
ನಿಮಗೆ ಗೊತ್ತಿರಬಹುದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (High Cholesterol) ಹೆಚ್ಚಾದಾಗ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಹೃದಯಾಘಾತ (Heart attack) ಬರುವ ಸಂಭವ ಹೆಚ್ಚಾಗಿರುತ್ತದೆ. ಈ ಕೊಲೆಸ್ಟ್ರಾಲ್ ದೇಹದಲ್ಲಿ ಅರಿವಿಗೆ ಬರದಂತೆ ನಿಧಾನವಾಗಿ ಸಂಗ್ರಹವಾಗುತ್ತಾ ಹೋಗುತ್ತದೆ. ಇದು ಮುಂದೊಂದು ದಿನ ನಾನಾ ರೀತಿಯ ಸಮಸ್ಯೆಗೆ ಎಡೆಮಾಡಿ ಕೊಡುತ್ತದೆ. ಆದರೆ ಇವುಗಳನ್ನು ಮೊದಲೇ ಪತ್ತೆ ಮಾಡಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದರಿಂದ ದೇಹಕ್ಕೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗುವುದಿಲ್ಲ. ಹಾಗಾಗಿ ಕೊಲೆಸ್ಟ್ರಾಲ್ ಇದೆಯೋ, ಇಲ್ಲವೋ? ಎಂಬುದನ್ನು ಕೆಲವು ಸಣ್ಣ ಸಂಕೇತಗಳ ಮೂಲಕ ಮುಂಚಿತವಾಗಿಯೇ ಗುರುತಿಸಬಹುದು. ಆದರೆ ಅವುಗಳ ಬಗ್ಗೆ ನಮಗೆ ತಿಳಿದಿರಬೇಕಾಗುತ್ತದೆ. ಹಾಗಾದರೆ ಆ ಲಕ್ಷಣ ಹೇಗಿರುತ್ತವೆ? ದೇಹ ನೀಡುವ ಮುನ್ಸೂಚನೆಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ತಂಪಾದ ವಾತಾವರಣದ ಹೊರತಾಗಿಯೂ ನಿಮ್ಮ ಪಾದಗಳು ತಣ್ಣಗಾಗುವುದು, ಅಥವಾ ಹಠಾತ್ ಆಗಿ ದೇಹ ತಂಪಾಗುವ ಭಾವನೆಯು ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಸೂಚಿಸುತ್ತದೆ. ನಿಮ್ಮ ಕೈ ಮತ್ತು ಪಾದಗಳು ಕೂಡ ನಡೆಯುವಾಗ ಅಥವಾ ಮಲಗಿರುವಾಗ ತಂಪಾಗುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಇದು ನಿಮ್ಮ ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ನಡೆಯುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ. ರಕ್ತ ಪರಿಚಲನೆ ಸರಿಯಾಗಿ ಆಗದಿದ್ದಾಗ ಈ ಲಕ್ಷಣ ಕಂಡು ಬರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಇದು ತುಂಬಾ ಸಾಮಾನ್ಯವಾಗಿರುತ್ತದೆ.
ವಯಸ್ಸಾಗದಿದ್ದರೂ ನೆನಪಿನ ಶಕ್ತಿ ಕಡಿಮೆಯಾಗುವುದು ಒಳ್ಳೆಯದಲ್ಲ. ನೀವು ಕೂಡ ಸಣ್ಣ ಸಣ್ಣ ವಿಷಯಗಳನ್ನು ಮರೆಯುವುದು ಮೆದುಳಿನ ಕಾರ್ಯಚಟುವಟಿಕೆಯಲ್ಲಿ ಕುಸಿತ ಕಂಡಿರುವುದನ್ನು ಸೂಚಿಸುತ್ತದೆ. ಇದು ಕೊಲೆಸ್ಟ್ರಾಲ್‌ನ ಪರಿಣಾಮವೂ ಆಗಿರಬಹುದು.
ಸಾಮಾನ್ಯವಾಗಿ ಕಣ್ಣುಗಳ ಸುತ್ತ ಬಿಳಿ ಅಥವಾ ಹಳದಿ ಬಣ್ಣದಲ್ಲಿ ಕಲೆಗಳು ಕಾಣಿಸಿಕೊಂಡರೆ, ಇದು ಹೆಚ್ಚಿದ ಕೊಲೆಸ್ಟ್ರಾಲ್‌ನ ಸಂಕೇತವಾಗಿರಬಹುದು. ಅದರಲ್ಲಿಯೂ ಈ ರೀತಿಯ ಸೂಚನೆಗಳು ಚಿಕ್ಕ ವಯಸ್ಸಿನಲ್ಲಿ ಕಾಣಿಸಿಕೊಂಡರೆ, ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಹಳದಿ ಕಲೆಗಳು ನಿಮ್ಮ ಕಣ್ಣುಗಳ ಕೆಳಗೆ ಅಥವಾ ಸುತ್ತಲೂ ಕಾಣಿಸಿಕೊಂಡರೆ, ಅದು ನಿಮ್ಮ ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ.
ಮೆಟ್ಟಿಲುಗಳನ್ನು ಹತ್ತುವಾಗ ಅಥವಾ ಸ್ವಲ್ಪ ದೂರ ನಡೆದಾಗ ಉಸಿರಾಟಕ್ಕೆ ಕಷ್ಟವಾದರೆ ಅದು ಹೃದಯದ ಮೇಲೆ ಹೆಚ್ಚಿನ ಒತ್ತಡ ಬಿಳುತ್ತಿರುವುದನ್ನು ಸೂಚಿಸುತ್ತದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿರುವುದರ ಸೂಚನೆಯೂ ಆಗಿರಬಹುದು.
ಇದನ್ನೂ ಓದಿ: ಕೆಟ್ಟ ಕೊಲೆಸ್ಟ್ರಾಲ್ ನಿಂದ ಹೃದಯವನ್ನು ರಕ್ಷಿಸಿಕೊಳ್ಳಲು ಈ ರೀತಿ ಮಾಡಿ; ಹೃದಯಾಘಾತ, ಪಾರ್ಶ್ವವಾಯುವಿನಿಂದ ದೂರವಿರಿ
ನೀವು ರಾತ್ರಿ ಪೂರ್ತಿ ಚೆನ್ನಾಗಿ ನಿದ್ರೆ ಮಾಡಿದರೂ ಸಹ, ದಿನವಿಡೀ ನಿಮಗೆ ದಣಿವು ಅನಿಸಿದರೆ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿರಬಹುದು ಎಂದರ್ಥ. ಏಕೆಂದರೆ ಈ ರೀತಿ ಆದಾಗ ದೇಹ ಸರಿಯಾಗಿ ಶಕ್ತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಇದರಿಂದ ದೇಹಕ್ಕೆ ಬೇಗ ಆಯಾಸವಾಗುತ್ತದೆ. ಯಾವುದೇ ಕೆಲಸ ಮಾಡುವುದಕ್ಕೂ ಹೆಚ್ಚಿನ ತ್ರಾಣವಿರುವುದಿಲ್ಲ.
ಇದು ಕೇವಲ ನಿಮ್ಮ ದೇಹ ನಿಮಗೆ ನೀಡುವಂತಹ ಎಚ್ಚರಿಕೆ ಲಕ್ಷಣಗಳು. ಅವುಗಳಿಗೆ ಭಯಪಡುವ ಅಗತ್ಯವಿಲ್ಲ. ಆದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಸರಿಯಾದ ರೋಗನಿರ್ಣಯ ಮಾಡಲು ವೈದ್ಯರನ್ನು ಸಂಪರ್ಕಿಸಿ. ಅದಲ್ಲದೆ ನಿಮ್ಮ ಆಹಾರ ಪದ್ಧತಿ ಅಥವಾ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಆರೋಗ್ಯಕರ ರೀತಿಯಲ್ಲಿ ಬದಲಾವಣೆ ಮಾಡಬಹುದು. ಆದರೆ ಅದಕ್ಕೂ ಮೊದಲು ವೈದ್ಯರ ಸಲಹೆ ಪಡೆಯುವುದು ಬಹಳ ಮುಖ್ಯವಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ