ನರುಳ್ಳೆ ಬಗ್ಗೆ ನೀವು ಕೇಳಿರಬಹುದು. ಇದನ್ನು ನರಹುಲಿ, ನೀರುಳಿ ನರವಲಿ, ನರುಳಿ, ಚಿಮುಕಲು, ನುಚ್ಚಿನಗುಳ್ಳೆ, ಪುಲ್ಪುರಿ ಗುಳ್ಳೆ ಹೀಗೆ ನಾನಾ ಹೆಸರುಗಳಿಂದ ಕರೆಯುತ್ತಾರೆ. ಇಂಗ್ಲಿಷ್‌ನಲ್ಲಿ ಸ್ಕಿನ್ ಟ್ಯಾಗ್ (warts) ಅಲ್ಲದೆ ತುಳುವಿನಲ್ಲಿ ಕೆಡು ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಕುತ್ತಿಗೆ, ಕೆನ್ನೆ, ಕೈಗಳಲ್ಲಿ ಕಂಡುಬರಬಹುದು. ನರುಳ್ಳೆ ಮಾರಣಾಂತಿಕ ರೋಗವಲ್ಲ, ಆದರೆ ಇದರಿಂದ ತ್ವಚೆಯ ಸೌಂದರ್ಯ ಹಾಳಾಗುತ್ತದೆ ಜೊತೆಗೆ ಕೆಲವರಲ್ಲಿ ಸಣ್ಣ ಪ್ರಮಾಣದಲ್ಲಿ ಇನ್ನು ಕೆಲವರಲ್ಲಿ ದೊಡ್ಡ ದೊಡ್ಡ ನರುಳ್ಳೆಗಳು ಆಗಬಹುದು. ಹಾಗಾದರೆ ಇದು ಕಂಡು ಬಂದಲ್ಲಿ ಇದನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ? ಮನೆಮದ್ದುಗಳೇನು? ಇಲ್ಲಿದೆ ಮಾಹಿತಿ.
ನರಹುಲಿ ಅಥವಾ ನರುಳ್ಳೆ ಸಮಸ್ಯೆ ಬಂದಾಗ ಚರ್ಮರೋಗ ತಜ್ಞರ ಬಳಿ ಹೋಗುತ್ತಾರೆ, ಆದರೆ ಇವುಗಳನ್ನು ಮನೆಮದ್ದುಗಳ ಮೂಲಕ ಕೂಡ ತೆಗೆಯಬಹುದು. ಇಲ್ಲಿ ಈ ಸಮಸ್ಯೆಯನ್ನು ನಿವಾರಣೆ ಮಾಡಲು ಸರಳವಾದ ಹಾಗೂ ಪರಿಣಾಮಕಾರಿಯಾದ ಮನೆಮದ್ದು ನೀಡಲಾಗಿದ್ದು, ಇದರಲ್ಲಿ ನಿಮಗೆ ಸೂಕ್ತವಾದ ಮನೆಮದ್ದನ್ನು ಮಾಡಿ ನೋಡಬಹುದು.
*2- 3 ಎಸಳು ಬೆಳ್ಳುಳ್ಳಿ ತೆಗೆದು ಸಿಪ್ಪೆ ಸುಲಿದು ಜಜ್ಜಿ, ಅದನ್ನು ನರಹುಲಿ ಅಥವಾ ನರುಳ್ಳೆ ಮೇಲೆ ಇಡಿ, ಅದರ ಮೇಲೆ ಪ್ಲಾಸ್ಟರ್ ಅಥವಾ ತೆಳುವಾದ ಬಟ್ಟೆ ಕಟ್ಟಿ ಕಟ್ಟಿ ರಾತ್ರಿ ಹೊತ್ತು ಬಿಡಿ, ಬೆಳಗ್ಗೆ ಅದನ್ನು ತೆಗೆಯಿರಿ. ಈ ರೀತಿ ಒಂದು ವಾರ ಮಾಡಿದರೆ ಸಾಕು ನರಹುಲಿ ಬಿದ್ದು ಹೋಗುತ್ತದೆ.
ಮತ್ತಷ್ಟು ಓದಿ: ಚರ್ಮದ ಆರೋಗ್ಯದಿಂದ ಹಿಡಿದು ಮಧುಮೇಹದವರೆಗೆ ಎಲ್ಲದಕ್ಕೂ ಕರಿಬೇವಿನ ಎಲೆ!
*ಅರ್ಧ ಚಮಚ ಸುಣ್ಣ, ಅರ್ಧ ಚಮಚ ಅಡಿಗೆ ಸೋಡ ಮತ್ತು ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ, ಬಳಿಕ ಇದನ್ನು ನರುಳ್ಳೆಗಳಿರುವ ಜಾಗದಲ್ಲಿ ಹಚ್ಚಿಕೊಳ್ಳಿ, ಈ ರೀತಿ ಮಾಡುವುದರಿಂದ ನರುಳ್ಳೆ ತಾನಾಗಿಯೇ ಉದುರಿ ಹೋಗುತ್ತದೆ. ಯಾವುದೇ ರೀತಿಯ ಭಯ ಪಡುವ ಅವಶ್ಯಕತೆ ಇರುವುದಿಲ್ಲ.
*ಸುಣ್ಣ ಅರ್ಧ ಚಮಚ ತೆಗೆದುಕೊಳ್ಳಿ, ಅದಕ್ಕೆ ಅರ್ಧ ಚಮಚ ಕೋಲ್ಗೆಟ್ ಹಾಕಿ ಮಿಕ್ಸ್ ಮಾಡಿ, ನಂತರ ನರುಳ್ಳೆ ಇರುವ ಕಡೆ ಹಚ್ಚಿ ರಾತ್ರಿ ಪೂರ್ತಿ ಹಾಗೆಯೇ ಬಿಡಿ ನಂತರ ನೋಡಿದರೆ ನರುಳ್ಳೆ ಮಾಯವಾಗಿರುತ್ತದೆ. ಸುಣ್ಣ ಮತ್ತು ಕೋಲ್ಗೆಟ್ ಹಚ್ಚಿದಾಗ ಮೊದಲಿಗೆ ಸ್ವಲ್ಪ ಉರಿ ಅನಿಸಿದರೂ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಮುಖಕ್ಕೆ ಹಾಕಿದರೆ ಕಲೆ ಬೀಳಬಹುದು, ಆದರೆ ಆ ಕಲೆ ಸ್ವಲ್ಪ ದಿನಗಳ ಬಳಿಕ ತಾನಾಗಿಯೇ ಹೋಗುತ್ತದೆ.
*ನರಹುಲಿ ಇರುವ ಕಡೆ ಬಾಳೆಹಣ್ಣಿನ ಸಿಪ್ಪೆ ಇಟ್ಟು ಪ್ಲಾಸ್ಟರ್ ಹಾಕಿ, ಬೆಳಗ್ಗೆ ತೆಗೆಯಿರಿ. ಈ ರೀತಿ ಒಂದು ವಾರ ಮಾಡಿದರೆ ನರಹುಲಿ ಇಲ್ಲವಾಗುವುದು.
*ನೇಲ್ ಪಾಲಿಶ್ ಬಳಸಿ ಕೂಡ ನರಹುಲಿ ತೆಗೆಯಬಹುದು. ಇದು ನಿಮಗೆ ಆಶ್ಚರ್ಯ ಉಂಟು ಮಾಡಬಹುದು ಆದರೆ ಇದು ಸತ್ಯ. ನರಹುಲಿ ಇರುವ ಜಾಗದಲ್ಲಿ ನೇಲ್‌ಪಾಲಿಷ್ ಹಚ್ಚಿ ಬೆಳಗ್ಗೆ ಕೊಬ್ಬರಿ ಎಣ್ಣೆ ಹಚ್ಚಿ ತೆಗೆಯಿರಿ. ಈ ರೀತಿ ಹದಿನೈದು ದಿನ ಮಾಡಿದರೆ ಚಿಮುಕಲು ಬಿದ್ದು ಹೋಗಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ