
ದಿನವಿಡೀ ಶಕ್ತಿಯನ್ನು ಒದಗಿಸಲು ಬೆಳಗಿನ ಉಪಾಹಾರ (Breakfast) ಬಹಳ ಮುಖ್ಯವಾಗುತ್ತದೆ. ಅದಕ್ಕಾಗಿಯೇ ಬೆಳಗಿನ ಉಪಾಹಾರವು ಪೋಷಕಾಂಶಗಳಿಂದ ತುಂಬಿರಬೇಕು ಎಂದು ಹೇಳಲಾಗುತ್ತದೆ. ಅದರಲ್ಲಿಯೂ ಭಾರತೀಯರ ಮನೆಗಳಲ್ಲಿ ಆರೋಗ್ಯಕರ ಉಪಹಾರಗಳನ್ನೇ ಸೇವನೆ ಮಾಡಲಾಗುತ್ತದೆ. ಈ ಪಟ್ಟಿಯಲ್ಲಿ ಇಡ್ಲಿ (Idli), ಉಪ್ಮಾ (Upma) ಅಥವಾ ಉಪ್ಪಿಟ್ಟು ಅಗ್ರಸ್ಥಾನದಲ್ಲಿರುತ್ತದೆ. ಅದರಲ್ಲಿಯೂ ಫಿಟ್‌ನೆಸ್ ಕಾಯ್ದುಕೊಳ್ಳಲು ಬಯಸುವವರು ಈ ಎರಡು ತಿಂಡಿ ತಿನ್ನುವುದಕ್ಕೂ ತುಂಬಾ ಇಷ್ಟಪಡುತ್ತಾರೆ. ಆದರೆ ಈ ಎರಡರ ಪೌಷ್ಟಿಕಾಂಶ ಮೌಲ್ಯದಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ. ಹಾಗಾದರೆ ಯಾವ ಉಪಹಾರ ಆರೋಗ್ಯಕರ? ನಿಮ್ಮ ಉಪಹಾರದಲ್ಲಿ ಏನನ್ನು ಸೇರಿಸಿಕೊಳ್ಳಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ನಮ್ಮಲ್ಲಿ ಕೆಲವರು ತಮ್ಮ ಬೆಳಿಗ್ಗಿನ ಉಪಹಾರವನ್ನು ಆರೋಗ್ಯಕರ ಆಹಾರಗಳಿಂದ ಪ್ರಾರಂಭಿಸುತ್ತಾರೆ. ಅಂದರೆ ಸಾಮಾನ್ಯವಾಗಿ ಪೋಹಾ ಅಥವಾ ಅವಲಕ್ಕಿ, ಇಡ್ಲಿ ಮತ್ತು ಉಪ್ಮಾ ಅಥವಾ ಉಪ್ಪಿಟ್ಟಿನಂತಹ ತಿಂಡಿಗಳನ್ನೇ ಹೆಚ್ಚು ಸೇವನೆ ಮಾಡುತ್ತಾರೆ. ಇಡ್ಲಿ ಮತ್ತು ಉಪ್ಮಾ ಅಥವಾ ಉಪ್ಪಿಟ್ಟು ಈ ಎರಡು ಉಪಹಾರಗಳು ಕೂಡ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಪದಾರ್ಥಗಳಾಗಿವೆ. ಸಾಮಾನ್ಯವಾಗಿ ಈ ಎರಡು ಉಪಹಾರಗಳನ್ನು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸೇವಿಸಲಾಗುತ್ತದೆ. ಮಾತ್ರವಲ್ಲ ಇತ್ತೀಚಿನ ವರ್ಷಗಳಲ್ಲಿ ಭಾರತದ ಅನೇಕ ಪ್ರದೇಶಗಳಲ್ಲಿ ಈ ತಿಂಡಿಗೆ ಆದ್ಯತೆ ನೀಡಲಾಗುತ್ತಿದೆ.
ಇಡ್ಲಿ ಅಕ್ಕಿ ಹಿಟ್ಟು ಅಥವಾ ಉದ್ದು ಮತ್ತು ರವೆಯಿಂದ ತಯಾರಿಸಿಸುವ ತಿಂಡಿ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಮಾತ್ರವಲ್ಲ ಈ ತಿಂಡಿ ಕಾರ್ಬೋಹೈಡ್ರೇಟ್‌ಗಳ ಅತ್ಯುತ್ತಮ ಮೂಲವಾಗಿದೆ. ಹೆಚ್ಚುವರಿಯಾಗಿ, ಇದು ಪ್ರೋಟೀನ್, ಫೈಬರ್, ಕಬ್ಬಿಣ, ವಿಟಮಿನ್ ಬಿ ಮತ್ತು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇಡ್ಲಿ ಉತ್ತಮ ಆಯ್ಕೆಯಾಗಿದೆ ಏಕೆಂದರೆ ಇದನ್ನು ಎಣ್ಣೆ ಬಳಸದೆಯೇ ಬೇಯಿಸಲಾಗುತ್ತದೆ. ಮಾತ್ರವಲ್ಲ ಈ ತಿಂಡಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಮಧ್ಯಮ ಗಾತ್ರದ ಇಡ್ಲಿ 35- 39 ಕಿ. ಕ್ಯಾಲರಿಗಳನ್ನು ಹೊಂದಿರುತ್ತದೆ. ಹಾಗಾಗಿ ಇದು ಉತ್ತಮ ಆಹಾರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.
ಉಪ್ಮಾ ಬಗ್ಗೆ ಹೇಳುವುದಾದರೆ, ಇದು ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಕೊಬ್ಬಿನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಹೆಚ್ಚುವರಿಯಾಗಿ, ಇದರಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬಳಸುವುದರಿಂದ ಇದರ ಪೌಷ್ಠಿಕಾಂಶದ ಮೌಲ್ಯ ಹೆಚ್ಚಾಗುತ್ತದೆ. ಉಪ್ಮಾ ಫೈಬರ್‌ನ ಅತ್ಯುತ್ತಮ ಮೂಲವಾಗಿದೆ. ಪರಿಣಾಮವಾಗಿ, ಇದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ದೀರ್ಘಕಾಲದ ವರೆಗೆ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ. ಇದರಲ್ಲಿರುವ ನಾರಿನ ಅಂಶವು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಪ್ರಯೋಜನಕಾರಿಯಾಗಿದೆ. ಮಾತ್ರವಲ್ಲ ಇದರಲ್ಲಿ ಕಬ್ಬಿಣದ ಅಂಶ ಹೇರಳವಾಗಿದ್ದು ಇದು ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹ ಸಹಾಯಕವಾಗಿದೆ. ಒಂದು ಕಪ್ ಉಪ್ಮಾ ಸುಮಾರು 120 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಆದರೆ ಉಪ್ಮಾಗೆ ಸೇರಿಸಲಾದ ಪದಾರ್ಥಗಳನ್ನು ಅವಲಂಬಿಸಿ ಕ್ಯಾಲೊರಿಗಳ ಪ್ರಮಾಣ ಬದಲಾಗಬಹುದು.
ಇದನ್ನೂ ಓದಿ: ಆರೋಗ್ಯ ತಜ್ಞರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು, ಮೊಸರು ಸೇವನೆ ಮಾಡಬಾರದು ಎಂದು ಹೇಳುವುದಕ್ಕೆ ಕಾರಣವೇನು?
ಇಡ್ಲಿ ಮತ್ತು ಉಪ್ಮಾ ಎರಡೂ ಕೂಡ ಆರೋಗ್ಯಕರ ಆಯ್ಕೆಗಳು. ಆದರೆ ಒಂದನ್ನು ಆಯ್ಕೆ ಮಾಡುವ ವಿಷಯಕ್ಕೆ ಬಂದರೆ, ಇಡ್ಲಿ ಸ್ವಲ್ಪ ಉತ್ತಮ ತಿಂಡಿ ಎಂದು ಪರಿಗಣಿಸಬಹುದಾಗಿದೆ. ಏಕೆಂದರೆ ಇಡ್ಲಿ ಮಾಡಲು ಎಣ್ಣೆ ಅಗತ್ಯವಿಲ್ಲ. ಹುದುಗಿಸಿದ ಹಿಟ್ಟನ್ನು ಬಳಸಲಾಗುತ್ತದೆ. ಮಾತ್ರವಲ್ಲ ರವೆ ಗ್ಲುಟನ್ ಮುಕ್ತವಾಗಿರುತ್ತದೆ ಜೊತೆಗೆ, ಇಡ್ಲಿಯಲ್ಲಿ ಕೊಬ್ಬು ಕಡಿಮೆ ಮತ್ತು ಪ್ರೋಬಯಾಟಿಕ್‌ಗಳು ಅಧಿಕವಾಗಿರುತ್ತವೆ. ಹಾಗಾಗಿ ಬೆಳಗ್ಗಿನ ಸಮಯದಲ್ಲಿ ಇಡ್ಲಿ ಸೇವನೆ ಮಾಡುವುದು ಬಹಳ ಒಳ್ಳೆಯದು. ಆದರೆ ನೀವು ಉಪ್ಮಾವನ್ನು ಕೂಡ ಉತ್ತಮ ಆಯ್ಕೆಯಾಗಿ ಪರಿಗಣಿಸಬಹುದು. ಉಪ್ಮಾವನ್ನು ರವೆಯಿಂದ ತಯಾರಿಸುವುದರಿಂದ ಜೊತೆಗೆ ಇದಕ್ಕೆ ವಿವಿಧ ರೀತಿಯ ತರಕಾರಿಗಳನ್ನು ಬಳಸುವುದರಿಂದ ಆ ತಿಂಡಿಯ ಪೌಷ್ಟಿಕಾಂಶದ ಮೌಲ್ಯ ಹೆಚ್ಚಾಗುತ್ತದೆ. ಜೊತೆಗೆ ಇದರಲ್ಲಿ ಹೆಚ್ಚಿನ ಫೈಬರ್ ಇರುವುದರಿಂದ, ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಉಪ್ಮಾ ಉತ್ತಮ ಆಯ್ಕೆಯಾಗಿದೆ. ಹಾಗಾಗಿ ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನೀವು ಇಡ್ಲಿ- ಉಪ್ಮಾವನ್ನು ಸೇವನೆ ಮಾಡಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ