ಮೊಬೈಲ್ ಸಿಗ್ನಲ್ ನಿಜಕ್ಕೂ ಹಾನಿಕರವೇ? ಅವುಗಳಿಂದ ಏನೆಲ್ಲಾ ತೊಂದರೆ ಆಗುತ್ತಿದೆ? ಇಲ್ಲಿದೆ ಅಸಲಿ ಸಂಗತಿ
ಮೊಬೈಲು ಸಿಗ್ನಲ್ಲುಗಳು ನಿಜಕ್ಕೂ ಅಪಾಯಕಾರಿಯೇ? ಇವೆಲ್ಲ ಎಷ್ಟರ ಮಟ್ಟಿಗೆ ಸತ್ಯ? ಹಾಗಿದ್ದರೆ ಏನು ತೊಂದರೆ ಈ ಮೊಬೈಲ್ ಸಿಗ್ನಲ್ಲುಗಳಿಂದ ಎಂದು ಸ್ವಲ್ಪ ತಿಳಿದುಕೊಳ್ಳೋಣವೇ? - ಡಾ: ಎನ್.ಬಿ.ಶ್ರೀಧರ
ಮೊನ್ನೆಯಷ್ಟೇ ಸಿನಿಮಾ ನಟಿ ಜೂಹಿ ಚಾವ್ಲಾ ಬಾರತ ದೇಶದಲ್ಲಿ ಪ್ರಕಟವಾಗುತ್ತಿರುವ 5ಜಿ ತರಂಗಾಂತರವು ಮನುಷ್ಯರ ಆರೋಗ್ಯಕ್ಕೆ ಭಾರೀ ಹಾನಿಕರ ಹಾಗೂ ಅದನ್ನು ತಡೆಯಿರಿ ಎಂದು ದೆಹಲಿಯ ಉಚ್ಚನ್ಯಾಯಾಲಯಕ್ಕೆ ಹೋಗಿ ಅದಕ್ಕೆ ತಡೆ ಕೋರಿದ್ದರು. 5ಜಿ ತಂತ್ರಜ್ಞಾನವು ಯಾವುದೇ ಗಮನಾರ್ಹವಾದ ವ್ಯತಿರಿಕ್ತ ಪರಿಣಾಮಗಳನ್ನು ಬೀರುವುದಿಲ್ಲ ಎಂದು ಸರ್ಕಾರವು ಸಾರ್ವಜನಿಕರಿಗೆ ಪ್ರಮಾಣೀಕರಿಸಬೇಕು ಎಂಬುದು ಮೊಕದ್ದಮೆಯಲ್ಲಿನ ಪ್ರಾಥಮಿಕ ವಾದವಾಗಿತ್ತು. 5ಜಿ ತರಂಗಾಂತರಗಳು ವಯಸ್ಕರಿಗೆ ಮಕ್ಕಳಿಗೆ ವಿವಿಧ ಅಂಗಗಳ ಮೇಲೆ ಉಂಟು ಮಾಡುವ ಅಡ್ಡ ಪರಿಣಾಮಗಳ ಬಗ್ಗೆ ಮತ್ತು ಭವಿಷ್ಯದಲ್ಲಿ ಇದರಿಂದ ಆಗುವ ತೊಂದರೆಯ ಬಗ್ಗೆ ಮಾಹಿತಿಯನ್ನು ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಲಾಗಿತ್ತು. ಅಲ್ಲದೇ, ಭಾರತದಲ್ಲಿ ರೇಡಿಯೋ ಫ್ರೀಕ್ವೆನ್ಸಿ ವಿಕಿರಣಕ್ಕೆ ಸಂಬಂಧಿಸಿದಂತೆ ಯಾವುದೇ ಅಧ್ಯಯನಗಳು ನಡೆದಿಲ್ಲ. ಇದರ ಕುರಿತು ಸಂಶೋಧನೆಯಾಗಬೇಕು ಎಂದೂ ಕೋರಲಾಗಿತ್ತು. ಆದರೆ, ಸಿಟ್ಟಿಗೆದ್ದ ನ್ಯಾಯಪೀಠವು ಅರ್ಜಿದಾರರು ವಿಜ್ಞಾನವನ್ನು ಸರಿಯಾಗಿ ತಿಳಿಯದೇ, ಅಧ್ಯಯನ ಮಾಡದೇ ಅರ್ಜಿ ಹಾಕುತ್ತಿದ್ದು ನ್ಯಾಯಾಲಯದ ಸಮಯ ಹಾಳು ಮಾಡುತ್ತಿದ್ದಾರೆ ಎಂದು ಖಂಡಿಸಿ ಜೂಹಿ ಮತ್ತವರ ಇಬ್ಬರು ಸಂಗಡಿಗರಿಗೆ ₹20 ಲಕ್ಷಗಳ ಭಾರೀ ಮೊತ್ತದ ದಂಡವನ್ನು ವಿಧಿಸಿತು. ಅದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ವಿಚಾರಣೆಯ ಕೊಂಡಿ ಹಂಚಿಕೊಂಡು ರಗಳೆ ಎಬ್ಬಿಸಿದ್ದೂ ಸಹ ಅದಕ್ಕೆ ಮತ್ತೊಂದು ಕಾರಣವಾಗಿತ್ತು.
ನಿಜ, ಈಗ ಪರಿಸರವನ್ನು ಉಳಿಸುವ ಉದ್ದೇಶವೆಂದು ಹೇಳಿಕೊಂಡು ಸಣ್ಣ ಸಣ್ಣ ವಿಷಯಕ್ಕೆಲ್ಲಾ ನ್ಯಾಯಾಲಯಕ್ಕೆ ಹೋಗುವವರಿಗೆ ಇದೊಂದು ಪಾಠ. ಈ ಸುದ್ಧಿಯನ್ನು ಓದುವಾಗ ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ನಾನು ಬರೆದು ಫೇಸ್ಬುಕ್ಕಿನಲ್ಲಿ ಹಂಚಿಕೊಂಡ ಲೇಖನದ ನೆನಪು ಬಂದಿತು. ಈಗಲೂ ಸಹ ಮೊಬೈಲ್ ತರಂಗಗಳು ತೊಂದರೆ ಮಾಡುತ್ತವೆ ಎಂದು ಭಾವಿಸುವವರು ಈ ಲೇಖನ ಓದಿ.
ಕೆಲ ದಿನಗಳ ಹಿಂದೆ ನಮ್ಮ ಮಹಾವಿದ್ಯಾಲಯದ ಆವರಣದಲ್ಲಿ ಇಬ್ಬರು ಹಿರಿಯ ಪ್ರಾಧ್ಯಾಪಕರು ಮಾತಾಡಿಕೊಳ್ಳುತ್ತಿದ್ದರು. ಒಬ್ಬರು, ನೋಡ್ರೀ ಒಂಚೂರೂ ಮೊಬೈಲ್ ಸಿಗ್ನಲ್ಲೇ ಇಲ್ಲ. ಏನಾದ್ರೂ ಮಾಡಿ ಇಲ್ಲೊಂದು ಟವರ್ ಹಾಕಿಸ್ಲೇ ಬೇಕ್ರಿ, ಯಾರಾದ್ರೂ ಕಾಲ್ ಮಾಡಿದ್ರೆ ಕೂಗಿ ಕೂಗಿ ಸಾಕಾಗ್ತದೆ ಅಂದ್ರು. ಅದನ್ನು ಕೇಳಿದ ಕೂಡಲೇ ಮತ್ತೊಬ್ಬರು, ಸಾರ್.. ಈ ಮೊಬೈಲ್ ಟವರ್ ಸಹವಾಸವೇ ಬೇಡ.. ಅದರಿಂದ ಹೆಲ್ತ್ ಹಾಳಾಗುತ್ತೆ, ಕಿವಿ ಮಂದ ಆಗಿ ಕ್ಯಾನ್ಸರ್ ಬರತ್ತೇ ಸಾರ್ ಅಂದ್ರು. ಹೌದೇನ್ರಿ. ಸಾಯ್ಲಿ ಬಿಡಿ, ಬೇಡ ಅಂತ ಅವರ ಸಂಭಾಷಣೆ ಬೇರೆ ದಿಕ್ಕು ಹಿಡಿಯಿತು. ನಾನು ಈ ಸಂಭಾಷಣೆ ಗಮನಿಸುತ್ತಾ ಇದ್ದವನು ಸುಮ್ಮನಿರಲಾರದೇ ಮಧ್ಯೆ ಪ್ರವೇಶಿಸಿ, ಸಾರ್ ಇದು ನಿಜವಿರಬಹುದೇ? ಹಾಗಿದ್ದರೆ ಎಷ್ಟು ಜನಕ್ಕೆ ಆರೋಗ್ಯ ತೊಂದರೆ ಆಗಿದೆ ಎಂಬ ಬಗ್ಗೆ ಅಂಕಿ ಅಂಶವಿದೆಯೇ? ಈ ಬಗ್ಗೆ ಸಂಶೋಧನಾ ಲೇಖನಗಳು ಏನು ಹೇಳುತ್ತವೆ? ವಿಶ್ವ ಸಮುದಾಯದ ಅಭಿಪ್ರಾಯದ ಬಗ್ಗೆ ಗಮನಿಸಿದ್ದಾರಾ? ಎಂದು ಪ್ರಶ್ನೆ ಕೇಳಿದೆ. ಸ್ವಲ್ಪ ಕಿರಿಕಿರಿಗೊಳಾದವರ ಹಾಗೆ ಕಂಡ ಅವರಿಬ್ಬರು ರೀ ಶ್ರೀಧರ್, ನಿಮ್ಮದು ಬರೀ ಸಂಶಯದ ಬುದ್ದಿ ಕಣ್ರೀ ಇದೆಲ್ಲಾ ನಮಗ್ಯಾಕೆ? ನಡೀರಿ ಕ್ಲಾಸಿಗೋಗೋಣ ಎನ್ನುತ್ತಾ ಮಾತು ಮುಗಿಸಿದರು.
ಮೊನ್ನೆ ಯಾವುದೋ ಕಾರಣದ ಮೇಲೆ ಕೆಲವು ಕೋಳಿ ಫಾರಂಗಳನ್ನು ಭೇಟಿ ಮಾಡಲು ಹೋಗಿದ್ದೆ. ಅವುಗಳಲ್ಲಿ ಒಂದು ಫಾರಂನಲ್ಲಿ ಕೋಳಿ ಮನೆಯ ಪಕ್ಕದಲ್ಲಿಯೇ ಸಹಸ್ರಾರು ಪಾರಿವಾಳಗಳಿದ್ದವು. ಪಕ್ಕಕ್ಕೇ ಬೃಹತ್ ಮೊಬೈಲ್ ಟವರ್ ಇತ್ತು. ನಾನು, ಕೋಳಿ ಮತ್ತು ಪಾರಿವಾಳ ಸತ್ತಿಲ್ವೇ? ರೋಬೋ-2 ಸಿನಿಮಾ ನೋಡಿಲ್ವೇನ್ರಿ? ಅದ್ರಲ್ಲಿ ಹಕ್ಕಿ ಕುಲಕ್ಕೇ ಮೊಬೈಲ್ ಕುತ್ತು ಎಂದಿದೆ ಅಂದೆ. ಈ ಟವರ್ ಇದ್ದು ಹತ್ತು ವರ್ಷವೇ ಆಯ್ತು ಸಾರ್, ನಮ್ಮ ಕೋಳಿಗಳು ಚೆನ್ನಾಗೇ ಇವೆ. ಅದ್ರಲ್ಲೂ ಈ ಪಾರಿವಾಳದ ಕಾಟ ಬೇರೆ. ಸಿನಿಮಾ ಏನು ಸಾರ್. ಟೈಮ್ ಪಾಸಿಗೆ ತೆಗೀತಾರೆ. ಅದೆಲ್ಲಾ ನಿಜವಲ್ಲ ಬಿಡಿ ಅಂದ ಮಾಲೀಕ.
ಸಿನಿಮಾ ಪ್ರಪಂಚದ ದಿಗ್ಗಜರಾದ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅವರು ನಟಿಸಿದ ಚಲನಚಿತ್ರ ರೋಬೋ-2ದಲ್ಲಿಯಂತೂ ಪಕ್ಷಿಗಳ ಸರ್ವನಾಶಕ್ಕೆ ಮೊಬೈಲ್ ಸಿಗ್ನಲ್ಲುಗಳೇ ಕಾರಣವೆಂದು ತೋರಿಸಿ ಹಕ್ಕಿಯ ಭೂತವು ಎಲ್ಲಾ ಮೊಬೈಲು ಟವರುಗಳ ಒಡೆಯರುಗಳನ್ನು ಮತ್ತು ಮೊಬೈಲುಗಳನ್ನು ದ್ವೇಷದಿಂದ ನಾಶಮಾಡುವ ಅತಿ ರಂಜಿತ ದೃಶ್ಯಗಳನ್ನು ತೋರಿಸಿದ್ದಾರೆ. ಇದು ಸಿನಿಮಾ ಎಂದು ಬಿಟ್ಟು ಬಿಡಲು ಸಾಧ್ಯವೇ? ಸಾಧ್ಯವಿಲ್ಲ. ನಿಜ, ಮೊಬೈಲುಗಳ ದುರ್ಬಳಕೆ ಕಡಿಮೆಯಾಗಬೇಕು. ಆದರೆ ಸುಳ್ಳು ವಿಷಗಳನ್ನು ಅವೈಜ್ಞಾನಿಕವಾಗಿ ಜನರ ಮನದಲ್ಲಿ ತುಂಬುವುದೆಷ್ಟು ಸರಿ? ಮೊಬೈಲು ಸಿಗ್ನಲ್ಲುಗಳು ಹಕ್ಕಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಮಾಡಿದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಂಶೋಧನಾ ಆಧಾರಗಳಿಲ್ಲ. ಹಕ್ಕಿಗಳ ಸಂಖ್ಯೆ ಕಡಿಮೆಯಾಗಲು ಅನೇಕ ಕಾರಣಗಳಿದ್ದು, ಅತಿಯಾದ ಕೀಟನಾಶಕಗಳ ಬಳಕೆಯಿಂದ ಅವುಗಳ ಅಹಾರವಾದ ಕೀಟಗಳು ದೊರಕದಿರುವುದು ಮತ್ತು ಕೀಟನಾಶಕಗಳ ನೇರ ಪರಿಣಾಮ ಅಲ್ಲದೇ ಇನ್ನು ಹತ್ತು ಹಲವಾರು ಕಾರಣಗಳು ಎಂಬುದು ವಿಚಾರಾತೀತವಾಗಿ ಸಾಬೀತಾಗಿದ್ದರೂ ಸಹ ಆ ಕಡೆಗೆ ಲಕ್ಷ್ಯ ಕಡಿಮೆ. ಆದರೂ ಜನ ಇದನ್ನು ನಂಬುತ್ತಾರೆ ಎಂದರೆ ಏನೆನ್ನೋಣ? ನಿಜವಾಗಲೂ ಮೇಲಿನ ಪ್ರಶ್ನೆಗಳಿಗೆ ಬಹಳ ಜನರ ಹತ್ತಿರ ಉತ್ತರವಿಲ್ಲ.
ಸ್ವಘೋಷಿತ, ಪ್ರಶ್ನಾತೀತ ವಿಜ್ಞಾನಿ(?) ಗಳಾದ ಸಕಲವನ್ನೂ ಬಲ್ಲ ಕೆಲವು ಸ್ವಘೋಷಿತ ದೇವಮಾನವರು ಮತ್ತಿತರರು ಅಪ್ಪಣೆ ಕೊಡಿಸಿ ಬಿಟ್ಟಿದ್ದಾರಲ್ಲ, ಮೊಬೈಲ್ ಸಿಗ್ನಲ್ ಡೇಂಜರ್ರು ಅದಕ್ಕೆ ತುಳಸಿ ದಳ ಹಾಕಿ ಇರಿಸಿದರೆ ಅದರ ಸಿಗ್ನಲ್ಲಿನ್ನ ಅಪಾಯ ಇರಲ್ಲ ಅಂತ. ಇದನ್ನೇ ನಮ್ಮ ಜನ ಒಂದಿನಿತೂ ಯೋಚನೆ ಮಾಡದೇ ಒಪ್ಪಿಕೊಳ್ಳುವುದು. ಕೆಲವರಂತೂ ಸಗಣಿಯ ಬೆರಣಿ ಮೊಬೈಲು ಸಿಗ್ನಲ್ಲುಗಳ ದುಷ್ಪರಿಣಾಮವನ್ನು ತಡೆಯುತ್ತದೆ ಎಂದು ಯುಟ್ಯೂಬಿನಲ್ಲಿ ಹರಿಬಿಟ್ಟರು. ಅದಕ್ಕೆ ಸಾವಿರಾರು ಲೈಕುಗಳು, ಕಮೆಂಟುಗಳು. ನಮ್ಮಲ್ಲೂ ಸಾಕಷ್ಟು ಎಲೆಕ್ಟ್ರಾನಿಕ್ ಇಂಜಿನಿಯರುಗಳು ಇದ್ದಾರೆ. ಈ ಕುರಿತು ಒಂದು ಸಣ್ಣ ವಿಡಿಯೋ ಮಾಡಿ ವಿಚಾರವನ್ನು ಅಲ್ಲಗಳೆಯಲಿಲ್ಲ. ಎಲ್ಲಿ ಹೋಯಿತು ನಮ್ಮ ವಿಜ್ಞಾನ ಮನೋಭಾವ? ಏನಾಯಿತು ನಮ್ಮ ವಿಚಾರಶಕ್ತಿಗೆ? ಹೇಳಿದ್ದನ್ನೆಲ್ಲಾ ಒಂದಿಷ್ಟೂ ವೈಜ್ಞಾನಿಕವಾಗಿ ವಿಚಾರ ಮಾಡದೇ ಒಪ್ಪಿಕೊಳ್ಳುವುದು ಸರಿಯೇ? ಅದರಲ್ಲೂ ವಿದ್ಯಾವಂತರೆಂದು ಕರೆಸಿಕೊಂಡ ಜನ ಇದೆಲ್ಲವನ್ನೂ ನಂಬುವುದು ಸದ್ಯದ ದುರಂತ. ಅವರ ಬಾಯಿಂದ ಪ್ರಸರಣವಾದ ಸುಳ್ಳು ಸುದ್ಧಿಗೆ ಭಾರಿ ಬೆಲೆ ಎನ್ನುವುದೂ ಸತ್ಯ.
ಮೊಬೈಲು ಸಿಗ್ನಲ್ಲುಗಳು ನಿಜಕ್ಕೂ ಅಪಾಯಕಾರಿಯೇ? ಇವೆಲ್ಲ ಎಷ್ಟರ ಮಟ್ಟಿಗೆ ಸತ್ಯ? ಹಾಗಿದ್ದರೆ ಏನು ತೊಂದರೆ ಈ ಮೊಬೈಲ್ ಸಿಗ್ನಲ್ಲುಗಳಿಂದ ಎಂದು ಸ್ವಲ್ಪ ತಿಳಿದುಕೊಳ್ಳೋಣವೇ? ಒಂದರ್ಥದಲ್ಲಿ ಹೇಳಬೇಕೆಂದರೆ ನಾವು ಒಂದಲ್ಲ ಒಂದು ಸಿಗ್ನಲ್ಲುಗಳ ಅಡಿಯಲ್ಲಿ ಸಿಲುಕಿರುತ್ತೇವೆ. ಅದು ಸೂರ್ಯನಿಂದ ಬರುವ ಕಿರಣಗಳಿರಬಹುದು ಅಥವಾ ರೇಡಿಯೋ, ಟಿವಿ, ವಾಕಿಟಾಕಿ, ಉಪಗ್ರಹದ ಸಿಗ್ನಲ್ಲುಗಳು, ಮೊಬೈಲುಗಳ ಸಿಗ್ನಲ್ಲುಗಳು.. ಹೀಗೆ ಸಹಸ್ರಾರು ರೀತಿಯ ಸಿಗ್ನಲ್ಲುಗಳ ಮಾಯಾ ಲೋಕದಲ್ಲಿ ನಾವು ಹುದುಗಿರುತ್ತೇವೆ. ಮೊಬೈಲ್ ಸಿಗ್ನಲ್ಲುಗಳು ಮೈಕ್ರೋವೇವ್ ಸಿಗ್ನಲ್ಲುಗಳು. ಇವು ರೇಡಿಯೋ ತರಂಗಾಂತರದಲ್ಲಿ ಪ್ರಸರಣಗೊಳ್ಳುತ್ತಿರುತ್ತವೆ. ಇವನ್ನು ಎಲೆಕ್ಟ್ರೋಮ್ಯಾಗ್ನೆಟಿಕ್ ತರಂಗಾಂತರಗಳು ಎಂದು ಕರೆಯಬಹುದು.
ಇವುಗಳನ್ನು ತಿಳಿದುಕೊಳ್ಳಲು 12 ನೇ ತರಗತಿಯ ಸಾಮಾನ್ಯ ಜ್ಞಾನ ಸಾಕು. ಸಾಮಾನ್ಯವಾಗಿ ವಿದ್ಯುತ್ ಇತ್ಯಾದಿಗಳು 100 ಮೆಗಾ ಹರ್ಝ್ ಮತ್ತು ಜಾಸ್ತಿ ತರಂಗಾಂತರಂಗದಲ್ಲಿ ಪ್ರವಹಿಸಿದರೆ, 1000 ಕ್ಕಿಂತ ಕಡಿಮೆ ತರಂಗಾಂತರದಲ್ಲಿ ರೇಡಿಯೋ ಸಿಗ್ನಲ್ಲುಗಳು, ವೈಫೈ ಮತ್ತು ಮೊಬೈಲ್ ಸಿಗ್ನಲ್ಲುಗಳು ಪ್ರವಹಿಸುತ್ತವೆ. ಇದಾದ ನಂತರ ಮೈಕ್ರೋವೇವ್ ತರಂಗಗಳು ಇರುತ್ತವೆ. ಇವುಗಳ ತರಂಗಾಂತರ ಕೆಲವು ಸೆಂಟಿಮೀಟರುಗಳಲ್ಲಿ ಇರುತ್ತದೆ. ನಮ್ಮ ಟಿವಿಗಳನ್ನು ನಿಯಂತ್ರಿಸುವ ರಿಮೋಟುಗಳಲ್ಲಿಯೂ ಸಹ ಕೆಲವು ಮಿಲಿಮೀಟರುಗಳ ತರಂಗಾಂತರ ಹೊಂದಿರುವ ಅಲೆಗಳು ಇರುತ್ತವೆ. ತದನಂತರ ನಾವು ಕಣ್ಣಲ್ಲಿ ಕಾಣಬಹುದಾದ ಬೆಳಕಿನ ಅಲೆಗಳು ಬರುತ್ತವೆ. ಇವು ಕೆಲವು ನ್ಯಾನೋಮೀಟರುಗಳ ತರಂಗಾಂತರವನ್ನು ಹೊಂದಿರುತ್ತವೆ. ಈ ತರಂಗಾಂತರದಲ್ಲಿ ಬಹುತೇಕ ತರಂಗಗಳು ಅಪಾಯ ಹೊಂದಿರುವುದಿಲ್ಲ. ಸೂರ್ಯನ ಬೆಳಕು ಮೊಬೈಲ್ ಸಿಗ್ನಲ್ಲುಗಳಿಗಿಂತ ಪ್ರಖರವಾಗಿರುತ್ತದೆ. ಈ ರೇಡಿಯೋ ತರಂಗಾಂತರಗಳನ್ನು ನಾನ್ ಅಯನಾಯ್ಸಿಂಗ್ ರೇಡಿಯೇಶನ್ಸ್ ಎಂದು ಕರೆಯುತ್ತಾರೆ. ಇವು ಜೀವಕೋಶಗಳಿಗೆ ಹಾನಿಕರ ಎಂದು ಯಾವುದೇ ರೀತಿ ರುಜುವಾತಾಗಿಲ್ಲ.
ಇದಾದ ಮೇಲೆ ಅಲ್ಟ್ರಾವಯೋಲೆಟ್ ತರಂಗಾಂತರ ಬರುತ್ತದೆ. ಇದರ ಆಚೆ ಬರುವ ಎಕ್ಸ್-ರೇ ಮತ್ತು ಗಾಮಾ ಕಿರಣಗಳು ಅತ್ಯಂತ ಕಡಿಮೆ ತರಂಗಾಂತರದಲ್ಲಿ ಪ್ರವಹಿಸುತ್ತಿದ್ದು,ದೇಹದ ಜೀವಕೋಶಗಳನ್ನು ಹಾಳುಗೆಡಹುವ ಅತ್ಯಂತ ತೀಕ್ಷ್ಣ ಸ್ವಭಾವ ಹೊಂದಿವೆ. ಈ ತರಂಗಾಂತರಗಳನ್ನು ಅಯನಾಯ್ಸಿಂಗ್ ರೇಡಿಯೇಶನ್ಸ್ ಎಂದು ಕರೆಯುತ್ತಾರೆ. ಇವು ಜೀವಕೋಶಗಳ ಡಿಎನ್ಎಗಳಿಗೆ ಬಹಳ ಹಾನಿಕರ. ಒಂದರ್ಥದಲ್ಲಿ ಹೇಳಬೇಕೆಂದರೆ ವಿದ್ಯುತ್ ತಂತಿಯ ಪಕ್ಕ ನಿಂತಾಗ ಅಥವಾ ರೇಡಿಯೋ ಸ್ಟೇಶನ್ನಿನಿಂದ ಬರುವ ಸಿಗ್ನಲ್ಲು ನಮಗೆ ಅಪಾಯಕಾರಿ ಎಂದು ಹೇಳುವುದು ಎಷ್ಟು ದಡ್ಡತನದ್ದೋ ಅಷ್ಟೇ ದಡ್ಡತನದ್ದು ಈ ಮೊಬೈಲ್ ಸಿಗ್ನಲ್ಲುಗಳಿಂದ ಸಿಕ್ಕಾಪಟ್ಟೆ ಹಾನಿ ಎನ್ನುವುದು. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯೂ ಸಹ ಮೊಬೈಲ್ ಸಿಗ್ನಲ್ಲುಗಳು ಯಾವುದೇ ಕ್ಯಾನ್ಸರ್ ತರಲ್ಲ ಮತ್ತು ಇತರ ಅಂಗಗಳ ಮೇಲೂ ಯಾವುದೇ ಗಣನೀಯ ದುಷ್ಪರಿಣಾಮ ಬೀರಲ್ಲ ಎಂದಿದೆ.
ಅಲ್ಲದೇ ಪ್ರಪಂಚದಲ್ಲಿರುವ ಸಹಸ್ರಾರು ಕಾಯಿಲೆ ಕಸಾಲೆಗಳೆಲ್ಲ ಮೊಬೈಲ್ ಸಿಗ್ನಲ್ಲುಗಳಿಂದ ಎಂದು ಹೇಳಲು ಈ ಕುರಿತು ಸ್ವಲ್ಪವೂ ಜ್ಞಾನವಿಲ್ಲದವರಿಂದ ಮಾತ್ರ ಸಾಧ್ಯ. ಏಕೆಂದರೆ ಹಲವಾರು ಸಂಶೋಧನೆಗಳ ಪ್ರಕಾರ ಪ್ರಾಣಿಗಳ ಮೆದುಳಿನ ಮೇಲೆ ಮೊಬೈಲ್ ಸಿಗ್ನಲ್ಲುಗಳು ಅಂತಹ ಗಣನೀಯ ಪರಿಣಾಮವನ್ನೇನೂ ಮಾಡಲಿಲ್ಲ. ಪ್ರತಿ ದಿನ 19 ಘಂಟೆ ಸತತವಾದ ಮೊಬೈಲ್ ಸಿಗ್ನಲ್ಲಿನಲ್ಲಿ ಇಲಿಗಳನ್ನು ಪೆಟ್ಟಿಗೆಯೊಂದರಲ್ಲಿರಿಸಿ ಅದರ ಮೇಲೆ 2ವರ್ಷಗಳ ಸತತ ಪರಿಣಾಮವನ್ನು ಬಹಳ ಉಚ್ಚ ಮಟ್ಟದ 2ಜಿ, 3ಜಿ, 4ಜಿ ಮತ್ತು 5ಜಿ ತರಂಗಾಂತರದಲ್ಲಿ ಪರೀಕ್ಷಿಸಲಾಯಿತು. ಕೆಲವು ಇಲಿಗಳ ಮೆದುಳಿನಲ್ಲಿ ಗಡ್ಡೆಗಳು ಕಂಡು ಬಂದರೂ ಸಹ ಅವು ಮೊಬೈಲ್ ಸಿಗ್ನಲ್ಲುಗಳಿಂದ ಎಂದು ದೃಢೀಕರಿಸಲಾಗಲಿಲ್ಲ. ಇನ್ನು ಯಾವುದೇ ಇಲಿಗಳ ಮೇಲೆ ಅಡ್ಡ ಪರಿಣಾಮಗಳು ಗೋಚರಿಸಲಿಲ್ಲ.
ಯಾವುದೇ ನೂತನ ಆವಿಷ್ಕಾರಗಳಿಗೆ ಗುಣಾವಗುಣಗಳಿದ್ದೇ ಇರುತ್ತವೆ. ಕೇವಲ ಅವುಗಳ ಅವಗುಣಗಳನ್ನು ವೈಭವೀಕರಿಸಿ ಗುಣಗಳನ್ನು ಧಿಕ್ಕರಿಸುವುದು ಒಳ್ಳೆಯದಲ್ಲ. ವೇಗವಾದ ಈ ಕಾಲದಲ್ಲಿ ನಮಗೆ ವಿಜ್ಞಾನದ ಅವಿಷ್ಕಾರಗಳಾದ ವಿಮಾನ, ರೈಲು, ಕಾರು, ಬಸ್ಸು, ವಿದ್ಯುತ್, ಅಲೋಪತಿ ಔಷಧಿ, ಇತ್ಯಾದಿಗಳೆಲ್ಲ ಬೇಕು. ಆದರೆ ಕೆಲವು ಪುರಾತನ ಪದ್ಧತಿಗಳ ಮೇಲೆ ಭಾವನಾತ್ಮಕ ಪ್ರೀತಿ. ಇವು ಜತೆಜತೆ ಸಾಗುವುದು ಕಷ್ಟ. ಪುರಾತನ ಪದ್ದತಿಯಾದ ಎತ್ತಿನ ಗಾಡಿಯಿಂದ ಹೋದರೆ ಮಾಲಿನ್ಯ ನಿಯಂತ್ರಣ ಕಡಿಮೆ ಎಂದು ಯಾರಾದರೂ ಒಂದು ಘಂಟೆಗೆ 5-10 ಕಿಮಿ ಚಲಿಸುವ ಚಕ್ಕಡಿ ಗಾಡಿಗಳಲ್ಲಿ ಕುಳಿತು ಶಿವಮೊಗ್ಗದಿಂದ 25-30 ದಿನಗಳ ಬಳಿಕ 300 ಕಿಲೋ ಮೀಟರ್ ದೂರ ಇರುವ ಬೆಂಗಳೂರಿಗೆ ತೆರಳುತ್ತಾರೆಯೇ? ಉಪಗ್ರಹಗಳನ್ನು ಗಗನಕ್ಕೆ ಉಡಾಯಿಸಿ ಅವುಗಳ ಮೂಲಕ ಭೂಮಿಯಲ್ಲಿನ ಸಕಲವನ್ನೂ ನಿಯಂತ್ರಿಸುವ ಈ ಕಾಲದಲ್ಲಿ ವದಂತಿಗಳನ್ನು ನಂಬುವ ಜನರು ಮಾತ್ರ ಇದರಲ್ಲೇ ಸುಖ ಕಾಣಬಹುದೇನೋ?
ಸೈಡ್ ಇಫೆಕ್ಟ್ ಎಂದು ಆಧುನಿಕ ಔಷಧ ಪದ್ದತಿಯನ್ನು ತೆಗಳುವ ಜನ ಹೃದಯದ ಕಾಯಿಲೆ ಚಿಕಿತ್ಸೆಗೆ, ಕ್ಯಾನ್ಸರ್ ಪತ್ತೆಗೆ ಮೊರೆ ಹೋಗುವುದು ಆಧುನಿಕ ಔಷಧಿಯನ್ನೇ. ಆದರೆ ಸುಮ್ಮನೇ ಕಾಲಹರಣ ಮಾಡಲಷ್ಟೇ ಈ ಕಲ್ಪನೆಗಳಿಂದ ಕೂಡಿದ ಆರೋಪ. ಅವರ ಬುಡಕ್ಕೆ ಬಂದರೆ ಮತ್ತೆ ಬರುವುದು ವೈಜ್ಞಾನಿಕವಾಗಿ ದೃಢಗೊಂಡ ಪದ್ಧತಿಗಳ ಬಳಿಯೇ. ವಿಜ್ಞಾನಿಗಳು ಸಾರ್ವಜನಿಕವಾಗಿ ಮಾತನಾಡುವುದು ಕಡಿಮೆ ಎಂದು ಈ ಜರಿತವೇ? ಅಥವಾ ಬೇಗ ಜನಪ್ರಿಯವಾಗುವುದು ಹಿತವೇ? ಗೊತ್ತಿಲ್ಲ. ವಿಜ್ಞಾನದ ಬಗ್ಗೆ ವಿಜ್ಞಾನಿಗಳನ್ನು ಹೊರತುಪಡಿಸಿ ಉಳಿದವರ ಉವಾಚವೇ ಮಂತ್ರಕ್ಕಿಂತ ಉಗುಳಿನಂತೆ ಜಾಸ್ತಿಯಾಗಿದೆ. ಅದರಲ್ಲೂ ವಿಚಾರವಂತರು, ಓದಿದವರು ಮತ್ತು ವಿಜ್ಞಾನದ ಪದವಿ ಪಡೆದು ಈ ರೀತಿಯ ಸುಳ್ಳು ಸುದ್ಧಿಗಳನ್ನು ಹಬ್ಬಿಸುವವರನ್ನು ಏನೆನ್ನಬೇಕೋ ತಿಳಿಯಲ್ಲ.
ಒಂದು ವಿಷಯವನ್ನು ವಿವಾದಾತೀತವಾಗಿ ಒಪ್ಪಿಕೊಂಡು ಸುಮ್ಮನಾಗುವುದು ಉಚಿತ. ಸ್ಮಾರ್ಟ್ ಮೊಬೈಲುಗಳ ಅತಿಯಾದ ಬಳಕೆ ಸಲ್ಲದು. ಸ್ಮಾರ್ಟ್ ಮೊಬೈಲಿನ ಬಳಕೆಯ ಅಡ್ಡ ಪರಿಣಾಮಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದು ಇವು ಒಂದು ಸಾಮಾಜಿಕ ಪಿಡುಗು ಎನ್ನುವಷ್ಟರ ಬಗ್ಗೆ ಮುಂದುವರೆದಿದೆ. ವಾಹನ ಚಾಲನೆ ಮಾಡುವವರಿಗಂತೂ ಇದು ನಿಷೇಧಿತ. ಇಯರ್ ಫೊನ್ ಕಿವಿಗೆ ತಗಲಿಸಿಕೊಂಡು ವಾಹನ ಚಾಲನೆ ಮಾಡಿದರೂ ಸಹ ಅದೂ ಅಪಾಯಕಾರಿ ಎನ್ನುವುದು ಸಂಶೋಧನಾ ಇಂಗಿತ. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಮೊಬೈಲುಗಳ ದಾಸರಾಗಿ ಬಿಟ್ಟಿದ್ದಾರೆ. ಪ್ರತಿ ಆಧುನಿಕ ಆವಿಷ್ಕಾರಗಳಿಗೂ ಸಹ ಇಂತಹ ಒಂದು ಅಡ್ಡಪರಿಣಾಮ ಇದ್ದೇ ಇರುತ್ತದೆ. ಇಂತಹ ಹತ್ತು ಹಲವಾರು ಸಾಮಾಜಿಕ ಪಿಡುಗುಗಳು ಸ್ಮಾರ್ಟ್ ಮೊಬೈಲುಗಳಿವೆ. ಆದ್ದರಿಂದ ಸುಖಾಸುಮ್ಮನೆ ಮೊಬೈಲು ಸಿಗ್ನಲ್ಲುಗಳನ್ನು ಅವೈಜ್ಞಾನಿಕವಾಗಿ ದೂಷಿಸುವುದು ಬೇಡ ಎನ್ನುವುದು ಈ ಲೇಖನದ ಉದ್ದೇಶವೇ ಹೊರತು ಮೊಬೈಲಿನ ದುರ್ಬಳಕೆಗೆ ಸಮರ್ಥನೆ ಅಲ್ಲ.
ಲೇಖಕರು – ಡಾ:ಎನ್.ಬಿ.ಶ್ರೀಧರ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ
Published On - 3:21 pm, Wed, 9 June 21