Plum Benefits: ಪ್ಲಮ್ ಹಣ್ಣು ತಿನ್ನುವುದರಿಂದ 5 ಆರೋಗ್ಯಕರ ಪ್ರಯೋಜನಗಳು ಏನು? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 05, 2023 | 5:06 PM

ಇದು ಪ್ಲಮ್ ಗಳ ಋತುವಾಗಿದ್ದು, ಈ ಹಣ್ಣುಗಳು ಮಾರುಕಟ್ಟೆಗೆ ಬರಲು ಆರಂಭಿಸಿದೆ. ಇದರಲ್ಲಿ ಅನೇಕ ರೀತಿಯ ಆರೊಗ್ಯವರ್ಧಕ ಗುಣಗಳನ್ನು ಹೊಂದಿದ್ದು ನಿಮ್ಮ ದೇಹಕ್ಕೆ ಒಳ್ಳೆಯದು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Plum Benefits: ಪ್ಲಮ್ ಹಣ್ಣು ತಿನ್ನುವುದರಿಂದ 5 ಆರೋಗ್ಯಕರ ಪ್ರಯೋಜನಗಳು ಏನು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಋತುಗಳು ಬದಲಾಗುತ್ತಿದೆ. ಬೇಸಿಗೆ ಕಾಲ ಕಳೆದು ಮಳೆಗಾಲ ಆರಂಭವಾಗಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಹಣ್ಣುಗಳು ಸಹ ಬದಲಾಗುತ್ತಿವೆ. ಮಾನ್ಸೂನ್ ಆರಂಭವಾಗುತ್ತಿದ್ದಂತೆ, ಪ್ಲಮ್(ಆಲೂ ಬುಖಾರಾ) ಗಳನ್ನು ಮಾರಾಟ ಮಾಡುವವರು ಗಾಡಿಗಳಲ್ಲಿ ಮತ್ತು ಮಾರುಕಟ್ಟೆಗಳಲ್ಲಿ ಮಾರುತ್ತಿದ್ದಾರೆ. ಕೆಂಪು ನೇರಳೆ ಬಣ್ಣವಿರುವ ಈ ಹಣ್ಣುಗಳನ್ನು ವ್ಯಾಪಾರಗಾರರು ಚೆಂದವಾಗಿ ಅಲಂಕರಿಸುವುದರಿಂದ ನೋಡುವುದಕ್ಕೂ ಮುದ ನೀಡುತ್ತದೆ. ಜೊತೆಗೆ ಈ ರಸಭರಿತ ಹಣ್ಣು ರೊಸೇಸಿಯಾ ಕುಟುಂಬಕ್ಕೆ ಸೇರಿದೆ. ಇದು ತುಂಬಾ ಸಿಹಿಯಾಗಿದ್ದು ತೆಳುವಾದ ಸಿಪ್ಪೆಯನ್ನು ಹೊಂದಿದೆ. ಮುಖ್ಯವಾಗಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ಪೋಷಕಾಂಶಗಳ ಶಕ್ತಿ ಕೇಂದ್ರವಾಗಿರುವ ಈ ಹಣ್ಣುಗಳನ್ನು ತಾಜಾ ಮತ್ತು ಒಣಗಿಸಿಯೂ ಸೇವಿಸಬಹುದು. ಒಣಗಿದ ಪ್ಲಮ್ ಗಳನ್ನು ಒಣದ್ರಾಕ್ಷಿ ಎಂದೂ ಕರೆಯಲಾಗುತ್ತದೆ ಮತ್ತು ವಿಭಿನ್ನ ಪ್ರಯೋಜನಗಳ ಆಗರವಾಗಿದೆ.

ಪ್ಲಮ್ ಅಥವಾ ಆಲೂ ಬುಖಾರಾದ 5 ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ:

ಉರಿಯೂತ ನಿವಾರಕ: ಪ್ಲಮ್ ಗಳು ರಕ್ಷಣಾತ್ಮಕ ಸಂಯುಕ್ತಗಳನ್ನು ಹೊಂದಿದ್ದು, ಅವು ಕೆಲವು ಉರಿಯೂತದ ಗುಣಲಕ್ಷಣಗಳನ್ನು ಕಡಿಮೆ ಮಾಡಬಹುದು, ಜೊತೆಗೆ ಇದು ಬೊಜ್ಜು, ಮಧುಮೇಹ ಮುಂತಾದ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಮತ್ತಷ್ಟು ಸಹಾಯ ಮಾಡುತ್ತದೆ.

ಆಂಟಿ-ಆಕ್ಸಿಡೆಂಟ್ಗಳಲ್ಲಿ ಸಮೃದ್ಧವಾಗಿದೆ: ಪ್ಲಮ್ ಮತ್ತು ಒಣದ್ರಾಕ್ಷಿಗಳೆರಡೂ ತಮ್ಮ ಆಂಟಿ ಆಕ್ಸಿಡೆಂಟ್ ಗುಣ ಲಕ್ಷಣಗಳೊಂದಿಗೆ ಜೀವಕೋಶದ ಹಾನಿಯನ್ನು ಕಡಿಮೆ ಮಾಡಲು ಹೋರಾಡುತ್ತವೆ. ವರದಿಯ ಪ್ರಕಾರ, ಅವು ವಿಶೇಷವಾಗಿ ಮೂಳೆಯ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಮತ್ತು ಹೃದ್ರೋಗ ಹಾಗೂ ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

ಮಲಬದ್ಧತೆಗೆ ಸಹಾಯ ಮಾಡುತ್ತದೆ: ಪ್ಲಮ್ ಗಳು ಐಸಾಟಿನ್ ಮತ್ತು ಸೋರ್ಬಿಟಾಲ್ ಅನ್ನು ಹೊಂದಿರುತ್ತವೆ. ಇದು ಮಲಬದ್ಧತೆಯನ್ನು ನಿವಾರಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದು ಕರುಳನ್ನು ಆರೋಗ್ಯಕರವಾಗಿರಿಸುತ್ತದೆ. ಪ್ಲಮ್ಗಳು ಹೆಚ್ಚಿನ ಪ್ರಮಾಣದ ಕರಗದ ಫೈಬರ್ ಅನ್ನು ಸಹ ಹೊಂದಿರುತ್ತವೆ, ಅಂದರೆ ಇದು ನೀರಿನೊಂದಿಗೆ ಬೆರೆಯುವುದಿಲ್ಲ, ಹಾಗಾಗಿ ಮಲಬದ್ಧತೆಯನ್ನು ತಡೆಯುತ್ತದೆ.

ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ: ಪ್ಲಮ್ ಗಳು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಾಯ ಮಾಡುವ ಗುಣ ಲಕ್ಷಣಗಳನ್ನು ಹೊಂದಿವೆ. ಕಾರ್ಬೋಹೈಡ್ರೇಟ್ ಗಳು ಸಾಕಷ್ಟು ಹೆಚ್ಚಾಗಿದ್ದರೂ, ಪ್ಲಮ್ ಗಳು ತಿಂದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಗಣನೀಯ ಏರಿಕೆಗೆ ಕಾರಣವಾಗುವುದಿಲ್ಲ. ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿ ಪಾತ್ರ ವಹಿಸುವ ಅಡಿಪೊನೆಕ್ಟಿನ್ ಎಂಬ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುವ ಸಾಮರ್ಥ್ಯ ಇದಕ್ಕೆ ಕಾರಣವಾಗಿದೆ. ಹೆಚ್ಚುವರಿಯಾಗಿ, ಪ್ಲಮ್ ಗಳಲ್ಲಿನ ಫೈಬರ್ ರಕ್ತದಲ್ಲಿನ ಸಕ್ಕರೆಯ ಮೇಲೆ ಅವುಗಳ ಪರಿಣಾಮಗಳಿಗೆ ಭಾಗಶಃ ಕಾರಣವಾಗಬಹುದು.

ಇದನ್ನೂ ಓದಿ: ಅರಿಶಿನದ ಗುಣಪಡಿಸುವ ಶಕ್ತಿ: ಆರೋಗ್ಯ ಮತ್ತು ಸ್ವಾಸ್ಥ್ಯಕ್ಕಾಗಿ ಆಯುರ್ವೇದ ಪರಿಹಾರಗಳು

ಹೃದಯದ ಆರೋಗ್ಯ ಪ್ರಯೋಜನಗಳು: ಪ್ಲಮ್ ಗಳು ಪೊಟ್ಯಾಸಿಯಮ್, ಫ್ಲೋರೈಡ್ ಮತ್ತು ಕಬ್ಬಿಣದ ಸಮೃದ್ಧ ಮೂಲವಾಗಿದೆ. ಪೊಟ್ಯಾಸಿಯಮ್ ಜೀವಕೋಶ ಮತ್ತು ದೇಹದ ದ್ರವಗಳ ಪ್ರಮುಖ ಅಂಶವಾಗಿ, ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕ್ಯಾನ್ಸರ್ ವಿರೋಧಿ ಏಜೆಂಟ್ಗಳು: ಪ್ಲಮ್ಗಳಲ್ಲಿ ವಿಶಿಷ್ಟವಾದ ಫೈಟೊನ್ಯೂಟ್ರಿಯೆಂಟ್ಗಳು ಅಥವಾ ನಿಯೋಕ್ಲೋರೋಜೆನಿಕ್ ಮತ್ತು ಕ್ಲೋರೊಜೆನಿಕ್ ಆಮ್ಲ ಎಂದು ಕರೆಯಲ್ಪಡುವ ಕ್ಯಾನ್ಸರ್ ವಿರೋಧಿ ಏಜೆಂಟ್ಗಳು ಹೆಚ್ಚಾಗಿರುತ್ತವೆ. ಈ ಫಿನಾಲ್ ಗಳು ಆರೋಗ್ಯಕರ ಜೀವಕೋಶಗಳಿಗೆ ಹಾನಿಯಾಗದಂತೆ ಸ್ತನ ಕ್ಯಾನ್ಸರ್ ಹೇ ಕಾರಣವಾಗುವ ಕೋಶಗಳನ್ನು ಕೊಲ್ಲುತ್ತವೆ ಎಂಬುದನ್ನು ವರದಿಯಲ್ಲಿ ತಿಳಿಸಲಾಗಿದೆ.

ಇವು ಆಲೂ ಬುಖಾರಾದ ಕೆಲವು ಮೂಲಭೂತ ಪ್ರಯೋಜನಗಳಾಗಿದ್ದರೂ, ಅವು ದೃಷ್ಟಿಗೆ ಸಹಾಯ ಮಾಡುತ್ತವೆ ಮತ್ತು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವುದರಿಂದ ಕೆಲವು ರೋಗಗಳನ್ನು ದೂರವಿಡುತ್ತವೆ. ನಮ್ಮಲ್ಲಿ ಹೆಚ್ಚಿನವರು ದಿನಕ್ಕೆ ಒಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರ ವಿರಿಸಬಹುದು ಎಂದು ಹೇಳುವುದನ್ನು ನೀವು ಕೇಳಿರಬಹುದು. ಅದರ ಜೊತೆಗೆ ಇಂತಹ ಹಣ್ಣುಗಳನ್ನು ಸೇರಿಸುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಜೊತೆಗೆ ಈ ಹಣ್ಣು ನಿಮ್ಮನ್ನು ಆರೋಗ್ಯ ವಾಗಿರಲು ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:05 pm, Mon, 5 June 23