ಮಳೆಯಲ್ಲಿ ನೆನೆಯಲು ಇಷ್ಟವಿದ್ದರೆ ಈ ವಿಷಯಗಳನ್ನು ತಿಳಿದುಕೊಂಡು ಆರೋಗ್ಯ ಕಾಪಾಡಿಕೊಳ್ಳಿ

ಮಳೆಗಾಲದ ತಂಪಾದ ತುಂತುರು ಮಳೆ ಮತ್ತು ಆಹ್ಲಾದಕರ ಹವಾಮಾನ ಕೆಲವರನ್ನು ಮಳೆಯಲ್ಲಿ ನೆನೆಯುವಂತೆ ಮಾಡುತ್ತದೆ. ತಜ್ಞರು ಮಳೆಯಲ್ಲಿ ಸ್ವಲ್ಪ ಹೊತ್ತು ಒದ್ದೆಯಾಗುವುದರಿಂದ ಮಾನಸಿಕ ಶಾಂತಿ ಮತ್ತು ಸಂತೋಷ ಸಿಗುತ್ತದೆ ಎಂದು ಹೇಳುತ್ತಾರೆ. ಮಳೆಹನಿಗಳು ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಸಿಗೆ ಹಿತವಾದ ಭಾವನೆಯನ್ನು ನೀಡಲು ಸಹಾಯ ಮಾಡುತ್ತದೆ. ಅಲ್ಲದೆ, ಮಳೆನೀರು ದೇಹಕ್ಕೆ ಒಂದು ರೀತಿಯ ಸಂತೋಷವನ್ನು ನೀಡುತ್ತದೆ.

ಮಳೆಯಲ್ಲಿ ನೆನೆಯಲು ಇಷ್ಟವಿದ್ದರೆ ಈ ವಿಷಯಗಳನ್ನು ತಿಳಿದುಕೊಂಡು ಆರೋಗ್ಯ ಕಾಪಾಡಿಕೊಳ್ಳಿ
ಮಳೆಯಲ್ಲಿ ನೆನೆಯುವುದರಿಂದ ಸಿಗುವ ಪ್ರಯೋಜನಗಳು
Image Credit source: Getty Images

Updated on: Jul 08, 2026 | 8:48 PM

ಮುಖ್ಯಾಂಶಗಳು

  • ಮಳೆಯಲ್ಲಿ ನೆನೆಯುವ ಮುನ್ನ ತಿಳಿಯಲೇಬೇಕಾದ ಆರೋಗ್ಯ ಮಾಹಿತಿ
  • ಮಳೆಯಲ್ಲಿ ನೆನೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆಯೇ ಎಂಬ ಪ್ರಶ್ನೆಗೆ ವೈದ್ಯರ ಉತ್ತರ
  • ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳು ಬಹಳ ಮುಖ್ಯ

ಮಳೆಗಾಲ ಕೆಲವರಿಗೆ ಇಷ್ಟವಾಗದಿರಬಹುದು. ಆದರೆ ಈ ಋತು ಆರಂಭವಾಗುತ್ತಿದ್ದಂತೆ ತಂಪಾದ ಗಾಳಿ ಮತ್ತು ಜಿನುಗುವ ಮಳೆ (Rain) ಮನಸ್ಸಿಗೆ ಹೊಸ ಉಲ್ಲಾಸ ನೀಡುವುದರಿಂದ ಮಳೆಯಲ್ಲಿ ನೆನೆಯಲು ಅನೇಕರಿಗೆ ಇಷ್ಟವಾಗುತ್ತದೆ. ಈ ಅನುಭವ ಎಲ್ಲಾ ಸಮಯದಲ್ಲಿಯೂ ಸಿಗದಿರುವುದರಿಂದ ಇದನ್ನು ಸಿಕ್ಕಾಗ ಆನಂದಿಸುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಆದರೆ ಕೆಲವರಿಗೆ ಮಳೆಯಲ್ಲಿ ನೆನೆದರೆ ಆರೋಗ್ಯ ಹಾಳಾಗುತ್ತದೆ ಎಂಬ ಭಯವಿರುತ್ತದೆ. ಆರೋಗ್ಯ ತಜ್ಞರು ಆರೋಗ್ಯವಂತ ವ್ಯಕ್ತಿ ಅಲ್ಪ ಸಮಯ ಮಳೆಯಲ್ಲಿ ನೆನೆಯುವುದರಿಂದ ದೊಡ್ಡ ತೊಂದರೆ ಆಗುವುದಿಲ್ಲ. ಆದರೆ ದೀರ್ಘ ಸಮಯ ನೆನೆಯುವುದು ಅಥವಾ ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ಸೋಂಕುಗಳ ಅಪಾಯ ಹೆಚ್ಚಾಗಬಹುದು ಎನ್ನುತ್ತಾರೆ.

ಮಳೆಯಲ್ಲಿ ಕೆಲ ನಿಮಿಷ ನೆನೆಯುವುದರಿಂದ ಒತ್ತಡ ಕಡಿಮೆಯಾಗಬಹುದು. ಪ್ರಕೃತಿಯೊಂದಿಗೆ ಸಮಯ ಕಳೆಯುವುದರಿಂದ ದೇಹದಲ್ಲಿ ‘ಎಂಡೋರ್ಫಿನ್’ ಮತ್ತು ‘ಸೆರೋಟೊನಿನ್’ ಹಾರ್ಮೋನ್‌ಗಳ ಚಟುವಟಿಕೆ ಹೆಚ್ಚಾಗಿ ಮನಸ್ಸು ಹಗುರವಾಗಿರುವ ಅನುಭವ ನೀಡಬಹುದು. ಬಿಸಿಲಿನ ವಾತಾವರಣದ ಬಳಿಕ ಮಳೆಯ ತಂಪು ದೇಹಕ್ಕೆ ನೆಮ್ಮದಿಯನ್ನೂ ನೀಡುತ್ತದೆ.

ಇದನ್ನೂ ಓದಿ: ಒಂದು ಮುಷ್ಠಿ ಅಕ್ರೋಟ್‌ನಿಂದ ದಿನ ಆರಂಭಿಸಿ; ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಯಾಗುತ್ತೆ ನೋಡಿ

ಮೊದಲ ಮಳೆಯಲ್ಲಿ ನೆನೆಯುವಾಗ ಈ ವಿಷಯ ತಿಳಿದಿರಬೇಕು;

ಆದರೆ ಮೊದಲ ಮಳೆಯಲ್ಲಿ ನೆನೆಯುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಉತ್ತಮ. ಆರಂಭಿಕ ಮಳೆಯ ನೀರಿನಲ್ಲಿ ವಾಯುಮಾಲಿನ್ಯದ ಕಣಗಳು, ಧೂಳು ಮತ್ತು ಕೆಲವು ರಾಸಾಯನಿಕಗಳು ಬೆರೆತಿರುವ ಸಾಧ್ಯತೆ ಇರುತ್ತದೆ. ಹೆಚ್ಚು ಸಮಯ ಒದ್ದೆಯಾದ ಬಟ್ಟೆಯಲ್ಲೇ ಇರುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗಿ ಜ್ವರ, ಶೀತ ಅಥವಾ ಚರ್ಮದ ಸೋಂಕಿನ ಅಪಾಯ ಹೆಚ್ಚಾಗಬಹುದು. ಕಾಲಿನಲ್ಲಿ ಹೆಚ್ಚು ಹೊತ್ತು ಒದ್ದೆ ಬಟ್ಟೆಯಲ್ಲಿದ್ದರೆ ಫಂಗಲ್ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಮಳೆಯಲ್ಲಿ ನೆನೆದ ಬಳಿಕ ತಕ್ಷಣ ಒಣ ಬಟ್ಟೆ ಧರಿಸಿ, ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಉತ್ತಮ. ಬಿಸಿ ಸೂಪ್, ಕಷಾಯ ಅಥವಾ ನೀರು ಕುಡಿಯುವುದರಿಂದ ದೇಹದ ಉಷ್ಣಾಂಶ ಸಮತೋಲನದಲ್ಲಿರಲು ಸಹಕಾರಿಯಾಗುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರು, ಮಕ್ಕಳು, ಗರ್ಭಿಣಿಯರು ಹಾಗೂ ವಯೋವೃದ್ಧರು ಹೆಚ್ಚಿನ ಎಚ್ಚರಿಕೆ ವಹಿಸಬೇಕು.

ಮಳೆಯಲ್ಲಿ ನೆನೆಯುವುದರಿಂದ ವಿಟಮಿನ್ ಬಿ12 ಅಥವಾ ಇತರ ವಿಶೇಷ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತವೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಹಾಗೆಯೇ ಮಳೆಯಲ್ಲಿ ನೆನೆಯುವುದರಿಂದಲೇ ಜ್ವರ ಬರುತ್ತದೆ ಎನ್ನುವುದೂ ಕೂಡ ಸರಿಯಲ್ಲ. ಆದರೆ ತೇವಾಂಶ, ಚಳಿ ಮತ್ತು ವೈರಸ್‌ಗಳಿಗೆ ಒಡ್ಡಿಕೊಳ್ಳುವ ಸಾಧ್ಯತೆ ಹೆಚ್ಚಾಗುವುದರಿಂದ ಅನಾರೋಗ್ಯದ ಅಪಾಯ ಹೆಚ್ಚಬಹುದು. ಆದ್ದರಿಂದ ಮಳೆಯ ಸೌಂದರ್ಯವನ್ನು ಆನಂದಿಸುವ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us