Deepavali 2025: ಮಕ್ಕಳೊಂದಿಗೆ ಪಟಾಕಿ ಸಿಡಿಸುವಾಗ ತಪ್ಪದೆ ಈ ಸುರಕ್ಷತಾ ಕ್ರಮಗಳನ್ನು ಪಾಲಿಸಿ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೀಪ ಹಚ್ಚುವ ಜೊತೆಗೆ ಪಟಾಕಿ ಸಿಡಿಸುವ ಮೂಲಕ ದೇಶಾದ್ಯಂತ ಬಲು ಜೋರಾಗಿ ಸಂಭ್ರಮಾಚರಣೆ ಮಾಡಲಾಗುತ್ತದೆ. ಅದರಲ್ಲೂ ಮಕ್ಕಳು ಪಟಾಕಿ ಸಿಡಿಸಲು ಬಹಳ ಉತ್ಸುಕರಾಗಿರುತ್ತಾರೆ. ನಿಮ್ಮ ಮನೆಯಲ್ಲೂ ಮಕ್ಕಳು ಪಟಾಕಿ ಸಿಡಿಸಲೇಬೇಕೆಂದು ಹಠ ಮಾಡ್ತಿದ್ದಾರಾ, ಹಾಗಿದ್ರೆ ಹಬ್ಬದ ಸಂಭ್ರಮದ ಜೊತೆಗೆ ಅವರೊಂದಿಗೆ ಸುರಕ್ಷಿತವಾಗಿ ಪಟಾಕಿ ಸಿಡಿಸಲು ಈ ಕೆಲವೊಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ.

ಈಗಾಗಲೇ ನಾಡಿನೆಲ್ಲೆಡೆ ದೀಪಾವಳಿ (Deepavali) ಸಂಭ್ರಮ ಜೋರಾಗಿದೆ. ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಇದು ಅತ್ಯಂತ ಸಂಭ್ರಮ ಮತ್ತು ಸಂತೋಷದಿಂದ ಆಚರಿಸಲ್ಪಡುವ ಹಬ್ಬವಾಗಿದೆ. ಈ ಹಬ್ಬದ ದಿನ ದೀಪ ಬೆಳಕಿ, ಪಟಾಕಿ ಹಚ್ಚಿ ಸಂಭ್ರಮಿಸಲಾಗುತ್ತದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆಯ ಹಿರಿಯರು ಸಿಹಿ ತಿನಿಸುಗಳ ತಯಾರಿ, ಮನೆ ಡೆಕೋರೇಷನ್, ದೀಪ ಹಚ್ಚುವುದು, ಪೂಜೆ ಮಾಡುವುದು ಇತ್ಯಾದಿಗಳಲ್ಲಿ ಬ್ಯುಸಿಯಾದ್ರೆ ಮಕ್ಕಳು ಮಾತ್ರ ಪಟಾಕಿ ಸಿಡಿಸುವ ಸಂಭ್ರಮದಲ್ಲಿರುತ್ತಾರೆ. ಕೆಲವೊಂದು ಬಾರಿ ಪಟಾಕಿ ಸಿಡಿಸುವಾಗ ಅವಘಡಗಳು ಸಂಭವಿಸುವ ಕಾರಣ ಪಟಾಕಿ ಸಿಡಿಸುವಾಗ ಜಾಗ್ರತೆ ವಹಿಸಬೇಕು. ಅದರಲ್ಲೂ ಮಕ್ಕಳ ಬಗ್ಗೆ ತುಸು ಹೆಚ್ಚೇ ಗಮನಹರಿಸಬೇಕು. ನೀವು ಕೂಡ ಹಬ್ಬದ ಸಂಭ್ರಮ ಹೆಚ್ಚಿಸಲು ಮಕ್ಕಳೊಂದಿಗೆ ಪಟಾಕಿ ಸಿಡಿಸುತೀರಿ ಎಂದಾದ್ರೆ ಈ ಸುರಕ್ಷತಾ ಕ್ರಮಗಳನ್ನು ತಗೆದುಕೊಳ್ಳಿ.
ಪಟಾಕಿ ಸಿಡಿಸುವಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮ:
ಮಕ್ಕಳನ್ನು ಮೇಲ್ವಿಚಾರಣೆ ಮಾಡುತ್ತಿರಿ: ಮಕ್ಕಳು ಮೇಲ್ವಿಚಾರಣೆಯಿಲ್ಲದೆ ಸಣ್ಣ ಪಟಾಕಿಗಳನ್ನು ಸಹ ಸಿಡಿಸಲು ಬಿಡಬೇಡಿ. ಸರಿಯಾದ ಮಾರ್ಗದರ್ಶನ ನೀಡಿ, ಅಪಾಯಕಾರಿಯಲ್ಲದ ಸಣ್ಣಪುಟ್ಟ ಪಟಾಕಿಗಳನ್ನು ಮಾತ್ರ ಮಕ್ಕಳ ಕೈಯಿಂದ ಸಿಡಿಸಿ. ಜೊತೆಗೆ ಮಕ್ಕಳು ಪಟಾಕಿ ಹಚ್ಚುವಾಗ ಅವರ ಜೊತೆ ನೀವು ಕೂಡ ಇರಲೇಬೇಕು. ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಜೊತೆಗೆ ಮಕ್ಕಳಿರುವುದರಿಂದ ಅಪಾಯಕಾರಿ ಪಟಾಕಿಗಳನ್ನು ಸಿಡಿಸುವ ಬದಲು ಭೂ ಚಕ್ರ, ಸುರುಸುರು ಬತ್ತಿ, ಹೂಕುಂಡ ಇತ್ಯಾದಿ ಅಪಾಯಕಾರಿಯಲ್ಲದ ಪಟಾಕಿಗಳನ್ನು ಸಿಡಿಸಿ.
ಬಟ್ಟೆಗಳ ಬಗ್ಗೆ ಇರಲಿ ಗಮನ: ದೀಪಾವಳಿ ಸಂಜೆಯಲ್ಲಿ ಪಟಾಕಿ ಸಿಡಿಸುವ ವೇಳೆಯಲ್ಲಿ ಮಕ್ಕಳಿಗೆ ನೆಟೆಡ್, ಸ್ಯಾಟಿನ್, ವೆಲ್ವೆಟ್, ರೇಷ್ಮೆ, ಜಾರ್ಜೆಟ್ ಮುಂತಾದ ಬಟ್ಟೆಗಳನ್ನು ಧರಿಸುವ ಬದಲು ಹತ್ತಿ ಬಟ್ಟೆ ಮಾತ್ರ ಧರಿಸಿ. ಏಕೆಂದರೆ ಹತ್ತಿ ಬಟ್ಟೆ ಚರ್ಮಕ್ಕೆ ಅಂಟಿಕೊಳ್ಳುವುದಿಲ್ಲ. ಆದರೆ ಸಿಂಥೆಟಿಕ್ ಬಟ್ಟೆಗಳು ಚರ್ಮಕ್ಕೆ ಅಂಟಿಕೊಳ್ಳುತ್ತವೆ. ಆದ್ದರಿಂದ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಅವರಿಗೆ ಹತ್ತಿ ಬಟ್ಟೆಯನ್ನು ಧರಿಸಿ.
ತೆರೆದ ಮತ್ತು ಸುರಕ್ಷಿತ ಸ್ಥಳಗಳನ್ನು ಆಯ್ಕೆ ಮಾಡಿ: ಮರಗಳು, ವಾಹನಗಳು ಮತ್ತು ಕಟ್ಟಡಗಳಿಂದ ದೂರವಿರುವ ವಿಶಾಲವಾದ ತೆರೆದ ಸ್ಥಳಗಳಲ್ಲಿ ಪಟಾಕಿ ಸಿಡಿಸಿ. ಇದರಿಂದ ಅವಘಡಗಳು ಸಂಭವಿಸದಂತೆ ತಡೆಯಬಹುದು. ಸಿಡಿಸಿದ ಪಟಾಕಿಗಳನ್ನು ಮಕ್ಕಳ ಕೈಗೆ ಸಿಗದಂತೆ ಸಂಗ್ರಹಿಸಿ ನಂತರ ಅದನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿ.
ನೀರು ಮತ್ತು ಪ್ರಥಮ ಚಿಕಿತ್ಸೆ ಕಿಟ್ ಸಿದ್ಧವಾಗಿರಿಸಿ: ಪಟಾಕಿ ಸಿಡಿಸುವಾಗ ಯಾವಾಗಲೂ ಹತ್ತಿರದಲ್ಲಿ ನೀರು, ಮರಳು ಅಥವಾ ಫೈರ್ ಸ್ಟಾಪ್ ಗ್ಯಾಸ್ ಇಟ್ಟುಕೊಳ್ಳಿ. ಜೊತೆಗೆ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ಸಹ ಜೊತೆಗಿರಿಸಿ. ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಅಪ್ಪಿತಪ್ಪಿ ಏನಾದರೂ ಸಣ್ಣಪುಟ್ಟ ಗಾಯಗಳಾದರೆ, ಇದರಿಂದ ತಕ್ಷಣಕ್ಕೆ ಚಿಕಿತ್ಸೆ ನೀಡಬಹುದು.
ಗುಣಮಟ್ಟದ ಪಟಾಕಿಗಳನ್ನೇ ಸಿಡಿಸಿ: ನೀವು ಮಕ್ಕಳಿಗಾಗಿ ಪಟಾಕಿಗಳನ್ನು ಖರೀದಿಸುತ್ತಿದ್ದರೆ, ಉತ್ತಮ ಗುಣಮಟ್ಟದ ಪಟಾಕಿಗಳನ್ನು ಸರ್ಕಾರಿ ಪರವಾನಗಿ ಹೊಂದಿರುವ ಅಂಗಡಿಗಳಲ್ಲಿ ಮಾತ್ರ ಖರೀದಿಸಿ. ನೀವು ಖರೀದಿಸುವ ಪಟಾಕಿಗಳು ಸರ್ಕಾರದಿಂದ ಅನುಮೋದಿತ, ಪರವಾನಗಿ ಪಡೆದ ಮಾರಾಟಗಾರರಿಂದ ಬಂದಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಅಕ್ರಮ ಅಥವಾ ಕಡಿಮೆ ಗುಣಮಟ್ಟದ ಪಟಾಕಿಗಳಿಂದ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: ದೀಪಾವಳಿಯಂದು ಮಕ್ಕಳು ಪಟಾಕಿ ಮುಟ್ಟದಂತೆ ಮಾಡಬೇಕೇ? ಈ ಸಿಂಪಲ್ ಟ್ರಿಕ್ಸ್ ಅನುಸರಿಸಿ
ಕಣ್ಣುಗಳ ಸುರಕ್ಷತೆಯ ಬಗ್ಗೆ ಇರಲಿ ಗಮನ: ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸುವಾಗ ಕಣ್ಣಿನ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ವಿಶೇಷವಾಗಿ ಮಕ್ಕಳ ಕಣ್ಣುಗಳ ಬಗ್ಗೆ. ಕಣ್ಣಿನ ಸುರಕ್ಷತೆಗೆ ಸಂಬಂಧಿಸಿದಂತೆ, ಹತ್ತಿರದಿಂದ ಪಟಾಕಿ ಸಿಡಿಸುವಾಗ ಕಣ್ಣುಗಳಿಗೆ ಕನ್ನಡಕವನ್ನು ಧರಿಸಿ ಅಥವಾ ಪಟಾಕಿ ಹೊಡೆಯುವಾಗ ಮಕ್ಕಳ ಮುಖವನ್ನು ತಿರುಗಿಸಿ. ಪಟಾಕಿಗಳನ್ನು ಸುಟ್ಟ ನಂತರ ಅವರು ಕಣ್ಣುಗಳನ್ನು ಮುಟ್ಟುವ ಮೊದಲು ಸೋಪ್ ಅಥವಾ ನೀರಿನಿಂದ ಕೈಯನ್ನು ತೊಳೆಯಲು ಹೇಳಿ.
ಆರೋಗ್ಯ ಕಾಳಜಿ: ನಿಮ್ಮ ಮನೆಯಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದರೆ, ಪಟಾಕಿಗಳ ದೊಡ್ಡ ಶಬ್ದಗಳಿಂದ ಉಂಟಾಗುವ ಹಾನಿಯಿಂದ ಕಿವಿಯನ್ನು ರಕ್ಷಿಸಲು ಮಕ್ಕಳ ಕಿವಿಗೆ ಇಯರ್ ಪ್ಲಗ್ ಅಥವಾ ಹತ್ತಿ ಚೆಂಡನ್ನು ಇಡಿ. ನಿಮ್ಮ ಮಗುವಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ, ವಿಶೇಷವಾಗಿ ಉಸಿರಾಟದ ತೊಂದರೆಗಳಿದ್ದರೆ, ಅವರನ್ನು ಹೊಗೆ ತುಂಬಿದ ಪ್ರದೇಶಗಳಿಂದ ಆದಷ್ಟು ದೂರವಿರಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








