AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೂಯಿಂಗ್ ಗಮ್ ಅಗೆಯುವುದು ಹಲ್ಲುಜ್ಜುವುದಕ್ಕೆ ಪರ್ಯಾಯವೇ? ವೈದ್ಯರಿಂದ ಅಸಲಿ ಸತ್ಯ ಬಹಿರಂಗ

ಚೂಯಿಂಗ್ ಗಮ್ ತಿನ್ನುವುದು ಕೇವಲ ಟೈಮ್ ಪಾಸ್ ಗಾಗಿ ಮಾತ್ರವಲ್ಲ ಇದರ ಹಿಂದೆ ಹತ್ತು ಹಲವು ಕಾರಣಗಳಿವೆ ಎಂದರೆ ನಂಬುತ್ತೀರಾ? ಹೌದು. ಕೆಲವರು ಬಾಯಿಯಿಂದ ಬರುವ ವಾಸನೆ ತಡೆಯಲು, ಮತ್ತೆ ಕೆಲವರು ಹಲ್ಲನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಉದ್ದೇಶದಿಂದ ಚೂಯಿಂಗ್ ಗಮ್ ಅನ್ನು ಅಗಿಯುತ್ತಾರೆ. ಆದರೆ ಮತ್ತೊಂದಿಷ್ಟು ಜನ ಹಲ್ಲುಜ್ಜುವುದಕ್ಕೆ ಪರ್ಯಾಯವೆಂಬಂತೆ ಚೂಯಿಂಗ್ ಗಮ್ ತಿನ್ನುತ್ತಾರೆ. ಹಾಗಾದರೆ ಇದು ಹಲ್ಲುಜ್ಜುವುದಕ್ಕೆ ಪರ್ಯಾಯವಾಗಿ ಕೆಲಸ ಮಾಡುತ್ತದೆಯೇ? ಈ ಬಗ್ಗೆ ಡಾ. ಪೂಜಾ ಸಚ್‌ದೇವ್ ಏನ್ ಹೇಳ್ತಾರೆ ನೋಡಿ. ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ.

ಚೂಯಿಂಗ್ ಗಮ್ ಅಗೆಯುವುದು ಹಲ್ಲುಜ್ಜುವುದಕ್ಕೆ ಪರ್ಯಾಯವೇ? ವೈದ್ಯರಿಂದ ಅಸಲಿ ಸತ್ಯ ಬಹಿರಂಗ
Chewing Gum
ಪ್ರೀತಿ ಭಟ್​, ಗುಣವಂತೆ
|

Updated on: Oct 21, 2025 | 6:36 PM

Share

ಚೂಯಿಂಗ್ ಗಮ್ (Chewing Gum) ಅಗೆಯುವ ಅಭ್ಯಾಸ ಇರುವುದು ಸಾಮಾನ್ಯ. ಆದರೆ ಅದಕ್ಕೆ ಕಾರಣಗಳು ಮಾತ್ರ ಭಿನ್ನವಾಗಿರಬಹುದು. ಕೆಲವರು ಟೈಮ್ ಪಾಸ್ ಮಾಡಲು, ಇನ್ನು ಕೆಲವರು ಬಾಯಿಯಿಂದ ಬರುವ ವಾಸನೆ ತಡೆಯಲು, ಮತ್ತೆ ಕೆಲವರು ಹಲ್ಲನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಉದ್ದೇಶದಿಂದ ಚೂಯಿಂಗ್ ಗಮ್ ಅನ್ನು ಅಗಿಯುತ್ತಾರೆ. ಆದರೆ ಈ ರೀತಿ ಅಭ್ಯಾಸಗಳಿಂದ ಎಷ್ಟರ ಮಟ್ಟಿಗೆ ಲಾಭವಿದೆ ಎಂಬುದು ತಿಳಿದಿರುವುದಿಲ್ಲ. ಒಬ್ಬರು ಮಾಡುವುದನ್ನು ನೋಡಿ ಮತ್ತೊಬ್ಬರು ಅದನ್ನು ಅನುಸರಿಸುತ್ತಾರೆ. ಆದರೆ ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ. ಇದರ ಹೊರತಾಗಿ ಮತ್ತೊಂದಿಷ್ಟು ಜನ ಬ್ರಷ್ (brushing teeth) ಮಾಡದಿದ್ದಾಗ ಚೂಯಿಂಗ್ ಗಮ್ ಅಗಿಯುತ್ತಾರೆ. ಅದರಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಅಭ್ಯಾಸಗಳು ಹೆಚ್ಚುತ್ತಿದೆ. ಆದರೆ ಚೂಯಿಂಗ್ ಗಮ್ ಅಗೆಯುವುದು ನಿಜವಾಗಿಯೂ ಹಲ್ಲುಜ್ಜುವುದಕ್ಕೆ ಪರ್ಯಾಯವಾಗಿ ಕೆಲಸ ಮಾಡುತ್ತದೆಯೇ? ಇದು ಸತ್ಯವೇ? ಈ ಬಗ್ಗೆ ಡಾ. ಪೂಜಾ ಸಚ್‌ದೇವ್ (Dr Pooja Sachdev) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದು, ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಚೂಯಿಂಗ್ ಗಮ್ ಅಗೆಯುವುದು ಹಲ್ಲುಜ್ಜುವುದಕ್ಕೆ ಸಮವೇ?

ಚೂಯಿಂಗ್ ಗಮ್ ಅಗೆಯುವುದು ಹಲ್ಲುಜ್ಜುವುದಕ್ಕೆ ಬದಲಿ ಅಥವಾ ಪರ್ಯಾಯವಲ್ಲ ಡಾ. ಪೂಜಾ ಸಚ್‌ದೇವ್ ಅವರು ಇದನ್ನು ಒಂದು ತಪ್ಪುಕಲ್ಪನೆ ಎಂದಿದ್ದಾರೆ. ಆದರೆ ಅವುಗಳಿಂದ ಯಾವುದೇ ರೀತಿಯ ಲಾಭಗಳಿಲ್ಲ ಎಂದಲ್ಲ. ಕೆಲವು ದಂತವೈದ್ಯರು ಕ್ಯಾಂಡಿಯ ಬದಲಿಗೆ ನೀಡುವ ಸಕ್ಕರೆ ರಹಿತ ಚೂಯಿಂಗ್ ಗಮ್‌ಗಳು ಹಲ್ಲುಗಳ ಸ್ವಚ್ಚತೆ ಕಾಪಾಡಲು ಮತ್ತು ಉತ್ತಮ ಉಸಿರಾಟಕ್ಕೆ ಸಹಾಯ ಮಾಡುತ್ತದೆ. ಈ ರೀತಿ ಬಾಯಿಯ ಆರೋಗ್ಯಕ್ಕೆ ಸಹಾಯಕವಾಗಿದ್ದರೂ, ಅವು ಹಲ್ಲುಜ್ಜುವುದಕ್ಕೆ ಪರ್ಯಾಯವಲ್ಲ. ಆದ್ದರಿಂದ, ದಿನಕ್ಕೆ ಎರಡು ಬಾರಿ ಕನಿಷ್ಠ 2 ನಿಮಿಷಗಳ ಕಾಲ ಹಲ್ಲುಜ್ಜಲು ಮರೆಯಬೇಡಿ.

ಇಲ್ಲಿದೆ ನೋಡಿ ಡಾ. ಪೂಜಾ ಸಚ್‌ದೇವ್ ಅವರ ಪೋಸ್ಟ್

ಚೂಯಿಂಗ್ ಗಮ್ ಪ್ರಯೋಜನಕಾರಿಯೇ?

ಚೂಯಿಂಗ್ ಎಂದಿಗೂ ಹಲ್ಲುಜ್ಜುವುದಕ್ಕೆ ಪರ್ಯಾಯವಲ್ಲ ಅಥವಾ ಹಲ್ಲುಗಳ ಆರೋಗ್ಯ ಕಾಪಾಡಲು ಕೂಡ ಸಾಧ್ಯವಿಲ್ಲ, ಆದರೆ ಸಕ್ಕರೆ ಮುಕ್ತ ಗಮ್ ಅಗಿಯುವುದರಿಂದ ಬಾಯಿಯಲ್ಲಿ ಲಾಲಾರಸದ ಉತ್ಪಾದನೆ ಹೆಚ್ಚಾಗುತ್ತದೆ. ಮಾತ್ರವಲ್ಲ ಹಲ್ಲುಗಳಿಂದ ಆಹಾರ ಕಣಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಕ್ಸಿಲಿಟಾಲ್‌ನಂತಹ ಅಂಶಗಳನ್ನು ಹೊಂದಿರುವ ಗಮ್ ಹಲ್ಲಿನ ಕುಳಿಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ತಡೆಯಲು ಸಹಾಯ ಮಾಡುತ್ತದೆ.

ಲಾಲಾರಸ ಉತ್ಪಾದನೆಯನ್ನು ಹೆಚ್ಚಿಸುತ್ತದೆ: ಸಕ್ಕರೆ ಮುಕ್ತ ಗಮ್ ಅಗಿಯುವುದರಿಂದ ಲಾಲಾರಸ ಉತ್ಪಾದನೆಯಾಗುತ್ತದೆ, ಮಾತ್ರವಲ್ಲ ಹಲ್ಲುಗಳಲ್ಲಿ ಅಂಟಿಕೊಂಡ ಆಹಾರ ಕಣಗಳನ್ನು ತೆಗೆಯಲು ಮತ್ತು ಆಮ್ಲಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ.

ಹಲ್ಲಿನ ಕುಳಿಗಳನ್ನು ತಡೆಯುತ್ತದೆ: ಸಕ್ಕರೆ ಮುಕ್ತ ಗಮ್, ವಿಶೇಷವಾಗಿ ಕ್ಸಿಲಿಟಾಲ್ ಹೊಂದಿರುವ ಗಮ್, ಹಾನಿಕಾರಕ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಮತ್ತು ಹಲ್ಲಿನ ಕುಳಿಗಳನ್ನು ತಡೆಯಲು ಸಹಾಯ ಮಾಡುತ್ತದೆ.

ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ: ಗಮ್ ಅಗಿಯುವುದರಿಂದ ಆಹಾರ ಕಣಗಳು ಮತ್ತು ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತದೆ. ದುರ್ವಾಸನೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: ರಾತ್ರಿ ಹಲ್ಲುಜ್ಜದೇ ಮಲಗ್ತೀರಾ? ಇದು ನಿಮ್ಮ ಹೃದಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತಾ?

ಈ ವಿಷಯಗಳು ನೆನಪಿನಲ್ಲಿರಲಿ:

ಸಿಹಿ ಅಂಶವಿರುವ ಗಮ್ ಬದಲಾಗಿ ಯಾವಾಗಲೂ ಸಕ್ಕರೆ ಮುಕ್ತವಾಗಿರುವ ಚೂಯಿಂಗ್ ಗಮ್ ಅನ್ನು ಬಳಸಿ. ಏಕೆಂದರೆ ಸಕ್ಕರೆ ಅಂಶ ಹಲ್ಲುಗಳಿಗೆ ಹಾನಿಕಾರಕವಾಗಿದೆ. ಮಾತ್ರವಲ್ಲ, ಚೂಯಿಂಗ್ ಗಮ್ ಅನ್ನು ಎಂದಿಗೂ ಹಲ್ಲುಜ್ಜುವುದು ಮತ್ತು ಫ್ಲೋಸಿಂಗ್‌ಗೆ ಬದಲಿ ಎಂದು ಪರಿಗಣಿಸಬಾರದು. ಇದು ಕೇವಲ ಒಂದು ಪೂರಕ ಅಭ್ಯಾಸ. ಜೊತೆಗೆ ದಂತ ವೈದ್ಯರಿಂದ ಅನುಮೋದಿಸಲ್ಪಟ್ಟ ಗಮ್‌ಗಳನ್ನು ಆರಿಸಿಕೊಳ್ಳುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ