
ಪಪ್ಪಾಯಿ (Papaya) ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಫೋಲೇಟ್, ಫೈಬರ್, ಪೊಟ್ಯಾಸಿಯಂ ಮತ್ತು ಪಪೈನ್ (Papain) ಎಂಬ ಜೀರ್ಣಕ್ರಿಯೆಗೆ ಸಹಾಯ ಮಾಡುವ ಎನ್ಜೈಮ್‌ಗಳು ಸಮೃದ್ಧವಾಗಿವೆ. ಸಾಮಾನ್ಯವಾಗಿ ಪಪ್ಪಾಯಿ ಜೀರ್ಣಕ್ರಿಯೆ ಸುಧಾರಿಸಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ಚರ್ಮದ ಆರೋಗ್ಯ ಕಾಪಾಡಲು ಸಹಾಯಕ ಎಂದು ಪರಿಗಣಿಸಲಾಗುತ್ತದೆ. ಆದರೆ ಪ್ರತಿಯೊಬ್ಬರಿಗೂ ಪಪ್ಪಾಯಿ ಒಂದೇ ರೀತಿಯಲ್ಲಿ ಪ್ರಯೋಜನಕಾರಿಯಲ್ಲ. ಕೆಲವು ಆರೋಗ್ಯ ಸಮಸ್ಯೆಗಳು, ಅಲರ್ಜಿ ಅಥವಾ ವಿಶೇಷ ದೈಹಿಕ ಸ್ಥಿತಿಗಳಿರುವವರು ಪಪ್ಪಾಯಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಗರ್ಭಿಣಿಯರು: ಗರ್ಭಧಾರಣೆಯ ಆರಂಭಿಕ ತಿಂಗಳುಗಳಲ್ಲಿ ಹಸಿ ಅಥವಾ ಅರ್ಧ ಮಾಗಿದ ಪಪ್ಪಾಯಿ ಸೇವಿಸುವುದನ್ನು ತಪ್ಪಿಸಬೇಕು. ಹಸಿ ಪಪ್ಪಾಯಿಯಲ್ಲಿ ಇರುವ ಲ್ಯಾಟೆಕ್ಸ್ (Latex) ಮತ್ತು ಪಪೈನ್ (Papain) ಗರ್ಭಾಶಯದ ಸಂಕೋಚನವನ್ನು ಉತ್ತೇಜಿಸುವ ಸಾಧ್ಯತೆ ಇದೆ. ಇದರಿಂದ ಗರ್ಭಪಾತ ಅಥವಾ ಅಕಾಲಿಕ ಹೆರಿಗೆಯ ಅಪಾಯ ಹೆಚ್ಚಾಗಬಹುದು. ಆದರೆ ಸಂಪೂರ್ಣವಾಗಿ ಹಣ್ಣಾದ ಪಪ್ಪಾಯಿಯನ್ನು ಮಿತ ಪ್ರಮಾಣದಲ್ಲಿ ಸೇವಿಸುವ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಕಿಡ್ನಿ ಕಲ್ಲಿನ ಸಮಸ್ಯೆ ಇರುವವರು: ಪಪ್ಪಾಯಿಯಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದೆ. ಆದರೆ ವಿಟಮಿನ್ ಸಿ ಅನ್ನು ಅತಿಯಾಗಿ ಸೇವಿಸಿದರೆ ಅದು ದೇಹದಲ್ಲಿ ಆಕ್ಸಲೇಟ್ ಆಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಆಕ್ಸಲೇಟ್ ಕಲ್ಲುಗಳಿಗೆ ಒಳಗಾಗುವವರಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಮರುಕಳಿಸುವ ಸಾಧ್ಯತೆ ಇರುವುದರಿಂದ ಮಿತ ಪ್ರಮಾಣದಲ್ಲಿ ಮಾತ್ರ ಸೇವಿಸುವುದು ಸೂಕ್ತ.
ಹೈಪೋಥೈರಾಯಿಡಿಸಂ ಇರುವವರು: ಕೆಲವು ಅಧ್ಯಯನಗಳ ಪ್ರಕಾರ ಪಪ್ಪಾಯಿಯಲ್ಲಿರುವ ಕೆಲವು ಸಸ್ಯ ಮೂಲದ ಸಂಯುಕ್ತಗಳು (Goitrogenic compounds) ಐಯೋಡಿನ್ ಬಳಕೆಯ ಮೇಲೆ ಅಲ್ಪ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಹೈಪೋಥೈರಾಯಿಡಿಸಂ ಇರುವವರು ವೈದ್ಯರ ಸಲಹೆಯಂತೆ ಆಹಾರ ಕ್ರಮ ಪಾಲಿಸುವುದು ಉತ್ತಮ.
ಹೃದಯ ಬಡಿತ ಅಸಮರ್ಪಕವಾಗಿರುವವರು: ಕೆಲವು ಸಂಶೋಧನೆಗಳಲ್ಲಿ ಪಪೈನ್ ಎನ್ಜೈಮ್ ಹೃದಯದ ಕಾರ್ಯವೈಖರಿಯ ಮೇಲೆ ಅಲ್ಪ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಕುರಿತು ಉಲ್ಲೇಖಿಸಲಾಗಿದೆ. ಹೃದಯದ ರಿದಮ್ ಸಮಸ್ಯೆ (Arrhythmia) ಅಥವಾ ನಿಧಾನ ಹೃದಯ ಬಡಿತದ ಸಮಸ್ಯೆ ಇರುವವರು ಪಪ್ಪಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.
ಇದನ್ನೂ ಓದಿ: ಪೋಷಕರೇ ಎಚ್ಚರ! ಮಕ್ಕಳಲ್ಲಿ ಜಂಕ್ ಫುಡ್ ಅಭ್ಯಾಸ ಹೆಚ್ಚಿದರೆ ಈ ಗಂಭೀರ ಆರೋಗ್ಯ ಸಮಸ್ಯೆಗಳು ಬರಬಹುದು!
ಲ್ಯಾಟೆಕ್ಸ್ ಅಲರ್ಜಿ ಅಥವಾ ಆಸ್ತಮಾ ಇರುವವರು: ಲ್ಯಾಟೆಕ್ಸ್ ಅಲರ್ಜಿ ಇರುವವರಿಗೆ ಪಪ್ಪಾಯಿ ಕೆಲವೊಮ್ಮೆ ಅಲರ್ಜಿಕ್ ಪ್ರತಿಕ್ರಿಯೆ ಉಂಟುಮಾಡಬಹುದು. ಅಂತವರಿಗೆ ಚರ್ಮದಲ್ಲಿ ಕೆಂಪು ದದ್ದು, ತುರಿಕೆ, ಉಸಿರಾಟದ ತೊಂದರೆ, ಮೂಗಲ್ಲಿ ನೀರು ಸುರಿಯುವುದು ಸೇರಿದಂತೆ ನಾನಾ ರೀತಿಯ ಲಕ್ಷಣಗಳು ಕಂಡುಬರುತ್ತದೆ. ತೀವ್ರ ಆಸ್ತಮಾ ಇರುವವರು ಸಹ ವೈದ್ಯರ ಸಲಹೆಯಂತೆ ಸೇವಿಸುವುದು ಉತ್ತಮ.
ಮಧುಮೇಹದ ಔಷಧಿ ಸೇವಿಸುವವರು: ಪಪ್ಪಾಯಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಗುಣಗಳಿವೆ. ಈಗಾಗಲೇ ಇನ್ಸುಲಿನ್ ಅಥವಾ ಶುಗರ್ ಔಷಧಿಗಳನ್ನು ತೆಗೆದುಕೊಳ್ಳುವವರು ಹೆಚ್ಚು ಪ್ರಮಾಣದಲ್ಲಿ ಪಪ್ಪಾಯಿ ಸೇವಿಸಿದರೆ ಕೆಲವರಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಅತಿಯಾಗಿ ಕಡಿಮೆಯಾಗುವ (Hypoglycemia) ಸಾಧ್ಯತೆ ಇರಬಹುದು. ಆದ್ದರಿಂದ ಮಿತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ