ಇತ್ತೀಚೆಗಿನ ದಿನಗಳಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರು, ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡುವವರು ಮಗುವಿಗೆ ಎದೆಹಾಲನ್ನು ಕುಡಿಸುವುದನ್ನು ನಿಲ್ಲಿಸಿಬಿಡುತ್ತಾರೆ. ಆದರೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್, ಹೈದರಾಬಾದ್, ಭಾರತೀಯರಿಗೆ ಪರಿಷ್ಕೃತ ಆಹಾರ ಮಾರ್ಗಸೂಚಿಯಲ್ಲಿ ತಾಯಿಯ ಎದೆಹಾಲು ಮಗುವಿಗೆ ಎಷ್ಟು ಅವಶ್ಯಕ ಎಂದು ಉಲ್ಲೇಖಿಸಿದೆ. ಈ ಆಹಾರ ಮಾರ್ಗ ಸೂಚಿಯಲ್ಲಿ 17 ಸಲಹೆಗಳನ್ನು ಒಳಗೊಂಡಿವೆ. ಮೂರನೇಯ ಭಾಗದಲ್ಲಿ ಮಗುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ಮಹತ್ವದ ಬಗೆಗೆ ಬೆಳಕು ಚೆಲ್ಲಿದೆ.
ನವಜಾತ ಶಿಶುವಿಗೆ ತಾಯಿಯ ಎದೆಹಾಲು ಪೋಷಣೆಯ ಮೂಲವಾಗಿದೆ. ಹೀಗಾಗಿ ಮಗು ಹುಟ್ಟಿದ ಒಂದು ಗಂಟೆಯೊಳಗೆ ಎದೆಹಾಲು ಉಣಿಸಬೇಕು. ಅದಲ್ಲದೆ, ಮಗು ಹುಟ್ಟಿದ ಆರು ತಿಂಗಳವರೆಗೆ ತಾಯಿಯ ಎದೆಹಾಲು ಮಾತ್ರ ನೀಡಬೇಕು. ಆರು ತಿಂಗಳ ಬಳಿಕ ಎದೆಹಾಲಿನ ಜೊತೆಗೆ ಪೂರಕ ಆಹಾರವನ್ನು ನೀಡಬೇಕು. ಆದರೆ ತಾಯಿಯ ಎದೆಹಾಲು ಪ್ರತಿ ಮಗುವಿಗೂ ಎರಡು ವರ್ಷ ಕಳೆಯುವವರೆಗೂ ನೀಡಲೇ ಬೇಕು ಎಂದು ಮಾರ್ಗಸೂಚಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Pregnancy Care: ಗರ್ಭಿಣಿಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ವಿಷಯಗಳನ್ನು ಪಾಲನೆ ಮಾಡಿ
ಎದೆಹಾಲಿನ ಬದಲಾಗಿ ಬೇರೆ ಆಹಾರವನ್ನು ನೀಡಿದರೆ ಮಗುವು ಜೀರ್ಣಿಸಿಕೊಳ್ಳುವುದು ಸ್ವಲ್ಪ ಕಷ್ಟವೇ. ಎದೆಹಾಲಿನಲ್ಲಿರುವಂತೆ ವಿಟಮಿನ್, ಪ್ರೊಟೀನ್ ಮತ್ತು ಕೊಬ್ಬು ಬೇರೆ ಆಹಾರದಲ್ಲಿ ಇರುವುದಿಲ್ಲ. ಮಕ್ಕಳಿಗೆ ಕನಿಷ್ಠ ಎರಡು ವರ್ಷಗಳವರೆಗೆ ಎದೆಹಾಲು ನೀಡದೇ ಹೋದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಮಗುವಿನಲ್ಲಿ ಕೊಲಿಕ್, ಅಜೀರ್ಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ತಾಯಿ ಮಗುವಿನ ಸಂಬಂಧವು ಗಟ್ಟಿಯಾಗುವುದೇ ಹುಟ್ಟಿದ ಮಗುವಿಗೆ ಸ್ತನ್ಯಪಾನ ಮಾಡಿಸುವುದರಿಂದ. ಸ್ತನ್ಯಪಾನವು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ತಾಯಿ ಹಾಗೂ ಮಗುವಿನ ನಡುವೆ ಉತ್ತಮ ಭಾವನಾತ್ಮಕ ಬಾಂಧವ್ಯ ಬೆಳೆಸುತ್ತವೆ. ಅದಲ್ಲದೇ ತಾಯಿಯ ಎದೆಹಾಲು ವಿಟಮಿನ್, ಪ್ರೊಟೀನ್, ಕೊಬ್ಬಿನ ಅಂಶಗಳುಹೇರಳವಾಗಿರುವ ಕಾರಣ ಮಗುವಿನ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ. ತೂಕ ಹೆಚ್ಚಳಕ್ಕೂ ಈ ಎದೆಹಾಲು ಕಾರಣವಾಗಿದೆ. ಈ ಹಾಲಿನಲ್ಲಿರುವ ಇಮ್ಯುನೋಗ್ಲೋಬಿನ್ ಐಜಿಎಯಿದ್ದು ಸಾಂಕ್ರಾಮಿಕ ಜೀವಿಗಳ ವಿರುದ್ಧ ಉತ್ತಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಒದಗಿಸಿ ಆರೋಗ್ಯ ಸಮಸ್ಯೆಯು ಬಾರದಂತೆ ನೋಡಿಕೊಳ್ಳುತ್ತವೆ. ಎಂದು ಆಹಾರ ಮಾರ್ಗಸೂಚಿನಲ್ಲಿ ತಿಳಿಸಲಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ