ಕೊಪ್ಪಳ ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣ: ಎನ್ಐಎ ತನಿಖೆಗೆ ವಿಜಯೇಂದ್ರ ಆಗ್ರಹ
ಕೊಪ್ಪಳದ ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣ ಇದೀಗ ವಿಧಾನಸೌಧ ಆವರಣದಲ್ಲೂ ಪ್ರಸ್ತಾಪವಾಗಿದೆ. ವಿಧಾನಮಂಡಲ ಕಲಾಪದ ಮೊದಲ ದಿನ, ವಿಧಾನಸೌಧ ಆವರಣದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ಅಥವಾ ಸಿಬಿಐಗೆ ವಹಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬೆಂಗಳೂರು, ಆಗಸ್ಟ್ 11: ಕೊಪ್ಪಳದಲ್ಲಿ ಗವಿಸಿದ್ದಪ್ಪ ನಾಯಕ ಬರ್ಬರ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾದಳ (NIA) ಅಥವಾ ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಆಗ್ರಹಿಸಿದರು. ವಿಧಾನಸೌಧದ ಆವರಣದಲ್ಲಿ ಮಾತನಾಡಿದ ಅವರು, ಪ್ರಕರಣ ಸಂಬಂಧ ಎಸ್‌ಪಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಸರಿಯಾದ ರೀತಿಯಲ್ಲಿ ತನಿಖೆ ನಡೆಯುತ್ತದೆ ಎಂಬ ಭರವಸೆ ಉಳಿದಿಲ್ಲ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಹೇಳಿದರು.
ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣ ಇಡೀ ಕೊಪ್ಪಳ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಕೊಲೆ ಮಾಡುವುದನ್ನು ನಾವು ಕಂಡಿದ್ದೇವೆ. ಇದೀಗ ಅಂತಹ ಕೃತ್ಯ ಕೊಪ್ಪಳ ಜಿಲ್ಲೆಗೂ ಕಾಲಿಟ್ಟಿದೆ ಎಂದು ವಿಜಯೇಂದ್ರ ಹೇಳಿದರು.
ಕೊಪ್ಪಳದ ಗವಿಸಿದ್ದಪ್ಪ ನಾಯಕ ಬರ್ಬರ ಕೊಲೆ ಪ್ರಕರಣ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯವಾಗಿಯೂ ಇದು ಬಹಳಷ್ಟು ಸದ್ದು ಮಾಡುತ್ತಿದೆ. ಇದೀಗ ವಿಧಾನಸಭೆ ಅಧಿವೇಶನದ ಆರಂಭದ ಸಂದರ್ಭದಲ್ಲಿಯೇ ವಿಜಯೇಂದ್ರ ಈ ವಿಚಾರವನ್ನು ಪ್ರಸ್ತಾಪಿಸಿದ್ದು ರಾಷ್ಟ್ರಮಟ್ಟದ ತನಿಖಾ ಸಂಸ್ಥೆಗಳಿಂದ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಏನಿದು ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣ?
ಆಗಸ್ಟ್ ಮೂರರಂದು ರಾತ್ರಿ ಕೊಪ್ಪಳದ ವಾರ್ಡ್ ನಂಬರ್ ಮೂರರ ಮಸೀದಿ ಮುಂಭಾಗ ಗವಿಸಿದ್ದಪ್ಪ ನಾಯಕ ಎಂಬ 27 ವರ್ಷದ ಯುವಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಸಾದಿಕ್ ಎಂಬಾತ ಈ ಕೃತ್ಯ ಎಸಗಿ ಪೊಲೀಸರಿಗೆ ಶರಣಾಗಿದ್ದ. ನಂತರ ಸಾದಿಕ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಮಸೀದಿ ಮುಂದೆಯೇ ಗವಿಸಿದ್ದಪ್ಪನನ್ನು ಸಾದಿಕ್ ಕೊಲೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಎಸ್ಪಿ
ಮುಸ್ಲಿಂ ಯುವತಿ ಜೊತೆಗಿನ ಪ್ರೇಮ ಪ್ರಕರಣವೇ ಕೊಲೆಗೆ ಕಾರಣ ಎಂದು ಆರಂಭದಲ್ಲಿ ಹೇಳಲಾಗಿತ್ತು. ನಂತರ ಎಸ್‌ಪಿ ಮತ್ತೊಂದು ಹೇಳಿಕೆ ನೀಡಿ, ಮಾಜಿ ಪ್ರೇಯಸಿಗೆ ಗವಿಸಿದ್ದಪ್ಪ ಟಾರ್ಚರ್ ಕೊಡುತ್ತಿದ್ದುದೇ ಕೊಲೆಗೆ ಕಾರಣ ಎಂದು ಎಸ್‌ಪಿ ಹೇಳಿದ್ದರು. ಎಸ್‌ಪಿ ಪದೇ ಪದೇ ಹೇಳಿಕೆ ಬದಲಾಯಿಸಿದ್ದು ಆಕ್ಷೇಪಕ್ಕೆ ಕಾರಣವಾಗಿತ್ತು. ಅಲ್ಲದೆ, ಕೊಲೆಯಾದ ಯುವಕ ವಾಲ್ಮೀಕಿ ಸಮುದಾಯಕ್ಕೆ ಸೇರಿದವನಾಗಿದ್ದುದರಿಂದ, ಸಮಾಜದವರು ಕೂಡ ಸಭೆ ನಡೆಸಿ ನ್ಯಾಯಕ್ಕಾಗಿ ಹೋರಾಟ ಮಾಡಲು ಮುಂದಾಗಿದ್ದರು. ಆನಂತರ ಬಿಜೆಪಿ ನಾಯಕ ಶ್ರೀರಾಮುಲು ಕೂಡ ಸಂತ್ರಸ್ತನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಬಳಿಕ ಘಟನೆ ಕುರಿತು ರಾಜಕೀಯ ಚರ್ಚೆಗಳು ಜೋರಾಗಿದ್ದವು.







