ಕುಂಬಳಕಾಯಿ ಆರೋಗ್ಯ ಪ್ರಯೋಜನ
ಎಲ್ಲಾ ರೀತಿಯ ಹಣ್ಣು, ತರಕಾರಿಗಳು ಕೂಡ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಆದರೆ ಕುಂಬಳಕಾಯಿಯ (Pumpkin) ವಿಷಯಕ್ಕೆ ಬಂದಾಗ, ಅದೊಂದು ರೀತಿಯ ಆರೋಗ್ಯ ಪ್ರಯೋಜನಗಳ ಉಗ್ರಾಣದಂತೆ. ಅಷ್ಟು ಉಪಯೋಗಗಳು ಈ ಒಂದು ತರಕಾರಿಯಲ್ಲಿದೆ. ಅದಕ್ಕಾಗಿಯೇ ಆಯುರ್ವೇದದಲ್ಲಿಯೂ ಕುಂಬಳಕಾಯಿಯನ್ನು ಔಷಧೀಯ ಉದ್ದೇಶಗಳಿಗಾಗಿ ಬಳಕೆ ಮಾಡಲಾಗುತ್ತದೆ. ಈ ತರಕಾರಿ ವಿಟಮಿನ್ ಎ, ಇ, ಸಿ, ಒಮೆಗಾ -3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್, ಸತು, ಸೆಲೆನಿಯಮ್, ಕಬ್ಬಿಣ ಮತ್ತು ಬೀಟಾ-ಕ್ಯಾರೋಟಿನ್ ನಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಹಾಗದರೆ ನಾವು ಪ್ರತಿನಿತ್ಯ ಸೇವನೆ ಮಾಡುವ ಆಹಾರದಲ್ಲಿ ಕುಂಬಳಕಾಯಿಯನ್ನು ಸೇರಿಸುವುದರಿಂದಾಗುವ ಪ್ರಯೋಜನಗಳೇನು? ಯಾರಿಗೆಲ್ಲಾ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
- ಕುಂಬಳಕಾಯಿಯಲ್ಲಿ ನಾರಿನಂಶ ಹೇರಳವಾಗಿದೆ. ಇದು ತೂಕವನ್ನು ಒಂದೇ ರೀತಿಯಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕುಂಬಳಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಾಮಾನ್ಯವಾಗಿಡಲು ಸಹ ಸಹಾಯ ಮಾಡುತ್ತದೆ.
- ಕುಂಬಳಕಾಯಿ ರಸವು ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಮಾತ್ರವಲ್ಲ, ಇದರ ಗುಣಲಕ್ಷಣಗಳಿಂದಾಗಿ, ಇದು ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.
- ನಮ್ಮ ಕಣ್ಣು ಮತ್ತು ಚರ್ಮದ ಆರೋಗ್ಯಕ್ಕೆ ವಿಟಮಿನ್ ಎ ಬಹಳ ಮುಖ್ಯವಾಗುತ್ತದೆ. ಕುಂಬಳಕಾಯಿಯಲ್ಲಿ ವಿಟಮಿನ್ ಎ ಹೇರಳವಾಗಿದೆ. ಮಾತ್ರವಲ್ಲ ಈ ತರಕಾರಿಯಲ್ಲಿರುವ ವಿಟಮಿನ್ ಸಿ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಕುಂಬಳಕಾಯಿ ಬೀಜಗಳಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವಿದೆ. ಇದು ಸಿರೊಟೋನಿನ್ ಎಂಬ ರಾಸಾಯನಿಕದ ಉತ್ಪಾದನೆಗೆ ಸಹಾಯ ಮಾಡುತ್ತದೆ. ಸಿರೊಟೋನಿನ್ ಮಾನಸಿಕ ಶಾಂತತೆಯ ಭಾವನೆಯನ್ನು ಉತ್ತೇಜಿಸುವುದಲ್ಲದೆ, ಉತ್ತಮ ಗುಣಮಟ್ಟದ ನಿದ್ರೆ ಮಾಡುವುದಕ್ಕೂ ಕೂಡ ಸಹಾಯ ಮಾಡುತ್ತದೆ.
- ಕುಂಬಳಕಾಯಿಯಲ್ಲಿ ಬೀಟಾ- ಕ್ಯಾರೋಟಿನ್ ಜೊತೆಗೆ ವಿಟಮಿನ್ ಸಿ, ವಿಟಮಿನ್ ಇ, ಕಬ್ಬಿಣ ಮತ್ತು ಫೋಲೇಟ್ ಸಮೃದ್ಧವಾಗಿದೆ. ಇವೆಲ್ಲವೂ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಆದ್ದರಿಂದ, ನಿಯಮಿತವಾಗಿ ಆಹಾರದಲ್ಲಿ ಕುಂಬಳಕಾಯಿಯನ್ನು ಸೇರಿಸುವುದರಿಂದ ಸೋಂಕುಗಳಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.
- ಕುಂಬಳಕಾಯಿಯಲ್ಲಿರುವ ಅನೇಕ ಪೋಷಕಾಂಶಗಳು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕುಂಬಳಕಾಯಿಯಲ್ಲಿರುವ ವಿಟಮಿನ್ ಸಿ ಮತ್ತು ಬೀಟಾ- ಕ್ಯಾರೋಟಿನ್ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ಕುಂಬಳಕಾಯಿಯಲ್ಲಿರುವ ಫೈಬರ್ ಮತ್ತು ಪೊಟ್ಯಾಸಿಯಮ್ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.
- ಕುಂಬಳಕಾಯಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮದಲ್ಲಿ ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತವೆ. ಇದರಲ್ಲಿರುವ ಜೀವಸತ್ವಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
- ಕುಂಬಳಕಾಯಿ ಕರುಳಿನ ಆರೋಗ್ಯವನ್ನು ಸುಧಾರಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಮಾತ್ರವಲ್ಲ, ಈ ತರಕಾರಿ ಮಧುಮೇಹವನ್ನು ತಡೆಗಟ್ಟಲು ಕೂಡ ಸಹಾಯ ಮಾಡುತ್ತದೆ.
- ಕುಂಬಳಕಾಯಿ ಮತ್ತು ಅದರ ಬೀಜ ಸೇವನೆಯು ಪ್ರಾಸ್ಟೇಟ್ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದು ಪುರುಷರ ಲೈಂಗಿಕ ಆರೋಗ್ಯಕ್ಕೆ ಬಹಳ ಮುಖ್ಯವಾಗಿದ್ದು ಇದನ್ನು ಸಾಮಾನ್ಯವಾಗಿ ಪ್ರಾಸ್ಟೇಟ್ ಗ್ರಂಥಿಯನ್ನು ಬಲಪಡಿಸಲು ಮತ್ತು ಪುರುಷರಲ್ಲಿನ ಆರೋಗ್ಯಕರ ಹಾರ್ಮೋನ್ ಕಾರ್ಯವನ್ನು ಉತ್ತೇಜಿಸಲು ಬಳಸಲಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ