ಒಂದು ಹುಡುಗಾಟದಿಂದ ಜಗತ್ತಿನಾದ್ಯಂತ ಸುದ್ದಿಯಾದ ಹಳದಿ ಕಾರಿನ ಹುಡುಗಿ; ಎಚ್ಚರತಪ್ಪಿದ್ದರೆ ಜೀವ ಹೋಗುತ್ತಿತ್ತು !
ಪೊಲೀಸರು ಯುವತಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಹಾಗೇ, ರೈಡೋ ನದಿಯ ಉಳಿದ ಭಾಗಕ್ಕೆ ಹೋಲಿಸಿದರೆ ಈ ಭಾಗದಲ್ಲಿ ತೆಳುವಾದ ಐಸ್ ಇರುತ್ತದೆ. ಅಷ್ಟೆಲ್ಲ ಗಟ್ಟಿಯಾಗಿ, ದಪ್ಪವಾಗಿ ಇರುವುದಿಲ್ಲ ಎಂದೂ ಹೇಳಿದ್ದಾರೆ.
ಕೆಲವರು ವಿಚಿತ್ರ ಕಾರಣಗಳಿಗೆ ಸುದ್ದಿಯಾಗುತ್ತಾರೆ. ಹಾಗೇ ಈ ಮಹಿಳೆ ಕೂಡ ಒಂದು ಸೆಲ್ಫೀ ತೆಗೆದುಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಘಟನೆ ನಡೆದದ್ದು ಕೆನಡಾದ ರಾಜಧಾನಿ ಒಟ್ಟಾವಾದಲ್ಲಿ. ನಗರದ ಹೊರವಲಯದಲ್ಲಿ ರೈಡೋ ಎಂಬ ನದಿ ಹರಿಯುತ್ತದೆ. ಅದೀಗ ಚಳಿಗೆ ಪೂರ್ತಿಯಾಗಿ ಹೆಪ್ಪುಗಟ್ಟಿತ್ತು. ಈ ಹೆಪ್ಪುಗಟ್ಟಿದ ಐಸ್ ಮೇಲೆ ಮಹಿಳೆಯೊಬ್ಬರು ತಮ್ಮ ಕಾರು ಚಲಾಯಿಸಿಕೊಂಡು ಹೋಗುತ್ತಾರೆ. ಗಟ್ಟಿಯಾದ ಮಂಜುಗಡ್ಡೆ ಮೇಲೆ ತಮ್ಮ ಹಳದಿ ಬಣ್ಣದ ಕಾರು ನಿಲ್ಲಿಸಿ, ಕಾರಿನ ಮೇಲೆ ತಾವು ಹತ್ತಿ ನಿಂತು ಸೆಲ್ಫೀ ತೆಗೆಯುತ್ತಾರೆ. ಇತ್ತ ಐಸ್ ಮೇಲೆ ನಿಂತಿದ್ದ ಕಾರು, ನಿಧಾನಕ್ಕೆ ಮುಳುಗುತ್ತಿದ್ದರೂ ಲಕ್ಷ್ಯ ಕೊಡದೆ, ತಮ್ಮ ಫೋಟೋಶೂಟ್ನಲ್ಲಿ ಮಗ್ನರಾಗುವ ಫೋಟೋ, ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದೆ. ಅದರ ಬೆನ್ನಲ್ಲೇ ಮಹಿಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಖತ್ ಸುದ್ದಿಯಾಗಿದ್ದಾರೆ.
ರೈಡೋ ನದಿ ಪೂರ್ತಿ ಬೆಳ್ಳಾಗಿದೆ. ಅದರ ಸುತ್ತಲಿನ ಜಾಗವೂ ಕೂಡ ಹಿಮಾಚ್ಚಾದಿತವಾಗಿ ಗಟ್ಟಿಯಾಗಿದೆ. ಆ ಪ್ರದೇಶವೆಲ್ಲ ಅತ್ಯಂತ ಸುಂದರವಾಗಿ ಗೋಚರಿಸುತ್ತಿದೆ. ಆದರೆ ಈ ಯುವತಿ ಹೀಗೆ ಕಾರು ಮುಳುಗುತ್ತಿದ್ದರೂ ಲೆಕ್ಕಿಸದೆ, ಕಾರಿನ ಮೇಲೆ ನಿಂತು ಸೆಲ್ಫೀ ತೆಗೆಯುವ ಫೋಟೋ-ವಿಡಿಯೋ ನೋಡಿದ ನೆಟ್ಟಿಗರು ಸಿಕ್ಕಾಪಟೆ ಕಿಡಿಕಾರಿದ್ದಾರೆ. ಇದೆಂಥಾ ನಾನ್ಸೆನ್ಸ್ ಎಂದೂ ಕೇಳಿದ್ದಾರೆ. ಒಂದು ಹಂತದಲ್ಲಂತೂ ಕಾರಿನ ಮೇಲ್ಭಾಗ ಚೂರೇಚೂರು ಕಾಣುವಷ್ಟು ಅದು ಮುಳುಗಿ ಹೋಗಿದೆ.
ಹೀಗೆ ನದಿ ಮಧ್ಯದಲ್ಲಿ ಮುಳುಗುತ್ತಿದ್ದ ಕಾರಿನ ಮೇಲೆ ನಿಂತು ಸೆಲ್ಫೀ ತೆಗೆಯುವುದರಲ್ಲಿ ಮಗ್ನಳಾಗಿದ್ದ ಯುವತಿಯನ್ನು ಕಾಪಾಡಿದ್ದು ಸ್ಥಳೀಯರು. ಆಕೆಯ ಹುಚ್ಚಾಟ ನೋಡಿದ ಹಲವರು, ಆ ನದಿಯ ಆಳ ತಿಳಿದವರು ಓಡಿ ಬಂದು, ಕಾಯಕ್ ಮೂಲಕ ಮಹಿಳೆಯ ರಕ್ಷಣೆ ಮಾಡಿದ್ದಾರೆ. ಕಾರಿನಲ್ಲಿ ಆಕೆಯೊಬ್ಬಳೇ ಬಂದು ಇಂಥ ಹುಡುಗಾಟ ಆಡಿದ್ದರಿಂದ ಪೊಲೀಸರ ಕೆಂಗಣ್ಣಿಗೂ ಗುರಿಯಾಗಿದ್ದಾಳೆ. ಘಟನೆಗೆ ಸಂಬಂಧಪಟ್ಟಂತೆ ಒಂದೆರಡು ವಿಡಿಯೋಗಳು ವೈರಲ್ ಆಗಿದೆ. ಹಾಗಂತ ಈ ಮಹಿಳೆ ಎಲ್ಲಿಯವಳು, ಎಲ್ಲಿಗೆ ಹೊರಟಿದ್ದಳು ಎಂಬಿತ್ಯಾದಿ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಈಕೆಯ ಕಾರು ಅತ್ಯಂತ ವೇಗವಾಗಿ ಬಂದು ಹೆಪ್ಪುಗಟ್ಟಿದ ನದಿ ಮಧ್ಯೆ ನಿಂತಿದೆ ಎಂದು ಸ್ಥಳೀಯ ಕೆಲವರು ಹೇಳಿದ್ದಾರೆ. ಹೀಗಾಗಿ ಮಹಿಳೆ ಉದ್ದೇಶಪೂರ್ವಕವಾಗಿ ನದಿಗೆ ಕಾರು ಓಡಿಸಿದಳೋ, ಎಲ್ಲಿಯೋ ಸ್ಕಿಡ್ ಆಗಿ ಬಂತೋ ಅಥವಾ ಅಷ್ಟು ಹೆಪ್ಪುಗಟ್ಟಿದ ಐಸ್ ನೋಡಿ, ಅಲ್ಲಿ ನದಿ ಇರುವಿಕೆ ಬಗ್ಗೆ ಗೊತ್ತಿಲ್ಲದೆ ಮಾಡಿಕೊಂಡ ಎಡವಟ್ಟೋ ಎಂಬುದೂ ಇನ್ನೂ ಗೊತ್ತಾಗಿಲ್ಲ.
ಪೊಲೀಸರು ಯುವತಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಹಾಗೇ, ರೈಡೋ ನದಿಯ ಉಳಿದ ಭಾಗಕ್ಕೆ ಹೋಲಿಸಿದರೆ ಈ ಭಾಗದಲ್ಲಿ ತೆಳುವಾದ ಐಸ್ ಇರುತ್ತದೆ. ಅಷ್ಟೆಲ್ಲ ಗಟ್ಟಿಯಾಗಿ, ದಪ್ಪವಾಗಿ ಇರುವುದಿಲ್ಲ. ಹೀಗಾಗಿ ಯುವತಿಯ ಕಾರು ಮುಳುಗಲು ಶುರುವಾಯಿತು. ಹಾಗಂತ ನದಿಯ ಬೇರೆ ಭಾಗದಲ್ಲಿ ಇಂಥ ಹುಡುಗಾಟ ಮಾಡಬಹುದು ಎಂದು ಅರ್ಥವಲ್ಲ. ಮಂಜುಗಡ್ಡೆ ಎಂಥದ್ದೇ ಇರಲಿ, ಎಷ್ಟು ಗಟ್ಟಿಯಾಗೇ ಇರಲಿ ಅದು ಸುರಕ್ಷಿತವಲ್ಲ ಎಂದಿದ್ದಾರೆ.
ಇದನ್ನೂ ಓದಿ: Viral Video: ಮೇರಿ ರಾಣಿ ಹಾಡಿಗೆ ಹೆಜ್ಜೆ ಹಾಕಿದ ದುಬೈನ ಮಹಿಳೆ ಮತ್ತು ಬಾಲಕಿ: ವಿಡಿಯೋ ಹಂಚಿಕೊಂಡ ನಟಿ ನೋರಾ ಫತೇಹಿ