ಮಧ್ಯಾಹ್ನ ನಿದ್ರೆ ಮಾಡುವುದು ಆರೋಗ್ಯಕ್ಕೆ ಪ್ರಯೋಜನಕಾರಿಯೇ? ಈ ಬಗ್ಗೆ ತಜ್ಞರ ಅಭಿಪ್ರಾಯವೇನು ತಿಳಿದುಕೊಳ್ಳಿ

ಮಧ್ಯಾಹ್ನ ಊಟವಾದ ಮೇಲೆ ಅನೇಕರಿಗೆ ನಿದ್ರೆ ಬರುತ್ತದೆ, ಕೆಲವರು ಸ್ವಲ್ಪ ಹೊತ್ತು ನಿದ್ರೆ ಮಾಡಿದರೆ ಇನ್ನು ಕೆಲವರು ಗಂಟೆಗಟ್ಟಲೆ ನಿದ್ರಿಸುತ್ತಾರೆ. ಸಾಮಾನ್ಯವಾಗಿ ಮಧ್ಯಾಹ್ನ 2- 3 ಗಂಟೆಗಳ ಕಾಲ ನಿದ್ರಿಸುವುದು ಬಹಳ ಸಾಮಾನ್ಯ. ಅದರಲ್ಲಿಯೂ ವಿಶೇಷವಾಗಿ ಗೃಹಿಣಿಯರು ಊಟದ ನಂತರ ಒಂದು ಸಣ್ಣ ನಿದ್ರೆ ಮಾಡುತ್ತಾರೆ. ಆದರೆ ಮಧ್ಯಾಹ್ನ ಮಲಗುವುದು ಆರೋಗ್ಯಕ್ಕೆ ಪ್ರಯೋಜನಕಾರಿಯೇ ಅಥವಾ ಹಾನಿಕಾರಕವೇ? ತಜ್ಞರ ಅಭಿಪ್ರಾಯವೇನು? ಯಾರಿಗೆ ಮಧ್ಯಾಹ್ನದ ನಿದ್ರೆ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಧ್ಯಾಹ್ನ ನಿದ್ರೆ ಮಾಡುವುದು ಆರೋಗ್ಯಕ್ಕೆ ಪ್ರಯೋಜನಕಾರಿಯೇ? ಈ ಬಗ್ಗೆ ತಜ್ಞರ ಅಭಿಪ್ರಾಯವೇನು ತಿಳಿದುಕೊಳ್ಳಿ
Afternoon Nap

Updated on: Oct 18, 2025 | 3:00 PM

ಮಧ್ಯಾಹ್ನ ಊಟ ಮಾಡಿದ ನಂತರ ಅನೇಕರು ಸಣ್ಣ ನಿದ್ರೆಗೆ ಜಾರುತ್ತಾರೆ, ಇನ್ನು ಕೆಲವರು ಆಗ ಬರುವ ನಿದ್ರೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ಒಂದು ದಿನ ಆ ಸಮಯಕ್ಕೆ ಮಲಗಿದರೆ ಮಾರನೇ ದಿನವೂ ಅದೇ ಸಮಯಕ್ಕೆ ನಿದ್ರೆ (Sleep) ಬರುತ್ತದೆ ಎಂದು ಮಲಗುವುದಕ್ಕೆ ಹೋಗುವುದಿಲ್ಲ. ಆದರೆ ಸಾಮಾನ್ಯವಾಗಿ ಮನೆಯಲ್ಲಿರುವ ಗೃಹಿಣಿಯರು, ಶಾಲೆಗೆ ಹೋಗಿ ಬೇಗ ಬರುವ ಮಕ್ಕಳು ಅಥವಾ ವಯಸ್ಸಾದವರು ಮಧ್ಯಾಹ್ನ 2- 3 ಗಂಟೆಗಳ ಕಾಲ ನಿದ್ರಿಸುತ್ತಾರೆ. ಇದು ದಿನನಿತ್ಯ ರೂಢಿಯಾಗಿರುತ್ತದೆ. ಅದರಲ್ಲಿಯೂ ವಿಶೇಷವಾಗಿ ಗೃಹಿಣಿಯರು ಊಟವಾದ ನಂತರ ಒಂದು ಚಿಕ್ಕ ನ್ಯಾಪ್ (Afternoon Nap) ತೆಗೆದುಕೊಳ್ಳುತ್ತಾರೆ. ಈ ಸಮಯದಲ್ಲಿ ಎಲ್ಲಾ ಕೆಲಸಗಳು ಮುಗಿದಿರುವುದರಿಂದ ಮಧ್ಯಾಹ್ನ ಸ್ವಲ್ಪ ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಆದರೆ ಈ ಸಮಯದಲ್ಲಿ ನಿದ್ರೆ ಮಾಡುವುದು ಆರೋಗ್ಯಕ್ಕೆ ಪ್ರಯೋಜನಕಾರಿಯೇ ಅಥವಾ ಹಾನಿಕಾರಕವೇ ಎಂಬ ಅನುಮಾನ ಹಲವರಲ್ಲಿ ಇರುತ್ತದೆ. ಇಂತಹ ಪ್ರಶ್ನೆಗಳಿಗೆ ಉತ್ತರ ಈ ಸ್ಟೋರಿಯಲ್ಲಿದೆ.

ಇಂದಿನ ಕಾರ್ಯನಿರತ ಜೀವನಶೈಲಿ ಮತ್ತು ತಡರಾತ್ರಿ ಮಲಗುವ ಅಭ್ಯಾಸದಿಂದಾಗಿ, ಮಧ್ಯಾಹ್ನ ನಿದ್ರೆ ಮಾಡುವುದು ಸಾಮಾನ್ಯವಾಗಿದೆ. ಈ ಕಾರಣಕ್ಕಾಗಿ, ಅನೇಕರು ತಮ್ಮ ದೈನಂದಿನ ದಿನಚರಿಯಲ್ಲಿ ಒಂದು ಚಿಕ್ಕ ನಿದ್ದೆ ಮಾಡುವುದಕ್ಕೆ ಇಷ್ಟಪಡುತ್ತಾರೆ. ಆದರೆ ಕೆಲವರು ಮಧ್ಯಾಹ್ನದ ನಿದ್ರೆ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳುತ್ತಾರೆ. ಹಾಗಾಗಿ ಇದು ಗೊಂದಲಕ್ಕೆ ಕಾರಣವಾಗಿ ಮಧ್ಯಾಹ್ನ ನಿದ್ರೆ ಮಾಡಬೇಕೇ? ಬೇಡವೇ ಎಂಬ ಅನುಮಾನ ಆರಂಭವಾಗುತ್ತದೆ.

ತಜ್ಞರು ಹೇಳುವುದೇನು?

ದೆಹಲಿಯ ಶ್ರೀ ಬಾಲಾಜಿ ಆಕ್ಷನ್ ಮೆಡಿಕಲ್ ಇನ್‌ಸ್ಟಿಟ್ಯೂಟ್‌ನ ಶ್ವಾಸಕೋಶಶಾಸ್ತ್ರ ಮತ್ತು ಹಿರಿಯ ಸಲಹೆಗಾರ ಡಾ. ಅನಿಮೇಶ್ ಆರ್ಯ ಅವರು ಹೇಳುವ ಪ್ರಕಾರ, ನೀವು 20 ರಿಂದ 30 ನಿಮಿಷಗಳ ಕಾಲ ಸಣ್ಣ ನಿದ್ರೆ ಮಾಡಿದರೆ, ಮಧ್ಯಾಹ್ನದ ನಿದ್ರೆ ಬಹಳ ಪ್ರಯೋಜನಕಾರಿ. ಈ ಒಂದು ಸಣ್ಣ ನಿದ್ರೆ ದೇಹ ಮತ್ತು ಮನಸ್ಸು ಎರಡನ್ನೂ ವಿಶ್ರಾಂತಿಗೊಳಿಸುತ್ತದೆ. ಮಾತ್ರವಲ್ಲ ಈ ನಿದ್ರೆ ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಮಧ್ಯಾಹ್ನದ ವೇಳೆ ನಿದ್ರೆ ಮಾಡುವುದು ಯಾರಿಗೆ ಒಳ್ಳೆಯದಲ್ಲ?

ತಜ್ಞರು ತಿಳಿಸಿರುವ ಮಾಹಿತಿ ಅನುಸಾರ ಮಧ್ಯಾಹ್ನದ ನಿದ್ದೆ ಸಾಮಾನ್ಯವಾಗಿ ಒಂದು ಗಂಟೆಗಿಂತ ಹೆಚ್ಚು ಹೊತ್ತು ಮಾಡಬಾರದು. ಏಕೆಂದರೆ ಇದು ರಾತ್ರಿಯ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ನಿದ್ರೆಯ ಮಾದರಿಗಳನ್ನು ಅಡ್ಡಿಪಡಿಸುತ್ತದೆ. ಹೆಚ್ಚುವರಿಯಾಗಿ, ನಿದ್ರೆಯ ಅಭ್ಯಾಸದಲ್ಲಿ ಬದಲಾವಣೆ ಆಗುತ್ತಿರುವವರು, ಮಧುಮೇಹ ಅಥವಾ ಹೃದಯ ಸಂಬಂಧಿ ಸಮಸ್ಯೆಗಳಿರುವವರು ವೈದ್ಯರನ್ನು ಸಂಪರ್ಕಿಸದೆ ಮಧ್ಯಾಹ್ನದ ನಿದ್ದೆ ಮಾಡಬಾರದು. ಸಾಧ್ಯವಾದಷ್ಟು ಮಧ್ಯಾಹ್ನ 1 ರಿಂದ 3 ಗಂಟೆಯ ನಡುವೆ ಮಲಗಲು ಪ್ರಯತ್ನಿಸಿ. ಬಹಳ ದೀರ್ಘ ನಿದ್ರೆ ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಹಾಲಿಗೂ ನಿದ್ರೆಗೂ ಸಂಬಂಧವಿದೆಯೇ? ಯಾಕೆ ಹಾಲು ಕುಡಿದರೆ ನಿದ್ರೆ ಬರುತ್ತೆ ತಿಳಿದುಕೊಳ್ಳಿ

ನಿದ್ರೆಯ ಗುಣಮಟ್ಟವನ್ನು ಸುಧಾರಿಸುವುದು ಹೇಗೆ?

ನಿದ್ರೆ ಮನಸ್ಸು ಮತ್ತು ದೇಹ ಎರಡಕ್ಕೂ ಅತ್ಯಗತ್ಯ. ಅದಕ್ಕಾಗಿಯೇ ತಜ್ಞರು 7- 8 ಗಂಟೆ ನಿದ್ರೆ ಮಾಡುವುದಕ್ಕೆ ಶಿಫಾರಸು ಮಾಡುತ್ತಾರೆ. ಆದರೆ ಕೆಲವರು ಕಡಿಮೆ ಸಮಯ ನಿದ್ರೆ ಮಾಡುತ್ತಾರೆ. ಮಾತ್ರವಲ್ಲ ಕೆಲವರು ನಿದ್ರೆ ಮಾಡುವಾಗ ಆಗಾಗ ನಾನಾ ರೀತಿಯ ಅಡಚಣೆಗಳನ್ನು ಎದುರಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ, ನಿದ್ರೆಯ ಗುಣಮಟ್ಟವನ್ನು ಸುಧಾರಿಸುವುದು ಬಹಳ ಮುಖ್ಯ. ನಿಮಗೂ ಕೂಡ ನಿದ್ರೆ ಮಾಡುವುದಕ್ಕೆ ತೊಂದರೆಯಾಗುತ್ತಿದ್ದರೆ, ನೀವು ಯೋಗ ಮಾಡಬಹುದು. ಬಾಲಾಸನ (ಮಗುವಿನ ಭಂಗಿ), ಶವಾಸನ (ಶವದ ಭಂಗಿ), ಅನುಲೋಮ- ವಿಲೋಮ (ಪರ್ಯಾಯ ಮೂಗಿನ ಹೊಳ್ಳೆ ಉಸಿರಾಟ) ಮತ್ತು ಭ್ರಮರಿ ಪ್ರಾಣಾಯಾಮವನ್ನು ಮಾಡಬಹುದು. ಜೊತೆಗೆ ಮಲಗುವ ಸಮಯಕ್ಕೆ ಒಂದು ಗಂಟೆ ಮೊದಲು ನಿಮ್ಮ ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪ್ ಬಳಸುವುದನ್ನು ತಪ್ಪಿಸಿ. ರಾತ್ರಿಯಲ್ಲಿ ಕೆಫೀನ್ ಸೇವನೆ ಮಾಡಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ