AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಟಿ ಜನರೇ ಜೋಪಾನ! ನಿಮ್ಮ ಜೀವಕ್ಕೆ ಕುತ್ತಾಗಬಹುದು ವಾಯುಮಾಲಿನ್ಯ

ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ವಾಯು ಗುಣಮಟ್ಟ ಭಾರೀ ಮಟ್ಟದಲ್ಲಿ ಹದಗೆಟ್ಟಿದೆ. ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ವಾಯು ಮಾಲಿನ್ಯ ದಿನನಿತ್ಯದ ಬದುಕಿನ ಭಾಗವಾಗಿ, ಮಾನವನ ಆರೋಗ್ಯದ ಮೇಲೆ ಸದ್ದಿಲ್ಲದೆ ಹಾನಿಯನ್ನುಂಟುಮಾಡುತ್ತಿದೆ. ಹಾಗಾಗಿ ಇವುಗಳ ಬಗೆಗಿನ ಮಾಹಿತಿ ಮತ್ತು ಇವುಗಳಿಂದ ಉಂಟಾಗುವ ಪರಿಣಾಮದ ಬಗ್ಗೆ ತಿಳಿಯುವುದು ಅನಿವಾರ್ಯವಾಗಿದೆ. ಇದಕ್ಕೆ ಪೂರಕವಾಗಿ ಡಾ. ಪ್ರತಿಭಾ ನಾಗ್ ಅವರು ಕೆಲವು ವಿಷಯಗಳನ್ನು ಟಿವಿ9 ಕನ್ನಡ ಜೊತೆ ಹಂಚಿಕೊಂಡಿದ್ದು ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಸಿಟಿ ಜನರೇ ಜೋಪಾನ! ನಿಮ್ಮ ಜೀವಕ್ಕೆ ಕುತ್ತಾಗಬಹುದು ವಾಯುಮಾಲಿನ್ಯ
Hidden Health Risks of Air Pollution
ಪ್ರೀತಿ ಭಟ್​, ಗುಣವಂತೆ
|

Updated on: Dec 15, 2025 | 11:55 AM

Share

ವಾಯುಮಾಲಿನ್ಯ (Air Pollution) ಇಂದಿನ ಆಧುನಿಕ ಜೀವನಶೈಲಿಯೊಂದಿಗೆ ಬೆಸೆದುಕೊಂಡಿರುವ ಅತ್ಯಂತ ಗಂಭೀರ ಪರಿಸರ ಸಮಸ್ಯೆಗಳಲ್ಲಿ ಒಂದಾಗಿದೆ. ವೇಗವಾದ ಕೈಗಾರೀಕರಣ, ನಿಯಂತ್ರಣವಿಲ್ಲದ ನಗರೀಕರಣ, ಹೆಚ್ಚುತ್ತಿರುವ ವಾಹನ ಸಂಚಾರ, ಜೀವಾಶ್ಮ ಇಂಧನಗಳ ದಹನ ಮತ್ತು ನಿರಂತರ ನಿರ್ಮಾಣ ಚಟುವಟಿಕೆಗಳು ವಾಯು ಗುಣಮಟ್ಟವನ್ನು ಭಾರೀ ಮಟ್ಟದಲ್ಲಿ ಹದಗೆಡಿಸುತ್ತಿವೆ. ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ವಾಯು ಮಾಲಿನ್ಯ ದಿನನಿತ್ಯದ ಬದುಕಿನ ಭಾಗವಾಗಿ, ಮಾನವನ ಆರೋಗ್ಯದ ಮೇಲೆ ಸದ್ದಿಲ್ಲದೆ ಹಾನಿಯನ್ನುಂಟುಮಾಡುತ್ತಿದೆ. ಹಾಗಾಗಿ ಇವುಗಳ ಬಗೆಗಿನ ಮಾಹಿತಿ ಮತ್ತು ಇವುಗಳಿಂದ ಉಂಟಾಗುವ ಪರಿಣಾಮದ ಬಗ್ಗೆ ತಿಳಿಯುವುದು ಅನಿವಾರ್ಯವಾಗಿದೆ. ಅಷ್ಟೇ ಅಲ್ಲ, ಇಂತಹ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಲು ಯಾವ ರೀತಿ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು ಎಂದು ತಿಳಿಯುವುದು ಅವಶ್ಯವಾಗಿದೆ. ಇದಕ್ಕೆ ಪೂರಕವಾಗಿ ಧಾರವಾಡ ಎಸ್​ಡಿಎಮ್ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಆಸ್ಪತ್ರೆಯ ಶ್ವಾಸಕೋಶ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪ್ರತಿಭಾ ನಾಗ್ (Dr. Prathibha Nag) ಅವರು ಈ ಕುರಿತು ಕೆಲವು ವಿಷಯಗಳನ್ನು ಟಿವಿ9 ಕನ್ನಡ ಜೊತೆ ಹಂಚಿಕೊಂಡಿದ್ದು ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ವಾಯುಮಾಲಿನ್ಯದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು:

ಡಾ. ಪ್ರತಿಭಾ ನಾಗ್ ಅವರ ಪ್ರಕಾರ, ವಾಯುವಿನಲ್ಲಿ ಮಿಶ್ರಣವಾಗಿರುವ PM2.5 ನಂತಹ ಸೂಕ್ಷ್ಮ ಕಣಗಳು ಮತ್ತು ಓಜೋನ್ ಮೊದಲಾದ ವಿಷಕಾರಿ ಅನಿಲಗಳು ಶ್ವಾಸಕೋಶದ ಆಳಕ್ಕೆ ಪ್ರವೇಶಿಸಿ ಉರಿಯೂತ (inflammation) ಉಂಟುಮಾಡುತ್ತವೆ. ಇದರ ಪರಿಣಾಮವಾಗಿ ಅಸ್ತಮಾ ಉಲ್ಬಣಗೊಳ್ಳುವುದು, ಉಸಿರಾಟದ ತೊಂದರೆಗಳು ಹೆಚ್ಚಾಗುವುದು ಮಾತ್ರವಲ್ಲದೆ, ಹೃದಯ ಸಂಬಂಧಿತ ಕಾಯಿಲೆಗಳು, ಸ್ಟ್ರೋಕ್ ಮತ್ತು ಅಕಾಲಿಕ ಮರಣದ ಅಪಾಯವೂ ಹೆಚ್ಚಾಗುತ್ತದೆ. ದೀರ್ಘಕಾಲದ ಸಂಸರ್ಗವು (interaction) ಶ್ವಾಸಕೋಶ ಕ್ಯಾನ್ಸರ್, ಬ್ರಾಂಕೈಟಿಸ್ ಮತ್ತು ಇತರೆ ದೀರ್ಘಕಾಲೀನ ಉಸಿರಾಟದ ಕಾಯಿಲೆಗಳಿಗೂ ಕೂಡ ಕಾರಣವಾಗುತ್ತದೆ.

ಹಸುಗೂಸುಗಳಿಂದ ಹಿಡಿದು ಹದಿನಾರರ ವಯೋಮಾನದ ಮಕ್ಕಳು ವಾಯು ಮಾಲಿನ್ಯಕ್ಕೆ ಅತ್ಯಂತ ಅಸಹಾಯಕವಾಗಿ ಬಳಲುವ ವರ್ಗವಾಗಿದೆ. ಏಕೆಂದರೆ ಅವರ ಶ್ವಾಸಕೋಶ ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ ಮತ್ತು ಅವರು ವಯಸ್ಕರಿಗಿಂತ ವೇಗವಾಗಿ ಉಸಿರಾಡುವುದರಿಂದ, ಮಾಲಿನ್ಯಕರ ಕಣಗಳ ಪರಿಣಾಮ ಹೆಚ್ಚು ಬೀರುತ್ತದೆ. ಜೊತೆಗೆ ಹೊರಾಂಗಣ ಚಟುವಟಿಕೆಗಳು ಹೆಚ್ಚಿರುವ ಕಾರಣ, ಮಕ್ಕಳಲ್ಲಿ ಅಸ್ತಮಾ ತೀವ್ರಗೊಳ್ಳುವುದು, ಉಸಿರಾಟದ ಸೋಂಕುಗಳು ಹೆಚ್ಚಾಗುವುದು ಮತ್ತು ಬೌದ್ಧಿಕ ಬೆಳವಣಿಗೆಯ ಮೇಲೆಯೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ವೃದ್ಧರು ಮತ್ತು ಈಗಾಗಲೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೂ ವಾಯು ಮಾಲಿನ್ಯವು ಹೆಚ್ಚಿನ ಅಪಾಯವನ್ನು ಉಂಟುಮಾಡುತ್ತದೆ.

ವಾಯುಮಾಲಿನ್ಯದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಲಕ್ಷಣ:

ವಾಯು ಮಾಲಿನ್ಯದ ತಕ್ಷಣದ ಪರಿಣಾಮಗಳು ಕಣ್ಣು, ಮೂಗು ಮತ್ತು ಗಂಟಲಿನಲ್ಲಿ ಕಿರಿಕಿರಿ, ಕೆಮ್ಮು, ತಲೆನೋವು ಮತ್ತು ಉಸಿರಾಟದ ತೊಂದರೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಇದರ ದೀರ್ಘಕಾಲೀನ ಪರಿಣಾಮಗಳು ಇನ್ನಷ್ಟು ಗಂಭೀರವಾಗಿದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿ, ದೇಹವನ್ನು ವಿವಿಧ ರೀತಿಯ ಸೋಂಕುಗಳಿಗೆ ಒಳಪಡಿಸುತ್ತವೆ. ಹೀಗಾಗಿ ವಾಯು ಮಾಲಿನ್ಯವನ್ನು ಕೇವಲ ಪರಿಸರ ಸಮಸ್ಯೆಯಾಗಿ ಅಲ್ಲ, ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಪರಿಗಣಿಸುವುದು ಅವಶ್ಯವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪಾತಾಳಕ್ಕಿಳಿದ ಗಾಳಿಯ ಗುಣಮಟ್ಟ; ಉಸಿರಾಟದ ಸಮಸ್ಯೆಗಿದು ಬುನಾದಿ

ಮುನ್ನೆಚ್ಚರಿಕಾ ಕ್ರಮಗಳು ಹೇಗಿರಬೇಕು?

ಡಾ. ಪ್ರತಿಭಾ ನಾಗ್ ಅವ್ರು ತಿಳಿಸಿರುವ ಮಾಹಿತಿ ಅನುಸಾರ, ಈ ಸವಾಲನ್ನು ಎದುರಿಸಲು ಮುನ್ನೆಚ್ಚರಿಕಾ ಕ್ರಮಗಳು ಅತ್ಯಂತ ಅಗತ್ಯ. ದಿನನಿತ್ಯದ ವಾಯು ಗುಣಮಟ್ಟ ಸೂಚ್ಯಂಕ (AQI) ಅನ್ನು ಗಮನಿಸಿ, ಮಾಲಿನ್ಯ ಹೆಚ್ಚಿರುವ ದಿನಗಳಲ್ಲಿ ಹೊರಾಂಗಣ ಚಟುವಟಿಕೆಗಳನ್ನು ಕಡಿಮೆ ಮಾಡಬೇಕು. ಅಗತ್ಯವಿದ್ದಲ್ಲಿ ಮಾಸ್ಕ್ ಬಳಕೆ, ಒಳಾಂಗಣದಲ್ಲಿ ಏರ್ ಪ್ಯೂರಿಫೈಯರ್ ಉಪಯೋಗ ಮತ್ತು ಅಡುಗೆ ಹೊಗೆಯಂತಹ ಒಳಗಿನ ಮಾಲಿನ್ಯಗಳನ್ನು ನಿಯಂತ್ರಿಸುವುದು ಮಹತ್ವದ ಹೆಜ್ಜೆಗಳಾಗಿವೆ. ಜೊತೆಗೆ ಸಾರ್ವಜನಿಕ ಸಾರಿಗೆಯ ಬಳಕೆ, ಹಸಿರು ಪ್ರದೇಶಗಳ ಅಭಿವೃದ್ಧಿ ಮತ್ತು ಮರ ನೆಡುವ ಕಾರ್ಯಗಳು ವಾಯು ಮಾಲಿನ್ಯವನ್ನು ಕಡಿಮೆಗೊಳಿಸಲು ದೀರ್ಘಕಾಲೀನ ಪರಿಹಾರಗಳಾಗಿವೆ. ಅದರೊಂದಿಗೆ, ದೇಹದ ಪ್ರತಿರೋಧ ಶಕ್ತಿಯನ್ನು ಬಲಪಡಿಸುವುದು ಅತ್ಯಂತ ಅವಶ್ಯಕ. ಹಣ್ಣು ಮತ್ತು ತರಕಾರಿಗಳಿಂದ ಸಮೃದ್ಧವಾದ ಪೌಷ್ಟಿಕ ಆಹಾರ ಸೇವನೆ, ವಿಶೇಷವಾಗಿ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ನಿಯಮಿತ ಆರೋಗ್ಯ ತಪಾಸಣೆ ಹಾಗೂ ಮನೆ ಸುತ್ತಮುತ್ತ ಉತ್ತಮ ಗಾಳಿ ಚಲನವಲನವಿರುವಂತೆ ನೋಡಿಕೊಳ್ಳುವುದು, ಮಕ್ಕಳ ಮತ್ತು ವಯಸ್ಕರ ಸುರಕ್ಷತೆಯನ್ನು ಕಾಪಾಡಲು ಸಹಾಯ ಮಾಡುತ್ತದೆ.

ಒಟ್ಟಾರೆ, ವಾಯು ಮಾಲಿನ್ಯವು ನಮ್ಮ ಆರೋಗ್ಯ, ಭವಿಷ್ಯ ಮತ್ತು ಮುಂದಿನ ಪೀಳಿಗೆಯ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತಿರುವ ಗಂಭೀರ ಸಮಸ್ಯೆಯಾಗಿದೆ. ವೈಯಕ್ತಿಕ ಜಾಗೃತಿಯೊಂದಿಗೆ ಸಮೂಹ ಪ್ರಯತ್ನಗಳು ಒಂದಾಗಿ ನಡೆಯುವಾಗ ಮಾತ್ರ, ಸ್ವಚ್ಛ ವಾಯು ಮತ್ತು ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಸಾಧ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ