
ಪಾನಿ ಪುರಿ (Pani Puri) ಯಾರಿಗೆ ಇಷ್ಟ ಆಗಲ್ಲ ಹೇಳಿ, ಇದು ಎಲ್ಲರೂ ಇಷ್ಟ ಪಟ್ಟು ತಿನ್ನುವಂತಹ ಚಾಟ್ ಗಳಲ್ಲಿ ಒಂದು. ಆದರೆ ಕೆಲವರು ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಬೀದಿ ಬದಿಯ ಈ ಆಹಾರವನ್ನು ಅಷ್ಟಾಗಿ ಸೇವನೆ ಮಾಡುವುದಕ್ಕೆ ಹೋಗುವುದಿಲ್ಲ. ಇದು ನಿರೀಕ್ಷಿಸದ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ ಎಂಬುದು ಹಲವರ ಅಭಿಪ್ರಾಯ. ಇದು ತಪ್ಪಲ್ಲ. ಏಕೆಂದರೆ ಅನೇಕ ಬೀದಿ ಬದಿಯ ಸ್ಟಾಲ್‌ಗಳಲ್ಲಿ ಕಂಡುಬರುವ ಪಾನಿ ಪುರಿ ಅಷ್ಟೊಂದು ಸ್ವಚ್ಛವಾಗಿರುವುದಿಲ್ಲ. ಹಾಗಾಗಿ ಯಾವಾಗಲೂ ನೈರ್ಮಲ್ಯದಿಂದ ಕೂಡಿರುವ ಸ್ಥಳಗಳಲ್ಲಿ ಪಾನಿ ಪುರಿಯನ್ನು ಸೇವನೆ ಮಾಡಬೇಕು ಅಥವಾ ಇವುಗಳನ್ನು ಮನೆಯಲ್ಲಿಯೇ ತಯಾರಿಸಿ ತಿನ್ನುವುದು ಬಹಳ ಉತ್ತಮ. ಏಕೆಂದರೆ ಇದಕ್ಕಿಂತ ಆರೋಗ್ಯಕರ ಚಾಟ್ ಮತ್ತೊಂದಿಲ್ಲ. ಹೌದು ಈ ಮಾತು ಕೇಳಿ ಕೆಲವರಿಗೆ ಬಹಳ ಆಶ್ಚರ್ಯವಾಗಬಹುದು ಆದರೆ ಇದು ಸತ್ಯ. ಪಾನಿ ಪುರಿಯಲ್ಲಿ ನೀವು ಊಹಿಸಲು ಸಾಧ್ಯವಾಗದಷ್ಟು ಆರೋಗ್ಯ ಪ್ರಯೋಜನಗಳಿವೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಸಾಕಷ್ಟು ಲಾಭಗಳಿವೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
ಪುದೀನ, ಹುಣಸೆ, ಶುಂಠಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಮಾಡಿದ ಪಾನಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಪಾನಿ ಪುರಿಯ ನೀರಿನಲ್ಲಿರುವ ಹುಣಸೆ ಮತ್ತು ಶುಂಠಿ ರಕ್ತನಾಳಗಳನ್ನು ಸಡಿಲಗೊಳಿಸಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪಾನಿ ಪುರಿ ನೀರಿಗೆ ಪುದೀನ ಮತ್ತು ಕೊತ್ತಂಬರಿ ಸೊಪ್ಪನ್ನು ಕೂಡ ಸೇರಿಸಲಾಗುತ್ತದೆ. ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಯಕೃತ್ತು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸಹ ಬಲಪಡಿಸುತ್ತದೆ.
ಪಾನಿ ಪುರಿ ತಿನ್ನುವುದರಿಂದ ಸಿಗುವ ಮತ್ತೊಂದು ಪ್ರಯೋಜನವೆಂದರೆ ಪಾನಿ ಪುರಿ ನೀರು ಹೊಟ್ಟೆಯಲ್ಲಿನ ಅನಿಲ ಮತ್ತು ಅಜೀರ್ಣವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಈ ನೀರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೊತೆಗೆ ಪದೇ ಪದೇ ಉಬ್ಬರದಿಂದ ಕಂಡುಬರುವ ಹೊಟ್ಟೆ ನೋವನ್ನು ಶಮನಗೊಳಿಸಲು ಸಹಕಾರಿಯಾಗಿದೆ. ಅಲ್ಲದೆ ಈ ನೀರಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಜೊತೆಗೆ ದೇಹವು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ.
ಇದನ್ನೂ ಓದಿ: ಜೀರ್ಣಕ್ರಿಯೆ, ಮಲಬದ್ಧತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು ಅಂದ್ರೆ ಈ ಒಂದು ಸಲಹೆಯನ್ನು ಪಾಲಿಸಿ
ಪುದೀನಾ ಮತ್ತು ಕೊತ್ತಂಬರಿ ಸೊಪ್ಪಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ. ಇದು ಬಾಯಿಯ ದುರ್ವಾಸನೆಯನ್ನು ನಿವಾರಿಸಿ ಬಾಯಿ ತಾಜಾತನದಿಂದ ಇರುವಂತೆ ನೋಡಿಕೊಳ್ಳುತ್ತದೆ. ಇನ್ನು ಈ ಪಾನಿ ಪುರಿಯ ಸಿಹಿ ಮತ್ತು ಕಟುವಾದ ರುಚಿಯನ್ನು ಹೊಂದಿದ್ದು ಇದನ್ನು ಸೇವನೆ ಮಾಡಿದಾಗ ಮೆದುಳಿನಲ್ಲಿ ಆನಂದವನ್ನು ಉಂಟುಮಾಡುವ ಹಾರ್ಮೋನುಗಳು ಬಿಡುಗಡೆಯಾಗುತ್ತದೆ, ಇದರಿಂದ ಒತ್ತಡ ಕಡಿಮೆಯಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ