ನೀವು ಕಿವಿ ಹಣ್ಣಿನ ಬಗ್ಗೆ ಕೇಳಿರಬಹುದು. ಹೆಸರೇ ಸೂಚಿಸುವಂತೆ, ಕಿವಿ ಪಕ್ಷಿಯ ದೇಶವಾದ ನ್ಯೂಜಿಲ್ಯಾಂಡ್ ಮೂಲದ್ದಾಗಿದೆ. ಇಂದು ಭಾರತದಲ್ಲಿಯೂ ಇದು ಸುಲಭವಾಗಿ ಲಭಿಸುತ್ತಿದೆ. ಸ್ವಲ್ಪ ಹುಳಿಮಿಶ್ರಿತವಾಗಿ ಸಿಹಿ ರುಚಿಯನ್ನು ಹೊಂದಿರುತ್ತದೆ. ಬಹುಶಃ ಈ ಹಣ್ಣನ್ನು ‘ಸುಪರ್ ಫುಡ್’ ಎಂದು ಕರೆದರೆ ತಪ್ಪಾಗಲಾರದು. ಇದು ವರ್ಷದ ಎಲ್ಲಾ ಸಮಯದಲ್ಲಿಯೂ ದೊರಕುವ ಹಣ್ಣಾಗಿದ್ದು, ಇದುವರೆಗೆ ಸುಮಾರು ಐವತ್ತು ಪ್ರಬೇಧಗಳನ್ನು ಗುರುತಿಸಲಾಗಿದೆ. ಹಾಗಾದರೆ ಈ ಹಣ್ಣನ್ನು ನಿಮ್ಮ ನಿತ್ಯದ ಆಹಾರಕ್ರಮದಲ್ಲಿ ಅಳವಡಿಸಿಕೊಳ್ಳುವುದರಿಂದ ಸಿಗುವ ಲಾಭಗಳೇನು? ಈ ಬಗ್ಗೆ ತಜ್ಞರು ಹೇಳುವುದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಸೇಬಿಗಿಂತ ಐದು ಪಟ್ಟು ಹೆಚ್ಚು ಪೋಷಕಾಂಶಗಳಿವೆ. ಅನೇಕ ಗಂಭೀರ ಕಾಯಿಲೆಗಳ ಅಪಾಯಗಳ ವಿರುದ್ಧ ಹೋರಾಡಲು ಇದು ಅತ್ಯಂತ ಪ್ರಯೋಜನಕಾರಿಯಾಗಿದೆ. ಕಿವಿ ಹಣ್ಣಿನಲ್ಲಿ ಕ್ಯಾಲೊರಿ ಕಡಿಮೆ ಇದ್ದು ಫೈಬರ್ ಸಮೃದ್ಧವಾಗಿದೆ. ಜೊತೆಗೆ ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕಗಳು, ವಿಟಮಿನ್ ಬಿ 6, ವಿಟಮಿನ್ ಸಿ, ಫೈಬರ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್ಗಳು, ರಂಜಕ, ಮೆಗ್ನೀಸಿಯಮ್, ತಾಮ್ರ, ಸತು, ನಿಯಾಸಿನ್, ರಿಬೋಫ್ಲೇವಿನ್, ಬೀಟಾ ಕ್ಯಾರೋಟಿನ್ ಮುಂತಾದ ಪೋಷಕಾಂಶಗಳಿವೆ. ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಈ ಎಲ್ಲಾ ಪೋಷಕಾಂಶಗಳು ಅವಶ್ಯಕ ಎಂದು ತಜ್ಞರು ಹೇಳುತ್ತಾರೆ.
ಇದರಲ್ಲಿ ಕೊಬ್ಬು ಮತ್ತು ಸೋಡಿಯಂ ಕಡಿಮೆ ಇರುವುದರಿಂದ ಹೃದ್ರೋಗಿಗಳು ಮತ್ತು ಮಧುಮೇಹಿಗಳಿಗೆ ಈ ಹಣ್ಣು ಒಳ್ಳೆಯದು. ಕಿವಿ ಹಣ್ಣಿನ ಉತ್ಕರ್ಷಣ ನಿರೋಧಕ ಗುಣಗಳು ಬಿಪಿ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತವೆ. ಇದರ ಸೇವನೆ ಮಾಡುವುದರಿಂದ ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಯಬಹುದು. ಜೊತೆಗೆ ಕ್ಯಾನ್ಸರ್ ಗೆ ಕಾರಣವಾಗುವ ಆನುವಂಶಿಕ ಬದಲಾವಣೆಗಳನ್ನು ತಡೆಯುತ್ತದೆ ಎಂದು ಸಂಶೋಧನೆ ತೋರಿಸಿದೆ. ಅಲ್ಲದೆ ಉಸಿರಾಟ ಮತ್ತು ಅಸ್ತಮಾದಂತಹ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ. ಇದು ಗರ್ಭಿಣಿಯರಿಗೂ ನೀಡಬಹುದಾಗಿದ್ದು ಉತ್ತಮ ಪೌಷ್ಠಿಕಾಂಶವನ್ನು ಒದಗಿಸುವುದಲ್ಲದೆ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಈ 5 ಮನೆಕೆಲಸಗಳನ್ನು ಮಾಡಿ ತೂಕ ಕಡಿಮೆ ಮಾಡಿಕೊಳ್ಳಿ
ಕಿವಿ ಹಣ್ಣಿನ ಸೇವನೆಯು ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಮೂತ್ರಪಿಂಡದಲ್ಲಿನ ಕಲ್ಲುಗಳು ಮತ್ತು ಆಸ್ಟಿಯೊಪೊರೋಸಿಸ್ ನಂತಹ ಹೃದಯ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡಲು ಉಪಯುಕ್ತವಾಗಿದೆ. ಪ್ರತಿದಿನ ಎರಡರಿಂದ ಮೂರು ಕಿವಿ ಹಣ್ಣುಗಳನ್ನು ತಿನ್ನುವುದರಿಂದ ಕೀಲುಗಳಲ್ಲಿ ಸಂಗ್ರಹವಾದ ಯೂರಿಕ್ ಆಮ್ಲದಿಂದ ಮುಕ್ತಿ ಸಿಗುತ್ತದೆ.
(ಸೂಚನೆ: ಈ ವಿವರಗಳನ್ನು ಪ್ರಯತ್ನಿಸುವ ಮೊದಲು ಸಂಬಂಧಿತ ತಜ್ಞರ ಸಲಹೆಯನ್ನು ಅನುಸರಿಸಿ.)
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: