Postpartum Depression: ಹೆರಿಗೆಯ ನಂತರ ಬಾಣಂತಿಯರಿಗೆ ಕಾಣಿಸಿಕೊಳ್ಳುವ ಡಿಪ್ರೆಶನ್ ಗೆ ಕಾರಣ ಏನ್ ಗೊತ್ತಾ? ಡಾ. ಕೃತಿಶ್ರೀ ಸೋಮಣ್ಣ ನೀಡಿರುವ ಸಲಹೆ ಇಲ್ಲಿದೆ
ಪೋಸ್ಟ್ ಪಾರ್ಟಮ್ ಡಿಪ್ರೆಶನ್: ಹೆರಿಗೆ ನಂತರದ ಖಿನ್ನತೆಗೆ ಹಲವಾರು ಕಾರಣಗಳಿವೆ. ಅದರಲ್ಲಿ ಬಹುಮುಖ್ಯವಾಗಿ ತಾಯಿಯ ಕುಟುಂಬ ಈ ಹಂತದಲ್ಲಿ ಹೇಗೆ ಮಹಿಳೆಗೆ ಬೆಂಬಲ ನೀಡುತ್ತದೆ ಎಂಬ ವಿಚಾರವು ಪ್ರಮುಖವಾಗಿರುತ್ತದೆ. ಮಗುವಿನ ಆಗಮನ ಸಂತೋಷದ ಜೊತೆಗೆ ತಾಯಿಯ ದೇಹದಲ್ಲಿ ಮತ್ತು ಮನಸ್ಥಿತಿಯಲ್ಲಿ ಹಲವು ರೀತಿಯ ಬದಲಾವಣೆಯನ್ನು ಕೂಡ ತರುತ್ತದೆ. ಹೀಗಾಗಿ ಈ ಹಂತದಲ್ಲಿ ಮಗುವಿನ ಆರೈಕೆ ಜೊತೆಗೆ ತಾಯಿಯ ಆರೈಕೆಯೂ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಈ ಬಗ್ಗೆ ತಿಳಿಯುವುದು ಒಳ್ಳೆಯದು. ಈ ಕುರಿತ ಮತ್ತಷ್ಟು ಮಾಹಿತಿಯನ್ನು ಮಂಗಳೂರು ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್, ಡಾ. ಕೃತಿಶ್ರೀ ಸೋಮಣ್ಣ ನೀಡಿದ್ದು, ಹೆಚ್ಚಿನ ವಿಷಯ ತಿಳಿಯಲು ಈ ಸ್ಟೋರಿ ಓದಿ.

ಮಗುವಿನ ಜನನದ ಸಮಯ ತಾಯಂದಿರಿಗೆ ಒಂದು ರೀತಿಯ ಪುನರ್ಜನ್ಮವಿದ್ದಂತೆ. ಎಷ್ಟೇ ನೋವಿದ್ದರೂ ಕೂಡ ಅದನ್ನು ಸಂತೋಷವಾಗಿಯೇ ಅನುಭುವಿಸುತ್ತಾರೆ. ಈ ಸಮಯದಲ್ಲಿ ತಾಯಂದಿರಲ್ಲಿ ಸಾಕಷ್ಟು ಭಾವನಾತ್ಮಕ ಬದಲಾವಣೆಗಳು ಕಂಡುಬರುತ್ತದೆ. ದೈಹಿಕವಾಗಿ ನಡೆಯುವ ಬದಲಾವಣೆಗಳ ನಡುವೆ ಇಮೋಶನಲ್ ಹಾಗೂ ಹಾರ್ಮೋನ್ ಬದಲಾವಣೆಗಳು ಕೂಡ ನಡೆಯುತ್ತವೆ. ಆದರೆ ಈ ಸಮಯದಲ್ಲಿ ತಾಯಂದಿರಲ್ಲಿ ವಿಷಣ್ಣತೆ, ಚಿಂತೆ, ಹತಾಶೆ, ಆಸಕ್ತಿ ಕಳೆದುಕೊಳ್ಳುವುದು ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಇದನ್ನು ಪ್ರಸವದ ನಂತರದ ಖಿನ್ನತೆ ಅಥವಾ ಪೋಸ್ಟ್ಪಾರ್ಟಮ್ ಡಿಪ್ರೆಶನ್ (Postpartum Depression) ಎಂದು ಪರಿಗಣಿಸಲಾಗುತ್ತದೆ. ಇದೊಂದು ಗಂಭೀರ ಸಮಸ್ಯೆ. ಆದರೆ ಇದನ್ನು ಗುಣಪಡಿಸಬಹುದು ಅದಕ್ಕೂ ಮೊದಲು ಪ್ರತಿಯೊಂದು ಕುಟುಂಬ ಕೂಡ ಈ ಬಗ್ಗೆ ಅರಿತುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್, ಡಾ. ಕೃತಿಶ್ರೀ ಸೋಮಣ್ಣ (Dr. Krithishree S.S.) ಅವರು ಟಿವಿ9 ಕನ್ನಡ ಜೊತೆ ಕೆಲವು ಮಾಹಿತಿ ಹಂಚಿಕೊಂಡಿದ್ದು, ಮತ್ತಷ್ಟು ಮಾಹಿತಿ ಪಡೆಯಲು ಈ ಸ್ಟೋರಿ ಓದಿ.
ಪ್ರಸವದ ನಂತರದ ಖಿನ್ನತೆಗೆ ಹಲವಾರು ಕಾರಣಗಳಿವೆ. ಅದರಲ್ಲಿ ಬಹುಮುಖ್ಯವಾಗಿ ತಾಯಿಯ ಕುಟುಂಬ ಈ ಹಂತದಲ್ಲಿ ಹೇಗೆ ಮಹಿಳೆಗೆ ಬೆಂಬಲ ನೀಡುತ್ತದೆ ಎಂಬ ವಿಚಾರವು ಪ್ರಮುಖವಾಗಿರುತ್ತದೆ. ಮಗುವಿನ ಆಗಮನ ಸಂತೋಷದ ಜೊತೆಗೆ ತಾಯಿಯ ದೇಹದಲ್ಲಿ ಮತ್ತು ಮನಸ್ಥಿತಿಯಲ್ಲಿ ಹಲವು ರೀತಿಯ ಬದಲಾವಣೆಯನ್ನು ಕೂಡ ತರುತ್ತದೆ. ಹೀಗಾಗಿ ಈ ಹಂತದಲ್ಲಿ ಮಗುವಿನ ಆರೈಕೆ ಜೊತೆಗೆ ತಾಯಿಯ ಆರೈಕೆಯೂ ಮುಖ್ಯವಾಗುತ್ತದೆ. ಆಕೆಗೆ ಬೆಂಬಲವಾಗಿರುವುದು ಕುಟುಂಬದ ಆದ್ಯ ಕರ್ತವ್ಯವೂ ಆಗಿರುತ್ತದೆ.
ಪೋಸ್ಟ್ ಪಾರ್ಟಮ್ ಡಿಪ್ರೆಶನ್ ಗೆ ಪ್ರಮುಖ ಕಾರಣಗಳು:
ಮಗುವಿನ ಅನಾರೋಗ್ಯಕ್ಕೆ ತಾಯಿಯನ್ನು ದೂರುವುದು
ಬಹಳಷ್ಟು ಮನೆಗಳಲ್ಲಿ ಮಗುವಿಗೆ ಏನೇ ಆಗಲಿ ಅದಕ್ಕೆ ತಾಯಿಯನ್ನು ದೂರುವುದು ಸಾಮಾನ್ಯವಾಗಿದೆ. ಮೊದಲ ಬಾರಿ ತಾಯಿಯಾದ ಮಹಿಳೆಗೆ ಮಗುವಿನ ಆರೈಕೆ ಬಗ್ಗೆ ಆತಂಕವಿರುವುದು ಸಹಜ. ಜೊತೆಗೆ ಆಕೆ ಮಾನಸಿಕವಾಗಿ, ದೈಹಿಕವಾಗಿ ದುರ್ಬಲವಾಗಿರುವ ಸಮಯದಲ್ಲಿ ಪ್ರತಿಯೊಂದಕ್ಕೂ ತಾಯಿಯ ನಡವಳಿಕೆ, ಆಕೆಯ ಆಹಾರ ಪದ್ದತಿಯನ್ನು ದೂರುವುದು ಸರಿಯಲ್ಲ. ಮಗು ಜಾಸ್ತಿ ಅತ್ತರೆ, ಅಥವಾ ಮಗುವಿನ ದೇಹದಲ್ಲಿ ಸಣ್ಣ ಗುಳ್ಳೆಗಳು ಕಂಡರೆ, ಸಣ್ಣ ಜ್ವರ ಕಂಡುಬಂದಲ್ಲಿ ಹೀಗೆ ನೀವು ನೇರವಾಗಿ ತಾಯಿಯರನ್ನು ದೂರುವುದರಿಂದ ಆಕೆ ಮಾನಸಿಕವಾಗಿ ಮತ್ತಷ್ಟು ಕುಗ್ಗುತ್ತಾಳೆ.
ನಿದ್ರಾಹೀನತೆ
ಮಗು ಸುಮಾರು 1 ವರ್ಷಕ್ಕೆ ಬರುವವರೆಗೂ ತಾಯಿಯ ನಿದ್ರೆ ಮಗುವಿನ ನಿದ್ರೆಯ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ತಾಯಿಗೆ ಸಾಕಷ್ಟು ನಿದ್ರೆ ಸಿಗದಿದ್ದಾಗ, ಅಥವಾ ಆಕೆಯ ನಿದ್ರೆಯ ಸಮಯದಲ್ಲಿ ಬದಲಾವಣೆಯಾದಾಗ, ಮಾನಸಿಕ ತೊಳಲಾಟಗಳು ಆರಂಭವಾಗುತ್ತದೆ. ಹೀಗಾಗಿ ಕುಟುಂಬಸ್ಥರು ಆದಷ್ಟು ಮಗುವಿನ ಆರೈಕೆಯ ಜೊತೆಗೆ ತಾಯಿ ಚೆನ್ನಾಗಿ ನಿದ್ರೆ ಮಾಡುವುದಕ್ಕೆ ನೆರವಾದರೆ ಖಿನ್ನತೆಗೆ ಒಳಗಾಗುವುದನ್ನು ತಪ್ಪಿಸಬಹುದು.
ಇದನ್ನೂ ಓದಿ: ಚಿಕ್ಕ ವಯಸ್ಸಿಗೆ ತಾಯಿಯಾಗುವವರೇ ಎಚ್ಚರ, ಬಾಣಂತಿ ಸನ್ನಿ ನಿಮ್ಮನ್ನು ಕಾಡಬಹುದು, ಡಾ. ಜಯಶ್ರೀ ನೀಡುವ ಸಲಹೆಗಳೇನು?
ಹಾರ್ಮೋನ್ ಬದಲಾವಣೆ
ಗರ್ಭಾವಸ್ಥೆಯಲ್ಲಿ ಈಸ್ಟ್ರೊಜನ್ ಮತ್ತು ಪ್ರೊಜೆಸ್ಟ್ರೊನ್ ಹಾರ್ಮೋನ್ ಗಳು ಮಗುವಿನ ಬೆಳವಣಿಗೆಗಾಗಿ ಹೆಚ್ಚುವರಿಯಾಗಿ ಉತ್ಪಾದನೆಗೊಳ್ಲುತ್ತವೆ. ಆದರೆ ಪ್ರಸವದ ಬಳಿಕ ಈ ಹಾರ್ಮೋನ್ ಗಳ ಕುಸಿತ ಮೆದುಳಿನ ಕೆಮಿಕಲ್ ಸಂಯೋಜನೆಯನ್ನು ತಪ್ಪಿಸಿಸುತ್ತದೆ. ಅದರಲ್ಲೂ ನರಪ್ರೇಕ್ಷಕಗಳಾದ ( ನ್ಯೂರೋಟ್ರಾನ್ಸ್ಮಿಟರ್ಸ್) ಸೆರೊಟೊನಿನ್ ಮತ್ತು ಡೊಪಮೈನ್ ಮೇಲೆ ಪರಿಣಾಮ ಬೀರಿ ಮನಸ್ಥಿತಿಯ ಅಡಚಣೆಗೆ ಕಾರಣವಾಗುತ್ತದೆ.
ಕುಟುಂಬದಲ್ಲಿ ಸಮಸ್ಯೆ ದೇಹಾಕೃತಿ ಬದಲಾವಣೆ
ಮನಸ್ಥಿತಿ ಸೂಕ್ಷ್ಮವಾಗಿರುವ ಸಂದರ್ಭದಲ್ಲಿ ಕುಟುಂಬದಲ್ಲಿ ಸಮಸ್ಯೆ, ಹಣಕಾಸಿನ ಸಮಸ್ಯೆ, ಕುಟುಂಬದಿಂದ ಸಿಗದ ಸಹಕಾರ, ಒಬ್ಬಂಟಿತನ ಇವು ತಾಯಂದಿರಿಗೆ ಖಿನ್ನತೆ ಕಾಡಲು ಕಾರಣವಾಗುತ್ತವೆ. ಹಲವು ಬಾರಿ ಕುಟುಂಬದಲ್ಲಿ ಯಾರಿಗಾದರೂ ಪ್ರಸವದ ನಂತರದ ಖಿನ್ನತೆ ಅಥವಾ ಮಾನಸಿಕ ಸಮಸ್ಯೆ ಇದ್ದರೆ, ತಾಯಿಯಂದಿರಿಗೆ ಈ ರೀತಿಯ ಖಿನ್ನತೆ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗೇ ಗರ್ಭಾವಸ್ಥೆ ಹಾಗೂ ಪ್ರಸವದ ಬಳಿಕ ದೇಹದ ಆಕೃತಿಯಲ್ಲಿ ಕೆಲವು ಬದಲಾವಣೆಯಾಗುತ್ತದೆ. ಈ ವಿಚಾರದಲ್ಲಿ ಉಂಟಾಗುವ ಬೇಸರ ಕೂಡ ಖಿನ್ನತೆಗೆ ಕಾರಣವಾಗುಬಹುದು. ಇದೊಂದು ತಾತ್ಕಾಲಿಕ ಬದಲಾವಣೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.
ಪ್ರಸವದ ನಂತರದ ಖಿನ್ನತೆಯ ಲಕ್ಷಣಗಳೇನು?
ಬಹುತೇಕ ತಾಯಂದಿರು ಪ್ರಸವದ ಬಳಿಕ ಪೋಸ್ಟ್ ಪಾರ್ಟಮ್ ಬ್ಲೂಸ್ ಅನುಭವಿಸುತ್ತಾರೆ. ಮನಸ್ಥಿತಿ ಬದಲಾವಣೆ, ಅಳುವುದು ಅಥವಾ ಆತಂಕ ಹೀಗೆ ಹಲವು ರೀತಿಯ ಬದಲಾವಣೆ ಆಗುತ್ತದೆ. ಆದರೆ ಇವು 2 ವಾರದೊಳಗೆ ಸಹಜ ಸ್ಥಿತಿಗೆ ಮರಳುತ್ತವೆ. ಕೆಲವೊಮ್ಮೆ ಇದು ಮುಂದುವರಿದಾಗ ಈ ರೀತಿಯಾಗುತ್ತದೆ. ಅದರಲ್ಲಿಯೂ ಪೋಸ್ಟ್ಪಾರ್ಟಮ್ ಡಿಪ್ರೆಶನ್ ತುಂಬಾ ಆಳವಾದ ಸಮಸ್ಯೆ ಹಾಗೂ ದೀರ್ಘಕಾಲದ ವರೆಗೆ ಉಳಿಯುವಂತದ್ದು. ಇದು ಮಗು ಮತ್ತು ತಾಯಿಯ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಆದರೂ ಈ ಸಮಸ್ಯೆ ಹೆಚ್ಚಾಗಿ ಚರ್ಚೆಗೆ ಒಳಪಡುವುದಿಲ್ಲ ಎಂಬುದೇ ಬೇಸರದ ಸಂಗತಿ. ಈ ಲಕ್ಷಣಗಳಲ್ಲಿ ಪ್ಯಾನಿಕ್ ಅಟ್ಯಾಕ್, ಪದೇ ಪದೇ ಮಗುವಿನ ಆರೋಗ್ಯದ ಬಗ್ಗೆ ಆತಂಕಗೊಳ್ಳುವುದು, ಯಾವುದಾದರೂ ವಿಚಾರದ ಗೀಳು ಅನುಭವಿಸುವುದು, ಸದಾ ಬೇಸರ, ಜೀವನದ ಬಗ್ಗೆ ಆಸಕ್ತಿ ಕಳೆದುಕೊಳ್ಳುವುದು, ನಿಶಕ್ತಿ, ತಾಯಿಯಾಗಿ ಅಪರಾಧ ಪ್ರಜ್ಞೆ, ನಿಷ್ಪ್ರಯೋಜಕತೆ ಅಥವಾ ಸ್ವಯಂ ದೂಷಣೆ, ಹಸಿವಿನಲ್ಲಿ, ಊಟದ ಅಭ್ಯಾಸದಲ್ಲಿ ಬದಲಾವಣೆ, ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಗೊಂದಲ, ಮಗುವಿನ ಜೊತೆಗಿನ ಭಾವನಾತ್ಮಕ ಸಂಬಂಧ ಕಳೆದುಕೊಳ್ಳುವುದು ಅಥವಾ ತೀರಾ ಕಾಳಜಿ ವಹಿಸುವುದು ಇತ್ಯಾದಿ ಪ್ರಸವ ನಂತರದ ಖಿನ್ನತೆಯ ಲಕ್ಷಣಗಳು. ಇದೇ ಮುಂದುವರೆದು ಭ್ರಮೆ, ಮಗುವಿನ ಬಗ್ಗೆ ಭಯ ಆರಂಭವಾದರೆ ಮಾನಸಿಕ ಅಸ್ವಸ್ಥತೆಯೂ ಉಂಟಾಗಬಹುದು.
ಇದನ್ನೂ ಓದಿ: Postpartum Depression: ಬಾಣಂತಿ ಸನ್ನಿ ಎಂದರೇನು?; ಹೆರಿಗೆ ಬಳಿಕವೂ ಬೇಕು ಪ್ರೀತಿ, ಕಾಳಜಿ
ಈ ಸಮಸ್ಯೆಯಿಂದ ಹೊರಬರುವುದು ಹೇಗೆ?
ವೈದ್ಯಕೀಯ ಚಿಕಿತ್ಸೆ, ಕೌನ್ಸಿಲಿಂಗ್ ಮತ್ತು ಥೆರಪಿ
ಪೋಸ್ಟ್ಪಾರ್ಟಮ್ ಡಿಪ್ರೆಶನ್ಗೆ ನ್ಯೂರೊಕೆಮಿಕಲ್ ಕೂಡ ಕಾರಣವಾಗುವುದರಿಂದ ಆಂಟಿಡಿಪ್ರೆಸೆಂಟ್ ಮತ್ತು ಹಾರ್ಮೋನ್ ಥೆರಪಿ ಅಗತ್ಯವಾಗಬಹುದು. ಅನುಭವಿ ಮನಶಾಸ್ತ್ರಜ್ಞರ ಸಲಹೆ ಮೇರೆಗೆ ಈ ಚಿಕಿತ್ಸೆ ಪಡೆಯಬಹುದಾಗಿದೆ. ತೀವ್ರ ಖಿನ್ನತೆಯಲ್ಲಿರುವಾಗ ತಾಯಿಯನ್ನು ಥೆರಪಿಗಳಿಗೆ ಒತ್ತಾಯಿಸುವುದು ಸರಿಯಲ್ಲ, ಆದರೆ ಆಕೆಯ ಮನಸ್ಥಿತಿಯನ್ನು ಸ್ಥಿರಗೊಳಿಸಿ ಬಳಿಕ ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (ಸಿಬಿಟಿ) ಅಥವಾ ಇಂಟರ್ಪರ್ಸನಲ್ ಥೆರಪಿ ( ಐಪಿಟಿ) ಯಂತಹ ಥೆರಪಿಯನ್ನು ನೀಡಬಹುದು. ಈ ಹಂತದಲ್ಲಿ ಕುಟುಂಬದಿಂದ ಸಂಪೂರ್ಣ ಬೆಂಬಲ, ಆರೈಕೆ ಅಗತ್ಯ. ಆಕೆಯನ್ನು ದೂರುವುದು, ಒತ್ತಡ ಹಾಕುವುದು, ಆಕೆಯ ದೇಹ ರಚನೆ ಬಗ್ಗೆ ಕೊಂಕು ನುಡಿಯುವುದನ್ನು ಬಿಟ್ಟು ಉತ್ತಮ ಆಹಾರ, ನಿದ್ರೆಗೆ ಅನುವು ಮಾಡಿಕೊಟ್ಟರೆ, ಚೇತರಿಸಿಕೊಳ್ಳಲು ನೆರವಾದರೆ ಇಂತಹ ಖಿನ್ನತೆಗೆ ಒಳಗಾಗುವುದರಿಂದ ತಡೆಯಬಹುದು.
ಸ್ವಯಂ ಆರೈಕೆ ಹೇಗೆ?
ಮಗುವು ಮಲಗಿದಾಗ ತಾಯಿಯೂ ನಿದ್ರೆ ಮಾಡಲಿ, ಇದರಿಂದ ನಿದ್ರಾ ಹೀನತೆ ತಪ್ಪಿಸಬಹುದು. ಆರೋಗ್ಯಕರವಾದ ಹಾಗೂ ಸಮತೋಲಿತ ಆಹಾರ ಸೇವನೆ ಬಲು ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ವಾಕಿಂಗ್, ಯೋಗದಂತಹ ಲಘು ವ್ಯಾಯಾಮ ಉತ್ತಮ. ಆನ್ಲೈನ್, ಸೋಶಿಯಲ್ ಮೀಡಿಯಾದಲ್ಲಿ ಬರುವ ಕಂಟೆಂಟ್ ಗಳ ಜೊತೆ ತಮ್ಮನ್ನು ಹೋಲಿಸಿಕೊಳ್ಳದೇ ದೇಹದ ಆಕೃತಿಯಲ್ಲಿನ ಬದಲಾವಣೆ ಸಹಜ ಎಂದು ಪರಿಗಣಿಸುವುದು ಉತ್ತಮ.
ಒಟ್ಟಾರೆಯಾಗಿ ಪೋಸ್ಟ್ಪಾರ್ಟಮ್ ಡಿಪ್ರೆಶನ್ ಅಥವಾ ಪ್ರಸವ ನಂತರದ ಖಿನ್ನತೆ ಜೀವನಶೈಲಿಯಲ್ಲಿನ ಬದಲಾವಣೆಗೆ ಉಂಟಾಗುವ ಬಯಾಲಾಜಿಕಲ್ ಮತ್ತು ಭಾವನಾತ್ಮಕ ಪ್ರತಿಕ್ರಿಯೆ. ಈ ಸಮಯದಲ್ಲಿ ಎಲ್ಲಾ ತಾಯಂದಿರು ಆರೈಕೆ, ಸಹಾನುಭೂತಿಗೆ ಅರ್ಹರು. ಕುಟುಂಬಸ್ಥರು ಆಕೆಗೆ ಸಂಪೂರ್ಣ ಬೆಂಬಲ ಕೊಟ್ಟು ಚೇತರಿಕೆಗೆ ನೆರವಾಗಬೇಕು. ಖಿನ್ನತೆಯ ಲಕ್ಷಣಗಳಿದ್ದರೆ ಅದನ್ನು ಆರಂಭದಲ್ಲೇ ಗುರುತಿಸಿ ಸಮಸ್ಯೆಯಿಂದ ಹೊರಬರಲು ನೆರವಾಗಬೇಕು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




