ನೀವು ಮಾಡುವ ಈ ತಪ್ಪುಗಳೇ ಮಕ್ಕಳಾಗದಿರುವುದಕ್ಕೆ ಕಾರಣ! ಇದನ್ನು ತಡೆಯಲು ವೈದ್ಯರ ಸಲಹೆಯನ್ನು ಪಾಲಿಸಿ

ಇತ್ತೀಚಿನ ದಿನಗಳಲ್ಲಿ ಗರ್ಭಪಾತ, ಪಿಸಿಓಡಿ, ಪಿಸಿಓಎಸ್ ಹೀಗೆ ನಾನಾ ರೀತಿಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಹೆಣ್ಣು ಗರ್ಭ ಧರಿಸುವುದಕ್ಕೆ ಕಷ್ಟಪಡುವಂತಾಗಿದೆ. ಸರಿಯಾದ ಮಾಹಿತಿ ಇಲ್ಲದಿರುವುದು, ಆರೋಗ್ಯ ಸಮಸ್ಯೆಗಳು ಕೂಡ ಇದಕ್ಕೆ ಕಾರಣವಾಗಿರಬಹುದು. ಅದಕ್ಕಾಗಿಯೇ, ಅಂಡಾಣು ಬಿಡುಗಡೆಯನ್ನು ಲೆಕ್ಕ ಹಾಕುವುದು ಹೇಗೆ, ಅನಾರೋಗ್ಯಕರ ಅಂಡಾಣುವಿನ ಲಕ್ಷಣಗಳು ಹೇಗಿರುತ್ತವೆ, ಆರೋಗ್ಯಕರ ಅಂಡಾಣುವನ್ನು ಪಡೆಯುವುದು ಹೇಗೆ ಎಂಬುದರ ಕುರಿತು ಮಾಹಿತಿ ನೀಡಲು ಹಾಸನ ಎಸ್‌ಡಿಎಮ್‌ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದ ಫ್ರೊಫೆಸರ್ ಹಾಗೂ ವಿಭಾಗದ ಮುಖ್ಯಸ್ಥೆ ಡಾ. ಗಾಯತ್ರಿ ಭಟ್‌ ಎನ್‌ವಿ ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು, ಮತ್ತಷ್ಟು ಮಾಹಿತಿ ಪಡೆಯಲು ಈ ಸ್ಟೋರಿ ಓದಿ.

ನೀವು ಮಾಡುವ ಈ ತಪ್ಪುಗಳೇ ಮಕ್ಕಳಾಗದಿರುವುದಕ್ಕೆ ಕಾರಣ! ಇದನ್ನು ತಡೆಯಲು ವೈದ್ಯರ ಸಲಹೆಯನ್ನು ಪಾಲಿಸಿ
ಅಂಡಾಣು ಬಿಡುಗಡೆ ಲೆಕ್ಕ ಹಾಕುವುದು ಹೇಗೆ ಎಂಬುದರ ಬಗ್ಗೆ ಡಾ. ಗಾಯತ್ರಿ ಭಟ್‌ ಸಲಹೆ

Updated on: Nov 22, 2025 | 9:00 AM

“ಮಕ್ಕಳಿರಲವ್ವ ಮನೆ ತುಂಬಾ” ಎಂಬ ಗಾದೆ ಮಾತಿನಂತೆ ಪ್ರತಿಯೊಬ್ಬ ದಂಪತಿ ಕೂಡ ತಮ್ಮ ವಿವಾಹ ಜೀವನದಲ್ಲಿ ಬಯಸುವುದು ಒಂದು ಆರೋಗ್ಯಕರ ಮಗುವನ್ನು. ನಿಜ, ಹೆಣ್ಣಿಗೆ ತಾಯ್ತನವೇ ಜೀವನಕ್ಕೆ ಸಾರ್ಥಕತೆ ನೀಡುತ್ತದೆ. ಇಂಥಹ ಆಹ್ಲಾದಕರವಾದ ಅನುಭವವನ್ನು ಹೊಂದಬೇಕಾದರೆ ಗಂಡು ಹೆಣ್ಣು ಇಬ್ಬರೂ ಕೂಡ ಆರೋಗ್ಯಕರವಾಗಿರಬೇಕು. ಅವರ ಜನನಾಂಗ ರಚನೆ, ಕಾರ್ಯ ವೈಖರಿ, ಹೆಣ್ಣಿನಲ್ಲಿ ಸ್ಥಿರವಾದ ಋತುಚಕ್ರ, ನಿಯಮಿತವಾದ ಅಂಡಾಣು ಬಿಡುಗಡೆ ಹಾಗೂ ಗಂಡಿನಲ್ಲಿ ಆರೋಗ್ಯಕರವಾದ ವೀರ್ಯಾಣು ಇರುವುದು ಅನಿವಾರ್ಯವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಗರ್ಭಪಾತ, ಪಿಸಿಓಡಿ, ಪಿಸಿಓಎಸ್ ಹೀಗೆ ನಾನಾ ರೀತಿಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಹೆಣ್ಣು ಗರ್ಭ ಧರಿಸುವುದಕ್ಕೆ ಕಷ್ಟಪಡುವಂತಾಗಿದೆ. ಸರಿಯಾದ ಮಾಹಿತಿ ಇಲ್ಲದಿರುವುದು, ಆರೋಗ್ಯ ಸಮಸ್ಯೆ, ಕಟ್ಟುನಿಟ್ಟಾದ ಆಹಾರ ಪದ್ಧತಿ ಇಲ್ಲದಿರುವುದು ಕೂಡ ಈ ರೀತಿಯ ಸಮಸ್ಯೆಗೆ ಕಾರಣವಾಗಿರಬಹುದು. ಅದಕ್ಕಾಗಿಯೇ ಅಂಡಾಣು ಬಿಡುಗಡೆ ಲೆಕ್ಕ ಹಾಕುವುದು ಹೇಗೆ, ಅನಾರೋಗ್ಯಕರ ಅಂಡಾಣುವಿನ ಲಕ್ಷಣಗಳು ಹೇಗಿರುತ್ತವೆ ಎಂಬುದರ ಕುರಿತು ಮತ್ತಷ್ಟು ಮಾಹಿತಿ ನೀಡಲು ಹಾಸನ ಎಸ್‌ಡಿಎಮ್‌ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದ ಫ್ರೊಫೆಸರ್ ಹಾಗೂ ವಿಭಾಗದ ಮುಖ್ಯಸ್ಥೆ ಡಾ. ಗಾಯತ್ರಿ ಭಟ್‌ ಎನ್‌ವಿ (Dr. GAYATHRI BHAT N V) ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು, ಮತ್ತಷ್ಟು ಮಾಹಿತಿ ಪಡೆಯಲು ಈ ಸ್ಟೋರಿ ಓದಿ.

ಮಾಸಿಕ ಋತುಸ್ರಾವವು ಪ್ರತಿ ತಿಂಗಳು 28- 30 ದಿನದಲ್ಲಿ ಪ್ರಾರಂಭವಾಗಿ 3- 5 ದಿನದ ವರೆಗೆ ಸ್ರಾವವು ಇದ್ದು ಪ್ರತಿದಿನವೂ 80 ಮಿಲಿಯಷ್ಟು ಪ್ರಮಾಣದಲ್ಲಿರುತ್ತದೆ. ಹಾಗೆಯೇ 6ನೇ ದಿನದಿಂದ ಗರ್ಭಾಶಯದ ಒಳಪದರದ ಬೆಳವಣಿಗೆಯಾಗುತ್ತದೆ. ಹಾಗೂ ಅಂಡಾಶಯದಲ್ಲಿ ಅಂಡಾಣು ಉತ್ಪತ್ತಿ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಮುಟ್ಟಾದ 14ನೇ ದಿನ ಒಂದು ಕಡೆಯ ಅಂಡಕೋಶದಿಂದ ಒಂದು ಅಂಡಾಣು ಬಿಡುಗಡೆಯಾಗುತ್ತದೆ. ಬಿಡುಗಡೆಯಾದ ಅಂಡಾಣುವು ಆರೋಗ್ಯಕರವಾಗಿದ್ದು ಪುರುಷನ ವೀರ್ಯದ ಸಂಪರ್ಕಕ್ಕೆ ಬಂದರೆ ಭ್ರೂಣದ ಅಂಕುರವಾಗುತ್ತದೆ. ಒಂದುವೇಳೆ ಪುರುಷನ ವೀರ್ಯಾಣುವಿನ ಸಂಪರ್ಕವಾಗದಿದ್ದಲ್ಲಿ ಅಂಡಾಣುವು ನಾಶವಾಗಿ ಗರ್ಭಕೋಶದ ಒಳಪದರವು ಸಡಿಲಗೊಂಡು ಹೊರಬರುತ್ತದೆ.

ಬೀಜೋತ್ಸರ್ಗ ಎಂದರೇನು?

ಆಯುರ್ವೇದದಲ್ಲಿ ಅಂಡವನ್ನು ಗರ್ಭಧಾರಣೆಗೆ ಪ್ರಮುಖ ಅಂಶಗಳಲ್ಲಿ ಒಂದು ಎಂದು ತಿಳಿಸಲಾಗಿದೆ. ಅಂಡಾಣು ಬಿಡುಗಡೆಯ ಕಾರ್ಯ ವೈಖರಿಯನ್ನು ಬೀಜೋತ್ಸರ್ಗ ಎನ್ನುತ್ತಾರೆ. ನಮ್ಮ ದೇಹದಲ್ಲಿನ ವಾತ, ಪಿತ್ತ, ಕಫ ಎಂಬ ಮೂರು ದೋಷಗಳು, ನಮ್ಮ ಮನಸ್ಸು, ರಸ,ರಕ್ತ, ಮಾಂಸ ಮೇದ, ಅಸ್ಥಿ ಮಜ್ಜ, ಶುಕ್ರ ಎಂಬ ಸಪ್ತ ಧಾತುಗಳು. ನಮ್ಮ ಜಾಠರಾಗ್ನಿ, ಇವೆಲ್ಲವೂ ಆರೋಗ್ಯವಾಗಿದ್ದರೆ ಮಾತ್ರ ಆರೋಗ್ಯಕರವಾದ ಅಂಡಾಣುವಿನ ಉತ್ಪತ್ತಿಯಾಗುತ್ತದೆ. ಹಾಗೆಯೇ ಆರೋಗ್ಯಕರ ಅಂಡಾಣುವಿನ ಬಿಡುಗಡೆಯು ಹೆಣ್ಣು ಪುಷ್ಪವತಿಯಾದಾಗ 2-3 ವರ್ಷದಿಂದ ಪ್ರಾರಂಭವಾಗಿ, 30 ವ಼ರ್ಷದ ವರೆಗೂ ಆಗುತ್ತದೆ. 30ರ ನಂತರ ಅಂಡಾಣುವಿನಲ್ಲಿ ವಂಶವಾಹಿನಿಗಳಲ್ಲಿ ವ್ಯತ್ಯಯಗೊಳ್ಳಲು ಪ್ರಾರಂಭಗೊಳ್ಳುತ್ತದೆ. ಅದರಲ್ಲಿಯೂ 35ನೇ ವ಼ರ್ಷದ ನಂತರ ಈ ರೀತಿ ತೊಂದರೆಗಳು ಅತಿ ಹೆಚ್ಚು. ಹಾಗಾಗಿ ಹೆಣ್ಣು 30 ವರ್ಷದ ಒಳಗೆ ಗರ್ಭ ಧರಿಸುವುದು ಉತ್ತಮ.

ಅಂಡಾಣು ಬಿಡುಗಡೆಯು ಆರೋಗ್ಯಕರ ಎಂದು ಹೇಗೆ ತಿಳಿಯುವುದು?

  • ನಿಯಮಿತ ಮಾಸಿಕ ಚಕ್ರ
  • ಮಾಸಿಕ ಸ್ರಾವದ ನಿಯಮಿತ ಪ್ರಮಾಣ
  • ಮುಟ್ಟಾದ 12 ರಿಂದ 20ನೇ ದಿನದಲ್ಲಿ ಕೆಳಹೊಟ್ಟೆಯಲ್ಲಿ ಮಂದ ನೋವು
  • ಯೋನಿಯಿಂದ ಅಲ್ಪ ಪ್ರಮಾಣದಲ್ಲಿ ಬಿಳಿಮುಟ್ಟು
  • ಸ್ತಗಳಲ್ಲಿ ಭಾರವಾದ ಬಿಗಿತ
  • ಮೈ ಬೆಚ್ಚಗೆ ಎನಿಸುವುದು

ಈ ಎಲ್ಲಾ ಲಕ್ಷಣಗಳು ಅಥವಾ ಕೆಲವೊಂದು ಲಕ್ಷಣಗಳು ಕಂಡುಬಂದಲ್ಲಿ ಅಂಡಾಣು ಬಿಡುಗಡೆಯಾಗುತ್ತದೆ ಎಂದು ತಿಳಿಯಬಹುದು.

ಅಂಡಾಣು ಬಿಡುಗಡೆ ಲೆಕ್ಕ ಹಾಕುವುದು ಹೇಗೆ?

ಒಂದು ಕ್ಯಾಲೆಂಡರ್ ಪದ್ಧತಿಯಲ್ಲಿ ಇದನ್ನು ಮಾಡಬಹುದು. ಇಲ್ಲಿ ಗಮನಿಸಬೇಕಾದ ಮಖ್ಯ ಅಂಶವೆಂದರೆ, ಮಾಸಿಕ ರಜಸ್ರಾವವು ನಿಯಮಿತವಾಗಿದ್ದಲ್ಲಿ ಮಾತ್ರ ಅಂಡಾಣು ಬಿಡುಗಡೆ ಕ್ಯಾಲೆಂಡರ್ ಮಾಡಬಹುದು. ಮೊದಲು ಮಾಸಿಕ ಚಕ್ರದ ಉದ್ದವನ್ನು ತಿಳಿಯಬೇಕು. ಮಾಸಿಕ ಚಕ್ರದ ಪ್ರಾರಂಭದ ದಿನ ಹಾಗೂ ಅಂತ್ಯದ ದಿನವನ್ನು 3 ತಿಂಗಳ ಕಾಲ ಬರೆದಿಟ್ಟುಕೊಳ್ಳಬೇಕು. ಮಾಸಿಕ ಚಕ್ರದ ಉದ್ದ 28- 30 ದಿನಗಳಾಗಿದ್ದರೆ, ಅಂಡಾಣು ಬಿಡುಗಡೆಯು ಆ ಚಕ್ರದ 14ನೇ ದಿನ ಆಗಿರುತ್ತದೆ. ಸಂತಾನ ಪ್ರಾಪ್ತಿಯ ಫಲವತ್ತತೆಯು
10ನೇ ದಿನದಿಂದ 15ನೇ ದಿನದವರೆಗೂ ಇರುತ್ತದೆ. ಬಿಡುಗಡೆಯಾದ ಅಂಡಾಣುವು ಕೇವಲ 12-24 ಗಂಟೆಯ ಅವಧಿಗೆ ಮಾತ್ರ ಫಲವತ್ತಾಗಿರುತ್ತದೆ. ಈ ಸಮಯದಲ್ಲಿ ಸಂತಾನ ಪ್ರಾಪ್ತಿಗೆ ಪ್ರಯತ್ನಿಸಬೇಕು.

ಆರೋಗ್ಯ ಪೂರ್ಣ ಅಂಡಾಣು ಉತ್ಪತ್ತಿಯ ಮೇಲೆ ಪ್ರಭಾವ ಬೀರುವ ಅಂಶಗಳು:

  • ವಯಸ್ಸು
  • ನಿದ್ರೆ
  • ಆಹಾರ
  • ಮಾನಸಿಕ ಸ್ಥಿತಿ
  • ಜೀವನ ಶೈಲಿ
  • ಆರೋಗ್ಯದಿಂದ ಕೂಡಿದ ದೇಹ
  • ದೇಹದ ತೂಕ

ದುಷ್ಪರಿಣಾಮ ಬೀರುವ ಅಂಶಗಳು:

  • 35 ವ಼ರ್ಷ ಮೇಲ್ಪಟ್ಟ ವಯಸ್ಸು
  • ಬೊಜ್ಜುತನ
  • ಅಪೌಷ್ಟಿಕ ಆಹಾರ
  • ಹಗಲು ನಿದ್ರೆ
  • ಮಾನಸಿಕ ಒತ್ತಡ
  • ತಡರಾತ್ರಿ ಮಲಗುವುದು
  • ಅತಿಯಾದ ಪ್ರಯಾಣ
  • ಮದ್ಯಪಾನ
  • ಧೂಮಪಾನ

ಇದನ್ನೂ ಓದಿ: ಮಹಿಳೆಯರಲ್ಲಿ ಶ್ರಮದ ಕೆಲಸ ಇಲ್ಲದಿರುವುದೇ ಪಿಸಿಒಡಿ ಸಮಸ್ಯೆ ಹೆಚ್ಚಳಕ್ಕೆ ಕಾರಣ: ಡಾ। ಅಶೋಕ್ ಭಟ್

ಅನಾರೋಗ್ಯಕರ ಅಂಡಾಣುವಿನ ಲಕ್ಷಣಗಳು ಹೇಗಿರುತ್ತದೆ?

  • ಅನಿಯಮಿತವಾದ ಮಾಸಿಕ ಸ್ರಾವ
  • ಅತಿ ಕಡಿಮೆ ಅಥವಾ ಅತಿ ಹೆಚ್ಚು ಸ್ರಾವ
  • ಸಂತಾನ ಹೀನತೆ
  • ಅತಿ ಬೊಜ್ಜುತನ
  • ಕೂದಲು ಉದುರುವುದು

ಆರೋಗ್ಯಕರ ಅಂಡಾಣುವನ್ನು ಪಡೆಯುವುದು ಹೇಗೆ?

  • ರಾತ್ರಿ 9 ಗಂಟೆಯ ಒಳಗೆ ಮಲಗಿ ಬೆಳಗ್ಗೆ 4 ಗಂಟೆಗೆ ಏಳುವುದು
  • ಯೋಗ, ವ್ಯಾಯಾಮ, ನಾದಿಶೋಧ ಪ್ರಾಣಾಯಾಮ
  • ಧ್ಯಾನ, ಸಂಗೀತ
  • ಅತಿ ಉಪ್ಪು, ಹುಳಿ, ಖಾರದ ಆಹಾರಗಳನ್ನು ತ್ಯಜಿಸುವುದು.
  • ಆಯುರ್ವೇದದಲ್ಲಿ ಉಲ್ಲೇಖಿಸಲಾದ ರಜಸ್ವಲ ಚರ್ಯ, ದಿನಚರ್ಯ, ಋತುಚರ್ಯದ ಪಾಲನೆ
  • ಯಾವಾಗಲು ಧನಾತ್ಮಕ ಚಿಂತನೆಯನ್ನು ರೂಢಿಸಿಕೊಳ್ಳುವುದು.
  • ಸದಾ ಮನೆಯಲ್ಲೇ ಮಾಡಿದ ಆಹಾರ ಸೇವಿಸುವುದು.
  • ಆಯುರ್ವೇದದ ಪಂಚಕರ್ಮ ಚಿಕಿತ್ಸೆಯನ್ನು ಮಾಡಿಕೊಳ್ಳುವುದು.
  • ದಿನವೂ ಬೆಟ್ಟದ ನೆಲ್ಲಿಕಾಯಿ, ಒಣ ದ್ರಾಕ್ಶಿ, ಹಸುವಿನ ತುಪ್ಪ, ಹಾಲು, ಜೇನುತುಪ್ಪ, ಹಣ್ಣು, ತರಕಾರಿ, ಕೆಂಪು ಅಕ್ಕಿಯ ಸೇವನೆ ಮಾಡುವುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ