
ಮದುವೆಯ ನಂತರ ಪುರುಷ (Men) ಮತ್ತು ಮಹಿಳೆಯರಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳಾಗುತ್ತದೆ. ಪುರುಷರಲ್ಲಿ ತೂಕ(Weight) ಹೆಚ್ಚಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ಮದುವೆಯಾದ ಸ್ವಲ್ಪ ದಿನಗಳಲ್ಲಿ ಅವರ ತೂಕ ಏರಿಕೆಯಾಗುತ್ತದೆ. ಕೆಲವರು ಇದನ್ನು ಗಮನಿಸಿರಬಹುದು. ಏಕೆಂದರೆ ಬಹುತೇಕ ಎಲ್ಲಾ ಗಂಡಸರಿಗೂ ಇದು ಅನುಭವಕ್ಕೆ ಬಂದಿರುತ್ತದೆ. ಕೆಲವರಿಗೆ ಹೊಟ್ಟೆಯ ಭಾಗದಲ್ಲಿ ಕೊಬ್ಬು ಶೇಖರಣೆಯಾಗಲು ಪ್ರಾರಂಭಿಸುತ್ತದೆ ಇದರಿಂದ ಬೊಜ್ಜಿನ ಸಮಸ್ಯೆಯನ್ನು ಕೂಡ ಎದುರಿಸುವ ಸಂದರ್ಭ ಬರಬಹುದು. ಮದುವೆಯ ನಂತರ ಕಂಡುಬರುವ ಸ್ಥೂಲಕಾಯತೆ (Obesity), ಹೆಂಡತಿಯ ಕೈಗಳಿಂದ ಪ್ರೀತಿಯ ಆಹಾರ ತಿಂದು ಬರುವಂತದ್ದಲ್ಲ. ಜೊತೆಗೆ ಇದು ಸಣ್ಣ ಸಮಸ್ಯೆ ಖಂಡಿತವಾಗಿಯೂ ಅಲ್ಲ. ಹಾಗಾದರೆ ಮದುವೆಯಾದ ಮೇಲೆ ಗಂಡಸರ ತೂಕ ಹೆಚ್ಚಾಗುವುದಕ್ಕೆ ಕಾರಣವೇನು? ಇದನ್ನು ಯಾವ ರೀತಿ ತಡೆಯಬಹುದು ಎಂಬುದನ್ನು ತಿಳಿದುಕೊಳ್ಳಿ.
ಪೋಲೆಂಡ್ ವಾರ್ಸಾದಲ್ಲಿ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದ ಮಾಹಿತಿ ಪ್ರಕಾರ, ಅವಿವಾಹಿತ ಪುರುಷರಿಗಿಂತ ವಿವಾಹಿತ ಪುರುಷರಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗಿರುತ್ತದೆ. ಶೇ. 62 ರಷ್ಟು ತೂಕ ಹೆಚ್ಚಳವಾಗುವ ಅಪಾಯವಿದೆ. ಈ ರೀತಿಯ ಹೆಚ್ಚಳವು ಮಹಿಳೆಯರಲ್ಲಿ ಶೇ. 39 ರಷ್ಟಿದೆ ಎಂದು ತಜ್ಞರು ತಿಳಿಸಿದ್ದಾರೆ. ಈ ಅಧ್ಯಯನವನ್ನು ಪೋಲೆಂಡ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿಯ ಸಂಶೋಧಕರು 2,405 ವ್ಯಕ್ತಿಗಳಿಂದ ಡೇಟಾವನ್ನು ವಿಶ್ಲೇಷಿಸಿದ್ದಾರೆ. ಅವರಲ್ಲಿ ಹೆಚ್ಚಿನವರು 50 ವರ್ಷಕ್ಕಿಂತ ಮೇಲ್ಪಟ್ಟವರು. ಈ ವ್ಯಕ್ತಿಗಳಲ್ಲಿ, 35.3 ಪ್ರತಿಶತದಷ್ಟು ಸಾಮಾನ್ಯ ತೂಕ ಇರುವವರು, 38.3 ಪ್ರತಿಶತದಷ್ಟು ಅಧಿಕ ತೂಕ ಮತ್ತು 26.4 ಪ್ರತಿಶತದಷ್ಟು ಜನ ಬೊಜ್ಜಿನ ಸಮಸ್ಯೆಯನ್ನು ಹೊಂದಿದ್ದರು. ಹಾಗಾಗಿ ಸಂಶೋಧನೆ ಫಲಿತಾಂಶದ ಪ್ರಕಾರ, ಮದುವೆಯು ಪುರುಷರಲ್ಲಿ ಸ್ಥೂಲಕಾಯತೆಯ ಅಪಾಯವನ್ನು ಮೂರು ಪಟ್ಟು ಹೆಚ್ಚಿಸುತ್ತದೆ ಎಂಬುದನ್ನು ತಿಳಿಸಿದೆ.
ವಯಸ್ಸಾದಂತೆ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನ ಬಹಿರಂಗಪಡಿಸಿದೆ. ಇದು ಪುರುಷರಲ್ಲಿ ಶೇ. 3 ರಷ್ಟು ಮತ್ತು ಮಹಿಳೆಯರಲ್ಲಿ ಶೇ. 4 ರಷ್ಟು ಹೆಚ್ಚಾಗುತ್ತದೆ. ಜೊತೆಗೆ ಸ್ಥೂಲಕಾಯತೆಯ ಅಪಾಯ ಪುರುಷರಲ್ಲಿ ಶೇ. 4 ರಷ್ಟು ಮತ್ತು ಮಹಿಳೆಯರಲ್ಲಿ ಶೇ. 6 ರಷ್ಟು ಹೆಚ್ಚಾಗುತ್ತದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿ: ಮದ್ಯಪಾನ ತ್ಯಜಿಸುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್‌ಗೆ ಹಾನಿ! 10 ವರ್ಷದ ಅಧ್ಯಯನದಲ್ಲಿ ಬಹಿರಂಗ
ಮದುವೆಯ ನಂತರ ಪುರುಷರಲ್ಲಿ ತೂಕ ಹೆಚ್ಚಾಗಲು ಮುಖ್ಯ ಕಾರಣಗಳು ಹೆಚ್ಚಿದ ಆಹಾರ ಸೇವನೆ ಮತ್ತು ದೈಹಿಕ ಚಟುವಟಿಕೆ ಕಡಿಮೆಯಾಗುವುದು ಎಂದು ಅನೇಕ ತಜ್ಞರು ಹೇಳುತ್ತಾರೆ. ಒಬೆಸಿಟಿ ಹೆಲ್ತ್ ಅಲೈಯನ್ಸ್ ನ ನಿರ್ದೇಶಕಿ ಕ್ಯಾಥರೀನ್ ಜೆನ್ನರ್ ಪ್ರಕಾರ, “ಮದುವೆಯ ನಂತರ ಪುರುಷರ ಜೀವನಶೈಲಿ ಬದಲಾಗುತ್ತದೆ, ಇದು ಅವರ ತೂಕದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಪುರುಷರು ತಮ್ಮ ಕೆಲಸದ ಜೊತೆಗೆ ಆಹಾರ ಪದ್ಧತಿಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಮೊದಲನೆಯದಾಗಿ, ಹೆಚ್ಚು ತಿನ್ನುವ ಅಭ್ಯಾಸವನ್ನು ನಿಯಂತ್ರಿಸಬೇಕು. ಜೊತೆಗೆ ಸಾಕಷ್ಟು ಪ್ರಮಾಣದ ಪೋಷಕಾಂಶಗಳನ್ನು ಸೇವಿನೆಯೊಂದಿಗೆ ವ್ಯಾಯಾಮ ಮಾಡುವ ಮೂಲಕ ಸಾಕಷ್ಟು ನಿದ್ರೆ ಮಾಡಿದಾಗ ಮಾತ್ರ ಈ ರೀತಿಯ ಸಮಸ್ಯೆಯನ್ನು ನಿವಾರಿಸಿ, ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ