ಬೇಸಿಗೆ ಮುಗಿದು ಮಳೆಗಾಲ (Rainy season) ಆರಂಭವಾಗಿದೆ. ಸಾಮಾನ್ಯವಾಗಿ ಮಳೆಯ ಜೊತೆ ಜೊತೆಗೆ ಜ್ವರ, ಶೀತ, ಕೆಮ್ಮು, ವಾಂತಿ, ಅಜೀರ್ಣ ಹೀಗೆ ನಾನಾ ರೀತಿಯ ರೋಗಗಳು ಒಂದರ ಹಿಂದೆ ಒಂದು ಸಾಲಾಗಿ ಬರುತ್ತದೆ. ಅದರಲ್ಲಿಯೂ ಈ ಬಾರಿ ಕೊರೊನಾ (Corona) ಹಾವಳಿ ಕೂಡ ಮತ್ತಷ್ಟು ಭಯ ಹುಟ್ಟಿಸಿದೆ. ಇನ್ನು ಯಾರಿಗೂ ತಿಳಿಯದಂತೆ ಸೈಲೆಂಟ್ ಆಗಿ ಡೆಂಘಿ, ಮಲೇರಿಯಾ, ಚಿಕನ್ ಗುನ್ಯಾ ಸೇರಿದಂತೆ ನಾನಾ ರೀತಿಯ ಗಂಭೀರ ಕಾಯಿಲೆಗಳು ಕೂಡ ಹೆಚ್ಚಾಗುತ್ತಿದೆ. ಹಾಗಾಗಿ ಇಂತಹ ಸಮಯದಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವುದು ಪೋಷಕರಿಗೆ ಒಂದು ರೀತಿಯ ಸವಾಲಾಗಿ ಪರಿಣಮಿಸಿದೆ. ಆದರೆ ಈ ರೀತಿಯ ಕಾಯಿಲೆಗಳಿಗೆ ಹೆದರುವ ಬದಲು ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಮನೆಯ್ಲಲಿಯೇ ತಯಾರಿ ಮಾಡಿಕೊಳ್ಳಬಹುದು. ನಮ್ಮ ಮುಂಜಾಗೃತೆಯಲ್ಲಿ ನಾವಿದ್ದಾಗ ಸೋಂಕುಗಳು ಬರದಂತೆ ತಡೆಯಬಹುದಾಗಿದೆ. ಹಾಗಾದರೆ ಶಾಲೆಗೆ ಹೋಗುವ ಮಕ್ಕಳ ಆರೋಗ್ಯ (Children’s health) ಕಾಪಾಡಲು ಪೋಷಕರು ಏನು ಮಾಡಬೇಕು? ಮಳೆಗಾಲದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಯಾವ ರೀತಿ ಕೇರ್ ತೆಗೆದುಕೊಳ್ಳಬೇಕು ಎಂಬುದರ ಕುರಿತು ಶ್ರೀ ಸುರಭಿ ಹೋಮಿಯೋ ಕ್ಲಿನಿಕ್ ನ ಡಾ. ಎಸ್ ಆರ್ ಭರತ್ ಕುಮಾರ್ ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು, ಅವರು ತಿಳಿಸಿರುವ ಈ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ಮಗುವಿನ ಆರೋಗ್ಯ ಕಾಪಾಡಬಹುದಾಗಿದೆ.
ಡಾ. ಭರತ್ ಕುಮಾರ್ ಅವರು ಮಳೆಗಾಲದಲ್ಲಿ ಹೆಚ್ಚಾಗುತ್ತಿರುವ ಆರೋಗ್ಯ ಸಮಸ್ಯೆಗಳ ಜೊತೆಗೆ ಅವುಗಳನ್ನು ನಿಯಂತ್ರಿಸಲು ಪೋಷಕರು ಯಾವ ರೀತಿ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಶಾಲೆಗೆ ಕಳುಹಿಸುವ ಮೊದಲು ಮಕ್ಕಳಲ್ಲಿ ಜ್ವರ, ಕೆಮ್ಮು, ವಾಂತಿ ಅಥವಾ ಅಜೀರ್ಣ ಸಮಸ್ಯೆ ಇದೆಯೇ ಎಂಬುದನ್ನು ಪರೀಕ್ಷಿಸಬೇಕು. ಹೀಗಿದ್ದಾಗ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ಜೊತೆಗೆ ಮಕ್ಕಳನ್ನು ನಿಮ್ಮ ವೈದ್ಯರ ಬಳಿ ಕರೆದುಕೊಂಡು ಹೋಗಿ ಸರಿಯಾದ ಚಿಕಿತ್ಸೆ ಕೊಡಿಸಬೇಕು. ಇನ್ನು ಮಕ್ಕಳ ಆರೋಗ್ಯ ಕಾಪಾಡಲು ಅವರ ಆಹಾರದಲ್ಲಿ ಪಥ್ಯ ಮಾಡುವಂತೆ ನೋಡಿಕೊಳ್ಳಬೇಕು. ಅಂದರೆ ಬಿಸಿ ನೀರು ಮತ್ತು ಆಹಾರ, ಹಣ್ಣು ತರಕಾರಿಗಳನ್ನು ಆಹಾರದಲ್ಲಿ ನೀಡಬೇಕು. ಆರೋಗ್ಯಕರ ಆಹಾರಗಳನ್ನು ಮಕ್ಕಳಿಗೆ ನೀಡಬೇಕು.
ಇದನ್ನೂ ಓದಿ: ಚಿಕ್ಕ ವಯಸ್ಸಿಗೆ ತಾಯಿಯಾಗುವವರೇ ಎಚ್ಚರ, ಬಾಣಂತಿ ಸನ್ನಿ ನಿಮ್ಮನ್ನು ಕಾಡಬಹುದು, ಡಾ. ಜಯಶ್ರೀ ನೀಡುವ ಸಲಹೆಗಳೇನು?
ಡಾ. ಭರತ್ ಕುಮಾರ್ ಅವರು ಹೇಳುವ ಪ್ರಕಾರ ಮಕ್ಕಳು ಶಾಲೆಯಿಂದ ಬಂದ ಮೇಲೆ ಬಟ್ಟೆ, ಸಾಕ್ಸ್ ಗಳನ್ನು ಬಿಚ್ಚಬೇಕು. ಈ ರೀತಿಯ ಅಭ್ಯಾಸ ರೂಢಿಸಿಕೊಳ್ಳುವುದು ಬಹಳ ಒಳ್ಳೆಯದು. ಇಲ್ಲವಾದಲ್ಲಿ ಇದರಿಂದ ಫಂಗಲ್ ಇನ್ಫೆಕ್ಷನ್ ಉಂಟಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಊಟ- ತಿಂಡಿ ಮಾಡುವ ಮೊದಲು ಮತ್ತು ಶೌಚಾಲಯ ಬಳಸಿದ ನಂತರ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಇನ್ನು ಮಕ್ಕಳಿಗೆ ನೀಡುವ ಆಹಾರದಲ್ಲಿ ಪ್ರೊಟೀನ್ ಹೆಚ್ಚಾಗಿರುವಂತೆ ನೋಡಿಕೊಳ್ಳಿ. ಮಕ್ಕಳಿಗೆ ಗಂಟಲ ಕೆರೆತ ಅಥವಾ ಶೀತ, ಕೆಮ್ಮಿನ ಸಮಸ್ಯೆ ಇದ್ದಲ್ಲಿ ತುಳಸಿ ಮತ್ತು ಶುಂಠಿ ಹಾಕಿ ಕುದಿಸಿರುವಂತಹ ನೀರನ್ನು ಕುಡಿಯಲು ಕೊಡಿ. ಬೀದಿ ಬದಿಯ ಆಹಾರ ಸೇವನೆ ಮಾಡುವುದಕ್ಕೆ ಕೊಡಬೇಡಿ. ಆದಷ್ಟು ಸ್ವಚ್ಛತೆಯನ್ನು ಕಾಪಾಡಿ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರಗಳ ಸೇವನೆ ಮಾಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ