Health Tips Video: ಯಾವ ಕಾರಣಕ್ಕೂ ಶೌಚಾಲಯದಲ್ಲಿ ಮೊಬೈಲ್ ಬಳಕೆ ಮಾಡಬೇಡಿ, ಎಚ್ಚರಿಕೆ ನೀಡಿದ ಡಾ. ಭರತ್ ಕುಮಾರ್
ಶೌಚಾಲಯದಲ್ಲಿ ಮೊಬೈಲ್ ಬಳಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದು ಇದು ಕಾರಣಗಳನ್ನಿಟ್ಟುಕೊಂಡು ಹೋದಲ್ಲಿ, ಬಂದಲ್ಲಿ ಮೊಬೈಲ್ ಬಳಸುವವರು, ಅದರಿಂದ ತಮ್ಮ ಆರೋಗ್ಯಕ್ಕೆ ಯಾವ ರೀತಿಯ ತೊಂದರೆಗಳು ಆಗುತ್ತದೆ ಎಂಬುದರ ಬಗ್ಗೆ ಯೋಚನೆಯೂ ಮಾಡುವುದಿಲ್ಲ. ಅದಕ್ಕಾಗಿಯೇ ಈ ಬಗ್ಗೆ ಜನರಿಗೆ ಜಾಗೃತಿ ನೀಡಲು ಟಿವಿ9 ನಿಶ್ಚಯಿಸಿದ್ದು, ಡಾ. ಎಸ್ ಆರ್ ಭರತ್ ಕುಮಾರ್ ಅವರ ಮೂಲಕ ಕೆಲವು ಮಾಹಿತಿಗಳನ್ನು ಇಲ್ಲಿ ಹಂಚಿಕೊಂಡಿದೆ. ಈ ವಿಷಯಕ್ಕೆ ಸಂಬಂಧ ಪಟ್ಟ ಮತ್ತಷ್ಟು ಮಾಹಿತಿ ಇಲ್ಲಿದೆ.
ಮಲಬದ್ಧತೆ ತಡೆಯಲು ಧಾನ್ಯ, ಸೊಪ್ಪುಗಳ ಸೇವನೆ ಮಾಡಿ ಎನ್ನುತ್ತಾರೆ ಡಾ. ಭರತ್ ಕುಮಾರ್
ಶೌಚಾಲಯದಲ್ಲಿ ಮೊಬೈಲ್ ಬಳಕೆ ಮಾಡಿದರೆ ಪೈಲ್ಸ್, ಮಲಬದ್ಧತೆ ಬರುವುದು ನಿಶ್ಚಿತ
ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ಕತ್ತು, ಬೆನ್ನಿನ ಭಾಗದಲ್ಲಿ ನೋವು ಉಲ್ಬಣ
ಮಲಬದ್ಧತೆ ಸಮಸ್ಯೆ ಇರುವವರು ಮಾಂಸಾಹಾರವನ್ನು ಮಿತವಾಗಿ ತಿನ್ನಬೇಕು.
ಕರಿದ ಆಹಾರಗಳ ಸೇವನೆ ಮಾಡುವುದನ್ನು ಕಡಿಮೆ ಮಾಡಬೇಕು.
ಇತ್ತೀಚಿನ ದಿನಗಳಲ್ಲಿ ಶೌಚಾಲಯದಲ್ಲಿ ಮೊಬೈಲ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇದರಿಂದ ನಾನಾ ರೀತಿಯ ಆರೋಗ್ಯ (Health) ಸಮಸ್ಯೆಗಳು (Health Issues) ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಪಾಯಿಖಾನೆ (Toilet) ಗಳಲ್ಲಿ ಮೊಬೈಲ್ (Mobile) ತೆಗೆದುಕೊಂಡು ಹೋಗುವುದು ತಪ್ಪು, ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅರಿವಿದ್ದರೂ ಕೂಡ ಮೊಬೈಲ್ ಗೀಳು ಅವರನ್ನು ಬಿಡುತ್ತಿಲ್ಲ. ಇದು ನಮಗೆ ಸಾಮಾನ್ಯ ವಿಷಯ ಎನಿಸಿದರೂ ಕೂಡ ಇದರಿಂದ ವ್ಯಕ್ತಿಯ ಆರೋಗ್ಯ ಹಾಳಾಗಬಹುದು. ಹಾಗಾದರೆ ಶೌಚಾಲಯದಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ ಮತ್ತು ಶೌಚಾಲಯದಲ್ಲಿ ಮೊಬೈಲ್ ಬಳಕೆ ಮಾಡುವುದರಿಂದ ಆರೋಗ್ಯದ ಮೇಲಾಗುವ ಅಡ್ಡಪರಿಣಾಮಗಳೇನು? ಈ ಬಗ್ಗೆ, ಶ್ರೀ ಸುರಭಿ ಹೋಮಿಯೋ ಕ್ಲಿನಿಕ್ ನ ಡಾ. ಎಸ್ ಆರ್ ಭರತ್ ಕುಮಾರ್ ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು, ಮೊಬೈಲ್ ಬಳಕೆ ಮಾಡುವುದರಿಂದ ಯಾವ ರೀತಿ ಆರೋಗ್ಯ ಹಾಳಾಗುತ್ತದೆ? ಅದನ್ನು ತಡೆಯಲು ಏನು ಮಾಡಬೇಕು? ಯಾವ ರೀತಿಯ ಆಹಾರಗಳ ಸೇವನೆ ಮಾಡಿದಾಗ ಮಲವಿಸರ್ಜನೆ ಸರಾಗವಾಗಿ ಆಗುತ್ತದೆ ಎಂಬುದರ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ.
ಶೌಚಾಲಯದಲ್ಲಿ ಹೆಚ್ಚು ಸಮಯ ಕಳೆದರೆ ಈ ರೋಗ ಬರುವುದು ನಿಶ್ಚಿತ
ಡಾ. ಭರತ್ ಕುಮಾರ್ ಅವರು ತಿಳಿಸಿರುವ ಮಾಹಿತಿ ಪ್ರಕಾರ, ಶೌಚಾಲಯದಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ ನಮ್ಮ ಹೊಟ್ಟೆ ಮತ್ತು ಕುರುಳಿನ ಭಾಗದ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಇದರಿಂದ ಮೂಲವ್ಯಾಧಿ (ಪೈಲ್ಸ್), ಮಲಬದ್ಧತೆಯಂತಹ ಸಮಸ್ಯೆಗೆ ಕಾರಣವಾಗುತ್ತದೆ. ಅದರಲ್ಲಿಯೂ ಶೌಚಾಲಯದಲ್ಲಿ ಬ್ಯಾಕ್ಟೀರಿಯಾ, ವೈರೆಸ್ ಮತ್ತು ಫಂಗಸ್ ಗಳು ಹೆಚ್ಚಾಗಿ ಇರುವುದರಿಂದ, ನಾವು ಹೆಚ್ಚು ಹೊತ್ತು ಅಲ್ಲಿಯೇ ಕುಳಿತುಕೊಳ್ಳುವುದರಿಂದ ಆ ಸೋಂಕು ನಮ್ಮ ದೇಹಕ್ಕೂ ಹರಡಬಹುದಾಗಿದೆ. ಜೊತೆಗೆ ಶೌಚಾಲಯದಲ್ಲಿ ಒಂದೇ ಭಂಗಿಯಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ ಕತ್ತು ಮತ್ತು ಬೆನ್ನಿನ ಭಾಗದಲ್ಲಿ ನೋವು ಉಲ್ಬಣವಾಗುತ್ತದೆ.
ಶೌಚಾಲಯದಲ್ಲಿ ಮೊಬೈಲ್ ಬಳಕೆ ಮಾಡಿದರೆ ಏನಾಗುತ್ತೆ?
ಇತ್ತೀಚಿನ ದಿನಗಳಲ್ಲಿ ಶೌಚಾಲಯದಲ್ಲಿ ಮೊಬೈಲ್ ಬಳಕೆ ಮಾಡುವುದು ಬಹಳ ಹೆಚ್ಚಾಗುತ್ತಿದೆ ಈ ರೀತಿಯ ಅಭ್ಯಾಸದಿಂದ ಅಂದರೆ ಮೊಬೈಲ್ ಅನ್ನು ಪಾಯಿಖಾನೆಗಳಲ್ಲಿಯೂ ಬಳಕೆ ಮಾಡುವುದರಿಂದ ಅಲ್ಲಿರುವ ಬ್ಯಾಕ್ಟೀರಿಯಾ ಮತ್ತು ವೈರೆಸ್ ಗಳು ನಮ್ಮ ದೇಹಕ್ಕೆ ಹೋಗಿ ಸೋಂಕು ತಗಲುವ ಪ್ರಮಾಣ ಹೆಚ್ಚಾಗುತ್ತದೆ. ಮೊಬೈಲ್ ಬಳಸುತ್ತಾ ಮಲವಿಸರ್ಜನೆ ಮಾಡುವಾಗ ನಮ್ಮ ಗಮನ ಮೊಬೈಲ್ ಬಳಕೆಯ ಮೇಲಿರುತ್ತದೆ. ಹೊರತು ಮಲ ಹೊರಹಾಕುವುದರ ಬಗ್ಗೆ ಗಮನ ಇರುವುದಿಲ್ಲ ಇದರಿಂದ ನಾವು ಶೌಚಾಲಯದಲ್ಲಿಯೇ ಹೆಚ್ಚು ಸಮಯ ಕಳೆಯುವಂತಾಗುತ್ತದೆ ಇದರಿಂದ ಮಲಬದ್ದತೆ ಉಂಟಾಗುತ್ತದೆ. ಇನ್ನು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಂದಲೂ ಕೂಡ ಮಲಬದ್ದತೆ ಉಂಟಾಗಬಹುದು. ಇದರ ಪರಿಣಾಮದಿಂದ ಶೌಚಾಲಯದಲ್ಲಿ ಹೆಚ್ಚು ಸಮಯ ಕಳೆಯುವಂತಾಗಬಹುದು.
ಡಾ. ಭರತ್ ಕುಮಾರ್ ಅವರು ತಿಳಿಸಿರುವ ಸಲಹೆಗಳೇನು?
ಈ ರೀತಿಯ ಸಮಸ್ಯೆಯನ್ನು ತಡೆಗಟ್ಟಲು ಡಾ. ಎಸ್ ಆರ್ ಭರತ್ ಕುಮಾರ್ ಅವರು ಕೆಲವು ಮಾಹಿತಿ ಹಂಚಿಕೊಂಡಿದ್ದು ಅವರು ಹೇಳಿರುವ ಪ್ರಕಾರ, ಶೌಚಾಲಯಕ್ಕೆ ಮೊಬೈಲ್ ತೆಗೆದುಕೊಂಡು ಹೋಗುವ ಅಭ್ಯಾಸವನ್ನು ಬಿಡಬೇಕು. ಜೊತೆಗೆ ಐದರಿಂದ ಹತ್ತು ನಿಮಿಷದ ಒಳಗೆ ಮಲವಿಸರ್ಜನೆ ಮಾಡಿ ಹೊರಗೆ ಬರಬೇಕು. ಪ್ರತಿನಿತ್ಯ ಪಚನಕ್ರಿಯೆ ಸರಿಯಾಗಿ ಆಗಲು ನಿದ್ರೆ ಸರಿಯಾಗಿ ಮಾಡಬೇಕು. ಅದರ ಜೊತೆಗೆ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಇದೆಲ್ಲದಕ್ಕಿತಲೂ ಮುಖ್ಯವಾಗಿ ನಾವು ದಿನನಿತ್ಯ ಸೇವನೆ ಮಾಡುವ ಆಹರದ ಬಗ್ಗೆ ಗಮನವಿರಬೇಕು. ಅಂದರೆ ಮಾಂಸಾಹಾರ ಸೇವನೆ ಮಾಡುವವರು ಮಿತವಾಗಿ ತಿನ್ನಬೇಕು. ಖರೀದ ಆಹಾರಗಳ ಸೇವನೆ ಮಾಡುವುದನ್ನು ಕಡಿಮೆ ಮಾಡಬೇಕು. ಮೈದಾ ಬಳಕೆ ಮಾಡಿದಂತಹ ಆಹಾರಗಳನ್ನು ತಿನ್ನಬಾರದು.
ಇದನ್ನೂ ಓದಿ: ತಾಳ್ಮೆ ಜತೆಗೆ ಬಾಣಂತಿಯರು ಇವುಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು, ಟಿವಿ9 ಮೂಲಕ ಬಾಣಂತಿಯರಿಗೆ ಸಲಹೆ ನೀಡಿದ ಡಾ. ಶಿಲ್ಪಾ
ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು?
ಡಾ. ಎಸ್ ಆರ್ ಭರತ್ ಕುಮಾರ್ ಅವರು ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಯಲು ಧಾನ್ಯ, ಸೊಪ್ಪುಗಳ ಸೇವನೆ ಮಾಡಬೇಕು. ಪಪ್ಪಾಯಿ, ಬಾಳೆಹಣ್ಣು, ದಾಳಿಂಬೆ ಮತ್ತು ಸೇಬು ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡಿ. ಇದಾದ ನಂತರವೂ ಮೂಲವ್ಯಾಧಿ (ಪೈಲ್ಸ್) ಮತ್ತು ಮಲಬದ್ಧತೆಯಂತಹ ಸಮಸ್ಯೆ ಕಂಡುಬಂದರೆ ವೈದ್ಯರ ಸಂಪರ್ಕ ಮಾಡುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:08 pm, Mon, 12 May 25