ಕಪ್ಪು ಜೀರಿಗೆಯನ್ನು ಕಾಳಾಜೀರಾ (Nigella Seeds), ಕಲೋಂಜಿ, ಕರಿ ಜೀರಿಗೆ ಅಂತಲೂ ಕರೆಯುತ್ತಾರೆ. ಈ ಕಪ್ಪು ಜೀರಿಗೆ ಅಡುಗೆಯ ರುಚಿಯನ್ನು ಹೆಚ್ಚಿಸುವ ಮತ್ತು ಪರಿಮಳ ನೀಡುವ ಗುಣವನ್ನು ಹೊಂದಿದೆ. ಇದು ಕೇವಲ ಅಡುಗೆ ರುಚಿಯನ್ನು ಹೆಚ್ಚಿಸುವ ಗುಣ ಮಾತ್ರವಲ್ಲ, ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಆರೋಗ್ಯದ ದೃಷ್ಟಿಯಿಂದ ಇದು ಬಹಳ ಒಳ್ಳೆಯದು. ಕ್ಯಾಲ್ಸಿಯಂ, ಕಬ್ಬಿಣ, ಸತು, ಮೆಗ್ನೀಸಿಯಮ್ ಮತ್ತು ಪೊಟ್ಯಾಶಿಮ್ನಂತಹ ಪೋಷಕಾಂಶಗಳಿಂದ ಕೂಡಿರುವ ಕಪ್ಪು ಜೀರಿಗೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನೀವೂ ತಿಳಿಯಿರಿ.
* ಜ್ಞಾಪಕ ಶಕ್ತಿ ವೃದ್ಧಿಸುವುದು (Memory Power)
ಇತ್ತೀಚೆಗೆ ಜ್ಞಾಪಕ ಶಕ್ತಿ ಯಾಕೋ ಕಡಿಮೆಯಾಗುತ್ತಿದೆ ಎಂದು ಹಲವರು ಮಾತನಾಡಿಕೊಳ್ಳುತ್ತಾರೆ. ಅಂತವರಿಗೆ ಈ ಕಪ್ಪು ಜೀರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಜೇನುತುಪ್ಪದೊಂದಿಗೆ ಕಪ್ಪು ಜೀರಿಗೆಯ 7 ರಿಂದ 8 ಬೀಜಗಳನ್ನು ಸೇವಿಸಬೇಕು. ತಿಂದ ನಂತರ ಅರ್ಧ ಘಂಟೆಯವರೆಗೆ ಏನನ್ನೂ ಸೇವಿಸಬಾದರು. ಇದನ್ನು ಪ್ರತಿದಿನ ಮಾಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ಜೊತೆಗೆ ಏಕಾಗ್ರತೆ ಕೂಡಾ ಹೆಚ್ಚಾಗುವುದು.
* ಹೃದಯಕ್ಕೆ ಪ್ರಯೋಜನಕಾರಿ
ಕಪ್ಪು ಜೀರಿಗೆ ಹೃದಯದ ಆರೋಗ್ಯ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಪ್ರತಿದಿನ ಸುಮಾರು 10 ರಿಂದ 12 ಕಪ್ಪು ಜೀರಿಗೆಯನ್ನು ಹಸು ಅಥವಾ ಮೇಕೆ ಹಾಲಿನೊಂದಿಗೆ ತೆಗೆದುಕೊಂಡರೆ ಹೃದಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತದೆ ಮತ್ತು ಬಿಪಿ ನಿಯಂತ್ರಣದಲ್ಲಿರುತ್ತದೆ.
* ಕಣ್ಣಿನ ಆರೋಗ್ಯ
ಕಪ್ಪು ಜೀರಿಗೆ ನಿಯಮಿತವಾಗಿ ಸೇವಿಸುವುದರಿಂದ ದೃಷ್ಟಿ ಸುಧಾರಿಸುತ್ತದೆ. ಮಾತ್ರವಲ್ಲದೆ ಕಣ್ಣಿನಲ್ಲಿ ಹೆಚ್ಚು ನೀರು ಬರುತ್ತಿರುವವರಿಗೆ ಅಥವಾ ಕಣ್ಣು ಸದಾ ಕೆಂಪಾಗಿರುವವರಿಗೆ ಕಪ್ಪು ಜೀರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.
* ತೂಕ ಕಡಿಮೆಗೊಳಿಸುವುದು
ದಪ್ಪ ಇರುವವರು ಕಪ್ಪು ಜೀರಿಗೆಯನ್ನು ತಿಂದರೆ ತೂಕವನ್ನು ಕಡಿಮೆಗೊಳಿಸಬಹುದು. ಒಂದು ಬಟ್ಟಲಿನಲ್ಲಿ ಕಪ್ಪು ಜೀರಿಗೆಯನ್ನು ತೆಗೆದುಕೊಂಡು ಅದಕ್ಕೆ ನಿಂಬೆರಸ ಹಿಂಡಿ, ಮಿಶ್ರಣ ಮಾಡಬೇಕು. ಮಿಶ್ರಣವನ್ನು ಎರಡು ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಿ. ಪ್ರತಿದಿನ 8 ರಿಂದ 10 ಬೀಜಗಳನ್ನು ಸೇವಿಸಿ. ಕೆಲವೇ ದಿನಗಳಲ್ಲಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಸ್ವಲ್ಪ ಕಪ್ಪು ಜೀರಿಗೆ ಪುಡಿ ಮತ್ತು ಒಂದು ಚಮಚ ಜೇನುತುಪ್ಪವನ್ನು ನಿಂಬೆ ರಸದಲ್ಲಿ ಬೆರೆಸಿ ದಿನಕ್ಕೆ ಎರಡು ಬಾರಿ ಕುಡಿದರೂ ಕೂಡಾ ತೂಕ ಕಡಿಮೆಯಾಗುತ್ತದೆ.
* ಹೆರಿಗೆಯಾದ ಮಹಿಳೆಯ ಶಕ್ತಿಯನ್ನು ಹೆಚ್ಚಿಸುವುದು
ಹೆರಿಗೆಯ ನಂತರ ಮಹಿಳೆಯರ ದೈಹಿಕ ಸಾಮರ್ಥ್ಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಹೀಗಾಗಿ ಸಾಮರ್ಥ್ಯವನ್ನು ಹೆಚ್ಚಿಕೊಳ್ಳಲು ಸೌತೆಕಾಯಿ ರಸದೊಂದಿಗೆ ಕಪ್ಪು ಜೀರಿಗೆಯನ್ನು ಸೇವಿಸದರೆ ಒಳ್ಳೆಯದು. ಕಲೋಂಜಿಯನ್ನು ನೀರಿನೊಂದಿಗೆ ಸೇವಿಸುವುದರಿಂದ ಲ್ಯುಕೋರಿಯಾ, ಮುಟ್ಟು ನೋವು (period pain) ಮುಂತಾದ ಸಮಸ್ಯೆಗಳಿಗೂ ಪ್ರಯೋಜನಕಾರಿ.
* ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಳ
ಎರಡರಿಂದ ಮೂರು ಗ್ರಾಂ ಕರಿ ಜೀರಿಗೆಯನ್ನು ಸುಮಾರು ಮೂರು ತಿಂಗಳು ಸೇವಿಸಿದರೆ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಉಳ್ಳೆಯ ಕೊಲೆಸ್ಟ್ರಾಲ್ನ ಹೆಚ್ಚಿಸುತ್ತದೆ. ಈ ಕಪ್ಪು ಜೀರಿಗೆ ಅಸ್ತಮಾ ಮತ್ತು ಕೆಮ್ಮಿನ ಸಮಸ್ಯೆಗೂ ಹೆಚ್ಚು ಪ್ರಯೋಜನಕಾರಿ.
ಇದನ್ನೂ ಓದಿ
Health Tips: ಆಸಿಡಿಟಿ ನಿವಾರಣೆಗೆ ಯೋಗಾಭ್ಯಾಸ; ಯಾವ ಯೋಗ ಭಂಗಿ ಸೂಕ್ತ?