ಕೊರೊನಾಕ್ಕಿಂತಲೂ ಗಂಭೀರ ಅದರ ಅಡ್ಡಪರಿಣಾಮ; ಮಾನಸಿಕ ರೋಗಿಗಳಲ್ಲಿ ಯುವಸಮುದಾಯದ್ದೇ ಮೇಲುಗೈ, ಪರಿಹಾರವೇನು?

| Updated By: Skanda

Updated on: Jun 19, 2021 | 9:00 AM

ಕೊರೊನಾಕ್ಕೆ ತುತ್ತಾಗುವ ಭಯ, ಉದ್ಯೋಗ ಕಳೆದುಕೊಳ್ಳುವ ಭಯ, ತಮ್ಮ ಪ್ರೀತಿಪಾತ್ರರು ಕೊರೊನಾದಿಂದಾಗಿ ಮೃತಪಟ್ಟಾಗ ಸರ್ಕಾರದ ಕಾನೂನಿನ ಕಾರಣ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನಡೆಸಲು ಸಾಧ್ಯವಾಗದಿರುವ ಹತಾಶೆ ಕೂಡಾ ಭಾರತೀಯರ ಮನಸ್ಸಿಗೆ ಈ ಕಾಲದಲ್ಲಿ ಹೆಚ್ಚು ಘಾಸಿ ಮಾಡುತ್ತಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಕೊರೊನಾಕ್ಕಿಂತಲೂ ಗಂಭೀರ ಅದರ ಅಡ್ಡಪರಿಣಾಮ; ಮಾನಸಿಕ ರೋಗಿಗಳಲ್ಲಿ ಯುವಸಮುದಾಯದ್ದೇ ಮೇಲುಗೈ, ಪರಿಹಾರವೇನು?
ಸಾಂಕೇತಿಕ ಚಿತ್ರ
Follow us on

ಕೊರೊನಾ ಸೋಂಕು ಆರಂಭವಾಗಿ ಒಂದೂವರೆ ವರ್ಷ ಕಳೆದಿದೆ. ಈ ಅವಧಿಯ ಬಹುಪಾಲು ಭಾಗವನ್ನು ಲಾಕ್​ಡೌನ್​ ಅಥವಾ ಸೋಂಕಿನ ಭಯಕ್ಕಾಗಿಯಾದರೂ ಮನೆಯಲ್ಲೇ ಕಳೆದಿದ್ದೇವೆ. ಹೊರ ಹೋಗುವುದಾದರೂ ಸಣ್ಣ ಭಯದೊಂದಿಗೇ ನಮ್ಮನ್ನು ನಾವು ಬಂಧಿಸಿಕೊಂಡೇ ಹೋಗಿದ್ದು ಹೆಚ್ಚು. ಕೊರೊನಾ ಒಂದು ವ್ಯವಸ್ಥೆಯ ಮೇಲೆ, ಜನರ ಜೀವನ ಕ್ರಮದ ಮೇಲೆ, ಆರ್ಥಿಕತೆಯ ಮೇಲೆ, ಶಿಕ್ಷಣದ ಮೇಲೆ ಬೀರಿದ ಅಡ್ಡಪರಿಣಾಮ ಅತ್ಯಂತ ಗಂಭೀರವೂ ದೀರ್ಘಕಾಲಿಕವೂ ಆಗಿದೆ. ಆದರೆ, ಕೊರೊನಾ ಉಂಟು ಮಾಡಿರುವ ತೀವ್ರತೆ ಅಲ್ಲಿಗೇ ನಿಲ್ಲದೇ ನಮ್ಮೆಲ್ಲರ ಮಾನಸಿಕ ಆರೋಗ್ಯವನ್ನೂ ಹದಗೆಡಿಸಿದೆ ಎನ್ನುವುದನ್ನು ಮನೋವೈದ್ಯರೇ ಹೇಳುತ್ತಿದ್ದಾರೆ. ಇದು ಯಾವುದೋ ಒಂದು ದೇಶದ, ಒಂದು ಭಾಗದ ಜನರ ಮೇಲಾದ ಪರಿಣಾಮವಲ್ಲ. ಕೊರೊನಾದಿಂದ ಮಾನಸಿಕ ಆಘಾತವನ್ನು ಅನುಭವಿಸಿದವರು ನಮ್ಮ, ನಿಮ್ಮ ಮನೆಯಲ್ಲೂ ಇರಬಹುದು ಅಥವಾ ಅದು ನಾವೇ ಆಗಿರಬಹುದು. ಇಂತಹ ಸಂದರ್ಭದಲ್ಲಿ ಮಿಕ್ಕೆಲ್ಲಾ ಯೋಚನೆಗಳನ್ನು ಬದಿಗಿಟ್ಟು ಮನಸ್ಸಿನ ಆರೋಗ್ಯದ ಬಗ್ಗೆ ನಿಗಾವಹಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬಹುದು? ಕೊರೊನಾದ ಪರಿಣಾಮಗಳು ಹೇಗಿವೆ ಎನ್ನುವುದನ್ನು ವೈದ್ಯರೊಬ್ಬರು ಇಲ್ಲಿ ಕಟ್ಟಿಕೊಟ್ಟಿದ್ದಾರೆ.

ನಾನು ಕೆಲಸ ಮಾಡುವ ಕೊವಿಡ್ ಐಸಿಯುವಿನಲ್ಲಿ ಎರಡನೇ ಅಲೆ ವೇಳೆಗೆ ಒಬ್ಬ ಮೂವತ್ತು ವರ್ಷದ ಯುವಕನೋರ್ವ ಗಂಭೀರ ಸ್ವರೂಪದ ಕೊರೊನಾಕ್ಕೆ ತುತ್ತಾಗಿ ಅಡ್ಮಿಟ್ ಆಗಿದ್ದ. ಆತನನ್ನು ಮೊದಲು ವೆಂಟಿಲೇಟರ್​ನಲ್ಲಿ ಇಟ್ಟು ಹನ್ನೆರಡು ದಿನಗಳ ನಂತರ ಸಾಮಾನ್ಯ ವಾರ್ಡಿಗೆ ಶಿಫ್ಟ್ ಮಾಡಲಾಯ್ತು. ಐಸಿಯುಗೆ ದಾಖಲಾದ ಒಂದು ವಾರದ ನಂತರ ಒಂದು ರೀತಿಯ ಭಯ ಅವನನ್ನು ಆವರಿಸಿಕೊಂಡಿತ್ತು. ಕಾರಣ ಕೇಳಿದರೆ ಮನೆಯಲ್ಲಿ ನನ್ನ ಒಂದುವರೆ ವರ್ಷದ ಮಗಳಿದ್ದಾಳೆ. ನಾನು ಹುಷಾರಾಗಿ ಹೋಗದೇ ಇದ್ದರೆ ನನ್ನ ಹೆಂಡತಿ ಮಗುವಿನ ಕಥೆಯೇನು? ನಾನು ಮನೆಗೆ ಹೋದ ಮೇಲೆ ನನ್ನಿಂದಾಗಿ ಅವರಿಗೆ ಕೊರೊನಾ ಹರಡಿದರೆ ಏನು ಮಾಡುವುದು? ತಿಂಗಳುಗಟ್ಟಲೆ ಕೆಲೆಸವಿಲ್ಲದೇ ಕುಳಿತುಕೊಂಡರೆ ಮನೆ ನಡೆಸುವುದು ಹೇಗೆ? ಎಂಬೆಲ್ಲಾ ಕಾರಣಗಳಿಂದಾಗಿ ಆತ ಮಾನಸಿಕವಾಗಿ ಕುಗ್ಗಿ ಖಿನ್ನತೆಗೊಳಗಾಗುತ್ತಿದ್ದ. ನಾನು ದಿನವೂ ರೌಂಡ್ಸ್ ಸಮಯದಲ್ಲಿ ಧೈರ್ಯ ತುಂಬುವ ಮಾತುಗಳನ್ನಾಡುತ್ತ ಅವನನ್ನು ಸಂತೈಸುತ್ತಿದ್ದೆ. ಅವನ ಅಣ್ಣನಿಗೂ ರೋಗಿಯನ್ನು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕೆಂದು ಹೇಳುತ್ತಿದ್ದೆ. ನಾನೆಷ್ಟೇ ಪ್ರಯತ್ನ ಪಟ್ಟರೂ ಕೊನೆಗೆ ಮನೋರೋಗ ತಜ್ಞರ ಬಳಿ ಆತ ಕೌನ್ಸಿಲಿಂಗ್​ಗೆ ಹೋಗುವಂತಹ ಹಂತ ತಲುಪುವುದರಿಂದ ತಪ್ಪಿಸಲಾಗಲಿಲ್ಲ. 22 ದಿನಗಳ ನಂತರ ಆತ ಕೊರೊನಾದಿಂದ ಚೇತರಿಸಿಕೊಂಡನಾದರೂ ಅಷ್ಟರಲ್ಲಿ ಆತನಿಗೆ ಮನೋವೈದ್ಯರು ಖಿನ್ನತೆಗಾಗಿ ಮಾತ್ರೆ ಆರಂಭಿಸಿದ್ದರು.

ಕೊರೊನಾ ಶ್ವಾಸಕೋಶಕ್ಕೆ ತಗುಲುವ ರೋಗ ಎಂದು ಮೇಲ್ನೋಟಕ್ಕೆ ಕಂಡರೂ ಅದರ ದೀರ್ಘಕಾಲಿಕ ಪರಿಣಾಮಗಳು ಮನಸ್ಸಿನ ಮೇಲೂ ಆಗುತ್ತದೆ. ಎಲ್ಲೆಲ್ಲೂ ಹರಡಿರುವ ವೈರಸ್​ನ ಭಯ, ಸೋಂಕಿಗೆ ತುತ್ತಾದರೆ ಮನೆಯವರಿಂದ, ಪ್ರೀತಿಪಾತ್ರರಿಂದ ದೂರವಿರಬೇಕಾದ ನೋವು, ಒಂದೇ ಕೋಣೆಯೊಳಗೆ ಹದಿನಾಲ್ಕು ದಿನ ಕುಳಿತುಕೊಳ್ಳಬೇಕಾದ ಅನಿವಾರ್ಯತೆಯಿಂದಾಗಿ ಉಂಟಾಗುವ ಏಕತಾನತೆ, ಕೆಲವರಿಗೆ ಕೆಲಸ ಕಳೆದುಕೊಳ್ಳುವ ಸ್ಥಿತಿ, ಅದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗುವ ಭೀತಿ, ತಮ್ಮ ಮನೆಯವರು, ಬಂಧುಗಳು ಕೊವಿಡ್​ನಿಂದ ಮೃತಪಟ್ಟರೆ ಆಗುವ ದುಃಖ ಇಂಥ ಹಲವಾರು ಕಾರಣಗಳಿಂದ ಕೊರೊನಾ ಕಾಲದಲ್ಲಿ ಒಂದಷ್ಟು ಮಾನಸಿಕ ರೋಗಗಳು ಕಾಣಿಸಿಕೊಳ್ಳುತ್ತಿವೆ ಎನ್ನುವುದನ್ನು ಮನೋಶಾಸ್ತ್ರಜ್ಞರ ಕೆಲ ಅಧ್ಯಯನಗಳು ತೋರಿಸಿಕೊಟ್ಟಿವೆ.

ಟ್ರೈನೆಟ್ ಎಕ್ಸ್ ಎಂಬ ಸಂಶೋಧನಾ ಸಂಸ್ಥೆಯು ಅಮೇರಿಕಾದಲ್ಲಿ 62,534 ಕೊವಿಡ್ ರೋಗಿಗಳ ಜತೆ ಒಂದು ಅಧ್ಯಯನ ನಡೆಸಿತು. ಕೊರೊನಾ ಪಾಸಿಟಿವ್ ಬಂದಾಗಿನಿಂದ 90 ದಿನಗಳವರೆಗೆ ರೋಗಿಗಳನ್ನು ದಿನವೂ ಪರೀಕ್ಷಿಸಿ ಮಾನಸಿಕ ರೋಗಗಳ ಗುಣಲಕ್ಷಣಗಳನ್ನು ಕಂಡು ಹಿಡಿಯಲಾಯಿತು. 90 ದಿನಗಳ ನಂತರ ಬಂದ ವರದಿಯ ಪ್ರಕಾರ 62,534 ಕೊವಿಡ್ ರೋಗಿಗಳಲ್ಲಿ ಶೇ.18.1 ರೋಗಿಗಳು ಮಾನಸಿಕ ಖಾಯಿಲೆಗೆ ತುತ್ತಾಗಿದ್ದಾರೆಂದು ತಿಳಿಯಿತುಅವರಲ್ಲಿ ಶೇ.25.6 ರೋಗಿಗಳು ಖಿನ್ನತೆಯಿಂದ, ಶೇ.19.5 ರೋಗಿಗಳು ಮಾನಸಿಕ ಉದ್ವಿಗ್ನತೆಯಿಂದ, ಶೇ.15.9 ರೋಗಿಗಳು ನಿದ್ರಾಹೀನತೆ, ಒಂಟಿತನ, ಹತಾಶೆಯಿಂದ ಬಳಲುತ್ತಿದ್ದಾರೆಂದು ತಿಳಿದುಬಂತು. ಗಮನಿಸಬೇಕಾದ ಅಂಶವೆಂದರೆ ಕೊವಿಡ್ ಶುರುವಾಗುವ ಮೊದಲು ಈ ಯಾವ ರೋಗಿಗಳಿಗೂ ಯಾವುದೇ ಥರದ ಮಾನಸಿಕ ಖಾಯಿಲೆಗಳಿರಲಿಲ್ಲ ಎಂಬುದನ್ನು ಖಚಿತಪಡಿಸಿಕೊಂಡೇ ಅಧ್ಯಯನ ನಡೆಸಲಾಗಿತ್ತು.

ಮಾನಸಿಕ ಸಮಸ್ಯೆ ಎದುರಿಸುತ್ತಿರುವ ಶೇ.80ರಷ್ಟು ಮಂದಿ ಯುವ ಸಮುದಾಯದವರು
ಕೊರೊನಾ ಕಾರಣದಿಂದ ಉಂಟಾದ ಮಾನಸಿಕ ಸಮಸ್ಯೆಗಳಿಂದ ಬಳಲುವವರ ಸಂಖ್ಯೆ ಭಾರತದಲ್ಲೂ ಕಡಿಮೆಯಿಲ್ಲ. ಭಾರತದ ಪ್ರಸಿದ್ಧ ಮನೋವೈದ್ಯರು ಹೇಳುವ ಪ್ರಕಾರ ಖಿನ್ನತೆ, ಮಾನಸಿಕ ಉದ್ವಿಗ್ನತೆ, ಒಂಟಿತನದಿಂದ ಬಳಲುತ್ತಾ ಸಹಾಯ ಯಾಚಿಸಿ ನಿಮ್ಹಾನ್ಸ್ ಸಹಾಯವಾಣಿಗೆ ಕರೆ ಮಾಡುವವರ ಸಂಖ್ಯೆಯಲ್ಲಿ ಶೇ.40ರಷ್ಟು ಏರಿಕೆಯಾಗಿದೆ. ಇವರು ಯಾರೂ ಕೊರೊನಾ ಪೂರ್ವದಲ್ಲಿ ಯಾವುದೇ ರೀತಿಯ ಮಾನಸಿಕ ಸಮಸ್ಯೆಗಳಿಂದ ತೊಂದರೆಗೊಳಗಾದವರಲ್ಲ. ಮುಂಬೈ ನಗರವೊಂದರಿಂದಲೇ ದಿನಕ್ಕೆ 80ರಿಂದ100 ಫೋನ್ ಕರೆಗಳು ಸಹಾಯವಾಣಿಗೆ ಬರುತ್ತಿವೆ. ಅದರಲ್ಲಿ ಚಿಂತೆಗೀಡು ಮಾಡುವ ಮುಖ್ಯ ಸಂಗತಿಯೆಂದರೆ ಕರೆ ಮಾಡುವವರಲ್ಲಿ ಶೇ.80ರಷ್ಟು ಜನರು 18ರಿಂದ40 ವರ್ಷ ವಯೋಮಾನದವರು. ಅಂದರೆ ಆರ್ಥಿಕ ಉತ್ಪಾದಕ ವರ್ಗಕ್ಕೆ (Economically productive population) ಸೇರಿದ ಜನರು. ಇಂತಹ ಯುವ ಸಮುದಾಯವೇ ಕೊರೋನಾದಿಂದಾಗಿ ಲಾಕ್​​ಡೌನ್ ಸಮಯದಲ್ಲಿ ಮಾನಸಿಕ ವ್ಯಾಧಿಗೆ ತುತ್ತಾಗುತ್ತಿದ್ದಾರೆ.

ಕೊರೊನಾಕ್ಕೆ ತುತ್ತಾಗುವ ಭಯ, ಉದ್ಯೋಗ ಕಳೆದುಕೊಳ್ಳುವ ಭಯ, ತಮ್ಮ ಪ್ರೀತಿಪಾತ್ರರು ಕೊರೊನಾದಿಂದಾಗಿ ಮೃತಪಟ್ಟಾಗ ಸರ್ಕಾರದ ಕಾನೂನಿನ ಕಾರಣ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನಡೆಸಲು ಸಾಧ್ಯವಾಗದಿರುವ ಹತಾಶೆ ಕೂಡಾ ಭಾರತೀಯರ ಮನಸ್ಸಿಗೆ ಈ ಕಾಲದಲ್ಲಿ ಹೆಚ್ಚು ಘಾಸಿ ಮಾಡುತ್ತಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ನಾಲ್ಕು ಹಂತದಲ್ಲಿ ಪರಿಹಾರ ನೀಡಬಹುದು
ಆದರೆ, ಮನೋರೋಗದ ಗುಣಲಕ್ಷಣಗಳು ಕಾಣಿಸಿಕೊಂಡಾಗ ಹೆದರಬೇಕಾದ ಅಗತ್ಯವಿಲ್ಲ. ಮನೋವೈದ್ಯರ ಪ್ರಕಾರ ನಾಲ್ಕು ಹಂತಗಳಲ್ಲಿ ಪರಿಹಾರ ಹುಡುಕಬಹುದಾಗಿದೆ. ಮನಸ್ಸಿನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಸಂಶಯ ಬಂದಕೂಡಲೇ ಮೊದಲ ಹಂತದಲ್ಲಿ ನಮ್ಮನ್ನು ನಾವೇ ಚೆನ್ನಾಗಿ ನೋಡಿಕೊಳ್ಳಬೇಕು (Self care). ಅಗತ್ಯ ಅಂತಹ ಪರಿಸ್ಥಿತಿಯಲ್ಲಿ ಮಾಮೂಲಿ ಕೆಲಸಕ್ಕೆ ರಜೆ ಹಾಕಿ ವಿಶ್ರಾಂತಿ ಪಡೆಯುವುದು, ಇಷ್ಟವಾದ ಆಹಾರ ಸೇವಿಸುವುದು, ಒಳ್ಳೆಯ ಸಿನಿಮಾ ನೋಡುವುದು, ಪುಸ್ತಕ ಓದುವುದು, ವ್ಯಾಯಾಮ ಮಾಡುವುದು, ಸಾಮಾಜಿಕ ಜಾಲತಾಣಗಳಿಂದ ಕೆಲದಿನ ದೂರವಿರುವುದು ಹೀಗೆ ಮನಸ್ಸಿಗೆ ಕೆಲ ಬದಲಾವಣೆ ನೀಡಬೇಕು. ಅನೇಕ ಸಲ ಮನಸ್ಸು ಸ್ಥಿರವಾಗಲು ಇವಷ್ಟೇ ಸಾಕಾಗಬಹುದು. ಇಷ್ಟಾದರೂ ತೊಂದರೆ ಕಂಡುಬಂದರೆ ನಮ್ಮ ಕುಟುಂಬ ಸದಸ್ಯರ ಜತೆ, ಆತ್ಮೀಯರ ಜತೆ ನಮ್ಮ ಭಾವನೆಗಳನ್ನು ಹಂಚಿಕೊಂಡು ತೊಳಲಾಟಗಳನ್ನು ಹೊರಹಾಕಬೇಕು. ಆಗ ಅವರು ಸೂಚಿಸುವ ಸಾಧಾರಣ ಉಪಾಯಗಳು, ಆಡುವ ಸಾಂತ್ವಾನದ ಮಾತುಗಳು ಕೂಡಾ ಧೈರ್ಯ ಹೆಚ್ಚಿಸಬಲ್ಲವು.

ಒಂದುವೇಳೆ ಇದರ ನಂತರವೂ ಸಮಸ್ಯೆ ಮುಂದುವರೆದಲ್ಲಿ ಮೂರನೇ ಹಂತದಲ್ಲಿ ಆಪ್ತಸಮಾಲೋಚಕರನ್ನು ಭೇಟಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಆಪ್ತಸಮಾಲೋಚಕರು ಸಲಹೆ ನೀಡಿದರೆ ಅಂತಿಮ ಹಂತದಲ್ಲಿ ಮನೋರೋಗ ತಜ್ಞರನ್ನು ಭೇಟಿಯಾಗಿ ಅವರು ಕೊಡುವ ಚಿಕಿತ್ಸೆ ಪಡೆಯಬೇಕಾಗುತ್ತದೆ. ಹೀಗೆ ಮಾನಸಿಕ ಸಮಸ್ಯೆಗಳಿಗೆ ಹಂತ ಹಂತವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.

ಚಿಕಿತ್ಸೆ ನೀಡುವ ವೈದ್ಯರೂ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ
ಕೊರೊನಾ ಸಮಯದಲ್ಲಿ ಮಾನಸಿಕ ಸಮಸ್ಯೆಗೆ ತುತ್ತಾಗುತ್ತಿರುವುದು ಸಾಮಾನ್ಯ ಜನರು, ರೋಗಿಗಳು ಮಾತ್ರವಲ್ಲ. ಕೊವಿಡ್ ಐಸಿಯು, ವಾರ್ಡ್​ಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ಶುಶ್ರೂಷಕರು ಕೂಡ ಇಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದರ ಪರಿಣಾಮ ಅವರ ಕೆಲಸದ ಮೇಲೂ ಆಗುತ್ತಿದೆ ಎನ್ನುವುದು ಗಂಭೀರ ವಿಚಾರ. ಕೊವಿಡ್ ಐಸಿಯುಗಳಲ್ಲಿ ಕೆಲಸ ಮಾಡುತ್ತ ತಮ್ಮ ನಿಯಂತ್ರಣ ಮೀರಿ ಸಾಯುವ ರೋಗಿಗಳನ್ನು ನೋಡುತ್ತ ಖಿನ್ನತೆಗೊಳಗಾದ ವೈದ್ಯರು, ಆರೋಗ್ಯ ಕಾರ್ಯಕರ್ತರಿದ್ದಾರೆ. ಎಲ್ಲರೂ ಖಿನ್ನತೆಗೊಳಗಾಗಿದ್ದಾರೆ, ಸ್ಥಿಮಿತ ಕಳೆದುಕೊಂಡಿದ್ದಾರೆ ಎನ್ನುವುದು ಅಸಾಧ್ಯವಾದರೂ ಯಾವುದೋ ಒಂದು ರೀತಿಯ ಖಾಲಿತನ, ನಿರಾಶೆ ಕೆಲವರನ್ನು ಆವರಿಸಿದ್ದಂತೂ ಸುಳ್ಳಲ್ಲ. ಕೊರೊನಾ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿ ನಿಂತವರೇ ಸ್ಥೈರ್ಯ ಕಳೆದುಕೊಂಡು ಬಿಟ್ಟರೆ ರೋಗಿಗಳ ಕಥೆ ಏನಾಗಬೇಕು ಎನ್ನುವುದು ನಿಜಕ್ಕೂ ಆತಂಕಕಾರಿ ಸಂಗತಿಯೇ.

ಮುಂಬೈನ ಪ್ರಸಿದ್ಧ ಆಸ್ಪತ್ರೆಯೊಂದರ ಮನೋರೋಗ ತಜ್ಞರು ಹೇಳುವ ಪ್ರಕಾರ ಅವರಲ್ಲಿ ಚಿಕಿತ್ಸೆಗೆ ಬರುವವರ ಪೈಕಿ ಶೇ.30 ರೋಗಿಗಳು ಕೊವಿಡ್ ಡ್ಯೂಟಿ ಮಾಡುತ್ತಿರುವ ವೈದ್ಯರು. ಅಂಥ ವೈದ್ಯರಲ್ಲಿ ಶೇ.40ರಷ್ಟು ವೈದ್ಯರು ಖಿನ್ನತೆಯಿಂದಲೂ, ಶೇ.30ರಷ್ಟು ವೈದ್ಯರು ಮಾನಸಿಕ ಉದ್ವಿಗ್ನತೆಯಿಂದಲೂ, ಶೇ.20ರಷ್ಟು ವೈದ್ಯರು ನಿದ್ರಾಹೀನತೆ, ಒಂಟಿತನ, ಹತಾಶೆಯಿಂದ ಬಳಲುತ್ತಿರುವುದು ಗೊತ್ತಾಗಿದೆ. ಇನ್ನು ಮಾನಸಿಕ ಸಮಸ್ಯೆಗೆ ಒಳಗಾದ ಶೇ.10ರಷ್ಟು ಜನರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಗಳೂ ಬಂದಿವೆ ಎನ್ನುವುದು ಗಮನಾರ್ಹ ವಿಚಾರ.

ಕೊವಿಡ್ ಡ್ಯೂಟಿ ಮಾಡುವ ಸಂದರ್ಭದಲ್ಲಿ ತಾವು ರೋಗಕ್ಕೆ ತುತ್ತಾದರೆ ಎಂಬ ಭಯ, ತಮ್ಮಿಂದ ತಮ್ಮ ಮನೆಯವರಿಗೆ ಕೊರೊನಾ ಬರಬಹುದು ಎಂಬ ಆತಂಕ, ತಿಂಗಳುಗಟ್ಟಲೆ ಮನೆಯಿಂದ ದೂರವಿರುವಾಗ ಕಾಡುವ ಒಂಟಿತನ, ದಿನವೂ ಒಂದೇ ಥರದ ರೋಗಿಗಳನ್ನು ನೋಡಬೇಕಾದ ಏಕತಾನತೆ, ತಮ್ಮೆಲ್ಲ ಪ್ರಯತ್ನಗಳ ನಂತರವೂ ಕೆಲವು ರೋಗಿಗಳನ್ನು ರಕ್ಷಿಸಲಾಗದ ಅಸಹಾಯಕತೆ ಇವೆಲ್ಲವೂ ಕೊವಿಡ್ ಡ್ಯೂಟಿ ಮಾಡುವ ವೈದ್ಯರು ಮಾನಸಿಕ ಸಮಸ್ಯೆಗಳಿಗೆ ತುತ್ತಾಗಲು ಪ್ರಮುಖ ಕಾರಣ ಎನ್ನುವುದು ಮನೋವೈದ್ಯರ ಅಭಿಪ್ರಾಯ.

ಒಂಟಿತನ, ಖಿನ್ನತೆ, ಅವಮಾನ, ಅಸಹಾಯಕತೆ..
ಮುಂಬೈನ ಪ್ರಮುಖ ಸರ್ಕಾರಿ ಆಸ್ಪತ್ರೆಯಲ್ಲಿ ಕೊವಿಡ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಸರು ಹೇಳಲು ಇಚ್ಛಿಸದ ವೈದ್ಯರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ಹೇಳುವಂತೆ ಕೊವಿಡ್ ಮೊದಲನೇ ಅಲೆಯಲ್ಲಿ ಅವರಿಗೆ ಬೇಕಾದ ಪಿಪಿಇ ಕಿಟ್ ಬೇಕಾದಷ್ಟು ಸಂಖ್ಯೆಯಲ್ಲಿ ಲಭ್ಯವಿರಲಿಲ್ಲ. ಆದರೆ, ಪಿಪಿಇ ಕಿಟ್ ಇಲ್ಲದೆ ಐಸಿಯುಗಳಲ್ಲಿ ಕೆಲಸ ಮಾಡಲು ಆಡಳಿತ ಮಂಡಳಿ ಒತ್ತಾಯಿಸಿದೆ. ಕೆಮ್ಮು, ಜ್ವರ, ನೆಗಡಿಯಂಥ ಕೊವಿಡ್ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ ಎಂದರೂ ಉಸಿರಾಡಲು ತೊಂದರೆ ಆಗುವ ತನಕ ಕೊವಿಡ್ ಟೆಸ್ಟ್ ಮಾಡಿಸಲು ಅನುಮತಿ ಕೊಡದೇ ಆಡಳಿತ ಮಂಡಳಿ ಬಿಗಿಪಟ್ಟು ಹಿಡಿದಿದೆ. ಕೆಲಸ ಮಾಡುವ ವೈದ್ಯರಿಗೆ ಕೊವಿಡ್ ಪಾಸಿಟಿವ್ ಬಂದರೆ ಅವರಿಗೆ ಅನಿವಾರ್ಯವಾಗಿ ರಜೆ ನೀಡಬೇಕಾಗುತ್ತದೆಂದು ಆಡಳಿತ ಮಂಡಳಿ ಇಂತಹ ನಿರ್ಧಾರ ತೆಗೆದುಕೊಂಡಿತ್ತಂತೆ. ಇನ್ನೂ ಕಳವಳಕಾರಿ ಎಂದರೆ ಆಸ್ಪತ್ರೆ ಆಡಳಿತ ಮಂಡಳಿಯ ನಿಲುವಿನಿಂದ ಬಹಳಷ್ಟು ವೈದ್ಯರು ಮಾನಸಿಕ ಕಿರಿಕರಿ ಅನುಭವಿಸಿ ಖಿನ್ನತೆಗೊಳಗಾದಾಗ ಅವರ ಮನೋರೋಗದ ಬಗ್ಗೆ ಅದೇ ಆಸ್ಪತ್ರೆಯಲ್ಲಿ ನಕ್ಕು ಗೇಲಿ ಮಾಡಿದವರಿದ್ದಾರಂತೆ. ಬಹುಶಃ ಇದು ಕೇವಲ ಒಂದು ಆಸ್ಪತ್ರೆಯ, ಒಂದು ವೈದ್ಯರ ವ್ಯಥೆಯಲ್ಲ.

ರೋಗಿಗಳ ಸಂಖ್ಯೆ ಜಾಸ್ತಿ ಇರುವ ಭಾರತದ ಪ್ರಮುಖ ಆಸ್ಪತ್ರೆಗಳಲ್ಲಿ ಕೊವಿಡ್ ಮೊದಲನೇ ಅಲೆಯಲ್ಲಿ ಇದೇ ಸ್ಥಿತಿ ಇತ್ತು. ಇದರಿಂದ ಖಿನ್ನತೆಗೆ, ಉದ್ವಿಗ್ನತೆಗೆ ಒಳಗಾಗಿ ಆತ್ಮಹತ್ಯೆಯ ಆಲೋಚನೆ ಮಾಡಿದ ವೈದ್ಯರ ಸಂಖ್ಯೆಯೂ ಜಾಸ್ತಿಯಿದೆ. ಏಪ್ರಿಲ್ ತಿಂಗಳಾಂತ್ಯದಲ್ಲಿ ದೆಹಲಿಯ ಆಸ್ಪತ್ರೆಯೊಂದರಲ್ಲಿ ಕೊವಿಡ್ ಡ್ಯೂಟಿ ಮಾಡುತ್ತಿದ್ದ ಯುವ ವೈದ್ಯರೊಬ್ಬರು ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದರು. ದಿನಕ್ಕೆ ಹತ್ತರಿಂದ ಹನ್ನೆರಡು ತಾಸು ಕೆಲಸ ಮಾಡಿದ್ದರಿಂದ ಉಂಟಾದ ಕಾರ್ಯದ ಒತ್ತಡ, ದಿನವೂ ಕಣ್ಣಮುಂದೆಯೇ ಸಾಯುತ್ತಿದ್ದ ರೋಗಿಗಳನ್ನು ಉಳಿಸಿಕೊಳ್ಳಲಾಗದ ಅಸಹಾಯಕತೆಯಿಂದ, ಮನೆಯಿಂದ ದೂರವಿರುವ ಕಾರಣಕ್ಕೆ ಉಂಟಾದ ಒಂಟಿತನದಿಂದಾಗಿ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ವೈದ್ಯರು ಕೊನೆಗೆ ಬೇಸತ್ತು ಜೀವವನ್ನೇ ಕಳೆದುಕೊಂಡಿದ್ದರು.

ಈ ಅಂಕಿ ಅಂಶಗಳನ್ನೆಲ್ಲಾ ಗಮನಿಸಿದಾಗ ಕೊರೊನಾ ತಡೆಗಟ್ಟುವುದು ಎಷ್ಟು ಮುಖ್ಯವೋ ಈ ಸಂದರ್ಭದಲ್ಲಿ ಕೊವಿಡ್​ ವಾರಿಯರ್ಸ್​ ಸೇರಿದಂತೆ ಎಲ್ಲರ ಮಾನಸಿಕ ಸ್ವಾಸ್ಥ್ಯ ಕಾಪಾಡುವುದೂ ಅಷ್ಟೇ ಮುಖ್ಯ. ವೈದ್ಯರಿಗೆ ಅಗತ್ಯ ಪರಿಕರಗಳನ್ನು ನೀಡಿ, ಅನಗತ್ಯ ಒತ್ತಡ ಹೇರದಂತೆ ನೋಡಿಕೊಂಡು ಅವರ ಮಾನಸಿಕ ಆರೋಗ್ಯ ಕಾಪಾಡಲಿಕ್ಕೆಂದೇ ಪ್ರತ್ಯೇಕ ತಂಡ ರಚಿಸಿ ಅಗತ್ಯವಿದ್ದರೆ ಆಪ್ತ ಸಮಾಲೋಚನೆ ಕೊಡುವತ್ತಲೂ ಸಂಸ್ಥೆಗಳು ಗಮನಹರಿಸಬೇಕು. ಅಂತೆಯೇ ಜನ ಸಾಮಾನ್ಯರಿಗೂ ಕುಟುಂಬ ವರ್ಗ ಹಾಗೂ ಅವರು ಕಾರ್ಯ ನಿರ್ವಹಿಸುವ ಸಂಸ್ಥೆಗಳು ಈ ವಿಚಾರವಾಗಿ ಸಾಕಷ್ಟು ಗಮನ ಹರಿಸಬೇಕು.

ಜನರ ಮಾನಸಿಕ ಆರೋಗ್ಯ ಕಾಪಾಡುವುದು ಸರ್ಕಾರದ ಮುಂದಿರುವ ಸವಾಲು
ಪ್ರಸ್ತುತ ಪರಿಸ್ಥಿತಿಯಲ್ಲಿ ಸರ್ಕಾರವೂ ಮುಂದೆ ನಿಂತು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ವ್ಯವಸ್ಥಿತವಾಗಿ ಸಹಾಯವಾಣಿ ಆರಂಭಿಸಬೇಕು. ಈಗಾಗಲೇ ಕೆಲ ರಾಜ್ಯಗಳು ಇಂತಹ ಪ್ರಯತ್ನ ಮಾಡಿವೆಯಾದರೂ ಅವು ಅಷ್ಟೊಂದು ಕ್ರಿಯಾಶೀಲವಾಗಿಲ್ಲ. ಹೀಗಾಗಿ ಈ ಬಗ್ಗೆ ಹೆಚ್ಚು ಗಮನ ನೀಡಬೇಕು. ಜತೆಗೆ ದೇಶಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಎಲ್ಲ ಕಾರ್ಯಕರ್ತರಿಗೆ ಆಗಾಗ ಕರೆ ಮಾಡಿ ಸಮಸ್ಯೆಗಳಿದ್ದರೆ ಆಲಿಸಿ ಪರಿಹಾರ ನೀಡುವ ಪ್ರಯತ್ನ ಆಗಬೇಕು. ಅಲ್ಲದೇ ಯಾವುದೇ ವ್ಯಕ್ತಿಯ ಮೇಲೆ ಆಗುವ ಮಾನಸಿಕ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಿ ಹಾಗಾಗದಂತೆ ನೋಡಿಕೊಳ್ಳಬೇಕು. ದೈಹಿಕ ಸಮಸ್ಯೆಗಳ ಗುಣಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ನೀಡುವುದು ಅಷ್ಟಾಗಿ ಕಷ್ಟಕರವಲ್ಲ. ಆದರೆ, ಮಾನಸಿಕ ಸಮಸ್ಯೆಗಳನ್ನು ಕಂಡುಹಿಡಿದು ಚಿಕಿತ್ಸೆ ನೀಡುವುದು ಸವಾಲಿನ ವಿಷಯವೇ. ಅದರಲ್ಲೂ ಎಷ್ಟೋ ಮಂದಿ ಒಳಗೊಳಗೇ ಕೊರಗುತ್ತಾ ನೋವು ಅನುಭವಿಸುವುದರಿಂದ ಸಮಯಕ್ಕೆ ಸರಿಯಾಗಿ ಸಹಾಯ ನೀಡುವುದೂ ಕಷ್ಟ. ಈ ವಿಚಾರದಲ್ಲಿ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸ ದೊಡ್ಡಮಟ್ಟದಲ್ಲಿ ಆಗಬೇಕಿದೆ. ಚಿಕಿತ್ಸೆಗೆ ರೋಗಿ ಸಹಕರಿಸುವ ಜತೆಗೆ ಅವರ ಮನೆಯವರ, ಸ್ನೇಹಿತರ ಬೆಂಬಲವೂ ಬೇಕು.

ಸದ್ಯ ಯಾವುದೇ ವ್ಯಕ್ತಿ ಕೊರೊನಾದಿಂದ ಗುಣಮುಖವಾದರೂ, ಹತ್ತಿರದಲ್ಲಿ ಆದ ಅವಘಡಗಳನ್ನು ನೋಡಿ ಸಮಾಧಾನಿಸಿಕೊಂಡಿದ್ದರೂ ಅವರ ಮಾನಸಿಕ ಆರೋಗ್ಯದ ಮೇಲೆ ಹೆಚ್ಚುವರಿ ಗಮನ ನೀಡಲೇಬೇಕಾದ ಅನಿವಾರ್ಯತೆ ಇದೆ. ಈ ಸಮಸ್ಯೆಗಳತ್ತ ಗಂಭೀರವಾಗಿ ಯೋಚಿಸುವ ಅವಶ್ಯಕತೆ ಹಿಂದಿನಿಂದಲೂ ಇತ್ತಾದರೂ ಈಗ ಕೊರೊನಾ ಹೆಳೆಯಲ್ಲಿ ಅದಕ್ಕೊಂದು ನಿರ್ದಿಷ್ಟ ರೂಪ ಕೊಡುವ ತುರ್ತು ಅಗತ್ಯವಿದೆ. ದೇಹಕ್ಕಾದ ನೋವಿಗೆ ಚುಚ್ಚುಮದ್ದು ಕೆಲಸ ಮಾಡಬಹುದು ಆದರೆ ಮನಸ್ಸಿಗೆ ನಾಟುವ ಮುಳ್ಳನ್ನು ಬಹು ಜೋಪಾನವಾಗಿಯೇ ತೆಗೆಯಬೇಕು.

ಲೇಖಕರು: ಲಕ್ಷ್ಮೀಶ ಜೆ.ಹೆಗಡೆ
ಅಂಕಿ ಅಂಶಗಳ ಮಾಹಿತಿ: ಡಾ. ಪ್ರಶಾಂತ್ ಚೌಧರಿ

ಇದನ್ನೂ ಓದಿ:
ನಿಮ್ಮ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಗಮನ ವಹಿಸುತ್ತಿದ್ದೀರಾ? ಎಳೆ ಮನಸ್ಸುಗಳಿಗೆ ಗಾಯವಾಗದಂತೆ ನೋಡಿಕೊಳ್ಳುವುದು ಮುಖ್ಯ 

ವರ್ಕ್​ ಫ್ರಂ ಹೋಮ್​ನಿಂದ ಮನಸ್ಸು ಭಾರವೆನಿಸಿರಬಹುದು! ಅನಗತ್ಯ ಚಿಂತೆ ಹೋಗಲಾಡಿಸಲು ಇಲ್ಲಿದೆ ಸಲಹೆಗಳು