ಕೇವಲ ನೀರು ಕಡಿಮೆ ಕುಡಿದ್ರೆ ಮಾತ್ರವಲ್ಲ, ಈ ಆಹಾರಗಳ ಸೇವನೆ ಮಾಡಿದ್ರೂ ಕಿಡ್ನಿ ಸ್ಟೋನ್ ಆಗುತ್ತೆ!

ಮೂತ್ರಪಿಂಡ ಅಥವಾ ಕಿಡ್ನಿಯಲ್ಲಿ ಕಲ್ಲುಗಳು ಕಂಡು ಬರುವುದು ಹೆಚ್ಚಾಗುತ್ತಿದೆ. ಆದರೆ ಈ ರೀತಿಯ ಸಮಸ್ಯೆ ಕಂಡು ಬರುವುದು ನೀರು ಕುಡಿಯದಿರುವ ಕಾರಣಕ್ಕೆ ಎಂದು ಹಲವರು ಭಾವಿಸಿರುತ್ತಾರೆ. ಆದರೆ ಇದು ತಪ್ಪು ಏಕೆಂದರೆ ಕೇವಲ ನೀರಿನ ಮಿತ ಸೇವನೆ ಮಾತ್ರವಲ್ಲ, ನಾವು ಆರೋಗ್ಯಕ್ಕೆ ಒಳ್ಳೆಯದು ಎಂದು ಸೇವನೆ ಮಾಡುವ ಕೆಲವು ಆಹಾರಗಳು ಕೂಡ ಕಿಡ್ನಿಯಲ್ಲಿ ಕಲ್ಲುಗಳು ರೂಪುಗೊಳ್ಳುವುದಕ್ಕೆ ಕಾರಣವಾಗಬಹುದು. ಕ್ಸಲೇಟ್‌, ಸೋಡಿಯಂ, ಯೂರಿಕ್ ಆಮ್ಲ ಮತ್ತು ಫಾಸ್ಫೇಟ್‌ ಹೆಚ್ಚಾಗಿರುವ ಆಹಾರವನ್ನು ಸೇವಿಸುವುದರಿಂದ ಮೂತ್ರಪಿಂಡಗಳಲ್ಲಿ ಕಲ್ಲುಗಳು ಕಂಡುಬರುವುದು ಹೆಚ್ಚಾಗುತ್ತದೆ. ಹಾಗಾದರೆ ಈ ಅಂಶಗಳು ಹೆಚ್ಚಾಗಿರುವ ಆಹಾರಗಳು ಯಾವವು? ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ಕೇವಲ ನೀರು ಕಡಿಮೆ ಕುಡಿದ್ರೆ ಮಾತ್ರವಲ್ಲ, ಈ ಆಹಾರಗಳ ಸೇವನೆ ಮಾಡಿದ್ರೂ ಕಿಡ್ನಿ ಸ್ಟೋನ್ ಆಗುತ್ತೆ!
Kidney Stones

Updated on: Jul 21, 2025 | 3:45 PM

ಸಾಮಾನ್ಯವಾಗಿ ನಿಮಗೆ ತಿಳಿದಿರಬಹುದು ಮೂತ್ರಪಿಂಡದಲ್ಲಿ ಕಲ್ಲುಗಳ (kidney stones) ಸಮಸ್ಯೆ ಇದ್ದರೆ, ಬೆನ್ನು, ಹೊಟ್ಟೆ ಮತ್ತು ಕೆಳ ಬೆನ್ನಿನಲ್ಲಿ ತೀವ್ರ ನೋವು ಕಂಡು ಬರುತ್ತದೆ. ಈ ರೀತಿಯ ಸಮಸ್ಯೆ ಇದ್ದಾಗ, ಆರಾಮವಾಗಿ ಕುಳಿತುಕೊಳ್ಳಲು ಅಥವಾ ನಿಲ್ಲಲು ಸಾಧ್ಯವಾಗುವುದಿಲ್ಲ. ಜೊತೆಗೆ, ಮೂತ್ರ ವಿಸರ್ಜನೆ ಮಾಡುವಾಗ ರಕ್ತ, ಜ್ವರ ಮತ್ತು ವಾಂತಿ ಕೂಡ ಆಗಬಹುದು. ಆದರೆ ಈ ರೀತಿಯ ಸಮಸ್ಯೆ ಕಂಡು ಬರುವುದು ನೀರು ಕುಡಿಯದಿರುವ ಕಾರಣಕ್ಕೆ ಎಂದು ಹಲವರು ಭಾವಿಸಿರುತ್ತಾರೆ. ಆದರೆ ನೀವು ಅಗತ್ಯಕ್ಕೆ ತಕ್ಕಂತೆ ನೀರು ಕುಡಿಯುತ್ತಿದ್ದರೂ ಸಹ, ಕೆಲವು ಆಹಾರಗಳು ಕಿಡ್ನಿ ಸ್ಟೋನ್ ಗೆ ಕಾರಣವಾಗಬಹುದು. ವಿಶೇಷವಾಗಿ, ಆಕ್ಸಲೇಟ್‌ಗಳು, ಸೋಡಿಯಂ, ಯೂರಿಕ್ ಆಮ್ಲ (uric acid) ಮತ್ತು ಫಾಸ್ಫೇಟ್‌ ಹೆಚ್ಚಾಗಿರುವ ಆಹಾರವನ್ನು ಸೇವಿಸುವುದರಿಂದ ಮೂತ್ರಪಿಂಡಗಳಲ್ಲಿ ಕಲ್ಲುಗಳು ರೂಪುಗೊಳ್ಳಬಹುದು. ಆದ್ದರಿಂದ, ಕೆಲವು ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು. ಹಾಗಾದರೆ ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ಪಾಲಕ್ ಸೊಪ್ಪು, ಆಲೂಗಡ್ಡೆ

ಸಾಮಾನ್ಯವಾಗಿ ಪಾಲಕ್ ಸೊಪ್ಪಿನಲ್ಲಿ ಆಕ್ಸಲೇಟ್ ಅಧಿಕವಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮೂತ್ರಪಿಂಡದ ಸಮಸ್ಯೆಗಳು ಉಂಟಾಗಬಹುದು. ಪಾಲಕ್ ಸೊಪ್ಪಿನಲ್ಲಿರುವ ಆಕ್ಸಲೇಟ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಖನಿಜಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇವುಗಳನ್ನು ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ಕಬ್ಬಿಣದ ಮಟ್ಟ ಕಡಿಮೆಯಾಗುವುದರ ಜೊತೆಗೆ ರಕ್ತಹೀನತೆಯ ಸಮಸ್ಯೆಗಳಿಗೂ ಕಾರಣವಾಗಬಹುದು. ಆಲೂಗಡ್ಡೆ ಕೂಡ ತುಂಬಾ ಒಳ್ಳೆಯದು. ಆದರೆ ಅವುಗಳನ್ನು ಅತಿಯಾಗಿ ಸೇವಿಸುವುದರಿಂದ ಮೂತ್ರಪಿಂಡಗಳಲ್ಲಿ ಕಲ್ಲುಗಳು ರೂಪುಗೊಳ್ಳಬಹುದು.

ಬಾದಾಮಿ, ಬೀಜಗಳು

ಬಾದಾಮಿ ಮತ್ತು ನಾವು ದಿನನಿತ್ಯ ಸೇವನೆ ಮಾಡುವ ಕೆಲವು ರೀತಿಯ ಬೀಜಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಆದರೆ ಅವುಗಳಲ್ಲಿ ಹೆಚ್ಚಿನ ಮಟ್ಟದ ಆಕ್ಸಲೇಟ್‌ ಅಂಶಗಳಿರುತ್ತವೆ. ಇವುಗಳನ್ನು ಅತಿಯಾಗಿ ತಿನ್ನುವುದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗಬಹುದು. ಏಕೆಂದರೆ ಈ ರೀತಿಯ ಆಹಾರಗಳು ಮೂತ್ರಪಿಂಡದೊಳಗೆ ಖನಿಜಗಳು ಮತ್ತು ಲವಣಗಳ ರಚನೆಗೆ ಕೊಡುಗೆ ನೀಡುತ್ತವೆ, ಇದು ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಈಗಾಗಲೇ ಸಮಸ್ಯೆಗಳಿರುವವರು ಬಾದಾಮಿ ತಿನ್ನುವುದನ್ನು ತಪ್ಪಿಸುವುದು ಉತ್ತಮ. ಏಕೆಂದರೆ ಇದರಲ್ಲಿರುವ ಆಕ್ಸಲೇಟ್ ಅಂಶವು ಕಲ್ಲಿನ ರಚನೆಗೆ ಕಾರಣವಾಗುತ್ತದೆ. ಕ್ಯಾಲ್ಸಿಯಂ ಜೊತೆಗೆ, ಅವು ಮೂತ್ರಪಿಂಡದ ಕಲ್ಲುಗಳಾಗಿ ಬದಲಾಗಬಹುದು. ಆದ್ದರಿಂದ, ಮೂತ್ರಪಿಂಡದ ಕಲ್ಲಿನ ಸಮಸ್ಯೆ ಇರುವವರು ಹೆಚ್ಚು ಬಾದಾಮಿ ಸೇವಿಸಬಾರದು.

ಇದನ್ನೂ ಓದಿ
ಪ್ರತಿ ರಾತ್ರಿ ಎರಡು ಬೆಳ್ಳುಳ್ಳಿ ಎಸಳು ತಿಂದರೆ, ಈ ಎಲ್ಲಾ ಕಾಯಿಲೆಗಳು ಮಾಯ
ನೆನೆಸಿಟ್ಟ ವಾಲ್ನಟ್ಸ್ ತಿನ್ನುವ ಅಭ್ಯಾಸ ನಿಮಗಿದ್ರೆ ಈ ಸ್ಟೋರಿ ಓದಿ
ಪ್ರತಿನಿತ್ಯ  ಒಂದು ಲವಂಗ ಸೇವನೆ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತೆ!
ಮೆದುಳು ಚುರುಕಾಗಿ ಕೆಲಸ ಮಾಡಲು ತಪ್ಪದೆ ಈ ಆಹಾರಗಳನ್ನು ಸೇವನೆ ಮಾಡಿ

ಟೊಮೆಟೊ

ನಾವು ಪ್ರತಿದಿನ ನಮ್ಮ ಅಡುಗೆಗಳಲ್ಲಿ ಟೊಮೆಟೊ ಬಳಸಿಯೇ ಬಳಸುತ್ತೇವೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಮಾತ್ರವಲ್ಲ ನಾವು ಅವುಗಳನ್ನು ಪ್ರತಿಯೊಂದು ಖಾದ್ಯದಲ್ಲೂ ಬಳಸುತ್ತೇವೆ. ಟೊಮೆಟೊಗಳನ್ನು ಕರಿ, ಸಾಸ್‌ ಹೀಗೆ ವಿವಿಧ ರೂಪಗಳಲ್ಲಿ ಬಳಸಲಾಗುತ್ತದೆ. ಆದರೆ, ತಜ್ಞರು ಹೇಳುವ ಪ್ರಕಾರ, ಬೇಯಿಸಿದ್ದಕ್ಕಿಂತ ಹಸಿ ಟೊಮೆಟೊವನ್ನು ಹೆಚ್ಚು ಸೇವಿಸುವುದು ಒಳ್ಳೆಯದಲ್ಲ. ಇದು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸಬಹುದು.

ಉಪ್ಪು ಮತ್ತು ಪ್ಯಾಕ್ ಮಾಡಿದ ಆಹಾರಗಳು

ಉಪ್ಪು ಸೇವನೆಯು ಮೂತ್ರಪಿಂಡಗಳಲ್ಲಿ ಕಲ್ಲುಗಳ ರಚನೆಗೆ ಕಾರಣವಾಗುತ್ತದೆ. ಮಾತ್ರವಲ್ಲ, ಪ್ಯಾಕ್ ಮಾಡಿದ ಆಹಾರಗಳಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಉಪ್ಪಿನ ಅಂಶ ಇರುವುದರಿಂದ ಇವುಗಳನ್ನು ಸೇವಿಸುವುದರಿಂದಲೂ ಕೂಡ ಮೂತ್ರಪಿಂಡಗಳಲ್ಲಿ ಕಲ್ಲುಗಳ ಸಮಸ್ಯೆ ಹೆಚ್ಚಾಗುತ್ತದೆ. ಆದ್ದರಿಂದ, ಅವುಗಳನ್ನು ಕಡಿಮೆ ಮಾಡಬೇಕು.

ಇದನ್ನೂ ಓದಿ: ಪ್ರತಿದಿನ ಬೆಳಿಗ್ಗೆ ಈ ಜ್ಯೂಸ್​​ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಬರುವುದಿಲ್ಲ

ಚಹಾ

ಅತಿಯಾಗಿ ಅಥವಾ ದಿನದಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಚಹಾ ಕುಡಿಯುವುದರಿಂದ ಮೂತ್ರಪಿಂಡಗಳಲ್ಲಿ ಕಲ್ಲುಗಳ ಅಪಾಯ ಹೆಚ್ಚಾಗುತ್ತದೆ. ಚಹಾವು ಮಧ್ಯಮದಿಂದ ಹೆಚ್ಚಿನ ಮಟ್ಟದ ಆಕ್ಸಲೇಟ್‌ಗಳನ್ನು ಹೊಂದಿರುತ್ತದೆ. ಅವು ಹೊರಹಾಕಲ್ಪಟ್ಟಾಗ, ಅವು ಮೂತ್ರದಲ್ಲಿ ಕ್ಯಾಲ್ಸಿಯಂನೊಂದಿಗೆ ಬೆರೆಯುತ್ತವೆ. ಪರಿಣಾಮವಾಗಿ, ಮೂತ್ರಪಿಂಡಗಳಲ್ಲಿ ಕಲ್ಲುಗಳು ರೂಪುಗೊಳ್ಳುತ್ತವೆ.

ಸಕ್ಕರೆ ಪಾನೀಯಗಳು

ಸಕ್ಕರೆ ಪಾನೀಯಗಳಿಂದ ಮೂತ್ರಪಿಂಡದ ಕಲ್ಲುಗಳು ರೂಪುಗೊಳ್ಳುವ ಸಾಧ್ಯತೆ ಹೆಚ್ಚು. ಇದಕ್ಕೆ ಕಾರಣ ಅವುಗಳಲ್ಲಿರುವ ಫಾಸ್ಪರಿಕ್ ಆಮ್ಲ. ಸಕ್ಕರೆಯನ್ನು ಒಳಗೊಂಡಿರುವ ಪಾನೀಯಗಳು ಮೂತ್ರದಲ್ಲಿ ಕಲ್ಲುಗಳನ್ನು ರೂಪಿಸಬಹುದು. ಫ್ರಕ್ಟೋಸ್ ಸಹ ಇದಕ್ಕೆ ಕಾರಣವಾಗಬಹುದು. ಹೆಚ್ಚುವರಿಯಾಗಿ, ಇವುಗಳನ್ನು ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಇವುಗಳೆಲ್ಲದರ ಜೊತೆಗೆ ನಿಮ್ಮ ದೇಹಕ್ಕೆ ನೀರಿನ ಅವಶ್ಯಕತ ತುಂಬಾ ಇರುತ್ತದೆ ಹಾಗಾಗಿ ನೀರು ಮತ್ತು ಸರಿಯಾದ ಜೀವನಶೈಲಿ ಮೂತ್ರಪಿಂಡಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ