ನಿಮ್ಮ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಗಮನ ವಹಿಸುತ್ತಿದ್ದೀರಾ? ಎಳೆ ಮನಸ್ಸುಗಳಿಗೆ ಗಾಯವಾಗದಂತೆ ನೋಡಿಕೊಳ್ಳುವುದು ಮುಖ್ಯ

ದೈಹಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಆಗುವ ಬದಲಾವಣೆಗಳು ಹೇಗೆ ಬೆಳವಣಿಗೆಗೆ ಅಡ್ಡಗಾಲೋ ಅಷ್ಟೇ ಅಥವಾ ಅದಕ್ಕಿಂತಲೂ ತುಸು ಗಂಭೀರವಾದದ್ದು ಮಾನಸಿಕ ಒತ್ತಡ. ಮಾನಸಿಕವಾಗಿ ಉಂಟಾಗುವ ವೇದನೆಗಳು ಕ್ಷಣಿಕವಲ್ಲ. ಅವು ದೀರ್ಘಕಾಲದ ತನಕ ಸರ್ವತೋಮುಖ ಬೆಳವಣಿಗೆಯನ್ನೇ ಮೊಟಕುಗೊಳಿಸಬಲ್ಲವು.

ನಿಮ್ಮ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಗಮನ ವಹಿಸುತ್ತಿದ್ದೀರಾ? ಎಳೆ ಮನಸ್ಸುಗಳಿಗೆ ಗಾಯವಾಗದಂತೆ ನೋಡಿಕೊಳ್ಳುವುದು ಮುಖ್ಯ
ಸಾಂಕೇತಿಕ ಚಿತ್ರ
Follow us
Dr Lakshmeesha J Hegade
| Updated By: Skanda

Updated on: Jun 09, 2021 | 3:38 PM

ಸ್ನೇಹಿತರೊಬ್ಬರು ಫೇಸ್ಬುಕ್ಕಿನಲ್ಲಿ ಬರೆದಿದ್ದರು. ನಾನಿರುವುದು ಬೆಂಗಳೂರಿನಲ್ಲಿ. ಒಂದು ದಿನ ಸಂಜೆ ನನ್ನ ಮೂರು ವರ್ಷದ ಮಗ ಬಂದು ನನ್ನ ಕೈ ಹಿಡಿದು ಎಳೆಯಲಾರಂಭಿಸಿದ. ಅಪ್ಪಾ ಬಾ ಪಾರ್ಕಿಗೆ ಹೋಗೋಣ, ಆಟ ಆಡ್ಬೇಕು, ಮನೆಯಲ್ಲಿ ಆಡೋಕೆ ಜಾಗ ಇಲ್ಲ, ಹೊರಗಡೆ ಕರೆದುಕೊಂಡು ಹೋಗು ಅಂತ ಅಳಲಾರಂಭಿಸಿದ. ಅವನಿಗೆ ಲಾಕ್​ಡೌನ್​ ಶುರುವಾಗುವುದಕ್ಕೂ ಮುಂಚೆ ಹೊರಗೆ ಹೋಗಿ ಸಂಜೆ ಪಾರ್ಕಿನಲ್ಲಿ ಆಟ ಆಡುವುದು ಅಭ್ಯಾಸವಾಗಿಬಿಟ್ಟಿತ್ತು. ಎರಡನೇ ಅಲೆಯಲ್ಲಿ ಮತ್ತೆ ಲಾಕ್​ಡೌನ್ ವಿಧಿಸಿದ್ದರಿಂದ ಅನಿವಾರ್ಯವಾಗಿ ಮನೆಯೊಳಗೇ ಕಾಲ ಕಳೆಯಬೇಕಾದ ಪರಿಸ್ಥಿತಿ ನನ್ನ ಮಗನದ್ದು. ಯಾರನ್ನೂ ಭೇಟಿಯಾಗದೇ, ಹೊರಗೆ ಹೋಗದೆ ನಾವು ದೊಡ್ಡವರು ಹೇಗೋ ಇದ್ದುಬಿಡುತ್ತೇವೆ. ಆದರೆ ಮಕ್ಕಳಿಗೆ ಅದು ಅಷ್ಟು ಸುಲಭವಲ್ಲ. ಮನೆಯೊಳಗೇ ಇದ್ದು ಅವರು ಅನುಭವಿಸುವ ಮಾನಸಿಕ ಯಾತನೆಯನ್ನು ನೋಡಿಯೂ ಏನೂ ಮಾಡಲಾಗದ ದಯನೀಯ ಸ್ಥಿತಿ ನಮ್ಮಂಥ ಪೋಷಕರದ್ದು. ಬೆಳೆಯುವ ವಯಸ್ಸಿನಲ್ಲಿ ಹೊರಗಡೆ ಹೋಗಿ ಆಡದಿದ್ದರೆ, ಇತರ ಮಕ್ಕಳೊಂದಿಗೆ ಬೆರೆಯದಿದ್ದರೆ ಅವರ ವ್ಯಕ್ತಿತ್ವ ಮತ್ತು ಮಾನಸಿಕತೆಯ ಮೇಲಾಗುವ ಪರಿಣಾಮ ಕೆಲವೊಮ್ಮೆ ಭೀಕರವಾಗಿರುತ್ತದೆ. ಈ ಕಾರಣಕ್ಕಾಗಿಯಾದರೂ ಆದಷ್ಟು ಬೇಗ ಲಾಕ್​ಡೌನ್ ಮುಗಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬಹುಶಃ ಸಣ್ಣ ಮಕ್ಕಳಿರುವ ಎಲ್ಲ ಪೋಷಕರೂ ಈ ಮಾತುಗಳನ್ನು ಅನುಮೋದಿಸುತ್ತಾರೆ.

ಲಾಕ್​ಡೌನ್​ನಿಂದಾಗಿ ನೆಲಕಚ್ಚಿದ ಉದ್ಯಮಗಳಿಗೆ ಲೆಕ್ಕವೇ ಇಲ್ಲ. ದೊಡ್ಡ ದೊಡ್ಡ ನಗರಗಳಲ್ಲಿ ತಿಂಗಳಿಗೆ ಲಕ್ಷಗಟ್ಟಲೆ ಎಣಿಸುತ್ತ ಬದುಕುತ್ತಿದ್ದವರೆಲ್ಲ ತಮ್ಮ ಹುಟ್ಟೂರಿಗೆ, ಹಳ್ಳಿಗೆ ಬಂದು ತಾವು ಇಲ್ಲಿಯ ತನಕ ಒಮ್ಮೆಯೂ ಮಾಡದ, ಹಿಂದೆ ಒಂದು ಸಲ ಬೇಡ ಎಂದು ಧಿಕ್ಕರಿಸಿ ಹೋದ ಕೆಲಸ ಮಾಡಲಾರಂಭಿಸಿದ್ದಾರೆ. ಕೋಟಿಗಟ್ಟಲೆ ಸಾಲ ತೆಗೆದು ಕಷ್ಟದಿಂದ ಶುರು ಮಾಡಿದ್ದ ಸ್ಟಾರ್ಟ್ ಅಪ್ ಸಂಸ್ಥೆಗಳು ಲಾಕ್​ಡೌನ್ ಹೊಡೆತಕ್ಕೆ ಸಿಕ್ಕಿ ಚೇತರಿಸಿಕೊಳ್ಳಲಾರದ ಹಂತ ತಲುಪಿವೆ. ಗಿಜಿಗುಡುವ ಹೊಟೇಲ್​ಗಳಲ್ಲಿ ಬಗೆಬಗೆಯ ಸ್ವಾದಿಷ್ಟ ಖಾದ್ಯಗಳನ್ನು ತಯಾರಿಸುತ್ತಿದ್ದ ನುರಿತ ಬಾಣಸಿಗರೆಲ್ಲ ಮನೆಯಲ್ಲಿ ಗಂಜಿ ಬೇಯಿಸುತ್ತ ತಾವು ಕಲಿತ ಅಡುಗೆ ಮರೆತು ಹೋಗದಿರಲಿ ಎಂದು ಆಶಿಸುತ್ತಿದ್ದಾರೆ. ಸಾವಿರಾರು ಭಕ್ತಾದಿಗಳಿಂದ ನಾನಾ ಬಗೆಯ ಧಾರ್ಮಿಕ ಸೇವೆ ಮಾಡಿಸಿಕೊಳ್ಳುತ್ತಿದ್ದ ದೇವಸ್ಥಾನದ ದೇವರದ್ದೂ ಪ್ರತಿದಿನ ಬರಿ ಅರ್ಚಕರನ್ನಷ್ಟೇ ನೋಡುವ ಸ್ಥಿತಿ.

ಕಳೆದ ಒಂದೂವರೆ ವರ್ಷದಲ್ಲಿ ಇವೆಲ್ಲಕ್ಕಿಂತ ಅತೀ ಹೆಚ್ಚು ಹಾನಿಗೊಳಗಾಗಿದ್ದು ಶಿಕ್ಷಣ ವ್ಯವಸ್ಥೆ. ಎಲ್ಲಿ ನೋಡಿದರೂ ಆನ್ಲೈನ್ ಕ್ಲಾಸುಗಳು. ಇನ್ನೇನು ಲಾಕ್​ಡೌನ್ ಮುಗಿದು ಕ್ರಮೇಣವಾಗಿ ಶಾಲೆ, ಕಾಲೇಜುಗಳು ಆರಂಭವಾಗುವಷ್ಟರಲ್ಲಿ ಎರಡನೇ ಅಲೆ ಬಂದು ಭೀಕರವಾಗಿ ಅಪ್ಪಳಿಸಿ ಮತ್ತೆ ವಿದ್ಯಾಲಯಗಳ ಬಾಗಿಲು ಮುಚ್ಚಿಸಿತು. ಹತ್ತನೆ ತರಗತಿ, ದ್ವಿತೀಯ ಪಿಯುಸಿ ಪರೀಕ್ಷೆಗಳೇ ರದ್ದಾಗುವ ದುಸ್ಥಿತಿ ನಿರ್ಮಾಣವಾಗಿದೆ. ಒಳ್ಳೆಯ ಅಂಕ ಗಳಿಸಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಕನಸು ಹೊತ್ತಿದ್ದವರಿಗೆಲ್ಲ ನಿಜಕ್ಕೂ ಆಘಾತವಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗಿದ್ದಕ್ಕೆ ಖಿನ್ನತೆಗೊಳಗಾಗಿ ನೊಂದು ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿಯೂ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಯಾರು ಕಾರಣ? ಸದ್ಯ ಸರ್ಕಾರವನ್ನಾಗಲೀ ವ್ಯವಸ್ಥೆಯನ್ನಾಗಲೀ ದೂರುವಂತಿಲ್ಲ. ಎಲ್ಲರೂ ಅಸಹಾಯಕರು.

ಆದರೆ, ಈ ಪರಿಸ್ಥಿತಿಯಲ್ಲಿ ಪರೀಕ್ಷೆ ಬರೆಯಲಾಗುತ್ತಿಲ್ಲ ಮುಂದೇನು ಎನ್ನುವುದಷ್ಟೇ ಸವಾಲಲ್ಲ. ಬದಲಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬೌದ್ಧಿಕ ವಿಕಸನದತ್ತ ಹೆಜ್ಜೆ ಹಾಕಬೇಕಾಗಿದ್ದ ಮಕ್ಕಳು ಯಾರೊಂದಿಗೂ ಬೆರೆಯಲಾಗದೇ ಮನೆಯಲ್ಲಿ ಕುಳಿತು ಖಿನ್ನತೆಗೊಳಗಾಗುತ್ತಿರುವುದು ಹಾಗೂ ಅದು ಅವರ ಒಟ್ಟಾರೆ ಬೆಳವಣಿಗೆಯ ಮೇಲೆ ಅಡ್ಡ ಪರಿಣಾಮ ಬೀರುತ್ತಿರುವುದು ನಿಜವಾದ ಸಮಸ್ಯೆ. ಈ ಹಂತದಲ್ಲಿ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು, ಹದಿಹರೆಯದವರೊಂದಿಗೆ ಪೋಷಕರು ಹೇಗೆ ವರ್ತಿಸಬೇಕು ಎಂದು ತಿಳಿದುಕೊಳ್ಳುವುದು ಅತ್ಯಗತ್ಯ.

ಖಾಲಿ ಮನಸ್ಸು ದುಷ್ಟ ಶಕ್ತಿಯ ವಾಸಸ್ಥಾನ ಲಾಕ್​ಡೌನ್ ಎಂಬ ಬಂಧನದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಖಿನ್ನತೆಗೊಳಗಾದವರಿದ್ದಾರೆ. ಮಾಡಲು ಕೆಲಸವಿಲ್ಲದೆ ದುಶ್ಚಟಗಳ, ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾದವರಿದ್ದಾರೆ. ಇಂಥವರ ಮಾನಸಿಕ ಸ್ಥಿತಿಯನ್ನು ಸ್ಥಿರವಾಗಿಡುವುದು ಮುಖ್ಯ. ಅಂತೆಯೇ, ಹದಿಹರೆಯದವರ, ಮಕ್ಕಳ ಮನಸ್ಸು ತುಂಬ ಸೂಕ್ಷ್ಮವಾಗಿರುವ ಕಾರಣ ಮನೆಯೊಳಗೆ ತಮ್ಮ ಜತೆಯೇ ಇದ್ದರೂ ಮಕ್ಕಳು ನಾರ್ಮಲ್ ಆಗಿ ಇಲ್ಲ ಎಂಬ ಸಣ್ಣ ಸುಳಿವು ಸಿಕ್ಕಿದರೂ ಪೋಷಕರು ನಿರ್ಲಕ್ಷಿಸಬಾರದು. ಅವರ ಹತ್ತಿರ ಕುಳಿತು, ಮೃದುವಾಗಿ ಮಾತನಾಡುತ್ತಾ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯನ್ನು ಆಲಿಸುವಷ್ಟು ಸಮಯ ನೀಡಬೇಕು. ಎಲ್ಲ ಸಮಯದಲ್ಲೂ ಸಂಪೂರ್ಣವಾಗಿ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಅಷ್ಟೊಂದು ಸುಲಭವಲ್ಲದ ಕಾರಣ ಒಮ್ಮೊಮ್ಮೆ ಖಿನ್ನತೆಗೆ ಅಥವಾ ಇತರೆ ರೀತಿಯ ಮಾನಸಿಕ ಒತ್ತಡಕ್ಕೆ ಒಳಗಾಗುವುದು ಮನುಷ್ಯರ ಸಹಜ ಸ್ವಭಾವವೆಂದು ಮಕ್ಕಳಿಗೆ, ಯುವಕರಿಗೆ ಅರ್ಥ ಮಾಡಿಸಬೇಕು. ಜತೆಗೆ, ಒಂಟಿತನ ಹಾಗೂ ಬೇಸರವನ್ನು ಹೋಗಲಾಡಿಸುವುದರಲ್ಲಿ ಪೋಷಕರ ಪಾತ್ರ ದೊಡ್ಡದಿರುವುದರಿಂದ ಅದನ್ನು ತಂದೆ, ತಾಯಿಯಾದವರೂ ಅರ್ಥ ಮಾಡಿಕೊಳ್ಳಬೇಕು.

ಒಳ್ಳೆಯ ಜೀವನಶೈಲಿ, ಸಮತೋಲಿತ ಆಹಾರ, ಅಗತ್ಯವಿರುವಷ್ಟು ವ್ಯಾಯಾಮ ಮತ್ತು ವಿಶ್ರಾಂತಿ ಇವೆಲ್ಲ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಲು ಅಗತ್ಯ. ಖಾಲಿ ಮನಸ್ಸು ದುಷ್ಟ ಶಕ್ತಿಯ ವಾಸಸ್ಥಾನ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ. ಹಾಗಾಗಿ ಮಕ್ಕಳು, ಯುವಕರು ಸಾಧ್ಯವಾದಷ್ಟು ಚಟುವಟಿಕೆಯಿಂದಿರಲು ಸದಾ ಒಂದಿಲ್ಲೊಂದು ಕೆಲಸದಲ್ಲಿ ಅವರು ತೊಡಗಿಸಿಕೊಳ್ಳುವಂತೆ ಮಾಡಬೇಕು. ಅಮ್ಮಂದಿರು ಅಡುಗೆ ಹೇಳಿಕೊಡಬಹುದು, ಅಣ್ಣ, ಅಕ್ಕಂದಿರು ತಮಗೆ ಬರುವ ಕರಕುಶಲ ಕಲೆಗಳನ್ನೋ, ಹೊಲಿಗೆಯನ್ನೋ ತಮ್ಮ, ತಂಗಿಯರಿಗೆ ಹೇಳಿಕೊಡಬಹುದು. ತಾವು ಹಿಂದೊಮ್ಮೆ ಮಾನಸಿಕ ಒತ್ತಡಕ್ಕೋ, ಖಿನ್ನತೆಗೋ ಒಳಗಾದಾಗ ತಮ್ಮ ಸ್ಥಿತಿ ಹೇಗಿತ್ತು, ಅದನ್ನು ಎದುರಿಸಿ ಹೊರಬಂದದ್ದು ಹೇಗೆ ಎಂಬ ಸ್ಪೂರ್ತಿದಾಯಕ ಘಟನೆಗಳನ್ನು ಹೇಳುತ್ತಾ ಸದಾ ಒಳ್ಳೆಯ ವಿಚಾರಗಳ ಬಗ್ಗೆಯಷ್ಟೇ ಚಿಂತನೆ ಮಾಡುವಂತೆ ಪ್ರೇರೇಪಿಸಬೇಕು. ಒಂದು ಮೃದುವಾದ ಸ್ಪರ್ಶ, ಪ್ರೀತಿ ತುಂಬಿದ ನಾಲ್ಕು ಮಾತುಗಳು, ನಿಮ್ಮ ಜೊತೆ ನಾವಿದ್ದೇವೆ ಎಂಬ ಧೈರ್ಯದ ಭರವಸೆ ನೊಂದ ಮನಸ್ಸುಗಳನ್ನು ಸರಿಪಡಿಸುವಲ್ಲಿ ಪವಾಡಗಳನ್ನೇ ಮಾಡಬಹುದು ಎನ್ನುವ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳಬೇಕು.

ಮಾನಸಿಕ ಆರೋಗ್ಯಕ್ಕಾಗಿ ಮೂರನೇ ಅಲೆ ಬಾರದಂತೆ ನಿಗಾ ವಹಿಸಬೇಕಿದೆ ಸದ್ಯದ ಪರಿಸ್ಥಿತಿಯಲ್ಲಿ ಇನ್ನೊಂದು ಲಾಕ್​ಡೌನ್ ತಡೆದುಕೊಳ್ಳುವ ಸಾಮರ್ಥ್ಯ ಯಾರಿಗೂ ಇಲ್ಲ. ಮನೆಯೊಳಗೆ ಬಂಧಿಯಾಗಿ ಚಟುವಟಿಕೆಯೇ ಇಲ್ಲದೆ ದೇಹವನ್ನೂ, ಮನಸ್ಸನ್ನೂ ನಿಷ್ಕ್ರಿಯಗೊಳಿಸಿಕೊಂಡಿದ್ದವರೆಲ್ಲ ಆದಷ್ಟು ಬೇಗ ಪುಟಿದೇಳಬೇಕಾಗಿರುವುದು ಈ ಕ್ಷಣದ ಅನಿವಾರ್ಯವೂ ಹೌದು.ಆದರೆ, ಒಂದು ವಿಷಯವನ್ನು ನಾವೆಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು. ಲಾಕ್​ಡೌನ್​ ತೆರವಾಗುತ್ತಿದೆ ಅಂದರೆ ಘಾಸಿಕೊಂಡು ಐಸಿಯುನಲ್ಲಿ ಅಡ್ಮಿಟ್ ಆಗಿದ್ದ ಜನಜೀವನ ಚೇತರಿಸಿಕೊಂಡು ಐಸಿಯುನಿಂದ ಸಾಮಾನ್ಯ ವಾರ್ಡಿಗೆ ಶಿಫ್ಟ್ ಆಗಿದೆ ಅಂತ ಅರ್ಥವಷ್ಟೇ. ಅದಿನ್ನೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿಲ್ಲ. ಕೊವಿಡ್​ಗೆ ಸಂಬಂಧಿಸಿದಂತೆ ಸೂಕ್ತ ಎಚ್ಚರಿಕೆ ವಹಿಸದಿದ್ದರೆ ಜನಜೀವನ ಮತ್ತೆ ಹೊಡೆತ ತಿಂದು ವಾರ್ಡಿನಿಂದ ಐಸಿಯುಗೆ ಶಿಫ್ಟ್ ಆಗಿ ಲಾಕ್​ಡೌನ್​ ದಿನಗಳು ಮರುಕಳಿಸುವುದರಲ್ಲಿ ಅನುಮಾನವಿಲ್ಲ.

ಮೂರನೆ ಅಲೆಯಲ್ಲಿ ಕೊವಿಡ್ ಮಕ್ಕಳನ್ನು ಟಾರ್ಗೆಟ್ ಮಾಡಲಿದೆಯೆಂದೂ, ಅದಕ್ಕೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಈಗಿನಿಂದಲೇ ಚಿಂತಿಸಬೇಕೆಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ. ಕೊವಿಡ್ ಮೂರನೇ ಅಲೆ ಬಾರದೇ ಇರಲಿ ಎಂದೇ ಆಶಿಸೋಣ. ಆದರೆ, ಎಲ್ಲವನ್ನೂ ಮೀರಿ ಬಂದೇ ಬಿಟ್ಟರೆ ಗಂಭೀರ ಪ್ರಮಾಣದಲ್ಲಿ ರೋಗ ಹರಡಿ ಮತ್ತೆ ಲಾಕ್​ಡೌನ್​ ಉಂಟಾಗದಂತೆ ನೋಡಿಕೊಳ್ಳುವ ಹೊಣೆಯನ್ನು ನಾವೆಲ್ಲರೂ ಹೊತ್ತುಕೊಳ್ಳಬೇಕಿದೆ. ದೈಹಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಆಗುವ ಬದಲಾವಣೆಗಳು ಹೇಗೆ ಬೆಳವಣಿಗೆಗೆ ಅಡ್ಡಗಾಲೋ ಅಷ್ಟೇ ಅಥವಾ ಅದಕ್ಕಿಂತಲೂ ತುಸು ಗಂಭೀರವಾದದ್ದು ಮಾನಸಿಕ ಒತ್ತಡ. ಮಾನಸಿಕವಾಗಿ ಉಂಟಾಗುವ ವೇದನೆಗಳು ಕ್ಷಣಿಕವಲ್ಲ. ಅವು ದೀರ್ಘಕಾಲದ ತನಕ ಸರ್ವತೋಮುಖ ಬೆಳವಣಿಗೆಯನ್ನೇ ಮೊಟಕುಗೊಳಿಸಬಲ್ಲವು. ಹಾಗಾಗಿ ನಮ್ಮ ಹಾಗೂ ನಮ್ಮ ಮಕ್ಕಳ ಮಾನಸಿಕ ಆರೋಗ್ಯ ಸುಸ್ಥಿರವಾಗಿರುವಂತೆ ನೋಡಿಕೊಳ್ಳಲೇಬೇಕು.

ಇದನ್ನೂ ಓದಿ: ಕೊವಿಡ್-19 ಮಹಾಮಾರಿ ವಯಸ್ಕರಲ್ಲಿ ಖಿನ್ನತೆ, ಹತಾಶೆ, ಒಂಟಿತನದಂಥ ಮಾನಸಿಕ ಅಸ್ವಸ್ಥತೆಗಳನ್ನು ಸೃಷ್ಟಿಸುತ್ತಿದೆ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ