
ಇಂದಿನ ಒತ್ತಡದ ಜೀವನ ಅನೇಕ ರೀತಿಯ ಬದಲಾವಣೆಗಳಿಗೆ ಕಾರಣವಾಗಿದೆ. ಕೆಲಸ, ಅತಿಯಾದ ಮೊಬೈಲ್ ಫೋನ್‌ಗಳ ಬಳಕೆ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಜನರ ಆಹಾರ ಪದ್ಧತಿಯಲ್ಲಿ ಅಡಚಣೆ ಉಂಟಾಗುತ್ತಿದೆ. ಹೀಗಾಗಿ ಅನೇಕರು ತಡವಾಗಿ ಊಟ ಮಾಡುವುದನ್ನು ರೂಢಿಸಿಕೊಂಡಿದ್ದು ಇದನ್ನು ಸಾಮಾನ್ಯ ಅಭ್ಯಾಸವೆಂದು ತಿಳಿದುಕೊಂಡಿದ್ದಾರೆ, ಆದರೆ ಇದರ ಪರಿಣಾಮ ತಕ್ಷಣವೇ ಗಮನಕ್ಕೆ ಬರದಿದ್ದರೂ ಕೂಡ ಕ್ರಮೇಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ತಡರಾತ್ರಿ ಅಥವಾ ತಡವಾಗಿ ಊಟವನ್ನು (Eating Late) ಮಾಡುವುದರಿಂದ ದೇಹದ ಸಮತೋಲನ ಹಾಳಾಗಬಹುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗಾದರೆ ತಡರಾತ್ರಿ ಊಟ ಮಾಡುವುದರಿಂದ ನಿಜವಾಗಿಯೂ ರಕ್ತದಲ್ಲಿನ ಗ್ಲೂಕೋಸ್ ಮಟ್ಟ (Blood Sugar) ಹೆಚ್ಚಾಗುತ್ತದೆಯೇ, ಈ ರೀತಿಯಾಗುವುದಕ್ಕೆ ಕಾರಣವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ತಡರಾತ್ರಿ ಆಹಾರ ಸೇವನೆ ಮಾಡುವುದಕ್ಕೂ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದಕ್ಕೂ ಬಲವಾದ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಊಟದ ಸಮಯ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಹಲವಾರು ಅಧ್ಯಯನಗಳಿಂದಲೂ ಸಾಬೀತಾಗಿದೆ. ಅದಕ್ಕಾಗಿಯೇ ತಜ್ಞರು ಈ ಅಭ್ಯಾಸದ ಬಗ್ಗೆ ಬಹಳ ಜಾಗರೂಕರಾಗಿರಲು ಸಲಹೆ ನೀಡುತ್ತಾರೆ.
ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಒಬ್ಬ ವ್ಯಕ್ತಿ ತಡವಾಗಿ ಊಟ ಮಾಡಿದಾಗ, ದೇಹವು ಅದನ್ನು ಸರಿಯಾಗಿ ಸಂಸ್ಕರಿಸಲು ಕಷ್ಟವಾಗಬಹುದು. ಹಗಲಿನ ಸಮಯಕ್ಕೆ ಹೋಲಿಸಿದರೆ ರಾತ್ರಿಯಲ್ಲಿ ದೇಹದ ಕಾರ್ಯನಿರ್ವಹಣೆ ನಿಧಾನವಾಗುತ್ತದೆ. ಅಂತಹ ಸಂದರ್ಭದಲ್ಲಿ, ಸೇವಿಸುವ ಆಹಾರವನ್ನು ತಕ್ಷಣವೇ ಶಕ್ತಿಯಾಗಿ ಪರಿವರ್ತಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗಬಹುದು. ಅದರಲ್ಲಿಯೂ ಹೊಟ್ಟೆ ಬಿರಿಯುವಷ್ಟು ಊಟ ಅಥವಾ ಸಿಹಿಯಾದ ಆಹಾರಗಳನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ವೇಗವಾಗಿ ಹೆಚ್ಚಾಗಬಹುದು.
ಇದನ್ನೂ ಓದಿ: ಸಿಟಿ ಜನರೇ ಜೋಪಾನ! ನಿಮ್ಮ ಜೀವಕ್ಕೆ ಕುತ್ತಾಗಬಹುದು ವಾಯುಮಾಲಿನ್ಯ
ಅಧಿಕ ಸಕ್ಕರೆ ಮಟ್ಟದ ಸಮಸ್ಯೆ ಕೇವಲ ಮಧುಮೇಹಿಗಳಿಗೆ ಮಾತ್ರವಲ್ಲ. ಆರೋಗ್ಯವಂತ ವ್ಯಕ್ತಿಯೂ ಸಹ, ತಡರಾತ್ರಿಯಲ್ಲಿ ತಿನ್ನುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಭವಿಷ್ಯದಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು. ದೀರ್ಘಕಾಲದವರೆಗೆ ಇದನ್ನು ಮಾಡುವುದರಿಂದ ದೇಹದ ಸಕ್ಕರೆ ನಿಯಂತ್ರಣ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ. ಕ್ರಮೇಣ, ಇದು ಇನ್ಸುಲಿನ್ ಮೇಲೆ ಪರಿಣಾಮ ಬೀರುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾಗಲು ಪ್ರಾರಂಭಿಸುತ್ತದೆ. ಅನೇಕ ಸಂದರ್ಭಗಳಲ್ಲಿ, ಈ ಅಭ್ಯಾಸವು ನಂತರ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಸಹ ಸಮಯಕ್ಕೆ ಸರಿಯಾಗಿ ಮತ್ತು ಸಮತೋಲಿತ ಆಹಾರವನ್ನು ಸೇವನೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ