
ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿದೆ ಮಾತ್ರವಲ್ಲ, 16 ವರ್ಷದ ಹುಡುಗ ಶಾಲೆಗೆ ಹೋಗುತ್ತಿರುವಾಗ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದು, 18 ವರ್ಷದ ಕಾಲೇಜು ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ತರಗತಿಯಲ್ಲಿಯೇ 8 ವರ್ಷದ ಬಾಲಕ ಹೃದಯಾಘಾತದಿಂದ ಮರಣ ಹೊಂದಿದ್ದು ಹೀಗೆ ಅನೇಕ ರೀತಿಯ ಘಟನೆಗಳು ನಮ್ಮ ಸುತ್ತಮುತ್ತ ಕಂಡುಬಂದಿದೆ. ಇಷ್ಟು ಚಿಕ್ಕ ವಯಸ್ಸಿಗೆ ಸಾವು ಬರುವುದು ಸಾಮಾನ್ಯ ವಿಷಯವೇ ಅಲ್ಲ. ಹಾಗಾಗಿ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಅವುಗಳನ್ನು ತಡೆಗಟ್ಟುವ ಮಾರ್ಗದ ಬಗ್ಗೆ ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಲೇಬೇಕು. ಸಾಕಷ್ಟು ಪ್ರಕರಣಗಳಲ್ಲಿ ನಮ್ಮ ಜೀವನಶೈಲಿ, ಪಾರಿಸರಿಕ ಅಂಶಗಳು ಮತ್ತು ಆನುವಂಶಿಕ ಅಂಶಗಳು ಕಾರಣವಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳ ಅರೋಗ್ಯ ಕಾಪಾಡಿಕೊಳ್ಳಲು ಈ ವಿಷಯದ ಕುರಿತು ತಿಳಿಯುವುದು ಅನಿವಾರ್ಯವಾಗಿದೆ. ಈ ಬಗ್ಗೆ ಬೆಂಗಳೂರು ಮೆಡ್‌ಜಿನೋಮ್‌ನ ಪರ್ಸನಲ್ ಜಿನೋಮಿಕ್ಸ್ ಮತ್ತು ಜಿನೋಮಿಕ್ ಮೆಡಿಸಿನ್‌ನ ನಿರ್ದೇಶಕರಾಗಿರುವ ಡಾ. ರಮೇಶ್ ಮೆನನ್ (Dr Ramesh Menon) ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು, ಮತ್ತಷ್ಟು ಮಾಹಿತಿ ಪಡೆಯಲು ಈ ಸ್ಟೋರಿ ಓದಿ.
ಪೋಷಕರಾದವರು ಸತತವಾಗಿ ಮಕ್ಕಳ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡಲು ಶ್ರಮಿಸುವುದು ಸಹಜ. ಆದರೆ ತಿಳಿದಿರದ ಆರೋಗ್ಯ ಸಂಬಂಧಿ ತೊಂದರೆಗಳು ಇರುತ್ತವೆ, ಅವು ನಿಧಾನವಾಗಿ ಬೆಳಕಿಗೆ ಬರುವುದರೊಳಗೆ ಮಕ್ಕಳ ಆರೋಗ್ಯ ಪೋಷಕರ ಕೈ ಮೀರಿ ಹೋಗಿರುತ್ತದೆ. ಹಾಗಾಗಿ ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಾಣುವ ಪ್ರತಿಯೊಬ್ಬ ಪೋಷಕನು ಕೂಡ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಮೊದಲು ಗಮನ ಕೊಡಬೇಕಾಗುತ್ತದೆ. ಮಾತ್ರವಲ್ಲ ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ಅಗತ್ಯವಿರುವ ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ಆ ಮೂಲಕ ಮಕ್ಕಳು ಯಾವುದೇ ರೀತಿಯ ಸಮಸ್ಯೆಗಳಿಲ್ಲದೆ ಆರೋಗ್ಯವಾಗಿರುವುದನ್ನು ಮತ್ತು ಮುಂದೆ ಬರಲಿರುವ ಅಡೆತಡೆಗಳನ್ನು ತಡೆಯಲು ಇದು ಅನುಕೂಲ ಮಾಡಿಕೊಡುತ್ತದೆ. ಹಾಗಾದರೆ ಮಕ್ಕಳನ್ನು ರಕ್ಷಿಸಿಕೊಳ್ಳಲು ಏನು ಮಾಡಬೇಕು? ಆರೋಗ್ಯ ತಜ್ಞರು ನೀಡಿರುವ ಈ ಮಾಹಿತಿಯನ್ನು ತಪ್ಪದೆ ಪಾಲಿಸಿ.
ಬಹಳಷ್ಟು ಪ್ರಕರಣಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ನಾವು ರೂಢಿಸಿಕೊಂಡ ಜೀವನಶೈಲಿಯಿಂದ ಮಾತ್ರ ಬರುವುದಿಲ್ಲ ಬದಲಾಗಿ ಅವು ಆನುವಂಶಿಕವಾಗಿಯೂ ಬರಬಹುದು. ನೋಡಲು ಆರೋಗ್ಯವಾಗಿ ಕಾಣುವವರು ಹೃದ್ರೋಗಕ್ಕೆ ಸಂಬಂಧ ಪಟ್ಟ ಆನುವಂಶಿಕ ತೊಂದರೆಗಳನ್ನು ಹೊಂದಿದ್ದು ಜೀವನಶೈಲಿಯಲ್ಲಿ ಮಾಡಿಕೊಂಡ ಅನಾರೋಗ್ಯಕರ ಬದಲಾವಣೆಗಳಿಂದ ಅದು ತೀವ್ರಗೊಳ್ಳಬಹುದು.
ಸಾಮಾನ್ಯವಾಗಿ ನಿಯಮಿತ ಪರೀಕ್ಷೆಗಳು ಕಣ್ಣಿಗೆ ಕಾಣುವ, ಆರೋಗ್ಯದ ಸ್ಥಿತಿಗಳನ್ನು ತೋರಿಸುತ್ತದೆ. ಆದರೆ ಆನುವಂಶಿಕ ಪರೀಕ್ಷೆ ಅಗೋಚರವಾಗಿರುವ ರಿಸ್ಕ್ ಗಳನ್ನು ತಿಳಿಸಬಹುದು. ಹಾಗಾಗಿ ನಿಯಮಿತ ಪರೀಕ್ಷೆಗಳ ಜೊತೆಗೆ ಕಡ್ಡಾಯವಾಗಿ ಒಮ್ಮೆ ಆನುವಂಶಿಕ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.
ಹೃದಯ ರೋಗಗಳ ಆನುವಂಶಿಕ ಇರುವಿಕೆಯನ್ನು ಮೊದಲೇ ಕಂಡುಕೊಂಡರೆ ನೀವು ಸಕಾಲಕ್ಕೆ ರೋಗ ನಿರ್ಣಯ ಮಾಡಬಹುದು. ಬಳಿಕ ಜೀವನಶೈಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ, ಹೆಚ್ಚಿನ ಕಾಳಜಿ ವಹಿಸಿ ಔಷಧ ತೆಗೆದುಕೊಳ್ಳಬಹುದು. ನೀವು ಬರೀ ಸಮಸ್ಯೆಗೆ ಪ್ರತಿಕ್ರಿಯಿಸುವುದಲ್ಲ ಬದಲಿಗೆ ಅದರ ಕುರಿತು ಕ್ರಿಯಾತ್ಮಕವಾಗಿರುವುದು ಕೂಡ ಬಹಳ ಮುಖ್ಯ.
ಆನುವಂಶಿಕ ಪರೀಕ್ಷೆಯು ರಕ್ತ ಅಥವಾ ಲಾಲಾರಸದ ನಮೂನೆ ಪರೀಕ್ಷಿಸುವುದಾಗಿದ್ದು. ಬಹಳ ಸರಳವಾಗಿದೆ. ಇದು ಮಕ್ಕಳ ವಂಶವಾಹಿಗಳಲ್ಲಿ ಹೃದಯರೋಗದ ತೊಂದರೆಗಳನ್ನು ಗುರುತಿಸುವುದಕ್ಕೆ ಸಹಾಯ ಮಾಡುತ್ತದೆ. ಭಾರತದಾದ್ಯಂತ ಈ ಸೇವೆ ಒದಗಿಸಲು ವಿಶೇಷ ಪ್ರಯೋಗಾಲಯಗಳಿದ್ದು ಅವು ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮುಂಚೆಯೇ ಕುಟುಂಬಗಳಿಗೆ ಸಮಸ್ಯೆಗಳನ್ನು ಗುರುತಿಸಲು ನೆರವಾಗುತ್ತವೆ. ಈ ರೀತಿಯಾಗಿ ಆಧುನಿಕ ವಿಜ್ಞಾನವು ಪೋಷಕರಿಗೆ ಅವರ ಮಕ್ಕಳನ್ನು ಅನಿರೀಕ್ಷಿತ ಆರೋಗ್ಯದ ತೊಂದರೆಗಳಿಂದ ರಕ್ಷಿಸಲು ಸಾಧನಗಳನ್ನು ನೀಡಿದೆ. ಹಾಗಾಗಿ ಮಗುವಿನ ಆರೋಗ್ಯದ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾರಂಭಿಕ ಅರಿವು ಮತ್ತು ನಿಯಮಿತ ಚೆಕಪ್ ಗಳ ಜೊತೆಗೆ ಇವುಗಳ ಬಗ್ಗೆಯೂ ಮಾಹಿತಿ ಇರುವುದು ಒಳ್ಳೆಯದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ