
ಹಿಂದೂ ಪಂಚಾಗದ ಪ್ರಕಾರ, ಶ್ರಾವಣ ಶುದ್ಧ ಪಂಚಮಿಯನ್ನು ನಾಗರ ಪಂಚಮಿ (Nagara Panchami) ಎಂದು ಆಚರಿಸಲಾಗುತ್ತದೆ. ಹಿಂದೂಗಳಿಗೆ ಈ ಹಬ್ಬ ಮೊದಲನೇಯ ಹಬ್ಬವಾದ್ದರಿಂದ ಸಂಭ್ರಮ ಬಹಳ ಹೆಚ್ಚಾಗಿಯೇ ಇರುತ್ತದೆ. ಇದಾದ ಬಳಿಕ ಒಂದೊಂದೇ ಹಬ್ಬಗಳು ಸಾಲು ಸಾಲಾಗಿ ಬರುತ್ತದೆ. ನಾಗರ ಪಂಚಮಿಗೆ ಸಂಬಂಧಿಸಿದ ಹಲವು ಕಥೆಗಳನ್ನು ನೀವು ಕೇಳಿರಬಹುದು. ಈ ಸಮಯದಲ್ಲಿ ಗದ್ದೆಯಲ್ಲಿ ಫಸಲುಗಳು ಬಂದಿರುತ್ತದೆ ಮಾತ್ರವಲ್ಲ ಇವುಗಳನ್ನು ನಾಶಪಡಿಸಲು ಕೀಟ, ಮಿಡತೆ, ಇಲಿಗಳು ಬೇರೆ ಸಮಯಕ್ಕಿಂತ ಹೆಚ್ಚಾಗಿಯೇ ಇರುತ್ತದೆ. ಆದರೆ ಇವುಗಳನ್ನು ತಿಂದು ರೈತರ ಫಸಲು ಉಳಿಸುವುದು ಹಾವುಗಳು. ಇಲಿ, ಕಪ್ಪೆಗಳ ಹಾವಳಿ ತಡೆಯುವ ನಾಗನಿಗೆ ಸಲ್ಲಿಸುವ ಗೌರವ ಪೂಜೆಯೇ ನಾಗರ ಪಂಚಮಿ. ಈ ದಿನ ನಾಗನಿಗೆ ಹಾಲು, ಕುಡುಬು ಇನ್ನಿತರ ಸಿಹಿ ತಿನಿಸುಗಳನ್ನು ಮಾಡುವ ಮೂಲಕ ಆತನಿಗೆ ನೈವೇದ್ಯ ಮಾಡಿ ಹಬ್ಬ ಆಚರಿಸಲಾಗುತ್ತದೆ. ಆದರೆ ನಿಮಗೆ ಗೊತ್ತಾ? ಈ ದಿನ ಮಾಡುವ ಕುಡುಬನ್ನು ಯಾಕೆ ಅರಶಿನ ಎಲೆಯಲ್ಲಿಯೇ ಮಾಡುತ್ತಾರೆ. ಈ ಎಲೆಯಲ್ಲಿ ಅಂತಹ ವಿಶೇಷತೆ ಏನಿದೆ? ಇದರ ಬಗೆಗಿನ ಮಾಹಿತಿ ಈ ಸ್ಟೋರಿಯಲ್ಲಿದೆ.
ಕರಾವಳಿ ಭಾಗದಲ್ಲಿ ನಾಗರಪಂಚಮಿ ದಿನ ಅರಿಶಿನದ ಎಲೆಯ ಕಡುಬನ್ನು ತಯಾರಿಸುತ್ತಾರೆ. ಈ ರೀತಿಯ ಸಂಪ್ರದಾಯ ಕಂಡು ಬರುವುದಕ್ಕೆ ಹಲವು ಕಾರಣಗಳಿವೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ, ನಾಗನಿಗೆ ಅರಿಶಿನ ಬಹಳ ಪ್ರೀಯವಾದದ್ದು, ಹಾಗಾಗಿ ಈ ಎಲೆಯಿಂದ ಮಾಡಿದ ಕಡಬನ್ನು ನೈವೇದ್ಯ ಮಾಡಲಾಗುತ್ತದೆ. ಮಾತ್ರವಲ್ಲ ಈ ಎಲೆಯಲ್ಲಿ ಸಾಕಷ್ಟು ರೀತಿಯ ಆರೋಗ್ಯ ಪ್ರಯೋಜನಗಳಿವೆ. ಈಗ ಮಳೆಗಾಲವಾದ್ದರಿಂದ ರೋಗಗಳು ಹೆಚ್ಚಾಗುವ ಭಯವಿರುತ್ತದೆ. ಹಾಗಾಗಿ ಅವುಗಳನ್ನು ತಡೆಗಟ್ಟಲು ಈ ಎಲೆ ಸಹಾಯ ಮಾಡುತ್ತದೆ. ಏಕೆಂದರೆ ಅರಿಶಿನದ ಎಲೆಯಲ್ಲಿ ಬಹಳಷ್ಟು ಆರೋಗ್ಯಕರ ಗುಣಗಳಿರುತ್ತದೆ. ಹಾಗಾಗಿ ಈ ಸಮಯದಲ್ಲಿ ತಪ್ಪದೆ ಇವುಗಳನ್ನು ಸೇವನೆ ಮಾಡಬೇಕು.
ಇದನ್ನೂ ಓದಿ: Daily Devotional: ಕಳಸಕ್ಕೆ ಎಲೆ ಇಡುವ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ
ಅರಿಶಿನದ ಪುಡಿಯಂತೆಯೇ ಅದರ ಎಲೆಗಳಲ್ಲಿಯೂ ಕುರ್ಕುಮಿನ್ ಎಂಬ ಪೋಷಕಾಂಶವಿದೆ. ಅರಿಶಿನದ ಬಹುತೇಕ ಪ್ರಯೋಜನಗಳು ಇದರಿಂದಲೇ ದೊರಕುತ್ತವೆ. ಈ ಸಮಯದಲ್ಲಿ ತಂಪಾದ ವಾತಾವರಣದಿಂದ ನೋವು ಹೆಚ್ಚಾಗುವುದು ಸಾಮಾನ್ಯ. ಅವುಗಳನ್ನು ತಡೆಯಲು ಈ ಎಲೆಗಳು ಸಹಾಯ ಮಾಡುತ್ತದೆ. ಮಾತ್ರವಲ್ಲ ಅಸ್ಥಿಸಂಧಿವಾತ ಮತ್ತು ಸಂಧಿವಾತದಿಂದ ಬಳಲುತ್ತಿರುವವರಿಗೆ ಈ ಎಲೆ ಬಹಳ ಪ್ರಯೋಜನಕಾರಿ. ತಜ್ಞರ ಪ್ರಕಾರ ಇದರಲ್ಲಿರುವ ಜೈವಿಕ- ಸಕ್ರಿಯ ಸಂಯುಕ್ತವು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಪಿತ್ತರಸ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಇದು ಜೀರ್ಣಕ್ರಿಯೆಯ ಮುಖ್ಯ ಅಂಶಗಳಲ್ಲಿ ಒಂದಾಗಿದೆ. ಪಿತ್ತರಸದ ಹೆಚ್ಚಿದ ಸ್ರವಿಸುವಿಕೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮಾತ್ರವಲ್ಲ ಅರಿಶಿನದ ಎಲೆಯಲ್ಲಿರುವ ಕರ್ಕ್ಯುಮಿನ್ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣಗಳಿಂದ ಕೂಡಿದೆ. ಇದು ರೋಗವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಗಾಯವನ್ನು ವೇಗವಾಗಿ ಗುಣಪಡಿಸುವಲ್ಲಿ ಸಹಕಾರಿಯಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:05 pm, Fri, 25 July 25