವರ, ಶೀತ, ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎನ್ನುತ್ತಾರೆ ಮಕ್ಕಳ ತಜ್ಞರಾದ ಡಾ. ಅಶೋಕ್‌ ಎಂ.ವಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ