ಕೊರೋನಾ ವೈರಸ್ ಬಳಿಕ ಇದೀಗ ಭಾರತ ಮತ್ತು ಪ್ರಪಂಚದಾದ್ಯಂತ ಮತ್ತೆ ಭಯದ ವಾತಾವರಣವೊಂದು ಸೃಷ್ಟಿಯಾಗಿದೆ. ಹೌದು, ಹ್ಯೂಮನ್ ಮೆಟಾಪ್ನ್ಯುಮೋ ವೈರಸ್ ಎಂಬ ಹೊಸ ವೈರಸ್ ಚೀನಾದಲ್ಲಿ ವೇಗವಾಗಿ ಹರಡುತ್ತಿದೆ. ಇದೀಗ ಭಾರತದಲ್ಲಿ ಏಳು ಎಚ್‌ಎಂಪಿವಿ ಪ್ರಕರಣಗಳು ಪತ್ತೆಯಾಗಿವೆ. ಪುಣೆಯ ರೂಬಿ ಹಾಲ್ ಕ್ಲಿನಿಕ್‌ನಲ್ಲಿ ಐಸಿಯು ಮತ್ತು ಕ್ರಿಟಿಕಲ್ ಕೇರ್‌ನ ನಿರ್ದೇಶಕರಾದ ಡಾ. ಪ್ರಾಚೀ ಸಾಠೆ, ಎಚ್‌ಎಂಪಿವಿ ಎಂದರೇನು? ಇದರ ರೋಗಲಕ್ಷಣಗಳು, ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಫಸ್ಟ್ ಪೋಸ್ಟ್ ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಹ್ಯೂಮನ್ ಮೆಟಾಪ್ನ್ಯುಮೋ (HMPV) ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಉಸಿರಾಟದ ಸೋಂಕನ್ನು ಹರಡುವ ವೈರಸ್ ಆಗಿದೆ. ಸಾಮಾನ್ಯವಾಗಿ ಸೌಮ್ಯ ಮತ್ತು ಮಧ್ಯಮ ಫ್ಲೂ ತರಹದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಈ ವೈರಸ್ ಚಳಿಗಾಲ ಮತ್ತು ವಸಂತಕಾಲದ ಆರಂಭದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಆದರೆ, ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಪುಟ್ಟಮಕ್ಕಳು ಹಾಗೂ ವೃದ್ಧರಲ್ಲಿ ಈ ಸೋಂಕು ಹೆಚ್ಚಾಗಿ ಕಂಡುಬರುತ್ತದೆ.
* ಕೆಮ್ಮು
* ಮೂಗು ಕಟ್ಟುವಿಕೆ
* ಗಂಟಲು ನೋವು
* ಜ್ವರ
* ಉಬ್ಬಸ
* ಉಸಿರಾಟ ಸಮಸ್ಯೆ
* ಗಂಭೀರ ಪ್ರಕರಣಗಳಲ್ಲಿ ಶ್ವಾಸಕೋಶ ಸೋಂಕು ಅಥವಾ ನ್ಯುಮೋನಿಯಾ ಕೂಡ ಉಂಟಾಗಬಹುದು.
* ಸೋಂಕಿತ ವ್ಯಕ್ತಿಯ ಕೆಮ್ಮು ಅಥವಾ ಸೀನುವಾಗ ಹೊರಬರುವ ಹನಿಗಳ ಮೂಲಕ ಹೆಚ್ ಎಂಪಿವಿ ಹರಡುತ್ತದೆ.
* ಸೋಂಕಿತ ವ್ಯಕ್ತಿಯ ಸ್ಪರ್ಶಿಸಿದ ವಸ್ತುಗಳನ್ನು ಸ್ಪರ್ಶಿಸಿದ ನಂತರ ಮುಖವನ್ನು ಸ್ಪರ್ಶಿಸುವ ಮೂಲಕ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ.
* ಕಲುಷಿತ ವಸ್ತುಗಳನ್ನು ಸ್ಪರ್ಶಿಸಿ ನಂತರ ನಿಮ್ಮ ಕಣ್ಣುಗಳು, ಮೂಗು ಅಥವಾ ಬಾಯಿಯನ್ನು ಸ್ಪರ್ಶಿಸುವ ಮೂಲಕ ಹರಡಬಹುದು ಎಂದಿದ್ದಾರೆ ವೈದ್ಯರು.
* ಆಗಾಗ್ಗೆ ಕೈತೊಳೆಯುವುದು: ವೈರೆಸ್ ಹರಡುವ ಅಪಾಯವನ್ನು ಕಡಿಮೆ ಮಾಡಲು ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ಸ್ವಚ್ಛಗೊಳಿಸುತ್ತ ಇರಿ.
* ಮಾಸ್ಕ್ ಧರಿಸುವುದು : ಕಿಕ್ಕಿರಿದ ಜನಸಂದಣಿ ಇರುವ ಸ್ಥಳಗಳಲ್ಲಿ ವೈರಸ್ ಹರಡುವ ಅಪಾಯವನ್ನು ಕಡಿಮೆ ಮಾಡಲು ಮಾಸ್ಕ್ ಕಡ್ಡಾಯವಾಗಿ ಧರಿಸಿ.
* ನಿಕಟ ಸಂಪರ್ಕವನ್ನು ತಪ್ಪಿಸಿ: ಅನಾರೋಗ್ಯದಿಂದ ಬಳಲುತ್ತಿರುವ ಜನರಿಂದ ಅದರಲ್ಲೂ ವಿಶೇಷವಾಗಿ ಶೀತದಂತಹ ರೋಗಲಕ್ಷಣಗಳನ್ನು ಕಂಡು ಬಂದರೆ ಆ ವ್ಯಕ್ತಿಗಳಿಂದ ದೂರವಿರಿ.
* ನಿಮ್ಮ ಬಾಯಿ ಹಾಗೂ ಮೂಗು ಮುಚ್ಚಿಕೊಳ್ಳಿ: ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದರೊಂದಿಗೆ ಟಿಶ್ಯೂ ಬಳಸಿ.
* ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ: ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲವಾಗಿಡಲು ಪೋಷಣೆಯುಕ್ತ ಆಹಾರ, ನಿಯಮಿತ ವ್ಯಾಯಾಮ ಹಾಗೂ ಸಾಕಷ್ಟು ನಿದ್ರೆ ಮಾಡಿ.
* ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳದಿರಿ : ಸೋಂಕು ಹರಡುವುದನ್ನು ತಡೆಯಲು ಪಾತ್ರೆ, ಕಪ್ ಅಥವಾ ಇತರ ವಸ್ತುಗಳನ್ನು ಹಂಚಿಕೊಳ್ಳದಿರಿ.
* ವ್ಯಾಕ್ಸಿನೇಷನ್: ಹೆಚ್ ಎಂಪಿವಿ ಸೋಂಕಿಗೆ ಇನ್ನೂ ಯಾವುದೇ ನಿರ್ದಿಷ್ಟ ಲಸಿಕೆ ಇಲ್ಲದಿದ್ದರೂ, ಪ್ರತಿರಕ್ಷಣಾ ವ್ಯವಸ್ಥೆ ಮೇಲಿನ ಹೊರೆ ಕಡಿಮೆ ಮಾಡಲು ಜ್ವರ ಮತ್ತು ಕೋವಿಡ್ 19 ನಂತಹ ಇತರ ಉಸಿರಾಟದ ಸೋಂಕುಗಳಿಗೆ ಲಸಿಕೆಯನ್ನು ತೆಗೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಿ.
ಎಚ್ ಎಂಪಿವಿ ಒಂದು ಉಸಿರಾಟದ ಸೋಂಕನ್ನು ಹರಡುವ ವೈರಸ್ ಆಗಿದ್ದು, ಇದು ಕೋವಿಡ್ 19 ಪ್ರಮಾಣದಲ್ಲಿ ಸಾಂಕ್ರಾಮಿಕ ರೋಗವನ್ನು ಉಂಟುಮಾಡುವ ಸಾಧ್ಯತೆಯಿಲ್ಲ. ವಯಸ್ಸಾದವರು ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಿರುವ ವ್ಯಕ್ತಿಗಳಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತದೆ. ಈ ಜನರಲ್ಲಿ ಗಂಭೀರವಾದ ಅನಾರೋಗ್ಯಕ್ಕೆ ಕಾರಣವಾಗಬಹುದು. ಈ ಸೋಂಕನ್ನು ಏಕಾಏಕಿ ತಡೆಗಟ್ಟಲು ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು, ಇತರ ಉಸಿರಾಟದ ಕಾಯಿಲೆಗಳ ವಿರುದ್ಧ ವ್ಯಾಕ್ಸಿನೇಷನ್ ಉತ್ತೇಜಿಸುವುದು ಅತ್ಯಗತ್ಯ ಎಂದಿದ್ದಾರೆ ವೈದ್ಯರು.
ಇದನ್ನೂ ಓದಿ: ಹೊಸ ವೈರಸ್ ಅಲ್ಲ, ಭಯ ಪಡಬೇಡಿ; ಭಾರತದಲ್ಲಿ ಎಚ್‌ಎಂಪಿವಿ ಹರಡುವಿಕೆಗೆ ಜೆಪಿ ನಡ್ಡಾ ಹೇಳಿಕೆ
ಎಚ್ ಎಂ ಪಿವಿ ಮತ್ತು ಕೋವಿಡ್ 19 ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆನಂತಹ ಒಂದೇ ರೀತಿಯ ರೋಗಲಕ್ಷಣಗಳನ್ನು ಹೊಂದಿದ್ದರೂ ಅವು ವಿಭಿನ್ನ ವೈರಸ್‌ಗಳಿಂದ ಬರುವ ಸೋಂಕಾಗಿದೆ. ಕೋವಿಡ್ ಗೆ ಹೋಲಿಸಿದರೆ ಹೆಚ್ ಎಂಪಿವಿ ಸೌಮ್ಯ ಸ್ವರೂಪ ಸೋಂಕಾಗಿದ್ದು, ರೋಗ ನಿರೋಧಕ ಶಕ್ತಿ ಕಡಿಮೆಯಿರುವವರಲ್ಲಿ ಗಮನಾರ್ಹವಾದ ಅನಾರೋಗ್ಯವನ್ನು ಉಂಟುಮಾಡಬಹುದು. ಆದರೆ ಈ ಪ್ರಕರಣಗಳಿಗೆ ಸಂಬಂಧಿಸಿದ ತೀವ್ರ ನಿಗಾ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ವಿಶೇಷವಾಗಿ ದುರ್ಬಲವರ್ಗದ ಗುಂಪುಗಳಲ್ಲಿ ಸರಿಯಾದ ಮುನ್ನೆಚ್ಚರಿಕೆಗಳು ಹಾಗೂ ಜಾಗೃತಿಯೊಂದಿಗೆ ಸೋಂಕು ಹರಡುವಿಕೆ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ