Heart attack: ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ? ಮಣಿಪಾಲದ ವೈದ್ಯರು ಹೇಳೋದೇನು?
ಇತ್ತೀಚಿಗೆ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತಿದೆ. ಅದರಲ್ಲಿಯೂ ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಇದಕ್ಕೆ ಹಲವು ಕಾರಣಗಳು ಇರಬಹುದು. ಆದರೆ ಒಂದಿಷ್ಟು ಜನ ಜೋರಾದ ಡಿಜೆ ಮ್ಯೂಸಿಕ್ ಅಥವಾ ಅತಿಯಾದ ಬೆಳಕಿನಿಂದಲೂ ಕೂಡ ಹೃದಯಾಘಾತವಾಗುತ್ತದೆ, ಇದು ಕೂಡ ಅಂತಹ ಕಾರಣಗಳಲ್ಲಿ ಒಂದು ಎಂದು ತಿಳಿದುಕೊಂಡಿದ್ದಾರೆ. ಹಾಗಾದರೆ ಇದು ನಿಜವೇ? ಈ ಬಗ್ಗೆ ಡಾ. ಕುಮಾರ್ ಕೆಂಚಪ್ಪ ಟಿವಿ9 ಕನ್ನಡ ಜೊತೆ ಮಾತನಾಡಿದ್ದು, ಅವರು ಈ ಬಗ್ಗೆ ಹೇಳಿರುವುದೇನು ಎಂಬುದನ್ನು ತಿಳಿದುಕೊಳ್ಳಿ.
ಡಿಜೆ ಸೌಂಡ್ ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಲೌಡ್ ಸ್ಪೀಕರ್ ಹತ್ತಿರದಲ್ಲಿ ನಿಂತುಕೊಳ್ಳುವುದು ಏಕೆ ಒಳ್ಳೆಯದಲ್ಲ?
ದುರ್ಬಲ ಹೃದಯದವರಾಗಿದ್ದರೆ, ಪ್ಯಾನಿಕ್ ಅಟ್ಯಾಕ್ ಗಳು ಆಗುತ್ತಿದ್ದವರಿಗೆ ಡಿಜೆ ಸೌಂಡ್ ಒಳ್ಳೆಯದಲ್ಲ
ಅತಿಯಾದ ಗದ್ದಲದಿಂದ ದೂರ ಇದ್ದು ಎಂಜಾಯ್ ಮಾಡಿ
ಇತ್ತೀಚಿನ ದಿನಗಳಲ್ಲಿ ಹೃದಯಾಘಾತ (Heart attack) ಪ್ರಕರಣಗಳು ಹೆಚ್ಚಾಗುತ್ತಿದ್ದು ಸಣ್ಣ ವಯಸ್ಸಿನವರನ್ನು ಇದು ಬಿಟ್ಟಂತೆ ಕಾಣುತ್ತಿಲ್ಲ. ಮೊದಲೆಲ್ಲಾ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿತ್ತು, ಆದರೆ ಈಗ ಹಾಗಲ್ಲ. ನಾವು ಅನುಸರಿಸಿಕೊಂಡ ಜೀವನಶೈಲಿ (Lifestyle), ನಮ್ಮ ಆಹಾರ ಪದ್ಧತಿ ಅಥವಾ ಇನ್ನಿತರ ಕಾರಣಗಳು ಈ ರೀತಿಯ ಸಮಸ್ಯೆಗಳಿಗೆ ಕಾರಣವಾಗಿರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಒಂದಿಷ್ಟು ಜನ ಜೋರಾದ ಡಿಜೆ ಮ್ಯೂಸಿಕ್ ಅಥವಾ ಅತಿಯಾದ ಬೆಳಕಿನಿಂದಲೂ ಕೂಡ ಹೃದಯಾಘಾತವಾಗುತ್ತದೆ ಎಂದು ತಿಳಿದುಕೊಂಡಿದ್ದಾರೆ. ಅದಲ್ಲದೆ ರಾಕೇಶ್ ಪೂಜಾರಿ (Rakesh Poojary) ನಿಧನ ಹೊಂದಿದಾಗ ಡಿಜೆ ಸೌಂಡ್ ನಿಂದ ಹೃದಯಾಘಾತವಾಗಿರಬಹುದು ಎಂಬಂತಹ ಚರ್ಚೆಗಳು ನಡೆಯುತ್ತಿರುವುದನ್ನು ಕೂಡ ನೋಡಿರಬಹುದು. ಹಾಗಾದರೆ ಇದು ನಿಜವೇ? ಡಿಜೆ ಶಬ್ದ ಸಾವಿಗೆ ಕಾರಣವಾಗುತ್ತದೆ ಎನ್ನುವುದಕ್ಕೆ ಕಾರಣವೇನು? ಈ ಬಗ್ಗೆ ಹೆಬ್ಬಾಳ ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್ ಇಂಟರ್ವೆನ್ಶನಲ್ ಕಾರ್ಡಿಯಾಲಾಜಿಸ್ಟ್ ಡಾ. ಕುಮಾರ್ ಕೆಂಚಪ್ಪ ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು, ಈ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ.
ಡಾ. ಕುಮಾರ್ ಕೆಂಚಪ್ಪ ಅವರು ಹೇಳುವ ಪ್ರಕಾರ, “ಅತಿಯಾದ ಬೆಳಕು, ಜೋರಾದ ಶಬ್ದ ಅಥವಾ ಡಿಜೆ ಮ್ಯೂಸಿಕ್ ಗಳಿಂದ ಹೃದಯಾಘಾತವಾಗುತ್ತದೆ ಎಂಬುದು ಹಲವರಿಗಿರುವ ಸಂಶಯ. ಆದರೆ ಇದು ಪೂರ್ತಿಯಾಗಿ ಸತ್ಯವಲ್ಲ. ಕೆಲವರು ತುಂಬಾ ಸೆನ್ಸಿಟಿವ್ ಇದ್ದು ದುರ್ಬಲ ಹೃದಯದವರಾಗಿದ್ದರೆ ಅಥವಾ ಅವರಿಗೆ ಆತಂಕ, ಪ್ಯಾನಿಕ್ ಅಟ್ಯಾಕ್ ಗಳು ಆಗುತ್ತಿದ್ದರೆ ಅಂತವರು ಜೋರಾದ ಶಬ್ದ ಅಥವಾ ಡಿಜೆ ಸೌಂಡ್ ಗಳನ್ನು ಕೇಳಿದಾಗ ಅಥವಾ ಪ್ರಕರ ಬೆಳಕು ಬಿದ್ದಾಗ ಅವರ ಹೃದಯದ ಮೇಲೆ ಒತ್ತಡ ಬೀಳಬಹುದು. ಅಂತಹ ಸಂದರ್ಭದಲ್ಲಿ ಹೃದಯಾಘಾತಗಳು ಆಗಬಹುದು ಆದರೆ ಆರೋಗ್ಯವಾಗಿರುವ ವ್ಯಕ್ತಿಗೆ ಡಿಜೆ ಸೌಂಡ್ ಅಥವಾ ಪ್ರಕಾಶಮಾನವಾದ ಬೆಳಕು ಆನ್, ಆಫ್ ಆಗುವುದರಿಂದ, ಹೃದಯಾಘಾತವಾಗುತ್ತದೆ ಎಂಬುದು ಸುಳ್ಳು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Health Tips Video: ಯಾವ ಕಾರಣಕ್ಕೂ ಶೌಚಾಲಯದಲ್ಲಿ ಮೊಬೈಲ್ ಬಳಕೆ ಮಾಡಬೇಡಿ, ಎಚ್ಚರಿಕೆ ನೀಡಿದ ಡಾ. ಭರತ್ ಕುಮಾರ್
ಹೃದಯಾಘಾತ ತಡೆಯಲು ಏನು ಮಾಡಬಹುದು?
ಡಾ. ಕುಮಾರ್ ಕೆಂಚಪ್ಪ ತಿಳಿಸಿರುವ ಮಾಹಿತಿ ಪ್ರಕಾರ, “ಅಧಿಕ ರಕ್ತದೊತ್ತಡ, ಎಪಿಲೆಪ್ಸಿ, ಆತಂಕ ಇನ್ನಿತರ ಆರೋಗ್ಯ ಸಮಸ್ಯೆಗಳಿರುವವರು ಈ ರೀತಿ ಡಿಜೆ, ಪ್ರಖರ ಬೆಳಕು, ಅತಿಯಾದ ಗದ್ದಲದಿಂದ ದೂರ ಇರುವುದು ಬಹಳ ಉತ್ತಮ. ಇವುಗಳನ್ನು ಸ್ವಲ್ಪ ದೂರದಿಂದಲೇ ನೋಡಿ ಎಂಜಾಯ್ ಮಾಡಬಹುದು. ಲೌಡ್ ಸ್ಪೀಕರ್ ಹತ್ತಿರದಲ್ಲಿ ನಿಂತುಕೊಳ್ಳುವುದಕ್ಕಿಂತ ದೂರ ನಿಂತು ಕೇಳಬಹುದು ಅಥವಾ ನೋಡಬಹುದು. ಅತಿಯಾದ ಶಬ್ದ ಅಥವಾ ಬೆಳಕಿನಿಂದ ನಮ್ಮ ದೇಹದಲ್ಲಿ ಒತ್ತಡ ಹೆಚ್ಚಾಗಿ ಅಡ್ರಿನಲ್ ಮತ್ತು ಕಾರ್ಟಿಸೋಲ್ ಎಂಬ ಒತ್ತಡದ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದರಿಂದ ರಕ್ತದ ಒತ್ತಡ ಹೆಚ್ಚಾಗುತ್ತದೆ, ಹೃದಯದ ಬಡಿತ ಏರುಪೇರಾಗುತ್ತದೆ. ಹಾಗಾಗಿ ಈ ಹಿಂದೆ ಹೃದಯಾಘಾತವಾಗಿ ಅದರಿಂದ ಚೇತರಿಸಿಕೊಂಡವರು, ಒತ್ತಡ ಅಥವಾ ಬಿಪಿ ಇರುವಂತವರು ಲೌಡ್ ಸ್ಪೀಕರ್ ಅಥವಾ ಪ್ರಕಾರ ಬೆಳಕು ಅಥವಾ ಡಿಜಿ ಸೌಂಡ್ ಇರುವಲ್ಲಿ ಬಹಳ ಎಚ್ಚರ ವಹಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

