
ಮಳೆಯೆಂದರೆ ಕೆಲವರಿಗೆ ತುಂಬಾ ಇಷ್ಟ. ಇನ್ನು ಕೆಲವರಿಗೆ ಕಷ್ಟ. ಆದರೆ ಮಳೆ (Rain) ನಮ್ಮ ಧರೆಗೆ ಅತ್ಯಗತ್ಯ. ಇದು ಎಲ್ಲರಿಗೂ ತಿಳಿದ ವಿಚಾರ. ಈ ರೀತಿ ವರ್ಷದಲ್ಲಿ ನಿಗದಿಯಾದ ದಿನದಲ್ಲಿ ಬರುವ ಮಳೆಗೆ ದೇವರ ಸ್ಥಾನಮಾನ ನೀಡಲಾಗಿದೆ. ಅದರಲ್ಲಿಯೂ ಅಕ್ಟೋಬರ್ ಕೊನೆಯ ವಾರದಿಂದ ನವೆಂಬರ್ ಮೊದಲನೆಯ ವಾರದಲ್ಲಿ ಬರುವ ಮಳೆಗೆ ಎಲ್ಲಿಲ್ಲದ ಬೇಡಿಕೆ. ಹೌದು, ಇದನ್ನು ಸ್ವಾತಿ ಮಳೆ (Swati Rain) ಎಂದು ಕರೆಯಲಾಗುತ್ತದೆ. ಈ ಭಾರಿ ಅ. 24 ರಿಂದ ನ. 5 ರ ವೆರೆಗೆ ಈ ಮಳೆ ಬೀಳಲಿದೆ. ಇನ್ನು ಈ ದಿನಗಳಲ್ಲಿ ಮಳೆ ಬಂದೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲವಾದರೂ ಕೂಡ ಇದರ ಬರುವಿಕೆಗಾಗಿ ಜನ ಸಿದ್ಧತೆ ಮಾಡಿಕೊಳ್ಳದೆಯೂ ಇರುವುದಿಲ್ಲ. ಅದರಲ್ಲಿಯೂ ಉತ್ತರಕನ್ನಡ ಮತ್ತು ಕರಾವಳಿ ಭಾಗದವರಿಗೆ ಈ ಮಳೆ ಅಮೃತಕ್ಕೆ ಸಮಾನ. ಇದು ಧರೆಗೆ ಬೀಳುವ ಮೊದಲೇ ಪಾತ್ರೆಗಳನ್ನಿಟ್ಟು ತುಂಬಿಸುವ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ. ಈ ಮಳೆಗೆ ಇಷ್ಟೆಲ್ಲಾ ಹಿನ್ನಲೆ ಇದ್ಯಾ ಅಂತ ಕೆಲವರಿಗೆ ಆಶ್ಚರ್ಯವಾಗಬಹುದು. ಹೌದು… ಈ ಮಳೆ ಬಗ್ಗೆ ನಿಮಗೆ ತಿಳಿದರೆ ನೀವೂ ಕೂಡ ಪಾತ್ರೆಗಳಲ್ಲಿ ತುಂಬಿಸಿ ಶೇಖರಿಸಿ ಇಟ್ಟುಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಹಾಗಾದರೆ ಈ ಮಳೆ ಯಾಕಿಷ್ಟು ವಿಶೇಷ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸ್ವಾತಿ ಮಳೆ ಎಂದರೆ ಉತ್ತರಕನ್ನಡ, ಕರಾವಳಿಯ ಕೆಲವು ಭಾಗದವರಿಗೆ ಬಹಳ ವಿಶೇಷ. ಹಬ್ಬ ಹರಿದಿನಗಳು ಯಾವಾಗ ಬರುತ್ತದೆ ಎನ್ನುವುದನ್ನು ನೋಡುವುದರ ಜೊತೆ ಜೊತೆಗೆ ಈ ಮಳೆಯ ಆರಂಭ ದಿನವನ್ನು ಕೂಡ ಮರೆಯದೆ ನಿಗದಿಪಡಿಸಿಕೊಳ್ಳುತ್ತಾರೆ. ಯಾಕೆಂದರೆ ಪ್ರತಿವರ್ಷ ಈ ಅವಧಿಯಲ್ಲಿ ಅದರಲ್ಲಿಯೂ ಸ್ವಾತಿ ಮಳೆ ಸರಿಯಾಗಿ ಬಂದರೆ ಬೇಸಗೆಯಲ್ಲಿ ನೀರಿನ ಬರ ಬರುವುದಿಲ್ಲ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಮಾತ್ರವಲ್ಲ ಈ ಮಳೆಯ ಪ್ರತಿ ಹನಿಗಳಲ್ಲಿಯೂ ಅನೇಕ ರೀತಿಯ ಔಷಧೀಯ ಗುಣವಿರುತ್ತದೆ. ಅದಕ್ಕಾಗಿಯೇ ಸ್ವಾತಿ ಮಳೆಯನ್ನು ಹಿಡಿದಿಟ್ಟುಕೊಂಡು ಅದನ್ನು ಗಾಜಿನ ಭರಣಿ, ಬಾಟಲಿ, ಅಥವಾ ತಾಮ್ರ, ಹಿತ್ತಾಳೆಯ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟು, ಅದನ್ನು ವರ್ಷದ ಪೂರ್ತಿ ಬಳಸಲಾಗುತ್ತದೆ.
ಸ್ವಾತಿ ಮಳೆಯ ನೀರನ್ನು ಸಂಗ್ರಹಿಸಿ ಅದರಿಂದ ಹಾಲಿಗೆ ಹೆಪ್ಪು ಹಾಕುವ ಅಪರೂಪದ ಸಂಪ್ರದಾಯವೊಂದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದರಿಂದಾಗಿ ಹಾಲು ಹೆಪ್ಪಾಗುವ ಜೈವಿಕ ಕ್ರಿಯೆ ವರ್ಷಕ್ಕೊಮ್ಮೆ ಹೊಸದಾಗಿ ಪ್ರಾರಂಭಗೊಂಡು ಗುಣಮಟ್ಟದ ಮೊಸರು ಲಭ್ಯವಾಗುತ್ತದೆ. ಅಂದರೆ ಸ್ವಾತಿ ಮಳೆಯ ನೀರನ್ನು ಹಿಡಿದಿಟ್ಟುಕೊಂಡು, ಆ ನೀರನ್ನು ಹಾಲಿಗೆ ಹೆಪ್ಪು ಹಾಕುವಾಗ ಸೇರಿಸಿ ಹೊಸ ಮೊಸರು ಮಾಡಲಾಗುತ್ತದೆ. ಈ ಸ್ವಾತಿ ಮಳೆ ನೀರನ್ನೊಳಗೊಂಡ ಮೊಸರು ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಮಾತ್ರವಲ್ಲ ಇದು ವರ್ಷಕ್ಕೊಮ್ಮೆ ಹೊಸದಾಗಿ ಮೊಸರು ಮಾಡುವ ಪ್ರಕ್ರಿಯೂ ಹೌದು.
ಇದನ್ನೂ ಓದಿ: ಮಳೆ ನೀರು ಕುಡಿಯಲು ಆಯುರ್ವೇದ ಶಿಫಾರಸು ಮಾಡುತ್ತದೆ, ಏಕೆ? ಇಲ್ಲಿದೆ ಮಾಹಿತಿ
ಸ್ವಾತಿ ಮಳೆ ನೀರು ಒಂದು ರೀತಿಯಲ್ಲಿ ಐ’ಡ್ರಾಪ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದು ಕಣ್ಣು ಉರಿ, ಕಣ್ಣು ನೋವು, ಕಣ್ಣುಗಳು ಮಂಜಾಗುವುದು ಈ ರೀತಿಯ ಕಣ್ಣಿನ ಸಮಸ್ಯೆಗೆ ಒಂದೆರಡು ಹನಿ ಬಿಟ್ಟು ಕೊಂಡರೆ ನೋವು ಶಮನಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಇದನ್ನು ಕಣ್ಣಿಗೆ ದಿವ್ಯೌಷಧ ಎನ್ನಬಹುದು. ಮಾತ್ರವಲ್ಲ ಈ ಮಳೆ ಹನಿಗಳನ್ನು ಹಲವು ರೀತಿಯ ನಾಟಿ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಜೊತೆಗೆ ಸಣ್ಣಪುಟ್ಟ ಕಿವಿ ನೋವು, ಕಾಲು ನೋವು, ಸಂದು ನೋವು, ಕೂದಲು ಉದುರುವಿಕೆ ತಡೆಯಲು ಕೂಡ ಸ್ವಾತಿ ಮಳೆ ನೀರು ಉಪಯುಕ್ತವಾಗಿದೆ. ಇನ್ನು ಮಲೆನಾಡು, ಉತ್ತರಕನ್ನಡದ ವ್ಯವಸಾಯಗಾರರಲ್ಲಿ ಹೆಚ್ಚಾಗಿ ಕಂಡು ಬರುವ ಕಂತುಗುರು ಎಂಬ ಸಮಸ್ಯೆಗೂ ಇದು ಪರಿಹಾರ ನೀಡುತ್ತದೆ. ಸಾಮಾನ್ಯವಾಗಿ ಗದ್ದೆ, ತೋಟ, ಕೆಸರು ಮಣ್ಣಿನಲ್ಲಿ ಕೆಲಸ ಮಾಡುವವರ ಕೈ- ಕಾಲುಗಳು ಉಗುರು ಹಾಳಾಗುತ್ತದೆ. ಅದು ಕೆಂಪಾಗಿ, ಸೆಪ್ಟಿಕ್ ಆಗಿ ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿ ಉಗುರು ಹಾಳಾಗುವ ಈ ಸಮಸ್ಯೆಯನ್ನು ಸ್ವಾತಿ ಮಳೆ ನೀರು ನಿವಾರಣೆ ಮಾಡುತ್ತದೆ. ಈ ಸ್ವಾತಿ ಮಳೆಯ ನೀರು ಕೆಡದಂತೆ ದೀರ್ಘ ಕಾಲ ಇಡಬಹುದು. ಆದರೆ ನೀರನ್ನು ನೇರವಾಗಿ ಶುದ್ಧವಾಗಿ ಸಂಗ್ರಹಿಸುವುದು ಮುಖ್ಯವಾಗುತ್ತದೆ.
ಇನ್ನೊಂದು ಪ್ರಚಲಿತ ಪದ್ಧತಿ ಎಂದರೆ ಸ್ವಾತಿ ನಕ್ಷತ್ರದ ಬಿಸಿಲಿಗೆ ಮನೆಯ ಹೆಣ್ಣುಮಕ್ಕಳು ತಮ್ಮ ರೇಷ್ಮೆ ಸೀರೆಯನ್ನು ಒಮ್ಮೆ ಬಿಸಿಲಿಗೆ ಹಾಕಿ ತೆಗೆಯುತ್ತಾರೆ. ಈ ಸ್ವಾತಿ ಬಿಸಿಲು ನಿಮ್ಮ ಸೀರೆಗಳು ಹುಳಹುಪ್ಟಟೆ ಹಿಡಿದು ಹಾಳಾಗುವುದನ್ನು ತಪ್ಪಿಸುತ್ತದೆ. ನೀವೂ ಸಹ ಈ ಸ್ವಾತಿ ಮಳೆಯನ್ನು ಹಿಡಿದು, ಸಂಗ್ರಹಿಸಿಟ್ಟುಕೊಂಡು ಇದರ ಉಪಯೋಗ ಪಡೆದುಕೊಳ್ಳಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ