
ಹೃದಯ (Heart) ನಮ್ಮ ದೇಹದ ಪ್ರಮುಖ ಅಂಗ. ಅದಕ್ಕಾಗಿಯೇ ಇದರ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯವಾಗಿರುತ್ತದೆ. ಅದರಲ್ಲಿಯೂ ಪ್ರಸ್ತುತ ದಿನಗಳಲ್ಲಿ ಹೃದಯ ವೈಫಲ್ಯದಿಂದ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಬಹಳ ಹೆಚ್ಚಾಗಿಯೇ ಇದೆ. ಸಾಮಾನ್ಯವಾಗಿ ಹೃದಯ ಸ್ನಾಯುಗಳು ರಕ್ತವನ್ನು ಸರಿಯಾಗಿ ಪಂಪ್ ಮಾಡುವುದನ್ನು ನಿಲ್ಲಿಸಿದಾಗ ಹೃದಯ ವೈಫಲ್ಯ (Heart failure) ಸಂಭವಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ರಕ್ತವು ಹಿಂತಿರುಗುತ್ತದೆ, ಇದರಿಂದಾಗಿ ಶ್ವಾಸಕೋಶ ಮತ್ತು ಕಾಲುಗಳಲ್ಲಿ ದ್ರವ ಸಂಗ್ರಹವಾಗುತ್ತದೆ. ಈ ಸಮಯದಲ್ಲಿ, ಉಸಿರಾಟದ ತೊಂದರೆ, ಆಯಾಸ, ಕಾಲುಗಳಲ್ಲಿ ಊತ ಮತ್ತು ಹೃದಯ ಬಡಿತದಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಆದರೆ ಈ ರೀತಿ ಆಗುವುದಕ್ಕಿಂತ ಮೊದಲೇ ಅವುಗಳನ್ನು ಗುರುತಿಸುವುದು ಬಹಳ ಮುಖ್ಯ. ಇದು ಜೀವ ಉಳಿಸಬಹುದು. ಇದಕ್ಕಾಗಿ, ಹೃದ್ರೋಗ ತಜ್ಞರಾದಂತಹ ಡಾ. ಯಾರನೋವ್ (heart_transplant_doc) ಎಂಬವರು ಹೃದಯ ವೈಫಲ್ಯಕ್ಕೂ ಮುನ್ನ ಕಂಡುಬರುವ 5 ಆರಂಭಿಕ ಲಕ್ಷಣಗಳನ್ನು ಹಂಚಿಕೊಂಡಿದ್ದು ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ.
ತೂಕ ಕ್ರಮೇಣ ಹೆಚ್ಚಾಗುವುದು ಸಾಮಾನ್ಯ. ಆದರೆ ಅದು ಇದ್ದಕ್ಕಿದ್ದಂತೆ ಹೆಚ್ಚಾದರೆ, ನಾವು ಎಚ್ಛೆತ್ತುಕೊಳ್ಳಬೇಕಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ಈ ಲಕ್ಷಣ ಮುಂಬರುವ ಅಪಾಯವನ್ನು ಸೂಚಿಸುತ್ತದೆ. ಹೌದು. ಇದು ಹೃದಯ ವೈಫಲ್ಯಕ್ಕೂ ಒಂದು ಕಾರಣವಾಗಿರಬಹುದು. ದೇಹದಲ್ಲಿ ದ್ರವಗಳ ಸಂಗ್ರಹವಾಗುವುದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಜೊತೆಗೆ ಕೆಲವು ಔಷಧಿಗಳನ್ನು ತೆಗೆದುಕೊಳ್ಳುವುದು, ಥೈರಾಯ್ಡ್ ಗ್ರಂಥಿಯ ಸಮಸ್ಯೆ ಮತ್ತು ಪಿಸಿಓಎಸ್ ನಂತಹ ಪರಿಸ್ಥಿತಿಗಳು ಸಹ ಹಠಾತ್ ತೂಕ ಹೆಚ್ಚಾಗಲು ಕಾರಣವಾಗಬಹುದು. ಆದ್ದರಿಂದ, ನಿಮ್ಮ ತೂಕ ಯಾವುದೇ ಕಾರಣವಿಲ್ಲದೆ ಹೆಚ್ಚಾಗಿದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ. ಯಾವುದೇ ಕಾರಣಕ್ಕೂ ವಿಳಂಬ ಮಾಡಬೇಡಿ.
ಮಲಗಿರುವ ಸಮಯದಲ್ಲಿ ಕೆಮ್ಮು ಮತ್ತು ಉಸಿರಾಟದ ತೊಂದರೆ ಹೆಚ್ಚಾಗಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ತಕ್ಷಣ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಇದು ಹೃದಯ ವೈಫಲ್ಯ ಹಾಗೂ ಶ್ವಾಸಕೋಶದ ಸಮಸ್ಯೆಗಳು, ಆಸ್ತಮಾ ಮತ್ತು ಉಸಿರಾಟದ ಸಮಸ್ಯೆಗಳಿಂದ ಉಂಟಾಗಬಹುದು. ಆದ್ದರಿಂದ, ಜಾಗರೂಕರಾಗಿರುವುದು ಉತ್ತಮ.
ನಿಮಗೆ ಹೊಟ್ಟೆ ತುಂಬಾ ಭಾರವಾಗಿದ್ದರೆ, ಯಾವುದೇ ಕಾರಣವಿಲ್ಲದೆ ಹೊಟ್ಟೆ ತುಂಬಿರುವಂತೆ ಅನಿಸಿದರೆ, ಅದನ್ನು ಹೃದಯ ಸಮಸ್ಯೆಯ ಎಚ್ಚರಿಕೆಯ ಸಂಕೇತವೆಂದು ಪರಿಗಣಿಸಬೇಕು. ಕೆಲವೊಮ್ಮೆ ಜೀರ್ಣಕ್ರಿಯೆಯ ಸಮಸ್ಯೆಗಳಿದ್ದಾಗಲೂ ಈ ರೀತಿ ಆಗುತ್ತದೆ. ಆದರೆ ಯಾವುದೇ ಕಾರಣವಾಗಲಿ ವಿಳಂಬ ಮಾಡಬೇಡಿ.
ಇದನ್ನೂ ಓದಿ: ಕೇವಲ ಈ 5 ಆರೋಗ್ಯಕರ ಅಭ್ಯಾಸ ಪಾಲಿಸುವ ಮೂಲಕ ಹೃದಯಾಘಾತವನ್ನು ತಡೆಯಬಹುದು
ಮಾಡಬೇಕಿರುವ ಕೆಲಸಗಳನ್ನು ಮರೆತುಬಿಡುವುದು, ಯಾವುದಕ್ಕೂ ಸರಿಯಾಗಿ ಗಮನ ಕೊಡಲು ಸಾಧ್ಯವಾಗದಿರುವುದು ಸಹ ಹೃದಯ ಸಮಸ್ಯೆಗಳ ಲಕ್ಷಣಗಳಾಗಿವೆ ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ. ಹೃದಯದ ಕಾರ್ಯಕ್ಷಮತೆ ಕಡಿಮೆಯಾಗುವುದರಿಂದ ಇದು ಸಂಭವಿಸಬಹುದು, ಇದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಎಂದಿಗೂ ಹಗುರವಾಗಿ ಪರಿಗಣಿಸಬಾರದು. ಮುಂಚಿತವಾಗಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.
ಸರಿಯಾಗಿ ನಿದ್ರೆ ಬರದೇ ಸಮಸ್ಯೆಗಳು ಉಂಟಾಗುವುದು ಕೂಡ ಹೃದಯ ಆರೋಗ್ಯ ಸರಿಯಿಲ್ಲ ಎಂಬುದರ ಸೂಚನೆಯಾಗಿರುತ್ತದೆ. ಇದನ್ನು ಮುಂಚಿತವಾಗಿ ಗುರುತಿಸಬೇಕು. ಇಲ್ಲವಾದಲ್ಲಿ ಈ ರೀತಿಯ ಲಕ್ಷಣಗಳು ಹೃದಯದ ಮೇಲೆ ಪರಿಣಾಮ ಬೀರುವುದಲ್ಲದೆ ಇತರ ಸಮಸ್ಯೆಗಳಿಗೂ ಕಾರಣವಾಗಬಹುದು. ಏಕೆಂದರೆ ಒಂದು ದಿನ ಸರಿಯಾಗಿ ನಿದ್ರೆ ಬರದಿದ್ದರೆ ಅದರ ಪರಿಣಾಮ ಮರುದಿನ ಗೊತ್ತಾಗುತ್ತದೆ. ಇದರಿಂದ ಕೆಲಸಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ, ಜೊತೆಗೆ ಆಯಾಸವೂ ಆಗುತ್ತದೆ.
ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು, ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಬೇಕು. ಸರಿಯಾದ ತೂಕವನ್ನು ಕಾಯ್ದುಕೊಳ್ಳಲು ವ್ಯಾಯಾಮ ಮಾಡಬೇಕು. ಪೌಷ್ಠಿಕಾಂಶ ಹೆಚ್ಚಿರುವ ಆಹಾರಗಳನ್ನು ತೆಗೆದುಕೊಳ್ಳಬೇಕು. ರಾತ್ರಿ ಒಳ್ಳೆಯ ನಿದ್ರೆ ಮಾಡಬೇಕು. ಹೆಚ್ಚುವರಿಯಾಗಿ, ಮೇಲೆ ತಿಳಿಸಿರುವಂತಹ ಲಕ್ಷಣಗಳು ಕಂಡುಬಂದಾಗ ಅದನ್ನು ನಿರ್ಲಕ್ಷಿಸಬಾರದು ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ. ಏಕೆಂದರೆ ಸಣ್ಣ ನಿರ್ಲಕ್ಷ್ಯವೂ ಕೂಡ ಜೀವಕ್ಕೆ ಅಪಾಯ ಉಂಟು ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ