ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅನೇಕ ರೀತಿಯಲ್ಲಿ ಹರಸಾಹಸ ಪಡುತ್ತೇವೆ. ಆದರೆ ನಾವಿಲ್ಲಿ ಇಷ್ಟು ಸುರಕ್ಷಿತವಾಗಿರಲು ನಮ್ಮ ಯೋಧರು ಕಾರಣ. ಹಾಗಾದರೆ ಅವರ ಆಹಾರ ಪದ್ಧತಿ ಹೇಗಿರಬಹುದು? ಯಾವ ರೀತಿಯ ಆಹಾರ ಸೇವನೆ ಮಾಡಬಹುದು? ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಂಡಿರಬಹುದು ಎಂದು ಯೋಚಿಸಿದ್ದೀರಾ? ಶತ್ರುಗಳಿಂದ ಬರುವ ಗುಂಡುಗಳಿಗಿಂತ ಅಪಾಯಕಾರಿಯಾಗಿರುವ ಹವಾಮಾನದಲ್ಲಿ ಬದುಕುವುದು ಸುಲಭದ ಮಾತಲ್ಲ. ಮೈನಸ್ 40- 50 ಡಿಗ್ರಿ ತಾಪಮಾನ ಇರುವಲ್ಲಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರೆ ಆಹಾರ ಪದ್ಧತಿ, ವ್ಯಾಯಾಮ ಎಲ್ಲವೂ ಕಟ್ಟುನಿಟ್ಟಾಗಿ ಇದ್ದರೆ ಮಾತ್ರ ಸಾಧ್ಯವಾಗುತ್ತದೆ.
ನಿವೃತ್ತ ಸೇನಾಧಿಕಾರಿ ಪರಮೇಶ್ವರ್ ಎನ್. ಹೆಗಡೆ ಅವರು ಹೇಳುವ ಪ್ರಕಾರ, ಯೋಧರ ಆಹಾರ ವೈವಿಧ್ಯತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ. ಅಗತ್ಯ ಖಾದ್ಯ ಮತ್ತು ಪೌಷ್ಟಿಕಾಂಶ ಸೇರಿಸಲಾಗುತ್ತದೆ. ಜೊತೆಗೆ ಅವರಿಗೆ ಬೇಕಾದ ಆಯ್ಕೆಗಳನ್ನು ಕೂಡ ನೀಡಲಾಗುತ್ತದೆ. ಅಂದರೆ ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳಿಗೆ ಪ್ರತ್ಯೇಕ ಆಹಾರವಿರುತ್ತದೆ. ಪ್ರತಿದಿನವೂ ಒಂದೊಂದು ರೀತಿಯ ಆಹಾರವಿರುತ್ತದೆ, ಇಲ್ಲಿ ಆಯ್ಕೆ ನಮ್ಮದಾಗಿರುತ್ತದೆ. ಅಲ್ಲಿ ಕೊಡುವ ಆಹಾರ ಆರೋಗ್ಯಕ್ಕೆ ಪೂರಕವಾಗಿರುತ್ತದೆ ಹಾಗಾಗಿ ಒಳ್ಳೆಯ ರೀತಿಯಲ್ಲಿ ನಮ್ಮ ಆಹಾರ ಸೇವನೆ ಮಾಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ”.
“ಹಾಲು, ಮೊಟ್ಟೆ ಮತ್ತು ಬಾಳೆಹಣ್ಣು ಇದ್ದೇ ಇರುತ್ತದೆ. ಇವು ದೈಹಿಕ ಶಕ್ತಿ ನೀಡುತ್ತವೆ. ಅಲ್ಲದೆ ಪ್ರತಿದಿನವೂ ಯೋಧರಿಗೆ ಸಮತೋಲಿತ ಆಹಾರ ನೀಡಲಾಗುತ್ತದೆ. ಪನೀರ್, ಕೋಳಿ ಮತ್ತು ಮೀನು ಹೀಗೆ ಪ್ರೋಟೀನ್, ಕ್ಯಾಲ್ಸಿಯಂ ಇರುವ ಆಹಾರಗಳನ್ನು ಕೂಡ ನೀಡಲಾಗುತ್ತದೆ. ಇದೆಲ್ಲದರ ಜೊತೆಗೆ ಋತುಮಾನದ ಹಣ್ಣು ಮತ್ತು ತರಕಾರಿಯನ್ನು ನೀಡಲಾಗುತ್ತದೆ. ಕಾಲೋಚಿತ ಪದಾರ್ಥಗಳು ಆರೋಗ್ಯಕ್ಕೆ ಅಗತ್ಯ ಪೋಷಣೆ ನೀಡುತ್ತವೆ. ಇವೆಲ್ಲವೂ ಕೆಮ್ಮು ಮತ್ತು ಶೀತ, ಜ್ವರದಂತಹ ಸಮಸ್ಯೆ ಕಡಿಮೆ ಮಾಡುತ್ತವೆ.”
ಇದನ್ನೂ ಓದಿ: ನಿಮ್ಮ ಪ್ರೀತಿ ಪಾತ್ರರಿಗೆ ಈ ಸಂದೇಶ ಕಳುಹಿಸಿ ಭಾರತೀಯ ಸೈನ್ಯದ ಗೆಲುವನ್ನು ಸ್ಮರಿಸಿ
ಯೋಧರು ಹೆಚ್ಚಾಗಿ ಒಣ ಹಣ್ಣುಗಳು, ಅಗಸೆ ಬೀಜಗಳು, ಆಮ್ಲಾ, ಅರಿಶಿನಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು ಇವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ವಿಟಮಿನ್ ಸಿ ಹೇರಳವಾಗಿರುವ ಆಹಾರ ಸೇವಿಸಬೇಕು ಇದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಇದು ಯೋಧರಿಗೆ ಮಾತ್ರವಲ್ಲ ಎಲ್ಲರೂ ಕೂಡ ಪಾಲಿಸುವುದು ಒಳ್ಳೆಯದು.” ಎಂದು ಅವರು ಹೇಳುತ್ತಾರೆ.
Published On - 10:23 am, Wed, 24 July 24