
ದೇಹದಲ್ಲಿ ವಿಟಮಿನ್ ಡಿ (Vitamin D) ಕೊರತೆಯಾದಾಗ ಆಯಾಸ, ಅಲ್ಲಲ್ಲಿ ನೋವು ಮತ್ತು ನಿದ್ರೆಯ ಕೊರತೆ ಇನ್ನಿತರ ಸಮಸ್ಯೆಗಳು ಉದ್ಭವಿಸಬಹುದು. ಹಾಗಾಗಿ ದೇಹಕ್ಕೆ ಅಗತ್ಯವಿರುವಷ್ಟು ವಿಟಮಿನ್ ಡಿ ಪಡೆದುಕೊಳ್ಳುವುದು ಅತ್ಯಗತ್ಯ. ಅದಕ್ಕಾಗಿ ಪ್ರತಿದಿನ ಸ್ವಲ್ಪ ಸಮಯ ಬಿಸಿಲಿನಲ್ಲಿ ಕಳೆಯಬೇಕು. ಆದರೆ ನಿಮಗೆ ಅನಿಸಿದಾಗ ಹೊರಗೆ ಹೋಗಿ ವಿಟಮಿನ್ ಡಿ ಪಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಸರಿಯಾದ ಸಮಯಕ್ಕೆ ಬಿಸಿಲಿಗೆ ಹೋಗುವುದು ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಅನೇಕರು ಕೆಲಸದ ನೆಪ ಹೇಳಿ ಹೊರಗೆ ಹೋಗುವುದಕ್ಕೆ ಇಷ್ಟಪಡುವುದಿಲ್ಲ ಬದಲಾಗಿ ಮನೆಯ ನಾಲ್ಕು ಗೋಡೆಗಳ ಮಧ್ಯೆಯೇ ಸಮಯ ಕಳೆಯುತ್ತಾರೆ. ಆದರೆ ಈ ರೀತಿಯ ಅಭ್ಯಾಸ ವಿಟಮಿನ್ ಡಿ ಕೊರತೆಗೆ ಕಾರಣವಾಗಬಹುದು. ಮಾತ್ರವಲ್ಲ ನಾವು ಎಷ್ಟೇ ವಿಟಮಿನ್ ಡಿ ಭರಿತ ಆಹಾರವನ್ನು (Vitamin D rich foods) ಸೇವಿಸಿದರೂ, ಅವು ಸೂರ್ಯನಿಂದ ಬರುವ ವಿಟಮಿನ್ ಡಿಗೆ ಸಮನಾಗಿರುವುದಿಲ್ಲ. ಆದ್ದರಿಂದ, ಪ್ರತಿದಿನ ಸ್ವಲ್ಪ ಸಮಯ ಬಿಸಿಲಿನಲ್ಲಿ ಕಳೆಯುವುದು ಅವಶ್ಯಕ. ಹಾಗಾದರೆ ವಿಟಮಿನ್ ಡಿ ಪಡೆಯಲು ಯಾವ ಸಮಯ ಬಹಳ ಸೂಕ್ತ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಬಿಸಿಲಿಗೆ ನಮ್ಮ ದೇಹವನ್ನು ಒಡ್ಡಿಕೊಳ್ಳದಿದ್ದರೆ, ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಇದು ಅನೇಕ ರೀತಿಯ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಮಾತ್ರವಲ್ಲ ಇವುಗಳನ್ನು ನಿರ್ಲಕ್ಷಿಸುವುದು ಕೂಡ ದೊಡ್ಡ ಸಮಸ್ಯೆಗಳಾಗಿ ಪರಿಣಮಿಸಬಹುದು. ಭಾರತದಲ್ಲಿ ಅನೇಕ ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಚೆನ್ನೈ ಮತ್ತು ದಕ್ಷಿಣ ಭಾರತದ ಇತರ ನಗರಗಳಲ್ಲಿಯೂ ಇದೇ ಪರಿಸ್ಥಿತಿ ಕಂಡುಬರುತ್ತಿದೆ. ಚೆನ್ನೈನಲ್ಲಿ ಗರ್ಭಿಣಿಯರ ಮೇಲೆ ಅಧ್ಯಯನ ನಡೆಸಿದ್ದು ಅದರಲ್ಲಿ 62% ಗರ್ಭಿಣಿಯರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಕಂಡು ಹಿಡಿದಿದೆ. ಕಚೇರಿ ಕೆಲಸದಲ್ಲಿ ಹೆಚ್ಚು ಸಮಯ ಕಳೆಯುವುದು ಮತ್ತು ದೇಹ ಪೂರ್ತಿ ಆವರಿಸುವ ಬಟ್ಟೆಗಳನ್ನು ಧರಿಸುವುದು ಇದಕ್ಕೆ ಕಾರಣವೆಂದು ಕಂಡುಬಂದಿದೆ.
ಸೂರ್ಯನ ಯುವಿಬಿ ಕಿರಣಗಳು ಚರ್ಮದ ಮೇಲೆ ಬಿದ್ದಾಗ ದೇಹದಲ್ಲಿ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಕಿರಣಗಳು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಬಹಳ ಸಕ್ರಿಯವಾಗಿರುತ್ತವೆ. ಸಂಜೆ, ಸೂರ್ಯನಿಂದ ಯುವಿಎ (UVA) ಕಿರಣಗಳು ಮಾತ್ರ ಬರುತ್ತವೆ. ಇವು ವಿಟಮಿನ್ ಡಿ ಉತ್ಪಾದನೆಗೆ ಸಹಾಯ ಮಾಡುವುದಿಲ್ಲ. ಭಾರತದಲ್ಲಿ, ಬೆಳಿಗ್ಗೆ 9 ಅಥವಾ 10 ರಿಂದ ಮಧ್ಯಾಹ್ನ 12 ರವರೆಗೆ ಸೂರ್ಯನ ಬೆಳಕಿನಲ್ಲಿ ಇರುವುದು ವಿಟಮಿನ್ ಡಿ ಕೊರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ, ಹೆಚ್ಚು ಹೊತ್ತು ಸೂರ್ಯನ ಬೆಳಕಿನಲ್ಲಿ ಇರುವುದು ಚರ್ಮದ ಸಮಸ್ಯೆಗಳ ಜೊತೆಗೆ ಇತರ ಸಮಸ್ಯೆಗಳಿಗೂ ಕಾರಣವಾಗಬಹುದು. ಆದರೆ ಈ ಕಿರಣಗಳು ಎಲ್ಲೆಡೆ ಒಂದೇ ಸಮಯಕ್ಕೆ ಬರುವುದಿಲ್ಲ. ಬ್ರಿಟನ್‌ನಲ್ಲಿ, ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಸೂರ್ಯನ ಬೆಳಕಿನಲ್ಲಿ ಇರುವುದರಿಂದ ವಿಟಮಿನ್ ಡಿ ಕೊರತೆಯನ್ನು ನೀಗಿಸಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ಸೂರ್ಯನ ಕಿರಣಗಳಿಂದ ವಿಟಮಿನ್ ಡಿ ಯಾವ ಸಮಯದಲ್ಲಿ ಹೆಚ್ಚು ಉತ್ಪತ್ತಿಯಾಗುತ್ತದೆ?
ತಜ್ಞರ ಪ್ರಕಾರ, ನಮ್ಮ ದೇಹಕ್ಕೆ ವಿಟಮಿನ್ ಡಿ ಸಿಗಬೇಕಾದರೆ, ಪ್ರತಿದಿನ 10 ರಿಂದ 20 ನಿಮಿಷಗಳ ಕಾಲ ಬಿಸಿಲಿನಲ್ಲಿ ಇರಬೇಕಾಗುತ್ತದೆ. ಇನ್ನೊಂದು ಅಧ್ಯಯನದ ಪ್ರಕಾರ ಪ್ರತಿನಿತ್ಯ 30 ನಿಮಿಷಗಳ ಕಾಲ ಬಿಸಿಲಿನಲ್ಲಿ ಕುಳಿತುಕೊಳ್ಳುವುದರಿಂದ ವಿಟಮಿನ್ ಡಿ ಕೊರತೆಯಿಂದ ಮುಕ್ತಿ ಪಡೆಯಬಹುದು. ಆದರೆ ಬೆಳಿಗ್ಗಿನ ಸಮಯದಲ್ಲಿ ಅನೇಕರು ಕಾರ್ಯನಿರತರಾಗಿರುವುದರಿಂದ ಬಿಸಿಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ಆದರೆ ನೆನಪಿರಲಿ ನಿಮ್ಮ ಆರೋಗ್ಯಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ. ಆದ್ದರಿಂದ, ಇದಕ್ಕೆ ಒಂದು ಸಮಯವನ್ನು ಮೀಸಲಿಡಲು ಪ್ರಯತ್ನಿಸಿ, ಕನಿಷ್ಠ 5 ನಿಮಿಷವಾದರೂ ಬಿಸಿಲಿನಲ್ಲಿ ಕಳೆಯಿರಿ. ಅದೂ ಸಾಧ್ಯವಾಗದವರು ಪೂರಕ ಆಹಾರಗಳು, ಮೊಟ್ಟೆ, ಮೀನು ಮತ್ತು ಹಾಲಿನಂತಹ ಪೋಷಕಾಂಶಗಳನ್ನು ಸೇವಿಸುವ ಮೂಲಕ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ