ಇದೀಗ ಬಹುತೇಕರಿಗೆ ತೂಕ ಇಳಿಸಿಕೊಳ್ಳುವುದು ಒಂದು ಅತ್ಯಂತ ಮಹತ್ವದ ಕೆಲಸ ಮತ್ತು ಸವಾಲಾಗಿ ಪರಿಣಮಿಸಿದೆ. ಅದಕ್ಕಾಗಿ ಅದೆಷ್ಟೋ ಜನರು ಓಡುತ್ತಾರೆ..ಜಿಮ್ಗೆ ಹೋಗುತ್ತಾರೆ. ಡಯಟ್ ಮಾಡುತ್ತಾರೆ, ಬೇರೆ ರೀತಿಯ ವ್ಯಾಯಾಮ ಅಳವಡಿಸಿಕೊಳ್ಳುತ್ತಾರೆ. ಹಲವರು ಆಹಾರ ತಿನ್ನುವ ಪ್ರಮಾಣದಲ್ಲೂ ಕಡಿಮೆ ಮಾಡುತ್ತಾರೆ. ಒಟ್ಟಾರೆ ಏನೇನೋ ಶ್ರಮ ಹಾಕಿ, ಅಬ್ಬಾ. ಈ ತೂಕ ಇಳಿಸಿಕೊಳ್ಳುವುದು ಬಹುಪ್ರಯಾಸದ ಕೆಲಸ. ಇಷ್ಟೆಲ್ಲ ಮಾಡಿದರೂ ನನ್ನ ತೂಕ ಸರಿಯಾಗಿ ಇಳಿಯುತ್ತಿಲ್ಲ ಎಂದೂ ಹೇಳಿಕೊಳ್ಳುವವರು ಇದ್ದಾರೆ. ಆದರೆ ತೂಕ ಇಳಿಸಿಕೊಳ್ಳಲೆಂದು ಪಡಬಾರದ ಕಷ್ಟಪಟ್ಟು, ಆತುರಕ್ಕೆ ಬಿದ್ದು ಜೀವಕ್ಕೆ ಅಪಾಯ ತಂದುಕೊಂಡವರೂ ಅದೆಷ್ಟೋ ಜನರು ಇದ್ದಾರೆ. ಇದೆಲ್ಲದರ ಮಧ್ಯೆ ನಾವಿಲ್ಲಿ, ತೂಕ ಇಳಿಕೆಗೆ ಸಹಾಯ ಮಾಡುವ ಸರಳ ವಿಧಾನಗಳನ್ನು ಹೇಳುತ್ತಿದ್ದೇವೆ ನೋಡಿ..
1.ಬೆಳಗ್ಗೆ ಎದ್ದ ಎರಡು ತಾಸೊಳಗೆ ತಿಂಡಿ ತಿನ್ನಿ
ಅದೆಷ್ಟೋ ಮಂದಿ ಇಂದಿಗೂ ಕೂಡ ಬೆಳಗಿನ ತಿಂಡಿಯನ್ನು ಅಷ್ಟೆಲ್ಲ ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಕೆಲವರಂತೂ ಬೆಳಗ್ಗೆ ಬ್ರೇಕ್ಫಾಸ್ಟ್ ತಿನ್ನುವುದೂ ಇಲ್ಲ. ಅದರಲ್ಲೂ ಈ ತೂಕ ಇಳಿಸುವವರು ಬೆಳಗ್ಗೆ ತಿಂಡಿಯನ್ನು ಬಿಟ್ಟೇ ಬಿಡುತ್ತಾರೆ. ಬೆಳಗ್ಗಿನ ಉಪಾಹಾರ ಬಿಟ್ಟರೆ ಕ್ಯಾಲರಿ ಕಡಿಮೆಯಾಗುತ್ತದೆ ಎಂಬುದು ಅವರ ಅನಿಸಿಕೆ. ಆದರೆ ಖಂಡಿತ ಇದು ಸರಿಯಾದ ಕ್ರಮವಲ್ಲ. ಇದು ನಿಮ್ಮ ದೇಹದಲ್ಲಿ ಇನ್ನಷ್ಟು ಕೊಬ್ಬಿನಂಶ ಶೇಖರಣೆಯಾಗಲು ಕಾರಣವಾಗಬಹುದು. ಯಾಕೆಂದರೆ ಬೆಳಗ್ಗೆ ತಿಂಡಿ ತಿನ್ನದೆ ಇರುವುದರಿಂದ ದೇಹಕ್ಕೆ ಹಸಿವಾಗಿರುತ್ತದೆ. ಇದರಿಂದ ನಿಮ್ಮ ದೇಹದ ಹೆಚ್ಚುವರಿ ಕ್ಯಾಲರಿಗಳೆಲ್ಲ ಕೊಬ್ಬಾಗಿ ಪರಿವರ್ತಿತಗೊಳ್ಳಲು ಪ್ರಾರಂಭವಾಗುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಇದು ಒಳ್ಳೆಯದಲ್ಲ. ಹೀಗಾಗಿ ತೂಕ ಇಳಿಸಿಕೊಳ್ಳುವವರು ಬೆಳಗ್ಗೆ ಎದ್ದು ಎರಡು ತಾಸು ಆಗುವುದರೊಳಗೆ ತಿಂಡಿ ತಿನ್ನುವುದು ಒಳಿತು.
2. ಹೆಚ್ಚೆಚ್ಚು ಸೇಬುಹಣ್ಣು ತಿನ್ನಿ:
ಸೇಬು ಹಣ್ಣುಗಳಲ್ಲಿ ನಾರು, ವಿಟಿಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಇರುತ್ತವೆ. ಹಾಗೇ, ಸೇಬುಹಣ್ಣುಗಳನ್ನು ಹೆಚ್ಚಾಗಿ ತಿನ್ನುವುದರಿಂದ ದೀರ್ಘಕಾಲದ ರೋಗಗಳು ಬಾರದಂತೆ ತಡೆಯಬಹುದು ಎಂಬ ನಂಬಿಕೆಯೂ ಇದೆ. ಇಂಥ ಸೇಬು ಹಣ್ಣುಗಳು ನಿಮಗೆ ತೂಕ ಇಳಿಸಿಕೊಳ್ಳಲೂ ಸಹಾಯ ಮಾಡುತ್ತವೆ. ಹೀಗಾಗಿ ಬೇರೆ ಸ್ನ್ಯಾಕ್ಸ್, ಕರಿದ ಪದಾರ್ಥಗಳನ್ನು ತಿನ್ನುವುದನ್ನು ಬಿಟ್ಟು, ಸೇಬು ಹಣ್ಣು ತಿನ್ನಲು ಶುರು ಮಾಡಿ. ಹೊಟ್ಟೆ ತುಂಬಿಸಿದರೂ ತೂಕ ಹೆಚ್ಚಲು ಈ ಹಣ್ಣುಗಳು ಬಿಡುವುದಿಲ್ಲ.
3. ಸಾಕಷ್ಟು ನೀರು ಕುಡಿಯಿರಿ:
ಆರೋಗ್ಯವಾಗಿ ಇರಬೇಕು ಎಂದರೆ ನಮ್ಮ ದೇಹ ಹೈಡ್ರೇಟ್ ಆಗಿರಬೇಕು. ಇಡೀ ದೇಹದ ಉತ್ತಮ ಆರೋಗ್ಯದ ದೃಷ್ಟಿಯಿಂದ ಹೆಚ್ಚೆಚ್ಚು ನೀರು ಕುಡಿಯಬೇಕು. ಸಾಕಷ್ಟು ನೀರು ಕುಡಿಯುವುದರಿಂದ ತೂಕದಲ್ಲಿ ಇಳಿಕೆಯಾಗುತ್ತದೆ. ನಿಮ್ಮ ಚಯಾಪಚಯ ಕ್ರಿಯೆ ಸರಿಯಾಗಿ ಆಗಿ, ಕೊಬ್ಬು ಶೇಖರಣೆ ಕಡಿಮೆಯಾಗುತ್ತದೆ. ತುಂಬ ದಪ್ಪಗೆ ಇರುವವರು ಪ್ರತಿದಿನ ಮುಂಜಾನೆ ಎದ್ದ ನಂತರ, ಬೆಚ್ಚಗಿನ ನೀರಿಗೆ ಲಿಂಬು ಹಣ್ಣಿನ ರಸ ಬೆರೆಸಿ, ಅರ್ಧ ಚಮಚ ಜೇನು ತುಪ್ಪ ಹಾಕಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ತೂಕ ನಷ್ಟಕ್ಕೆ ಸಹಕರಿಸುತ್ತದೆ. ಅಷ್ಟೇ ಅಲ್ಲ, ನೀವು ಊಟ ಮಾಡುವ ಕೆಲವೇ ಹೊತ್ತುಗಳ ಮೊದಲು ನೀರು ಕುಡಿಯಿರಿ. ಇದು ನಿಮಗೆ ಬೇಗನೆ ಹೊಟ್ಟೆ ತುಂಬಲು ಸಹಾಯ ಮಾಡುತ್ತದೆ. ಕ್ಯಾಲರಿ ಒಳಹೋಗುವುದು ತಪ್ಪುತ್ತದೆ.
4. ಸಣ್ಣ ಪ್ಲೇಟ್ ತೆಗೆದುಕೊಳ್ಳಿ:
ಇದು ಮಾನಸಿಕವಾಗಿ ಪ್ರಭಾವ ಬೀರುವ ಒಂದು ವಿಷಯ. ನೀವು ಊಟ-ತಿಂಡಿ ಮಾಡಲು ದೊಡ್ಡ ಪ್ಲೇಟ್ ಬಳಸುತ್ತಿದ್ದರೆ, ಇನ್ನು ಮುಂದೆ ಚಿಕ್ಕ ಪ್ಲೇಟ್ ತೆಗೆದುಕೊಳ್ಳಲು ಶುರುಮಾಡಿ. ಆಗ ನಿಮಗೆ ನಾನು ಅಗತ್ಯಕ್ಕಿಂತ ಜಾಸ್ತಿ ತಿನ್ನುತ್ತಿದ್ದೇನೆ ಎಂದು ಅನ್ನಿಸಲು ಶುರುವಾಗಿ, ಸ್ವಲ್ಪ ಕಡಿಮೆ ಹೊಟ್ಟೆಗೆ ಹಾಕಲು ಪ್ರಾರಂಭಿಸುತ್ತೀರಿ. ಇದರಿಂದ ನಿಧಾನವಾಗಿ ನಿಮ್ಮ ತೂಕವೂ ಇಳಿಯುತ್ತದೆ.
ಇದೆಲ್ಲ ಸಲಹೆಗಳಷ್ಟೇ. ನಿಮ್ಮ ತೂಕ, ನಿಮಗೆ ಅದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ವೈದ್ಯರ ಬಳಿ ಚರ್ಚಿಸಿ. ಅಲ್ಲಿ-ಇಲ್ಲಿ ಓದಿಕೊಂಡು ಮನಸಿಗೆ ಬಂದಂತೆ ಡಯಟ್ ಮಾಡುವುದು, ಅನಗತ್ಯವಾಗಿ ಕೆಲವು ಆಹಾರಗಳನ್ನು ತ್ಯಜಿಸುವುದರಿಂದ ಜೀವಕ್ಕೆ ಅಪಾಯವೇ ಹೆಚ್ಚು.
ಇದನ್ನೂ ಓದಿ: ಒಂದು ಹುಡುಗಾಟದಿಂದ ಜಗತ್ತಿನಾದ್ಯಂತ ಸುದ್ದಿಯಾದ ಹಳದಿ ಕಾರಿನ ಹುಡುಗಿ; ಎಚ್ಚರತಪ್ಪಿದ್ದರೆ ಜೀವ ಹೋಗುತ್ತಿತ್ತು !