ವಿವಿಧ ಕಾಯಿಲೆಗಳಿಂದ ಎಲ್ಲ ವಯೋಮಾನದವರನ್ನು ರಕ್ಷಿಸಲು ಲಸಿಕೆ ಬಳಕೆಯನ್ನು ಉತ್ತೇಜಿಸಲು ಪ್ರತಿ ವರ್ಷ ಏಪ್ರಿಲ್ ಕೊನೆಯ ವಾರ (ಈ ವರ್ಷ ಏಪ್ರಿಲ್ 24 ರಿಂದ 30) “ವಿಶ್ವ ಪ್ರತಿರಕ್ಷಣಾ ಲಸಿಕಾ ಸಪ್ತಾಹ” ಆಚರಿಸಲಾಗುತ್ತದೆ. ವಿಶ್ವ ಲಸಿಕಾ ಸಪ್ತಾಹದ ಈ ವರ್ಷದ ಧ್ಯೇಯ ವಾಕ್ಯ “ಎಲ್ಲರಿಗೂ ದೀರ್ಘಾಯುಷ್ಯ”. ದೀರ್ಘ ಆಯಸ್ಸು ಮತ್ತು ಆರೋಗ್ಯವಂತ ಜೀವನಕ್ಕೆ ಲಸಿಕೆ ಮಹತ್ವ ಮತ್ತು ಲಸಿಕಾ ಸಮಾನತೆಯ ಅಗತ್ಯವನ್ನು ಈ ಧ್ಯೇಯ ಪ್ರತಿಪಾದಿಸುತ್ತದೆ.
ಲಸಿಕೆ ಸಮಾನತೆಯ ವಿಷಯಕ್ಕೆ ಬಂದಾಗ ಮಹಿಳೆಯರು ಹಿಂದುಳಿದಿದ್ದಾರೆ. ಲಸಿಕೆ ಪಡೆಯದ ಮಹಿಳೆಯರು ಅದರಲ್ಲೂ ಗರ್ಭಿಣಿಯರು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಇದು ನವಜಾತ ಶಿಶುವಿನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.
ಗರ್ಭಾವಸ್ಥೆಯ ಸಂದರ್ಭದಲ್ಲಿ ಮಹಿಳೆಯರ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹೀಗಾಗಿ ಲಸಿಕೆ ಅನಿವಾರ್ಯ ಎಂದು ಅಪೋಲೋ ಕ್ರಾಡಲ್ ಅಂಡ್ ಚಿಲ್ದ್ರನ್ ಆಸ್ಪತ್ರೆಯ ಹಿರಿಯ ಸ್ತ್ರೀರೋಗ ತಜ್ಞರಾದ ಡಾ||ಗರೀಮಾ ಜೈನ್ ಹೇಳುತ್ತಾರೆ.
ಗರ್ಭಧಾರಣೆ ಸಂದರ್ಭದಲ್ಲಿ ಎರಡು ಡೋಸ್ ಟೆಟನಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು. ಆದರೆ, ಟೆಟನಸ್ ಚುಚ್ಚುಮದ್ದು ನಿಯಮವನ್ನು ಪಾಲಿಸಿರುವುದರಿಂದ ಈಗ ಗರ್ಭಿಣಿಯರಿಗೆ ಮತ್ತು ನವಜಾತ ಶಿಶುಗಳಿಗೆ ಈ ಟೆಟನಸ್ ಲಸಿಕೆ ಅಗತ್ಯವಿಲ್ಲ ಎಂದು ಡಾ||ಗರಿಮಾ ವಿವರಿಸುತ್ತಾರೆ.
ಗರ್ಭಧಾರಣೆ ಅವಧಿಯಲ್ಲಿ ಲಸಿಕೆ ನೀಡುವ ಮೂಲಕ ಮಹಿಳೆಯರು ಮತ್ತು ಆರು ತಿಂಗಳ ವಯೋಮಾನದವರೆಗಿನ ಶಿಶುಗಳನ್ನು ರಕ್ಷಿಸಬಹುದು ಎಂದು ದೆಹಲಿಯ ಅಪೋಲೋ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ||ಅಂಜನಾ ಶರ್ಮ ಸಲಹೆ ನೀಡಿದ್ದಾರೆ.
ಎಂಎಂಆರ್, ಟಿಡ್ಯಾಪ್ ಮತ್ತು ಎಚ್ ಪಿ ಪಿ ಲಸಿಕೆಗಳು ಮಹಿಳೆಯರಿಗೆ ಅದರಲ್ಲೂ ಗರ್ಭಿಣಿಯರಿಗೆ ಅತ್ಯಗತ್ಯ ಎಂಬುದು ಡಾ||ಅಂಜನಾ ಅವರ ಅಭಿಪ್ರಾಯಟ್ಟಿದ್ದಾರೆ.
ಯುವತಿಯರು ರುಬೆಲ್ಲಾಗೆ ತುತ್ತಾಗದಿರಲು ಎಂಎಂಆರ್ ಲಸಿಕೆ ಅಗತ್ಯ. ಎಂಎಂಆರ್ ಅಂದರೆ ಮಂಪ್ಸ್, ಮೀಸಲ್ಸ್ ಮತ್ತು ರುಬೆಲ್ಲಾ. ರುಬೆಲ್ಲಾಗೆ ತುತ್ತಾಗುವ ಲಕ್ಷಣಗಳು ಕಂಡುಬಂದರೆ ಯುವತಿಯರಿಗೆ ಮತ್ತೆ ಲಸಿಕೆ ನೀಡುವ ಮೂಲಕ ಗರ್ಭಾವಸ್ಥೆಯಲ್ಲಿ ತೀವ್ರ ಸಮಸ್ಯೆಯಾಗುವುದನ್ನು ತಪ್ಪಿಸಬಹುದಾಗಿದೆ.
ಅಲ್ಲದೇ ಸಿಡುಬು (ಚಿಕನ್ ಪಾಕ್ಸ್) ಮತ್ತು ಹೆಪಾಟಿಸಿಸ್ ಬಿ ಲಸಿಕೆ ಕೂಡ ಅತಿ ಮುಖ್ಯ. ಗರ್ಭ ಧರಿಸಿದ 24 ರಿಂದ 28 ವಾರಗಳಲ್ಲಿ, ಇನ್ ಫ್ಲುಯೆನ್ಝಾ ಲಸಿಕೆಯನ್ನು ನಾವು ಶಿಫಾರಸ್ಸು ಮಾಡುತ್ತೇವೆ. ಟೆಟನಸ್, ದಿಫ್ತೀರಿಯಾ ಮತ್ತು ಪರ್ಟ್ಯುಸಿಸ್ಗಾಗಿನ ಟಿಡ್ಯಾಪ್ ಲಸಿಕೆ ಕೂಡ ಗರ್ಭಿಣಿಯರಿಗೆ ಅತಿ ಮುಖ್ಯ. ಈ ಹಿಂದೆ ಟೆಟನಸ್ ಲಸಿಕೆ ಪಡೆಯದೇ ಇರುವ ಮಹಿಳೆಯರು ಟೆಟನಸ್ ಲಸಿಕೆಯ ಮೊದಲ ಚುಚ್ಚುಮದ್ದು ಮತ್ತು ಟಿಡ್ಯಾಪ್ನ ಬೂಸ್ಟರ್ ಚುಚ್ಚುಮದ್ದು ಪಡೆಯಬಹುದು ಎಂದು ಡಾ||ಅಂಜನಾ ತಿಳಿಸುತ್ತಾರೆ.
ಸರ್ವೈಕಲ್ ಕ್ಯಾನ್ಸರ್ ನ ಬಹುತೇಕ ಪ್ರಕರಣಗಳು ಹ್ಯೂಮನ್ ಪಾಪಿಲೋಮಾ ವೈರಸ್ (ಎಚ್ ಪಿ ವಿ) ನೊಂದಿಗೆ ಸಂಬಂಧ ಹೊಂದಿದ್ದು ಮಹಿಳೆಯರಲ್ಲಿ ಕಂಡುಬರುವ ನಾಲ್ಕನೇ ಸಾಮಾನ್ಯ ಕ್ಯಾನ್ಸರ್ ಇದಾಗಿದೆ. ಹೆಣ್ಣು ಮಕ್ಕಳು ವಿಶೇಷವಾಗಿ 9 ರಿಂದ 15 ವರ್ಷದ ಬಾಲಕಿಯರು ಈ ಲಸಿಕೆ ಪಡೆಯಬೇಕು. ದೃಢ ಪ್ರತಿಕಾಯಗಳನ್ನು ಈ ವಯಸ್ಸಿನಲ್ಲಿ ಉತ್ಪಾದಿಸಲು ದೇಹ ಶಕ್ತವಿರುತ್ತದೆ. ಹೀಗಾಗಿ ಈ ವಯೋಮಾನದವರು ಈ ಲಸಿಕೆ ಪಡೆಯುವುದು ಉತ್ತಮ.
ಸರ್ವೈಕಲ್ ಕ್ಯಾನ್ಸರ್ ವೈರಾಣುವಿನಿಂದ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಲೈಂಗಿಕ ಸಂಪರ್ಕದ ನಂತರ ಕಂಡುಬರುತ್ತದೆ. ಹೀಗಾಗಿ 9 ರಿಂದ 15 ವರ್ಷದ ಹೆಣ್ಣು ಮಕ್ಕಳು ಈ ಲಸಿಕೆ ಪಡೆದಿದ್ದರೆ, ದೇಹ ಸದೃಢ ಪ್ರತಿಕಾಯಗಳನ್ನು ಉತ್ಪಾದಿಸಲು ಸಮರ್ಥವಾಗಿರುತ್ತದೆ. ಒಂದು ವೇಳೆ ಈ ಹಂತದಲ್ಲಿ ಲಸಿಕೆ ಪಡೆದಿಲ್ಲವಾದರೆ 26 ವರ್ಷ ವಯಸ್ಸಿನೊಳಗೆ ಮೂರು ಡೋಸ್ ಲಸಿಕೆ ಪಡೆಯಬಹುದು. ಇದೂ ಕೂಡ ತಪ್ಪಿದ್ದಲ್ಲಿ 46 ವರ್ಷದೊಳಗೆ ಲಸಿಕೆ ಪಡೆಯಬಹುದು. ಎಚ್ ಪಿ ವಿ ಸರ್ವೈಕಲ್ ಕ್ಯಾನ್ಸರ್ನ ನ್ಯಾನೋ ಲಸಿಕೆ ಹೆಚ್ಚು ಪರಿಣಾಮಕಾರಿ ಎಂದು ಡಾ||ಅಂಜನಾ ವಿವರಿಸುತ್ತಾರೆ.