
ನಿಂಬೆ ಹುಲ್ಲು (Lemongrass) ಅಥವಾ ಲೆಮನ್‌ಗ್ರಾಸ್ ಒಂದು ಸೂಪರ್ ಗಿಡಮೂಲಿಕೆ. ಸರಳವಾಗಿ ಹೇಳುವುದಾದರೆ ಪ್ರಕೃತಿಯಲ್ಲಿ ಸಿಗುವ ಒಂದು ಅಮೃತ. ಅದರಲ್ಲಿಯೂ ಈ ಮಳೆಗಾಲದಲ್ಲಿ ಕಂಡು ಬರುವ ನಾನಾ ರೀತಿಯ ಕಾಲೋಚಿತ ಸೋಂಕುಗಳ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಇರುವ ಬೆಸ್ಟ್ ಔಷಧ. ಕೆಲವರಿಗೆ ಇದರ ಬಗ್ಗೆ ಸರಿಯಾಗಿ ತಿಳಿದಿಲ್ಲ. ಆದರೆ ಈ ಹುಲ್ಲಿನಲ್ಲಿಯೂ ಸಿಕ್ಕಾಪಟ್ಟೆ ಆರೋಗ್ಯ (Health) ಪ್ರಯೋಜನಗಳಿವೆ. ಸಾಧ್ಯವಾದರೆ ಮನೆಯಲ್ಲಿಯೇ ಬೆಳೆಸಿ ಇದನ್ನು ಬಳಸಿ ಪ್ರತಿದಿನ ಒಂದು ಕಪ್ ಚಹಾ ತಯಾರಿಸಿ ಕುಡಿಯಬಹುದು. ಈ ಒಂದು ಅಭ್ಯಾಸ ನಿಮ್ಮ ಅನೇಕ ರೀತಿಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಮಾತ್ರವಲ್ಲ ಬೆಳಿಗ್ಗೆ ಇದನ್ನು ಚಹಾದಂತೆ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ಗಮನಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಕೂಡ ಹೇಳುತ್ತಾರೆ. ಹಾಗಾದರೆ ಬೆಳಿಗ್ಗೆ ಒಂದು ಕಪ್ ಲೆಮನ್‌ಗ್ರಾಸ್ ಚಹಾ (lemongrass tea) ಸೇವಿಸುವುದರಿಂದ ಸಿಗುವ ಪ್ರಯೋಜನಗಳೇನು? ಯಾಕೆ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಉತ್ಕರ್ಷಣ ನಿರೋಧಕಗಳು ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ನಿಂಬೆ ಹುಲ್ಲು ಅನೇಕ ರೀತಿಯಲ್ಲಿ ಉಪಯೋಗಕಾರಿಯಾಗಿದೆ. ಬೆಳಿಗ್ಗೆ ಇದನ್ನು ಚಹಾದಂತೆ ಕುಡಿಯುವುದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತದೆ. ಮಾತ್ರವಲ್ಲ ಈ ಗಿಡಮೂಲಿಕೆ ಪಾನೀಯವು ತೂಕ ಇಳಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ನಿಂಬೆ ಹುಲ್ಲಿನ ಚಹಾವನ್ನು ಕುಡಿಯುವುದರಿಂದ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾದ ಪ್ರಮಾಣ ಹೆಚ್ಚಾಗುತ್ತದೆ. ಮಾತ್ರವಲ್ಲ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ದಿನಕ್ಕೆ ಎರಡು ಬಾರಿ ಈ ಚಹಾವನ್ನು ಸೇವಿಸುವುದರಿಂದ ಹೊಟ್ಟೆಯ ಸುತ್ತಲೂ ಸಂಗ್ರಹವಾಗಿರುವ ಕೊಬ್ಬನ್ನು ಕೂಡ ಕರಗಿಸುತ್ತದೆ.
ಪ್ರತಿದಿನ ಒಂದು ಕಪ್ ನಿಂಬೆ ಹುಲ್ಲಿನ ಚಹಾ ಕುಡಿಯುವುದರಿಂದ ಆಮ್ಲೀಯತೆ ಮತ್ತು ಗ್ಯಾಸ್ಟ್ರಿಕ್ ನಿಂದ ಪರಿಹಾರ ಸಿಗುತ್ತದೆ. ಇದು ಕರುಳಿನ ಚಲನೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಕರುಳಿನ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ. ಉಬ್ಬುವುದು, ಮಲಬದ್ಧತೆ ಮತ್ತು ಅನಿಲದಂತಹ ಸಮಸ್ಯೆಯನ್ನು ತಡೆಯುತ್ತದೆ. ಜೊತೆಗೆ ಕಾಲೋಚಿತ ಸೋಂಕುಗಳಿಂದ ದೇಹವನ್ನು ರಕ್ಷಿಸುತ್ತದೆ. ನಿಂಬೆ ಹುಲ್ಲಿನ ಚಹಾವು ಉತ್ಕರ್ಷಣ ನಿರೋಧಕಗಳು ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿದ್ದು ದೇಹದ ಮೇಲೆ ಸ್ವತಂತ್ರ ರಾಡಿಕಲ್‌ಗಳ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಮತ್ತು ಕಾಲೋಚಿತ ಸೋಂಕುಗಳ ಅಪಾಯವನ್ನು ನಿವಾರಿಸುತ್ತದೆ. ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದು ಬಹಳ ಪ್ರಯೋಜನಕಾರಿ.
ನಿಂಬೆ ಹುಲ್ಲಿನ ಚಹಾವು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು ಕೀಲುಗಳಲ್ಲಿ ಕಂಡುಬರುವ ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಫ್ಲೇವನಾಯ್ಡ್‌ಗಳು ಮತ್ತು ಫೀನಾಲಿಕ್ ಸಂಯುಕ್ತಗಳು ಉರಿಯೂತದಿಂದ ಪರಿಹಾರ ನೀಡುತ್ತವೆ. ಇದರಿಂದ ಕೀಲು ನೋವು ಕಡಿಮೆಯಾಗುತ್ತದೆ. ಮಾತ್ರವಲ್ಲ ನಿಂಬೆ ಹುಲ್ಲಿನ ಚಹಾವು ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ. ಬೆಳಿಗ್ಗಿನ ಸಮಯದಲ್ಲಿ ಈ ಚಹಾ ಕುಡಿಯುವುದರಿಂದ ದಿನವಿಡೀ ಆಯಾಸವಾಗದೆಯೇ ದೇಹ ಉಲ್ಲಾಸಭರಿತವಾಗಿರಲು ಸಹಕಾರಿಯಾಗಿದೆ. ಇದೆಲ್ಲದರ ಜೊತೆಗೆ ಈ ಚಹಾ ವ್ಯಕ್ತಿಯ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮೆದುಳಿಗೆ ವಿಶ್ರಾಂತಿ ನೀಡುತ್ತದೆ, ತಲೆ ನೋವಿನ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಮತ್ತು ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸುತ್ತದೆ.
ಇದನ್ನೂ ಓದಿ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಓಕ್ರಾ ವಾಟರ್ ಕುಡಿಯುವ ಅಭ್ಯಾಸ ಇದ್ಯಾ? ಹಾಗಿದ್ರೆ ಈ ವಿಷಯ ತಿಳಿದುಕೊಳ್ಳಿ
ಮೊದಲು ಒಂದು ಪಾತ್ರೆಯಲ್ಲಿ ಒಂದು ಕಪ್ ನೀರನ್ನು ಬಿಸಿ ಮಾಡಿ. ಅದಕ್ಕೆ ನಿಂಬೆ ಹುಲ್ಲನ್ನು ತೊಳೆದು, ಕತ್ತರಿಸಿ ಆ ಬಳಿಕ ಕುದಿಯುತ್ತಿರುವ ನೀರಿಗೆ ಹಾಕಿ. ಬಳಿಕ ಸ್ವಲ್ಪ ಹೊತ್ತು ಕುದಿಯಲು ಬಿಡಿ. ಚಹಾ ಸಿದ್ಧವಾದ ನಂತರ, ಅದನ್ನು ಸೋಸಿ. ರುಚಿಗೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿಕೊಂಡು ದಿನಕ್ಕೆ ಎರಡು ಬಾರಿ ಸೇವನೆ ಮಾಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದು ತುಂಬಾ ಒಳ್ಳೆಯದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ