
ಕಿವಿಯೊಳಗಿನ ಕೊಳಕು ಅಥವಾ ಮೇಣ ಕೆಲವೊಮ್ಮೆ ಕಿರಿಕಿರಿ ಅಥವಾ ನೋವಿಗೆ ಕಾರಣವಾಗಬಹುದು. ವೈದ್ಯಕೀಯವಾಗಿ ಸೆರುಮೆನ್ ಎಂದು ಕರೆಯಲ್ಪಡುವ ಕಿವಿ ಮೇಣವು ನಮ್ಮ ಕಿವಿಯೊಳಗೆ ಧೂಳು, ಬ್ಯಾಕ್ಟೀರಿಯಾ ಹೋಗದಂತೆ ರಕ್ಷಿಸಲು ಉತ್ಪತ್ತಿಯಾಗುತ್ತದೆ. ಕಿವಿಯ ಮೇಣ ಅಥವಾ ಕೊಳಕು ಸಾಮಾನ್ಯವಾಗಿ ತಾನಾಗಿಯೇ ಹೋಗುತ್ತವೆಯಾದರೂ, ಅದು ಅತಿಯಾದಾಗ ಅಸ್ವಸ್ಥತೆ, ಶ್ರವಣ ತೊಂದರೆಗಳು ಅಥವಾ ಸೋಂಕುಗಳಿಗೆ ಕಾರಣವಾಗಬಹುದು. ಇದನ್ನು ತೆಗೆಯಲು ಹಲವರು ಹತ್ತಿ ಇನ್ನಿತರ ವಸ್ತುಗಳನ್ನು ಬಳಕೆ ಮಾಡುತ್ತಾರೆ. ಆದರೆ ಇದರಿಂದ ಆ ಕೊಳಕು ಮುಂದೆ ಹೋಗುತ್ತದೆ. ಹಾಗಾಗಿ ಕಿವಿಯ ಕೊಳೆ ತೆಗೆಯಲು ನೈಸರ್ಗಿಕ ಪರಿಹಾರಗಳ ಮೊರೆ ಹೋಗುವುದು ಬಹಳ ಸುರಕ್ಷಿತ. ಇದು ಕೊಳೆ ಅಥವಾ ಮೇಣವನ್ನು ಮೃದುಗೊಳಿಸಿ ತೆಗೆದುಹಾಕಲು ಸಹಾಯ ಮಾಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಕಿವಿಯ ನೈರ್ಮಲ್ಯ ಕಾಪಾಡಲು ಸೌಮ್ಯ, ಆಕ್ರಮಣಶೀಲವಲ್ಲದ ವಿಧಾನಗಳನ್ನು ಬಳಸುವುದು ಒಳ್ಳೆಯದು ಹಾಗಾಗಿ ಮನೆಯಲ್ಲಿ ಮನೆಮದ್ದುಗಳ ಸಹಾಯದಿಂದ, ನೈಸರ್ಗಿಕವಾಗಿ ಕಿವಿಯೊಳಗಿನ ಕೊಳಕನ್ನು ಹೇಗೆ ತೆಗೆಯಬಹುದು ಎಂಬುದನ್ನು ತಿಳಿದುಕೊಳ್ಳಿ.
ಹತ್ತಿ ಅಥವಾ ಬೇರೆ ಬೇರೆ ವಸ್ತುಗಳನ್ನು ಬಳಸಿ ಕಿವಿಯನ್ನು ಸ್ವಚ್ಛ ಮಾಡುವುದಕ್ಕಿಂತ ನೈಸರ್ಗಿಕವಾಗಿ ತೆಗೆಯುವುದು ಸುರಕ್ಷಿತ. ಹಾಗಾಗಿ ಇಲ್ಲಿ ಕೆಲವು ಪರಿಣಾಮಕಾರಿ ಮತ್ತು ಸುರಕ್ಷಿತ ಮನೆಮದ್ದುಗಳನ್ನು ನೀಡಲಾಗಿದೆ.
ಕೆಲವು ಹನಿ ಉಗುರು ಬೆಚ್ಚಗಿನ ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಗಟ್ಟಿಯಾಗಿರುವ ಕಿವಿಯಲ್ಲಿನ ಕೊಳಕು ಅಥವಾ ಮೇಣ ಮೃದುವಾಗಲು ಸಹಾಯ ಮಾಡುತ್ತದೆ, ಈ ರೀತಿ ಮಾಡಿ ನೈಸರ್ಗಿಕವಾಗಿ ಕಿವಿಯ ಕೊಳಕನ್ನು ತೆಗೆಯಬಹುದು.
ಹೈಡ್ರೋಜನ್ ಪೆರಾಕ್ಸೈಡ್ (3%) ದ್ರಾವಣವು ಕಿವಿ ಮೇಣವನ್ನು ಕರಗಿಸಲು ಸಹಾಯ ಮಾಡುತ್ತದೆ. ತಲೆಯನ್ನು ಒಂದು ಬದಿಗೆ ತಿರುಗಿಸಿ ಮತ್ತು 5 ರಿಂದ 10 ಹನಿ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಕಿವಿಗೆ ಹಾಕಿ. 5 ನಿಮಿಷಗಳ ಕಾಲ ಅದೇ ರೀತಿ ಕಿವಿಯನ್ನು ಇಟ್ಟುಕೊಳ್ಳಿ. ಇದನ್ನು 3 ರಿಂದ 14 ದಿನಗಳ ವರೆಗೆ ಮಾಡಿ. ಆದರೆ ಇದನ್ನು ಎಚ್ಚರಿಕೆಯಿಂದ ಬಳಸಿ ಅಥವಾ ವೈದ್ಯರ ಸಲಹೆ ಪಡೆದುಕೊಂಡು ಈ ವಿಧಾನವನ್ನು ಅನುಸರಿಸಿ.
ಉಪ್ಪು ನೀರಿನ ದ್ರಾವಣವು ನೈಸರ್ಗಿಕವಾಗಿ ನಿಮ್ಮ ಕಿವಿಯ ಕೊಳಕನ್ನು ತೆಗೆಯುವ ಸುರಕ್ಷಿತ ಮನೆ ಮದ್ದುಗಳಲ್ಲಿ ಒಂದಾಗಿದೆ. ಉಗುರು ಬೆಚ್ಚಗಿನ ನೀರಿನಲ್ಲಿ ಅರ್ಧ ಟೀ ಸ್ಪೂನ್ ಉಪ್ಪನ್ನು ಬೆರೆಸಿ, ಅದರಲ್ಲಿ ಹತ್ತಿ ಉಂಡೆಯನ್ನು ನೆನೆಸಿ, ಕಿವಿಗೆ ಹನಿ ಹನಿಯಾಗಿ ಹಾಕಬೇಕು. ಕೆಲವು ನಿಮಿಷಗಳ ನಂತರ, ತಲೆಯನ್ನು ಬಾಗಿಸಿ ಆ ನೀರನ್ನು ಹೊರಹಾಕಬೇಕು.
ಬಿಸಿ ನೀರಿನ ಬಟ್ಟಲಿನಿಂದ ಹಬೆ ತೆಗೆದುಕೊಳ್ಳುವುದು ಅಥವಾ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ಕಿವಿಯ ಮೇಣವನ್ನು ನೈಸರ್ಗಿಕವಾಗಿ ತೆಗೆದು ಹಾಕಬಹುದು. ಬಿಸಿ ನೀರಿನಿಂದ ಬರುವ ಉಗಿ ಅಥವಾ ಹಬೆ ಕಿವಿಯ ಕೊಳೆಯನ್ನು ಮೃದುಗೊಳಿಸಲು ಸಹಕಾರಿಯಾಗಿದೆ.
ಇದನ್ನೂ ಓದಿ: ಬೊಜ್ಜಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಪ್ರತಿನಿತ್ಯ ಈ ಹಣ್ಣಿನ ಸೇವನೆ ಮಾಡಿ
ಅಡಿಗೆ ಸೋಡಾ ದ್ರಾವಣವು ಗಟ್ಟಿಯಾಗಿರುವ ಕೊಳಕನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಅರ್ಧ ಟೀ ಚಮಚ ಅಡಿಗೆ ಸೋಡಾವನ್ನು 60 ಮಿಲಿ ಉಗುರು ಬೆಚ್ಚಗಿನ ನೀರಿನಲ್ಲಿ ಕರಗಿಸಿ. ಈ ಮಿಶ್ರಣವನ್ನು ಡ್ರಾಪ್ಪರ್‌ನಲ್ಲಿ ಹಾಕಿ. ತಲೆಯನ್ನು ಒಂದು ಬದಿಗೆ ತಿರುಗಿಸಿ ಕಿವಿಯಲ್ಲಿ 5 ರಿಂದ 10 ಹನಿಗಳನ್ನು ಹಾಕಿ. ಈ ದ್ರಾವಣವು 1 ಗಂಟೆಗಳ ಕಾಲ ಕಿವಿಯಲ್ಲಿ ಇರಲಿ ನಂತರ ನೀರಿನಿಂದ ತೊಳೆಯಿರಿ.
ಮನೆಮದ್ದುಗಳು ಕೆಲಸ ಮಾಡದಿದ್ದರೆ ಅಥವಾ ನೀವು ಪದೇ ಪದೇ ಕಿವಿ ನೋವು, ಶ್ರವಣ ನಷ್ಟ ಅಥವಾ ತಲೆ ತಿರುಗುವಿಕೆಯನ್ನು ಅನುಭವಿಸುತ್ತಿದ್ದರೆ, ವೈದ್ಯಕೀಯ ಸಹಾಯವನ್ನು ಪಡೆಯುವುದು ಉತ್ತಮ. ಅವರು ನಿಮ್ಮ ಕಿವಿಯಲ್ಲಿರುವ ಕೊಳೆಯನ್ನು ಸುರಕ್ಷಿತವಾಗಿ ತೆಗೆಯಲು ಸಹಾಯ ಮಾಡುತ್ತಾರೆ. ಕಿವಿ ಕೊಳೆಯನ್ನು ತೆಗೆಯುವುದು ಸುರಕ್ಷಿತ ಆದರೆ ಅತಿಯಾದರೆ ಶ್ರವಣ ಸಮಸ್ಯೆಗಳು ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ಹಾಗಾಗಿ ನೈಸರ್ಗಿಕ ಪರಿಹಾರಗಳನ್ನು ಆಯ್ಕೆ ಮಾಡಿಕೊಳ್ಳಿ. ರೋಗಲಕ್ಷಣಗಳು ಕಡಿಮೆ ಆಗದಿದ್ದರೆ ವೈದ್ಯರನ್ನು ಸಂಪರ್ಕಿಸಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ