Passive smokers: ಪ್ಯಾಸಿವ್ ಸ್ಮೋಕಿಂಗ್ ಮಾಡುವವರಲ್ಲೂ ಕ್ಯಾನ್ಸರ್ ಸಂಭವ ಹೆಚ್ಚು! ಡಾ. ಸಾನ್ಯೋ ಡಿಸೋಜಾ ಸಲಹೆ ಇಲ್ಲಿದೆ
ಧೂಮಪಾನ , ತಂಬಾಕು ಸೇವನೆಯಿಂದ ಜೀವಕ್ಕೆ ಅಪಾಯ ಇದೆ ಎಂಬುದು ಎಲ್ಲರಿಗೂ ಗೊತ್ತು, ಆದರೂ ಅದನ್ನು ಬಳಸುತ್ತೇವೆ. ಆದರೆ ಇದರ ಪರಿಣಾಮ ಉಪಯೋಗಿಸುವವರಿಗೆ ಮಾತ್ರವಲ್ಲ ಪಕ್ಕದಲ್ಲಿರುವವರಿಗೂ ಹಾನಿ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಧೂಮಪಾನ , ತಂಬಾಕು ಸೇವನೆಯಿಂದ ಕ್ಯಾನರ್ ಬರುತ್ತದೆ ಎಂಬುದು ತಿಳಿದ ವಿಷಯ, ಇದು ಸೇವನೆ ಮಾಡುವವರಿಗೆ ಮಾತ್ರವಲ್ಲ ಪಕ್ಕದಲ್ಲಿದ್ದ ವ್ಯಕ್ತಿಗೂ ಬರುತ್ತದೆ. ಇದನ್ನು ಪ್ಯಾಸಿವ್ ಸ್ಮೋಕಿಂಗ್ ಎಂದು ಕರೆಯುತ್ತಾರೆ. ಇದರಿಂದ ಯಾವೆಲ್ಲಾ ಸಮಸ್ಯೆಗಳು ಎದುರಿಸಬೇಕಾಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ.

ಧೂಮಪಾನ , ತಂಬಾಕು ಸೇವನೆ ಮಾಡುವವರಲ್ಲಿ ಶ್ವಾಸಕೋಶ ಕ್ಯಾನ್ಸರ್ , ಹೃದಯ ಸಂಬಂಧಿ ಸಮಸ್ಯೆ ಸೇರಿ ಅನೇಕ ರೀತಿಯ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಇದರ ಜೊತೆಗೆ ಪ್ಯಾಸಿವ್ ಸ್ಮೋಕಿಂಗ್ (Passive smokers) ಅಂದರೆ ಧೂಮಪಾನ ಮಾಡುತ್ತಿರುವವರ ಜೊತೆಯಲ್ಲಿ ನಿಂತವರಿಗೂ ಕೂಡ ಶ್ವಾಸಕೋಶ ಕ್ಯಾನ್ಸರ್ (Lung Cancer) ಸಂಭವ ಹೆಚ್ಚಾಗಿರುತ್ತದೆ. ಧೂಮಪಾನ ಮಾಡುತ್ತಿರುವವರ ಜೊತೆಗೆ ಅವರ ಸುತ್ತಲಿನ ಪರಿಸರದಲ್ಲಿರುವವರಲ್ಲಿಯೂ ಆರೋಗ್ಯ ಸಮಸ್ಯೆ ಕಂಡುಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ವಯಸ್ಕರಲ್ಲಿ ಧೂಮಪಾನ ಅಥವಾ ತಂಬಾಕು ಸೇವಿಸದೇ ಕೇವಲ ಧೂಮಪಾನ ಮಾಡುವವರ ಜೊತೆ ಇದ್ದು ಪರೋಕ್ಷವಾಗಿ ಆ ಹೊಗೆಯನ್ನು ಸೇವಿಸುತ್ತಿರುವರಲ್ಲಿ ಕೂಡ ಶ್ವಾಸಕೋಶ ಕ್ಯಾನ್ಸರ್ ಕಂಡುಬರುವ ಸಾಧ್ಯತೆ ಶೇ. 20-30 ರಷ್ಟಿದೆ . ಹೀಗಾಗಿ ಧೂಮಪಾನ ಮಾಡುತ್ತಿರುವವರ ಹತ್ತಿರ ನಿಲ್ಲುವುದು ಕೂಡ ಆರೋಗ್ಯಕ್ಕೆ ಹಾನಿಕಾರಕ. ನೇರವಾಗಿ ತಂಬಾಕು, ಸಿಗರೇಟ್ ಸೇವಿಸುವವರಲ್ಲಿ ಹೃದಯ ಸಮಸ್ಯೆ, ಶ್ವಾಸಕೋಶ ಸಮಸ್ಯೆ, ಡಯಾಬಿಟಿಸ್ ನಂತಹ ಆರೋಗ್ಯ ಸಮಸ್ಯೆ ಸಾಧ್ಯತೆ ಎಷ್ಟಿದೆಯೋ ಪರೋಕ್ಷವಾಗಿ ಇಂತಹ ಕೆಟ್ಟ ಅಭ್ಯಾಸಕ್ಕೆ ಗುರಿಯಾಗುವವರಲ್ಲೂ ಆರೋಗ್ಯ ಸಮಸ್ಯೆಯ ಸಾಧ್ಯತೆ ಕೂಡ ಅಧಿಕವಾಗಿದೆ ಎಂದು ಮಂಗಳೂರು ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಆನ್ಕೋಲಾಜಿ ವೈದ್ಯರಾದ ಡಾ. ಸಾನ್ಯೋ ಡಿಸೋಜಾ(Dr.Sanyo D’Souza) ಹೇಳಿದ್ದಾರೆ.
ಧೂಮಪಾನ ಮಾಡದವರಲ್ಲೂ ಆರೋಗ್ಯ ಸಮಸ್ಯೆ
ಸೆಕೆಂಡ್ ಹ್ಯಾಂಡ್ ಸ್ಮೋಕ್ ಅಥವಾ ಪ್ಯಾಸಿವ್ ಸ್ಮೋಕ್ ಎನ್ನುವುದು ಮನೆ ಜೊತೆಗೆ ಸಾಕಷ್ಟು ಸಾರ್ವಜನಿಕ ಪ್ರದೇಶಗಳಲ್ಲಿ ಕಂಡುಬರುತ್ತಿರುವ ಸಮಸ್ಯೆ. ಇನ್ನೊಬ್ಬರು ಸೇದಿ ಹೊರಬಿಟ್ಟ ಧೂಮಪಾನದ ಹೊಗೆಯನ್ನು ಮತ್ತೊಬ್ಬರು ಸೇವಿಸುವುದರಿಂದಲೂ ಆರೋಗ್ಯ ಸಮಸ್ಯೆಗೆ ಗುರಿಯಾಗಬಹುದು. ಬಸ್ ಸ್ಟ್ಯಾಂಡ್, ರೈಲ್ವೇ ಸ್ಟೇಷನ್, ರೆಸ್ಟೋರೆಂಟ್‌ಗಳಲ್ಲಿ ಧೂಮಪಾನ, ತಂಬಾಕು ಸೇವಿಸುವವರು, ಸೇವಿಸದೇ ಇರುವವರೂ ಇಬ್ಬರನ್ನೂ ಕಾಣಬಹುದು. ಆದರೆ ಓರ್ವ ವ್ಯಕ್ತಿ ಧೂಮಪಾನ ಮಾಡಿದರೂ ಈ ಹೊಗೆಯನ್ನು ಅನೇಕರು ಪರೋಕ್ಷವಾಗಿ ಸೇವಿಸಿರುವ ಸಾಧ್ಯತೆ ಇರುತ್ತದೆ. ಇದೇ ರೀತಿ ಮನೆಯಲ್ಲಿ ಧೂಮಪಾನ, ತಂಬಾಕು ಸೇವನೆ ಮಾಡುವವರಿದ್ದರೆ ಮಕ್ಕಳು, ಸಾಕು ಪ್ರಾಣಿಗಳು, ವೃದ್ಧರು ಕೂಡ ಪರೋಕ್ಷ ಧೂಮಪಾನಕ್ಕೆ ಗುರಿಯಾಗುತ್ತಾರೆ. ಹೀಗಾಗಿ ಪ್ಯಾಸಿಸ್ ಸ್ಮೋಕಿಂಗ್ ಎನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸಿದೆ. ಸಿಗರೇಟ್‌ನಲ್ಲಿ 7 ಸಾವಿರ ರಾಸಾಯನಿಕ ಪದಾರ್ಥಗಳಿರುತ್ತವೆ. ಅದರಲ್ಲಿ 70 ಕ್ಯಾನ್ಸರ್‍ಕಾರಕ ಅಂಶಗಳಿವೆ. ಇದರಿಂದ ವಯಸ್ಕರು ಹಾಗೂ ಮಕ್ಕಳಲ್ಲಿ ಶ್ವಾಸಕೋಶದ ಸೋಂಕು, ಅಸ್ತಮಾ, ಕಿವಿಯ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಇದೆ.
ಇದನ್ನೂ ಓದಿ: ಐಬ್ರೋ ಶೇಪ್ ಮಾಡುವ ಮುನ್ನ ಹುಷಾರು; ಸೌಂದರ್ಯ ಹೆಚ್ಚಿಸಲು ಹೋಗಿ ಅಪಾಯ ತಂದುಕೊಳ್ಳಬೇಡಿ
ಪ್ಯಾಸಿವ್ ಸ್ಮೋಕಿಂಗ್‌ಗೆ ಗುರಿಯಾದಷ್ಟು ಕ್ಯಾನ್ಸರ್ ಅಪಾಯ ಹೆಚ್ಚು
ಎಷ್ಟು ಪ್ರಮಾಣದಲ್ಲಿ ಪರೋಕ್ಷ ಧೂಮಪಾನ ಮಾಡಿದರೆ ಕ್ಯಾನ್ಸರ್ ಬರಬಹುದು? ಎಂಬ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯವಿಲ್ಲ. ಹೆಚ್ಚು ಹೆಚ್ಚು ಈ ಪ್ಯಾಸಿವ್ ಸ್ಮೋಕಿಂಗ್‌ಗೆ ಗುರಿಯಾದಷ್ಟು ಅಪಾಯದ ಸಾಧ್ಯತೆ ಹೆಚ್ಚುತ್ತದೆ. ಡಯಾಬಿಟಿಸಿ, ಶ್ವಾಸಕೋಶ ಸಮಸ್ಯೆ, ಪಾರ್ಶ್ವವಾಯುವಿಗೆ ಗುರಿಯಾಗುವ ಸಾಧ್ಯತೆ ಶೇ. 30 ರಷ್ಟು ಅಧಿಕವಾಗಿರುತ್ತದೆ. ಇದರ ಜೊತೆಗೆ ಗಂಟಲು ಹಾಗೂ ಸ್ತನ ಕ್ಯಾನ್ಸರ್‌ನ ಅಪಾಯ ಕೂಡ ಹೆಚ್ಚುತ್ತದೆ. ಗರ್ಭಿಣಿಯರು, ಮಕ್ಕಳು, ವೃದ್ಧರಲ್ಲಿ ಕೂಡ ಆರೋಗ್ಯ ಸಮಸ್ಯೆ ಕಂಡುಬರುತ್ತದೆ. ಅದರಲ್ಲೂ ಗರ್ಭಾವಸ್ಥೆಯಲ್ಲಿ ಈ ರೀತಿಯ ಪ್ಯಾಸಿವ್ ಸ್ಮೋಕಿಂಗ್‌ಗೆ ಗುರಿಯಾದಲ್ಲಿ ಗರ್ಭದಲ್ಲಿರುವ ಶಿಶುವಿಗೂ ಕಡಿಮೆ ತೂಕ, ಶ್ವಾಸಕೋಶ ಸೋಂಕಿನಂತಹ ಸಮಸ್ಯೆ ಕಾಣಿಸಿಕೊಳ್ಲಬಹುದು.
ಪ್ಯಾಸಿವ್ ಸ್ಮೋಕಿಂಗ್ ತಡೆಗಟ್ಟುವುದು ಹೇಗೆ?
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಅಥವಾ ತಂಬಾಕು ಸೇವನೆ ಮಾಡಬಾರದು ಎಂಬ ಅರಿವು ಹೆಚ್ಚಬೇಕು. ಅದರಲ್ಲೂ ಮಕ್ಕಳು, ಗರ್ಭಿಣಿಯರು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರ ಸುತ್ತಮ ಧೂಮಪಾನ ಮಾಡಲೇಬಾರದು. ಕೆಲಸದ ಸ್ಥಳದಲ್ಲಿ ಧೂಮಪಾನ ಸೇವನೆಯನ್ನು ಸಂಪೂರ್ಣ ನಿಷೇಧಿಸಬೇಕು. ಈ ಕುರಿತು ಕಡ್ಡಾಯ ನಿಯಮಗಳನ್ನು ಜಾರಿಗೆ ತರಬೇಕು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:36 pm, Tue, 5 August 25








