Dental Care in Summer: ಎಷ್ಟೋ ಸಲ ಋತು ಬದಲಾಗಿದೆ ಅದಕ್ಕಾಗಿ ನಮ್ಮ ದೇಹ ಹೀಗೆ ಪ್ರತಿಕ್ರಿಯಿಸುತ್ತದೆ ಎಂಬುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಆದರೆ ಋತುಮಾನಗಳಿಗೆ ತಕ್ಕಂತೆ ನಮ್ಮ ಆಹಾರ ಕ್ರಮದಲ್ಲಿ ಬದಲಾವಣೆಗಳನ್ನು ತಂದುಕೊಂಡರೆ ಆರೋಗ್ಯವನ್ನು ಸದೃಢವಾಗಿರಿಸಿಕೊಳ್ಳಬಹುದು. ಈಗ ಬೇಸಿಗೆ. ದೇಹ ತಂಪಾಗಿರಲೆಂದು ವಿವಿಧ ತಂಪು ಪಾನೀಯಗಳನ್ನು ಕುಡಿಯುತ್ತೇವೆ. ಸಿಹಿತಿಂಡಿಗಳನ್ನೂ ಸವಿಯುತ್ತೇವೆ. ಆದರೆ ಇದು ದೇಹವನ್ನು ತಂಪು ಮಾಡಬಲ್ಲುದೆ? ಆ ಕ್ಷಣಕ್ಕೆ ತಂಪಿನ ಅನುಭವ ಉಂಟಾಗಬಹುದು. ಆದರೆ ವ್ಯತಿರಿಕ್ತ ಪರಿಣಾಮಗಳು ಒಂದಿಲ್ಲಾ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ. ತಂಪು ಪಾನೀಯ ಅಥವಾ ಸಿಹಿತಿಂಡಿಗಳು ನಿಮ್ಮ ಹಲ್ಲುಗಳ ಆರೋಗ್ಯದ ಮೇಲೆ ಅಡ್ಡಪರಿಣಾಮಗಳನ್ನು ಬೀರುತ್ತವೆ ಎಂಬುದು ಗಮನದಲ್ಲಿರಲಿ. ಹಾಗಾಗಿ ನಿಮ್ಮ ಹಲ್ಲು ಮತ್ತು ಒಸಡುಗಳ ಆರೋಗ್ಯ ಕಾಪಾಡಿಕೊಳ್ಳಲು ವಿಟಮಿನ್ ಸಿ ಇರುವ ಆಹಾರ ಪದಾರ್ಥ, ಹಣ್ಣುಗಳನ್ನು ಹೇರಳವಾಗಿ ಸೇವಿಸಿ ಹಲ್ಲುಗಳನ್ನು ರಕ್ಷಿಸಿಕೊಳ್ಳಿ. ಅದರಲ್ಲೂ ಮಕ್ಕಳ ಹಲ್ಲುಗಳ ಆರೋಗ್ಯದ ವಿಷಯವಾಗಿ ಪೋಷಕರು ಎಚ್ಚರದಿಂದ ಇರಬೇಕು ಎಂದು ಎಚ್ಚರಿಸುತ್ತಿದ್ದಾರೆ.
ಈ ಬಿರುಬೇಸಿಗೆಗೆ ಸೋಡಾ, ತಂಪುಪಾನೀಯಗಳಿಗೆ ಮೊರೆ ಹೋಗುತ್ತೇವೆ ನಿಜ. ಆದರೆ ಇದು ಹಲ್ಲುಗಳ ಆರೋಗ್ಯವನ್ನೇ ಕಸಿದುಕೊಂಡುಬಿಡುತ್ತದೆ ಎಂಬ ಪ್ರಜ್ಞೆ ಸಾಕಷ್ಟು ಸಲ ನಮಗಿರುವುದಿಲ್ಲ. ಹಲ್ಲುಗಳ ಸಂದು, ವಸಡಿನಲ್ಲಿ ಶೇಖರಣಗೊಂಡ ರಾಸಾಯನಿಕ ಮತ್ತು ಸಕ್ಕರೆ ಅಂಶವು ದಂತಸಮಸ್ಯೆಗೆ ಕಾರಣವಾಗುತ್ತವೆ. ಆದ್ದರಿಂದ ತಾಜಾ ಹಣ್ಣುಗಳು ಮತ್ತು ಅವುಗಳಿಂದ ಮಾಡಿದ ಜ್ಯೂಸ್ ಅನ್ನು ಕುಡಿಯುವುದೇ ಸೂಕ್ತ ಎನ್ನುವುದು ವೈದ್ಯಲೋಕದ ಅಭಿಪ್ರಾಯ.
ಇದನ್ನೂ ಓದಿ : Health : ಮಧುಮೇಹಿಗಳೀಗ ‘ಸೈಕಲ್ದೇವೋಭವ’ ಎನ್ನುತ್ತಿದ್ದಾರೆ
ಕೆಲವರು ಚ್ಯೂಯಿಂಗ್ ಗಮ್ ಅಗಿಯುವ ಅಭ್ಯಾಸವನ್ನಿಟ್ಟುಕೊಂಡಿರುತ್ತಾರೆ. ಆದರೆ ಬೇಸಿಗೆಯಲ್ಲಿ ಸತತವಾಗಿ ಅಗಿಯುವುದರಿಂದ ಹಲ್ಲು ನೋವು ಉಲ್ಬಣಗೊಳ್ಳುತ್ತದೆ. ಆದ್ದರಿಂದ ದೇಹವನ್ನು ಆದಷ್ಟು ತಂಪಾಗಿ ಇಟ್ಟುಕೊಳ್ಳಲು ಹೆಚ್ಚು ನೀರು ಕುಡಿಯುವುದೇ ಉತ್ತಮ. ದೇಹದ ತಾಪಮಾನ ಕಾಪಾಡಿಕೊಳ್ಳಲು ನಿಯಮಿತವಾಗಿ ಹಣ್ಣು, ನೀರು ಸೇವಿಸಿದಲ್ಲಿ ಸೂಕ್ತ ರೀತಿಯಲ್ಲಿ ಲಾಲಾರಸವು ಉತ್ಪಾದನೆಗೊಂಡು ಒಸಡುಗಳಲ್ಲಿ ರಕ್ತಸ್ರಾವ, ಹಲ್ಲುನೋವನ್ನು ತಪ್ಪಿಸಬಹುದಾಗಿದೆ.
ಇದನ್ನೂ ಓದಿ : Health Benefits : ಏಪ್ರಿಕಾಟ್ ಹಣ್ಣಿನಿಂದ ಕಣ್ಣಿನ ಆರೋಗ್ಯ ವೃದ್ಧಿ
ಹಾಗೆಯೇ ನಿಮ್ಮ ತುಟಿಗಳು ಒಣಗದಂತೆ ಕಾಪಾಡಿಕೊಳ್ಳಿ. ದೇಹದ ಇತರೇ ಭಾಗಗಳಿಗೆ ಹೋಲಿಸಿದರೆ ತುಟಿಗಳಲ್ಲಿ ಮೆಲನಿನ್ ಅಂಶ ಕಡಿಮೆ ಪ್ರಮಾಣದಲ್ಲಿ ಶೇಖರಣೆಗೊಳ್ಳುತ್ತದೆ. ಬಿಸಿಲಿಗೆ ಹೋಗುವಾಗ ದೇಹದ ಭಾಗಗಳಿಗೆ ಹೇಗೆ ಸನ್ಸ್ಕ್ರೀನ್ ಲೋಷನ್ ಉಪಯೋಗಿಸುವಲ್ಲ ಹಾಗೆ ತುಟಿಗಳಿಗೆ ಲಿಪ್ಬಾಮ್ ಹಚ್ಚಿ ಮೆತ್ತಗಿರುವಂತೆ ನೋಡಿಕೊಳ್ಳಿ. ಒಟ್ಟಾರೆ ಈ ಬೇಸಿಗೆಯಲ್ಲಿ ತಾಜಾ ಹಣ್ಣಿನ ರಸಗಳು, ಎಳನೀರು, ಸಿ ವಿಟಮಿನ್ಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸಿ. ದಂತಸಮಸ್ಯೆಗಳಿಂದ ದೂರವಿರಿ.
Published On - 10:35 am, Mon, 13 June 22