
ನಿದ್ರೆ (Sleep) ಮನುಷ್ಯನ ದೇಹ ಮತ್ತು ಮನಸ್ಸಿಗೆ ಬೇಕಾಗಿರುವ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಒಂದು ದಿನ ನಿದ್ರೆ ಸರಿಯಾಗಿ ಆಗದಿದ್ದರೆ ಕಿರಿಕಿರಿ ಉಂಟಾಗುತ್ತದೆ. ಇದು ಮುಂದುವರಿದರೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಾತ್ರವಲ್ಲ ನಿದ್ರೆ ಸರಿಯಾಗದಿದ್ದರೆ ಮಾನಸಿಕ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡುವಂತಹ ನಿದ್ರೆ ಬಹಳ ಮುಖ್ಯವಾಗುತ್ತದೆ. ಹಾಗಾದರೆ ನಿದ್ರೆಯಿಲ್ಲದೆ ಒಬ್ಬ ವ್ಯಕ್ತಿಯು ಎಷ್ಟು ಸಮಯದ ವರೆಗೆ ಎಚ್ಚರವಾಗಿರಬಹುದು ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ, ಇದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಾಗದಿದ್ದರೂ ಕೂಡ ಈ ಕುರಿತು ಅನೇಕ ಅಧ್ಯಯನಗಳನ್ನು ನಡೆಸಲಾಗಿದೆ. ಹಾಗಾದರೆ ಒಬ್ಬ ವ್ಯಕ್ತಿ ನಿದ್ದೆಯಿಲ್ಲದೆ ಬದುಕಬಹುದೇ, ಎಷ್ಟು ಸಮಯ ನಿದ್ರೆ ಇಲ್ಲದೆ ಇರಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ನಿದ್ರೆಯಿಲ್ಲದೆ ಒಬ್ಬ ವ್ಯಕ್ತಿಯು ಎಷ್ಟು ಕಾಲ ಬದುಕಬಹುದು ಎಂಬುದನ್ನು ಇಲ್ಲಿಯ ವರೆಗೂ ನಿರ್ಧರಿಸಲು ಸಾಧ್ಯವಾಗಿಲ್ಲ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ನಿದ್ರೆ ಮಾಡದೆ ಹೆಚ್ಚು ಸಮಯ ಎಚ್ಚರವಾಗಿದ್ದ ದಾಖಲೆ ರಾಬರ್ಟ್ ಮೆಕ್‌ಡೊನಾಲ್ಡ್ ಅವರ ಹೆಸರಿನಲ್ಲಿದೆ. ಅವರು 18 ದಿನ, 21 ಗಂಟೆ 40 ನಿಮಿಷಗಳ ಕಾಲ ಎಚ್ಚರವಾಗಿದ್ದು ದಾಖಲೆ ಬರೆದಿದ್ದಾರೆ. ಈ ದೀರ್ಘಕಾಲದ ನಿದ್ರಾಹೀನತೆಯು ರಾಬರ್ಟ್ ಮೆಕ್‌ಡೊನಾಲ್ಡ್ ಅವರ ಆರೋಗ್ಯದ ಮೇಲೆ ಹಲವಾರು ರೀತಿಯ ಪರಿಣಾಮಗಳನ್ನು ಬೀರಿತ್ತು, ಇದರ ತೀವ್ರತೆಯಿಂದಾಗಿ, ಗಿನ್ನೆಸ್ 1997 ರಲ್ಲಿ ಈ ವರ್ಗವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತು. ಇನ್ನು ಆಸ್ಟ್ರೇಲಿಯಾ ಸರ್ಕಾರದ ಆರೋಗ್ಯ ವೆಬ್‌ಸೈಟ್ ಕೂಡ, ನಿದ್ರೆಯ ಕೊರತೆಯು ಯಾವುದೇ ವಯಸ್ಸಿನವರಿಗೆ ಆಗಲಿ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಬಹಿರಂಗಪಡಿಸಿದೆ.
ನಿದ್ರಾಹೀನತೆಯು ಅರಿವಿನ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು, ತೀವ್ರ ಮನಸ್ಥಿತಿ ಬದಲಾವಣೆಗಳಿಗೆ ಕಾರಣವಾಗಬಹುದು, ಕಿರಿಕಿರಿ ಮತ್ತು ಕೋಪಕ್ಕೂ ಕಾರಣವಾಗಬಹುದು. ಮಾತ್ರವಲ್ಲ ದೇಹದ ಶಕ್ತಿ ದುರ್ಬಲಗೊಂಡು ರೋಗನಿರೋಧಕ ಶಕ್ತಿ ಹದಗೆಡಬಹುದು ಜೊತೆಗೆ ಮತ್ತಿತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಅಷ್ಟೇ ಅಲ್ಲ, ದೀರ್ಘಕಾಲದ ಕಾಯಿಲೆಗಳು ಬರುವ ಅಪಾಯವೂ ಇದೆ. ಅಧಿಕ ರಕ್ತದೊತ್ತಡ, ಮಧುಮೇಹ, ತೂಕ ಹೆಚ್ಚಾಗುವುದು ಅಥವಾ ಬೊಜ್ಜು ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಇದೆ. ದೈಹಿಕ ಸಮತೋಲನ ಕ್ಷೀಣಿಸುವುದು ಮತ್ತು ಲೈಂಗಿಕ ಸಾಮರ್ಥ್ಯ ಕಳೆದುಕೊಳ್ಳುವಂತಹ ಸಮಸ್ಯೆಗಳು ಕೂಡ ಉಂಟಾಗಬಹುದು.
ಇದನ್ನೂ ಓದಿ: ಮಧ್ಯಾಹ್ನ ನಿದ್ರೆ ಮಾಡುವುದು ಆರೋಗ್ಯಕ್ಕೆ ಪ್ರಯೋಜನಕಾರಿಯೇ? ಈ ಬಗ್ಗೆ ತಜ್ಞರ ಅಭಿಪ್ರಾಯವೇನು ತಿಳಿದುಕೊಳ್ಳಿ
ಸಾಮಾನ್ಯವಾಗಿ, ನೀವು 24 ಗಂಟೆಗಳ ಕಾಲ ನಿದ್ರೆ ಮಾಡದಿದ್ದರೆ, ಆಕಳಿಕೆ ಮತ್ತು ಸ್ವಲ್ಪ ಆಯಾಸದಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅದೇ 24 ಗಂಟೆಗಳಿಗೂ ಮೀರಿ ಎಚ್ಚರವಾಗಿದ್ದರೆ, ಈ ಲಕ್ಷಣಗಳು ಹೆಚ್ಚು ತೀವ್ರವಾಗುತ್ತವೆ. ಮೆದುಳಿನ ಕಾರ್ಯ ಮತ್ತು ಏಕಾಗ್ರತೆ ದುರ್ಬಲಗೊಳ್ಳುತ್ತದೆ ಮತ್ತು ಮೆದುಳಿನ ಕಾರ್ಯ ನಿಧಾನವಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ