ತುಳಸಿ ಎಲೆಗಳ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದನ್ನು ಚಿಕ್ಕ ವಯಸ್ಸಿನಿಂದಲೂ ಕೇಳಿಯೇ ಇರುತ್ತೇವೆ. ಹಾಗೆಯೇ ಭಾರತೀಯ ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ತುಳಸಿ ಗಿಡವನ್ನು ಪೂಜಿಸುತ್ತಾರೆ. ಆಯುರ್ವೇದದ ಪ್ರಕಾರ ಹೆಚ್ಚು ಆರೋಗ್ಯಕರ ಪ್ರಯೋಜನಗಳನ್ನು ನೀಡುವ ಸಸ್ಯ ತುಳಸಿ. ಆದರೆ ಆರೋಗ್ಯಕ್ಕೆ ಒಳ್ಳೆಯದೆಂದು ಅತಿಯಾಗಿ ಸೇವಿಸಿದರೆ ಅನಾರೋಗ್ಯ ಉಂಟಾಗುತ್ತದೆ. ದೇಹಕ್ಕೆ ಅಡ್ಡ ಪರಿಣಾವನ್ನೂ ಬೀರುತ್ತದೆ. ತುಳಸಿ ಸಸ್ಯದಿಂದ ಏನೆಲ್ಲಾ ಅಡ್ಡ ಪರಿಣಾಮಗಳಿವೆ ಮತ್ತು ಯಾರು ಹೆಚ್ಚಾಗಿ ತುಳಸಿಯನ್ನು ಸೇವನೆ ಮಾಡಬಾರದು ಎಂಬುದರ ಕುರಿತಾಗಿ ತಿಳಿಯೋಣ.
ಗರ್ಭಿಣಿಯರು ತುಳಸಿ ಎಲೆಗಳನ್ನು ಸೇವಿಸಬಾರದು
ತುಳಸಿ ಎಲೆಗಳು ಪರಿಮಳಯುಕ್ತ, ಆರೋಗ್ಯವರ್ಧಕ ಸಸ್ಯ. ಆದರೆ, ಗರ್ಭಿಣಿಯರು ತುಳಸಿ ಎಲೆಗಳನ್ನು ಸೇವಿಸುವುದನ್ನು ತಪ್ಪಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಇದು ಭ್ರೂಣದ ಮೇಲೆ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಗರ್ಭಪಾತಕ್ಕೂ ಕಾರಣವಾಗಬಹುದು. ಈ ಕುರಿತಂತೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಹಾಗಿರುವಾಗ ಗರ್ಭಾವಸ್ಥೆಯಲ್ಲಿ ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ. ಗರ್ಭಿಣಿಯರು ಯಾವುದೇ ಆಹಾರವನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.
ಮಧುಮೇಹಿಗಳು ಸೇವಿಸಬಾರದು
ಸಾಮಾನ್ಯವಾಗಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ತುಳಸಿಯನ್ನು ಬಳಸಲಾಗುತ್ತದೆ. ಈ ಕುರಿತಂತೆ ಕೆಲವು ಅಧ್ಯಯನಗಳೂ ಸಹ ನಡೆದಿವೆ. ಹಾಗಾಗಿ ತುಳಸಿ ಸೇವನೆಯು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಸಾಧ್ಯತೆ ಹೆಚ್ಚು. ಮಧುಮೇಹಿಗಳು ಆದಷ್ಟು ತುಳಸಿ ಎಲೆಗಳನ್ನು ಸೇವಿಸದಿರುವುದು ಉತ್ತಮ.
ರಕ್ತವನ್ನು ತೆಳುಗೊಳಿಸುತ್ತದೆ
ತುಳಸಿಯಲ್ಲಿ ನಮ್ಮ ದೇಹದ ರಕ್ತವನ್ನು ತೆಳುಗೊಳಿಸುವ ಗುಣಗಳಿವೆ. ಔಷಧೀಯ ಗುಣಗಳನ್ನು ಹೊಂದಿರುವ ಜತೆಗೆ ರಕ್ತವನ್ನು ತೆಳುಗೊಳಿಸಲು ತುಳಸಿಯನ್ನು ಹೆಚ್ಚು ಬಳಸಲಾಗುತ್ತದೆ. ಆದ್ದರಿಂದ ಸಾಮಾನ್ಯ ಜನರೂ ಸಹ ತುಳಸಿಯನ್ನು ಹೆಚ್ಚಾಗಿ ಸೇವಿಸಿದರೆ ಇದು ರಕ್ತವನ್ನು ಇನ್ನಷ್ಟು ತೆಳುಗೊಳಿಸಬಹುದು.
ಹಲ್ಲುಗಳಿಗೆ ಒಳ್ಳೆಯದಲ್ಲ
ತುಳಸಿ ಎಲೆಗಳನ್ನು ಅಗೆಯುವುದರಿಂದ ಹಲ್ಲುಗಳ ಬಣ್ಣ ಬದಲಾಗುತ್ತದೆ. ಹೆಚ್ಚು ತುಳಸಿ ಎಲೆಗಳನ್ನು ಅಗೆಯುವುದಕ್ಕಿಂತ ಹೆಚ್ಚಾಗಿ ನೀರಿನ ರೂಪದಲ್ಲಿ ಸೇವಿಸಲು ಸಲಹೆ ನೀಡಲಾಗುತ್ತದೆ. ಜತೆಗೆ ತುಳಸಿಯ ಎಲೆಗಳ ಸೇವನೆಯಿಂದ ಯಕೃತ್ತಿನ ಸಮಸ್ಯೆಗೂ ಕಾರಣವಾಗಬಹುದು ಎಂದು ಟೈಮ್ಸ್ ಅಫ್ ಇಂಡಿಯಾ ವರದಿ ಮಾಡಿದೆ.
ಆಯುರ್ವೇದದ ಪ್ರಕಾರ ತುಳಸಿಯಲ್ಲಿ ಅತಿ ಹೆಚ್ಚು ಔಷಧೀಯ ಗುಣಗಳಿವೆ. ಅತಿಯಾಗಿ ಬಳಸಿದರೆ ಅಮೃತವೂ ವಿಷ ಎಂಬಂತೆ ತುಳಸಿ ಸೇವನೆಯೂ ಸಹ ಕೆಲವು ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ. ಹಾಗಿರುವಾಗ ನಿಯಮಿತವಾಗಿ ತುಳಸಿಯನ್ನು ಬಳಸುವುದು ಉತ್ತಮ. ಆರೋಗ್ಯದ ಹಿತದೃಷ್ಟಿ ಕಾಪಾಡುವ ಪೌಷ್ಠಿಕ ಆಹಾರವನ್ನೂ ಜತೆಗೆ ಸಮಸ್ಯೆ ಉಂಟಾದಾಗ ಕೆಲವು ಮನೆಮದ್ದುಗಳನ್ನೂ ಮಾಡುತ್ತೇವೆ. ಆದರೆ ಯಾವುದಕ್ಕೂ ಒಮ್ಮೆ ನಿಮ್ಮ ಆಹಾರದ ಕ್ರಮದ ಕುರಿತಾಗಿ ವೈದ್ಯರಲ್ಲಿ ಸಲಹೆ ಪಡೆಯುವುದು ಒಳ್ಳೆಯದು.
ಇದನ್ನೂ ಓದಿ:
Vastu tips: ತುಳಸಿ ಗಿಡ ಮನೆಯ ಯಾವ ದಿಕ್ಕಿನಲ್ಲಿ ಇದ್ದರೆ ಶ್ರೇಯಸ್ಸು?
Health Tips: ಮಾನ್ಸೂನ್ನಲ್ಲಿ ನಿಮ್ಮ ಆರೋಗ್ಯವನ್ನು ಹೇಗೆ ರಕ್ಷಿಸಿಕೊಳ್ಳಬಹುದು? ಇಲ್ಲಿದೆ ಮಾಹಿತಿ