ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ನಾನಾ ರೀತಿಯ ಸಮಸ್ಯೆಗಳು ಕಾಡುತ್ತಿದೆ. ಅದರಲ್ಲಿಯೂ ಮಹಿಳೆಯರಿಗೆ ಹಾರ್ಮೋನುಗಳ ಇರಿಳಿತದಿಂದ ಅನೇಕ ತೊಂದರೆಗಳು ಕಂಡು ಬರುತ್ತದೆ. ಅದರಲ್ಲಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಕೂಡ ಒಂದು. ಈಗಾಗಲೇ ನೀವು ಈ ಬಗ್ಗೆ ಕೇಳಿರಬಹುದು. ಇದು ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡುಬರುತ್ತಿರುವ ಸ್ತ್ರೀರೋಗವಾಗಿದೆ ಜೊತೆಗೆ ಜಾಗತಿಕವಾಗಿ ಈ ಪ್ರಕರಣಗಳು ಹೆಚ್ಚುತ್ತಿವೆ. ಪಿಸಿಒಎಸ್ ಸಾಮಾನ್ಯವಾಗಿ ಇನ್ಸುಲಿನ್ ಪ್ರತಿರೋಧ, ಡಿಸ್ಲಿಪಿಡೆಮಿಯಾ ಮತ್ತು ಹೆಚ್ಚಿದ ಉರಿಯೂತಕ್ಕೆ ಸಂಬಂಧಿಸಿದೆ. ಆದ್ದರಿಂದ, ರೋಗಲಕ್ಷಣಗಳ ನಿರ್ವಹಣೆ ಮತ್ತು ಪಿಸಿಒಎಸ್ ನಿಯಂತ್ರಣದ ಜೊತೆ ಜೊತೆಗೆ ಆಹಾರ ನಿಯಂತ್ರಣವು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಸರಳ ಮತ್ತು ಸಮತೋಲಿತ ಆಹಾರವನ್ನು ಸೇವನೆ ಮಾಡಬೇಕು. ಹಾರ್ಮೋನ್ ಪ್ರಚೋದಕ ಮತ್ತು ಅಲರ್ಜಿ ಉಂಟುಮಾಡುವ ಆಹಾರ, ಪ್ಯಾಕೇಜ್ ಮಾಡಿದ ಆಹಾರಗಳು ಮತ್ತು ಕರಿದ ಆಹಾರಗಳನ್ನು ಸೇವನೆ ಮಾಡುವುದನ್ನು ತಪ್ಪಿಸಬೇಕು.
ಕಾಲೋಚಿತ ತರಕಾರಿಗಳು, ತೆಳ್ಳಗಿನ ಪ್ರೋಟೀನ್, ಉರಿಯೂತದ ಕಡಿಮೆ ಮಾಡುವ ಆಹಾರಗಳು ಮತ್ತು ಉತ್ಕರ್ಷಣ ನಿರೋಧಕ ಸಮೃದ್ಧ ಆಹಾರಗಳ ಮೂಲಕ ಹೆಚ್ಚಿನ ಫೈಬರ್ ಸಮೃದ್ಧವಾಗಿರುವ ಆಹಾರವು ಪಿಸಿಒಎಸ್ ನಿಂದ ಬಳಲುತ್ತಿರುವ ಮಹಿಳೆಯರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಇದರೊಂದಿಗೆ, ಪಿಸಿಒಎಸ್ ನಿಂದ ಬಳಲುತ್ತಿರುವ ಮಹಿಳೆಯರು ಕೆಲವು ಬೀಜಗಳ ಸೇವನೆಯನ್ನು ಮಾಡಬೇಕಾಗುತ್ತದೆ. ವಿಶೇಷವಾಗಿ ಬಾದಾಮಿ ಸೇವನೆ ಮಾಡುವುದು ಬಹಳ ಉತ್ತಮ. ಇದು ಮೊನೊಸ್ಯಾಚುರೇಟೆಡ್ ಮತ್ತು ಎನ್ -3 ಪಾಲಿಅನ್ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳ (ಎಂಯುಎಫ್ ಎ ಮತ್ತು ಎನ್ -3 ಪಿಯುಎಫ್ ಎ) ಸಮೃದ್ಧ ಮೂಲವಾಗಿದೆ.
ಬಾದಾಮಿ ಲಿಪೊಪ್ರೋಟೀನ್- ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಾದಾಮಿ ಇನ್ಸುಲಿನ್ ಪ್ರತಿಕ್ರಿಯೆಯನ್ನು ಹೆಚ್ಚಿಸಲು, ಅಡಿಪೊನೆಕ್ಟಿನ್ (ಗ್ಲೂಕೋಸ್ ಮಟ್ಟ, ಚಯಾಪಚಯ ಪ್ರಕ್ರಿಯೆಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಪ್ರೋಟೀನ್ ಹಾರ್ಮೋನ್) ಮತ್ತು ಲೈಂಗಿಕ ಹಾರ್ಮೋನ್ ನಾದ ಬೈಂಡಿಂಗ್ ಗ್ಲೋಬುಲಿನ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ಟೆಸ್ಟೋಸ್ಟೆರಾನ್ಗೆ ಸಂಬಂಧಿಸಿದ್ದು ಅದರ ಆಂಡ್ರೊಜೆನಿಕ್ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿ ಕಡಿಮೆ ಟೆಸ್ಟೋಸ್ಟೆರಾನ್ ಗೆ ಕಾರಣವಾಗುತ್ತದೆ, ಜೊತೆಗೆ ಪಿಸಿಒಎಸ್ ಅನ್ನು ನಿರ್ವಹಿಸಲು ಸಹಕಾರಿಯಾಗಿದೆ.
ಇದನ್ನೂ ಓದಿ: ನಿತ್ಯ ನೀವು ಕುಡಿಯುವ 3 ಲೋಟ ಕಾಫಿ, ನಿಮ್ಮ ಆಯುಷ್ಯವನ್ನು ಇಷ್ಟು ವರ್ಷ ವೃದ್ಧಿಸುತ್ತಂತೆ!
ಇದಲ್ಲದೆ, ಬಾದಾಮಿ ಪುರುಷ ಹಾರ್ಮೋನುಗಳಾದ ಆಂಡ್ರೊಜೆನ್ ಅನ್ನು ಕಡಿಮೆ ಮಾಡುತ್ತದೆ. ಪಿಸಿಓಎಸ್ನಲ್ಲಿ ಅಂಡಾಶಯಗಳು ಹೆಚ್ಚು ಆಂಡ್ರೊಜೆನ್ಗಳನ್ನು ಉತ್ಪಾದಿಸುತ್ತವೆ, ಇದು ಹಲವಾರು ರೋಗಲಕ್ಷಣಗಳಿಗೆ ಕಾರಣವಾಗಬಹುದು. ಹಾಗಾಗಿ ಪಿಸಿಒಎಸ್ ನಿಂದ ಬಳಲುತ್ತಿರುವವರು ನಿಯಮಿತವಾಗಿ ಬಾದಾಮಿ ಸೇವನೆ ಮಾಡುವುದು ಉತ್ತಮ. ಇದು ಪ್ಲಾಸ್ಮಾ ಲಿಪಿಡ್ಗಳು ಮತ್ತು ಆಂಡ್ರೊಜೆನ್ ಉತ್ಪಾದನೆಯ ಮೇಲೆ ಪ್ರಯೋಜನಕಾರಿ ಪರಿಣಾಮಗಳನ್ನು ಬೀರುತ್ತದೆ. ಇದರಿಂದಾಗಿ ಪಿಸಿಒಎಸ್ ಮತ್ತು ಸಂಬಂಧಿತ ರೋಗಲಕ್ಷಣಗಳ ನಿಯಂತ್ರಣ ಮಾಡುತ್ತದೆ. ಆದ್ದರಿಂದ, ಬಾದಾಮಿ ಒಟ್ಟಾರೆ ಹಾರ್ಮೋನ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ, ಜೊತೆಗೆ ಪಿಸಿಒಎಸ್ ಮತ್ತು ಸಂಬಂಧಿತ ರೋಗಲಕ್ಷಣಗಳನ್ನು ಕಡಿಮೆ ಮಾಡಿ ಈ ಸಮಸ್ಯೆಯನ್ನು ನಿವಾರಿಸುತ್ತದೆ. ನೀವೂ ಕೂಡ ಪಿಸಿಒಎಸ್ ನಿಂದ ಬಳಲುತ್ತಿದ್ದರೆ, ಫೈಬರ್, ಉತ್ತಮ ಗುಣಮಟ್ಟದ ಪ್ರೋಟೀನ್, ಸೀಮಿತ ಕಾರ್ಬೋಹೈಡ್ರೇಟ್ ಗಳು, ಕಡಿಮೆ ಕೊಬ್ಬು ಮತ್ತು ಹೆಚ್ಚಿನ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಆಹಾರಗಳನ್ನು ಸೇವನೆ ಮಾಡಿ. ಪಿಸಿಒಎಸ್ ಮತ್ತು ಸಂಬಂಧಿತ ರೋಗಲಕ್ಷಣಗಳನ್ನು ನಿಯಂತ್ರಿಸಲು ನಿಯಮಿತವಾಗಿ ಬಾದಾಮಿ ಸೇವನೆ ಮಾಡುವುದನ್ನು ಮರೆಯಬೇಡಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ