Deepavali 2025: ದೀಪಾವಳಿಯ ಸಮಯದಲ್ಲಿ ಗರ್ಭಿಣಿಯರ ಆರೋಗ್ಯ ಕಾಪಾಡಲು ಇಲ್ಲಿದೆ ಸಿಂಪಲ್ ಟಿಪ್ಸ್

ದೀಪಾವಳಿ ಹಬ್ಬದ ಸಮಯದಲ್ಲಿ ಮಾಲಿನ್ಯದ ಮಟ್ಟ ಹೆಚ್ಚಾಗಿರುವುದರಿಂದ ಈ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿರುತ್ತದೆ. ಇದರ ಜೊತೆಗೆ ಜನರು ತಮ್ಮ ಆಹಾರ ಕ್ರಮದ ಬಗ್ಗೆಯೂ ಹೆಚ್ಚಾಗಿ ಗಮನ ಹರಿಸುವುದಿಲ್ಲ. ಅದರಲ್ಲಿಯೂ ಗರ್ಭಿಣಿಯರು ಈ ಸಮಯದಲ್ಲಿ ವಿಶೇಷ ಕಾಳಜಿ ವಹಿಸಬೇಕು. ಇಲ್ಲವಾದಲ್ಲಿ ಇವು ಹುಟ್ಟಲಿರುವ ಮಗುವಿಗೂ ಅಪಾಯಕಾರಿಯಾಗಬಹುದು. ಹಾಗಾದರೆ ಅವರ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಯಾವ ರೀತಿಯ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

Deepavali 2025: ದೀಪಾವಳಿಯ ಸಮಯದಲ್ಲಿ ಗರ್ಭಿಣಿಯರ ಆರೋಗ್ಯ ಕಾಪಾಡಲು ಇಲ್ಲಿದೆ ಸಿಂಪಲ್ ಟಿಪ್ಸ್
Pregnancy And Diwali

Updated on: Oct 20, 2025 | 8:21 PM

ದೀಪಾವಳಿ ಹಬ್ಬವನ್ನು ಸಾಮಾನ್ಯವಾಗಿ ಎಲ್ಲರೂ ಸಂಭ್ರಮ, ಸಡಗರದಿಂದ ಆಚರಣೆ ಮಾಡುತ್ತಾರೆ. ಆದರೆ ಈ ಸಮಯದಲ್ಲಿ ಪಟಾಕಿ, ಸಿಡಿಮದ್ದುಗಳನ್ನ ಎಲ್ಲಾ ಕಡೆಗಳಲ್ಲಿಯೂ ಹಚ್ಚುವುದರಿಂದ ಸಾಮಾನ್ಯವಾಗಿ ಮಾಲಿನ್ಯವೂ ಹೆಚ್ಚಾಗಿರುತ್ತದೆ. ಅದರ ಜೊತೆಗೆ ಎಲ್ಲರ ಮನೆಯಲ್ಲಿಯೂ ಹೆಚ್ಚಿನ ಸಿಹಿ ತಿಂಡಿಗಳನ್ನು ಮಾಡುವುದರಿಂದ ಇತಿಮಿತಿ ಇಲ್ಲದೆ ಎಲ್ಲರೂ ಅವುಗಳ ಸೇವನೆ ಮಾಡುತ್ತಾರೆ. ಇವೆಲ್ಲವೂ ಆರೋಗ್ಯಕ್ಕೆ ಅಪಾಯವನ್ನುಂಟುಮಾಡಬಹುದು. ಅದರಲ್ಲಿಯೂ ಗರ್ಭಿಣಿಯರು ದೀಪಾವಳಿಯ ಸಮಯದಲ್ಲಿ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹೊಗೆ, ಜೋರಾದ ಶಬ್ದಗಳು ಮತ್ತು ಅತಿಯಾದ ಸಿಹಿತಿಂಡಿಗಳು ಹಾನಿಕಾರಕವಾಗಬಹುದು. ಹುಟ್ಟಲಿರುವ ಮಗುವಿಗೂ ಇವು ಅಪಾಯಕಾರಿಯಾಗಬಹುದು. ಹಾಗಾಗಿ ಈ ಹಬ್ಬದ ಸಮಯದಲ್ಲಿ ತಾಯಿಯಾಗಲಿರುವ ಮಹಿಳೆಯರು (Expectant Mothers) ತಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಹಾಗಾದರೆ ಅವರ ಆರೋಗ್ಯ (Health) ಕಾಪಾಡಿಕೊಳ್ಳುವುದು ಹೇಗೆ? ಯಾವ ರೀತಿಯ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೊರಗೆ ಹೋಗುವುದನ್ನು ತಪ್ಪಿಸಿ

ಪಟಾಕಿಗಳಿಂದ ಬಿಡುಗಡೆಯಾಗುವ ಹೊಗೆ ಮತ್ತು ರಾಸಾಯನಿಕಗಳು ಗಾಳಿಯಲ್ಲಿ ಇಂಗಾಲದ ಕಣಗಳನ್ನು ಹೆಚ್ಚಿಸುತ್ತವೆ. ಇವು ಮಹಿಳೆಯರಲ್ಲಿ ಉಸಿರಾಟದ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡಬಹುದು. ಜೊತೆಗೆ ಹುಟ್ಟಲಿರುವ ಮಗುವಿನ ಮೇಲೂ ಪರಿಣಾಮ ಬೀರಬಹುದು. ಹಾಗಾಗಿ ದೀಪಾವಳಿಯ ಸಮಯದಲ್ಲಿ ಗರ್ಭಿಣಿಯರು ಹೊರಗೆ ಹೋಗುವುದನ್ನು ತಪ್ಪಿಸಬೇಕು. ತೀರಾ ಅಗತ್ಯವಿದ್ದಾಗ ಹೊರಗೆ ಹೋಗಬೇಕಾದಲ್ಲಿ ಅವರು ಮಾಸ್ಕ್ ಧರಿಸಬೇಕು. ಈ ಸಮಯದಲ್ಲಿ ಅವರಿಗೆ ಉಸಿರಾಟಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಎದುರಾದರೆ, ಅವರು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು.

ಇದನ್ನೂ ಓದಿ: Deepavali 2025: ಮಕ್ಕಳೊಂದಿಗೆ ಪಟಾಕಿ ಸಿಡಿಸುವಾಗ ತಪ್ಪದೆ ಈ ಸುರಕ್ಷತಾ ಕ್ರಮಗಳನ್ನು ಪಾಲಿಸಿ

ಸಿಹಿತಿನಿಸುಗಳನ್ನು ಅತಿಯಾಗಿ ಸೇವಿಸಬೇಡಿ

ಹಬ್ಬ ಎಂದ ಮೇಲೆ ಸಿಹಿತಿಂಡಿಗಳನ್ನು ಮಾಡಿಯೇ ಮಾಡುತ್ತಾರೆ. ಆದರೆ ಇವುಗಳನ್ನು ಅತಿಯಾಗಿ ಸೇವನೆ ಮಾಡಬಾರದು. ಸೇವನೆ ಮಾಡಲೇ ಬೇಕಾದಲ್ಲಿ ಸ್ವಲ್ಪ ಪ್ರಮಾಣದಲ್ಲಿ ತಿನ್ನಬಹುದು. ಏಕೆಂದರೆ ಗರ್ಭಾವಸ್ಥೆ ಸಮಯದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡುವುದು ಅತ್ಯಗತ್ಯ. ಹೆಚ್ಚು ಸಿಹಿತಿಂಡಿಗಳ ಸೇವನೆಯಿಂದ ಗರ್ಭಾವಸ್ಥೆಯ ಸಮಯದಲ್ಲಿ ಮಧುಮೇಹ ಬರುವ ಅಪಾಯ ಹೆಚ್ಚಾಗುತ್ತದೆ. ಅದರಲ್ಲಿಯೂ ಅಧಿಕ ತೂಕ ಅಥವಾ ಮಧುಮೇಹದ ಕೌಟುಂಬಿಕ ಇತಿಹಾಸ ಇರುವ ಮಹಿಳೆಯರಲ್ಲಿ ಈ ರೀತಿಯ ಅಪಾಯ ಕಂಡುಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಅಂತವರು ಕಡಿಮೆ ಪ್ರಮಾಣದಲ್ಲಿ ಸಿಹಿತಿಂಡಿಗಳ ಸೇವನೆ ಮಾಡಬೇಕು ಜೊತೆಗೆ ಹೆಚ್ಚು ಹುರಿದ ಮತ್ತು ಮಸಾಲೆಯುಕ್ತ ಆಹಾರ ಸೇವನೆ ಮಾಡುವುದನ್ನು ತಪ್ಪಿಸಬೇಕು. ಇದೆಲ್ಲದರ ಜೊತೆಗೆ ಕುಡಿಯುವ ನೀರಿನ ಬಗ್ಗೆಯೂ ವಿಶೇಷ ಗಮನ ಕೊಡಿ ಮತ್ತು ಪ್ರತಿದಿನ ಕನಿಷ್ಠ ಎಂಟರಿಂದ ಹತ್ತು ಗ್ಲಾಸ್ ನೀರು ಕುಡಿಯುವುದನ್ನು ಮರೆಯಬೇಡಿ.

ನಿದ್ರೆ, ವಿಶ್ರಾಂತಿಗೆ ಸಮಯ ನೀಡಿ

ಮಾನಸಿಕ ಒತ್ತಡವಾಗದಂತೆ ಮತ್ತು ಆಯಾಸ ಮಾಡಿಕೊಳ್ಳಬೇಡಿ. ಹಬ್ಬ ಎಂದ ಮೇಲೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದದ್ದು ಸಹಜ. ಅದರಲ್ಲಿಯೂ ಮನೆಗೆ ಬರುವ ಅತಿಥಿಗಳನ್ನು ಕೂಡ ವಿಚಾರಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಇಂತಹ ಸಮಯದಲ್ಲಿ ದಣಿವಾಗುವುದು ಸಾಮಾನ್ಯ, ಆದರೆ ಗರ್ಭಿಣಿಯರು ಅಗತ್ಯವಿರುವಷ್ಟು ನಿದ್ರೆ ಮತ್ತು ವಿಶ್ರಾಂತಿ ತೆಗೆದುಕೊಳ್ಳುವುದನ್ನು ಮರೆಯಬಾರದು. ಒತ್ತಡ ಅಥವಾ ಆಯಾಸ ಕಂಡುಬಂದರೆ, ಆಳವಾದ ಉಸಿರನ್ನು ತೆಗೆದುಕೊಳ್ಳಿ, ಧ್ಯಾನ ಮಾಡಿ ಮತ್ತು ಕುಟುಂಬದವರಿಂದ ಸಹಾಯ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ