
ಕಬ್ಬು (Sugarcane) ಎಷ್ಟೇ ಫ್ರೆಶ್ ಆಗಿ ಸಿಕ್ಕರೂ ಕೂಡ ಅದನ್ನು ತಿನ್ನುವ ಉತ್ಸಾಹ ಎಲ್ಲರಲ್ಲಿಯೂ ಇರುವುದಿಲ್ಲ. ಹಾಗಾಗಿ ಇದನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಲಾಗುತ್ತದೆ. ಮಾರುಕಟ್ಟೆ, ಬಜಾರ್ ಹೀಗೆ ಎಲ್ಲಿ ನೋಡಿದರೂ ಇದರ ವ್ಯಾಪಾರ ವ್ಯಾಪಕವಾಗಿ ಕಂಡುಬಂದರೂ ಕೂಡ ಮುಗಿಬಿದ್ದು ಖರೀದಿ ಮಾಡುವವರು ಬಹಳ ಕಡಿಮೆ. ಹಬ್ಬ ಹರಿದಿನಗಳಲ್ಲಿ ಮಾತ್ರ ಇದನ್ನು ಪೂಜೆ ಮತ್ತು ಅಲಂಕಾರಕ್ಕಾಗಿ ಮನೆಗೆ ತರಲಾಗುತ್ತದೆ ಆದರೆ ತಿನ್ನುವ ಉತ್ಸುಕತೆ ಮಾತ್ರ ಯಾರಲ್ಲಿಯೂ ಇರುವುದಿಲ್ಲ. ಕೆಲವರು ಕಬ್ಬಿನ ರಸವನ್ನು (Sugarcane Milk) ಕುಡಿಯಲು ಇಷ್ಟಪಡುತ್ತಾರೆ. ಆದರೆ ನಿಮಗೆ ಗೊತ್ತಾ… ಆರೋಗ್ಯ ತಜ್ಞರು ಕಬ್ಬನ್ನು ನೇರವಾಗಿ ಸೇವಿಸುವುದರಿಂದ ಹೆಚ್ಚಿನ ಪ್ರಮಾಣದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತಾರೆ. ಹೌದು, ಕಬ್ಬಿನ ರಸದ ಸೇವನೆಯಿಂದ ಪ್ರಯೋಜನವಿದ್ದರೂ ಕೂಡ, ಕಬ್ಬು ತಿನ್ನುವುದರಿಂದ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯಬಹುದು. ಹಾಗಾದರೆ ಕಬ್ಬನ್ನು ನೇರವಾಗಿ ತಿನ್ನುವುದರಿಂದ ಸಿಗುವ ಪ್ರಯೋಜನಗಳೇನು? ಯಾವ ಆರೋಗ್ಯ ಸಮಸ್ಯೆಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.
ಕಬ್ಬು ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದರಲ್ಲಿ ಫೈಬರ್ ಪ್ರಮಾಣ ಹೆಚ್ಚಿದ್ದು ಕರುಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಕ್ರಮೇಣ ಅಜೀರ್ಣ ಕಡಿಮೆಯಾಗುತ್ತದೆ. ಗ್ಯಾಸ್ ಸಮಸ್ಯೆಗಳು ಕಡಿಮೆಯಾಗುತ್ತವೆ. ಅಷ್ಟೇ ಅಲ್ಲ, ಕಬ್ಬು ತಿನ್ನುವುದರಿಂದ ತೂಕ ನಿಯಂತ್ರಣದಲ್ಲಿರುತ್ತದೆ ಏಕೆಂದರೆ, ಅದು ಹಸಿವನ್ನು ನಿಯಂತ್ರಿಸುತ್ತದೆ. ಹಾಗಾಗಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಜೊತೆಗೆ ಕಬ್ಬಿನಲ್ಲಿ ನಾರು ಅಧಿಕವಾಗಿರುವುದರಿಂದ, ಆಹಾರದಲ್ಲಿರುವ ಸಕ್ಕರೆ ದೇಹದಲ್ಲಿ ನಿಧಾನವಾಗಿ ಜೀರ್ಣವಾಗುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ಮಧುಮೇಹ ಇರುವವರಿಗೂ ಇದು ಒಳ್ಳೆಯದು. ಆದರೆ ವೈದ್ಯರ ಸಲಹೆಯ ಮೇರೆಗೆ ಮಾತ್ರ ಸೇವಿಸಬೇಕು.
ಕಬ್ಬು ಯಕೃತ್ತಿನ ಆರೋಗ್ಯಕ್ಕೂ ಪ್ರಯೋಜನಕಾರಿ. ಕಬ್ಬಿನ ರಸದಲ್ಲಿರುವ ಪೋಷಕಾಂಶಗಳು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಯಕೃತ್ತು ಶುದ್ಧವಾಗುತ್ತದೆ.
ಇದು ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಬ್ಬಿನ ರಸ ಕೂಡ ಆರೋಗ್ಯಕ್ಕೆ ಒಳ್ಳೆಯದು, ಇದು ನಿರ್ಜಲೀಕರಣವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಚರ್ಮ ಮೃದುವಾಗಿರಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಬಿಸಿಲಿನಲ್ಲಿ ತಣ್ಣಗಿರುವ ಕಬ್ಬಿನ ರಸ ಕುಡಿಯುವವರು ಈ ವಿಷಯಗಳನ್ನು ಮರೆಯಬೇಡಿ
ಕಬ್ಬಿನಲ್ಲಿರುವ ಫೈಬರ್, ವಿಟಮಿನ್ ಮತ್ತು ಖನಿಜಗಳು ಹೃದಯಕ್ಕೂ ಪ್ರಯೋಜನಕಾರಿ. ಇದು ಯಕೃತ್ತಿನಲ್ಲಿರುವ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇಅಲ್ಲ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
ಸಾಮಾನ್ಯವಾಗಿ ಕಬ್ಬು ತಿನ್ನುವುದು ಒಳ್ಳೆಯದಾದರೂ, ಕೆಲವು ಅಂಶಗಳನ್ನು ಗಮನಿಸಬೇಕು. ಅತಿಯಾಗಿ ತಿನ್ನುವುದು ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮಧುಮೇಹ ಇರುವವರು ವೈದ್ಯರ ಸಲಹೆಯ ಮೇರೆಗೆ ಮಾತ್ರ ಇದನ್ನು ತಿನ್ನಬೇಕು. ಜೊತೆಗೆ ಹಲ್ಲಿನ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ತಿಂದ ನಂತರ ತಕ್ಷಣ ಹಲ್ಲುಜ್ಜುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ